ಪ್ರತಿಫಲನ : ಸಂಚಿಕೆ - 4
Friday, November 25, 2022
Edit
ಪ್ರತಿಫಲನ : ಸಂಚಿಕೆ - 4
ಮಕ್ಕಳಿಗಾಗಿ ಲೇಖನ ಸರಣಿ
ಇತ್ತೀಚೆಗೆ ವಾಟ್ಸಾಪ್ ನ ಮೂಲಕ ನನ್ನ ಮೊಬೈಲ್ ಗೆ ಬಂದ ಸಂದೇಶವೊಂದು ಬಹಳವಾಗಿ ನನ್ನ ಮನಸ್ಸನ್ನು ಮುಟ್ಟಿತು. ಅದನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಈ ಸಂಚಿಕೆಯನ್ನು ಬಳಸಿಕೊಳ್ಳಲೇ...?
ಶ್ರೀಮಂತನೊಬ್ಬ ತನ್ನ ಕಾರನ್ನು ಮಾರ್ಗದ ಬದಿಯಲ್ಲಿ ನಿಲ್ಲಿಸಿ ಅದೇನೋ ಕಾರ್ಯನಿಮಿತ್ತ ತೆರಳಿದ್ದ. ಬಡ ಹುಡುಗನೊಬ್ಬ ಆ ಕಾರನ್ನು ನೋಡುತ್ತಾ ನಿಂತ. ಆ ಕಾರಿನ ಅಂದ ಚಂದ ಬಣ್ಣ ಆತನ ಗಮನಸೆಳೆದಿರಬೇಕು. ಕಾರಿನ ಸುತ್ತ ನಡೆಯುತ್ತಾ ತನ್ನ ಪುಟ್ಟ ಬೆರಳುಗಳಿಂದ ಅದನ್ನು ಸ್ಪರ್ಶಿಸುತ್ತಾ ಮತ್ತೆ ಮತ್ತೆ ನೋಡುತ್ತಾ ಅದೇನೋ ಕನಸು ಕಾಣುತ್ತಾ ಭಾವಪರವಶನಾಗಿ ನಿಂತೇ ಇದ್ದ. ಕೆಲಸ ಮುಗಿಸಿ ಬಂದ ಶ್ರೀಮಂತ ವ್ಯಕ್ತಿಗೆ ತನ್ನ ಕಾರಿನ ಬಳಿ ಬೆರಗು ಕಣ್ಣುಗಳಿಂದ ನೋಡುತ್ತಾ ನಿಂತ ಆ ಪುಟ್ಟ ಬಾಲಕನೊಡನೆ ಹೇಳತೀರದ ಪ್ರೀತಿ ಉಂಟಾಯಿತು. ಆತನನ್ನು ಬಳಿ ಕರೆದು ಕಾರಿನಲ್ಲಿ ಕುಳ್ಳಿರಿಸಿ ಒಂದಷ್ಟು ದೂರ ಕಾರನ್ನು ಚಲಾಯಿಸುತ್ತಾ ಮಾತಿಗಿಳಿದ.
ಪುಟ್ಟ ಬಾಲಕ ಸರ್ "ನಿಮ್ಮ ಕಾರು ತುಂಬಾ ಚೆನ್ನಾಗಿದೆ" ಎಂದ. "ಹೌದಪ್ಪ ನನಗೆ ಇದು, ನನ್ನ ಅಣ್ಣ ಕೊಟ್ಟ ಗಿಫ್ಟ್" ಎಂದ ಶ್ರೀಮಂತ. ಬಾಲಕನಾದರೋ "ನಿಮ್ಮ ಅಣ್ಣ ತುಂಬಾ ಒಳ್ಳೆಯವರು ಸರ್" ಎಂದ. "ಹೌದಪ್ಪಾ ನನ್ನ ಅಣ್ಣನಿಗೆ ನಾನೆಂದರೆ ಪಂಚಪ್ರಾಣ. ಅದಿರಲಿ, ನೀನು ಈಗ ಏನನ್ನು ಯೋಚಿಸುತ್ತಿ ಎಂದು ನನಗೆ ಗೊತ್ತು. ನಿನಗೂ ಇಂತಹ ಕಾರು ಬೇಕು ಎನ್ನುವ ಆಸೆ ಅಲ್ಲವೇ" ಎಂದು ನಗುತ್ತಾ ಕೇಳಿದ ಶ್ರೀಮಂತ. ಆದರೆ ಬಾಲಕನ ಉತ್ತರ ಶ್ರೀಮಂತನ ನಿರೀಕ್ಷೆಗಿಂತ ವಿಭಿನ್ನವಾಗಿತ್ತು. "ನನಗೂ ನಿಮ್ಮ ಅಣ್ಣನ ತರಹ ಆಗೋ ಆಸೆ ಸರ್. ಏಕೆಂದರೆ ನನಗೊಬ್ಬಳು ತಂಗಿ ಇದ್ದಾಳೆ. ಆಕೆಗೆ ನಾನು ಇದೇ ರೀತಿಯಾಗಿ ಉಡುಗೊರೆ ನೀಡಬೇಕು" ಎಂದ. ಆ ಪುಟ್ಟ ಬಾಲಕನಲ್ಲಿ ತಾನು ಸಂಭ್ರಮಿಸಬೇಕು ಎಂಬ ಆಸೆಗಿಂತಲೂ ತನ್ನ ಮುದ್ದು ತಂಗಿಗೆ ಉಡುಗೊರೆ ನೀಡಿ ಆಕೆಯ ಮುಖದ ಸಂಭ್ರಮವನ್ನು ಕಾಣಬೇಕೆಂಬ ಆಸೆಯೇ ಅದಮ್ಯವಾಗಿತ್ತು.
ಪ್ರೀತಿಯ ವಿದ್ಯಾರ್ಥಿ ಮಿತ್ರರೇ, ನಮ್ಮ ಮನೆಗಳಲ್ಲೂ ಅಣ್ಣ ತಂಗಿ ಅಕ್ಕ ತಮ್ಮ ಎಲ್ಲರೊಡಗೂಡಿರುವ ಸಂಸಾರವೆಂಬ ಸುಂದರ ಹೂದೋಟವಿದೆಯಲ್ಲವೇ? ಎಲ್ಲಾ ಹೂಗಳು ನಳನಳಿಸುತ್ತಾ ಅಂದವಾಗಿ ಅರಳಿ ಸೌಗಂಧ ಬೀರಿದರೆ ತೋಟದ ಸೊಬಗಿಗೆ ಎಣೆಯೆಲ್ಲಿ ಹೇಳಿ.?
ಸೋದರ ಬಾಂಧವ್ಯ ವೆಂಬುದು ವರ್ಣನಾತೀತ. ನಮ್ಮೊಡನೆ ರಕ್ತ ಸಂಬಂಧ ಹಂಚಿಕೊಂಡು ಹುಟ್ಟಿದ ಅಣ್ಣ ಅಕ್ಕ ತಮ್ಮ ತಂಗಿಯರೊಡನೆ ಪ್ರೀತಿ ವಿಶ್ವಾಸ ಗೌರವ ಆದರಗಳಿರಬೇಕೇ ಹೊರತು ಅಸಡ್ಡೆಯಲ್ಲ. ನಮಗಾಗಿ ಏನನ್ನಾದರೂ ಖರೀದಿಸುವ ಮುನ್ನ ನಮ್ಮ ತಮ್ಮ ತಂಗಿಯರಿಗೆ ನೀಡುವ ಹಿರಿಗುಣ ನಮ್ಮದಾಗಬೇಕು. ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎಂಬ ಗಾದೆ ಮಾತು ನೀವು ಕೇಳಿರಬಹುದಲ್ಲವೇ ? ಒಂದೇ ತಾಯಿಯ ಮಕ್ಕಳಾದರೂ ಬೆಳೆಯುತ್ತಾ ಬಂದಂತೆ ದಾಯಾದಿಗಳ ರೀತಿ ಕಲಹದಲ್ಲಿ ತೊಡಗಿ ಅಪ್ಪ ಅಮ್ಮ ಕಟ್ಟಿದ ಕನಸ ಗೋಪುರವನ್ನು ನುಚ್ಚುನೂರು ಮಾಡುತ್ತಾರೆ. ಸಾಲದೆಂಬಂತೆ ವೃದ್ಧಾಪ್ಯದಲ್ಲಿ ತಂದೆ ತಾಯಿಯರ ಪಾಲನೆಯ ಜವಾಬ್ದಾರಿಯಿಂದಲೂ ವಿಮುಖರಾಗುತ್ತಾರೆ. ಇದು ಶುದ್ಧ ತಪ್ಪು. ಅಕ್ಷಮ್ಯ ಅಪರಾಧ. ಎಳವೆಯ ಪ್ರೀತಿ ಬಾಂಧವ್ಯ ಸದಾ ನಮ್ಮ ಜೊತೆಗಿರಬೇಕು. ಪ್ರೀತಿಯಿಂದ ಸಾಕಿದ ಅಪ್ಪ-ಅಮ್ಮನವರ ಆಶೀರ್ವಾದದ ಒಳ್ನುಡಿಗಳು, ಮೌಲ್ಯ ನೀಡಿ ಬೆಳೆಸಿದ ಗುರುಗಳ ಆದರ್ಶ ನಮ್ಮ ಜೀವನದ ಔನ್ನತ್ಯದ ಪ್ರತಿಫಲನ ಬೀರುವ ಪ್ರತಿಬಿಂಬಗಳಾಗಬೇಕು. ಸೋದರ ಬಾಂಧವ್ಯ ಚಿರಾಯುವಾಗಬೇಕು. ಇದು ನನ್ನಾಶಯ ನೀವೇನೆನ್ನುವಿರಿ…. ಪ್ರೀತಿಯಿಂದ,
ಸಹಶಿಕ್ಷಕಿ
ಸರಕಾರಿ ಪ್ರೌಢಶಾಲೆ ವಳಾಲು
ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ
Mob : +91 99009 00456
*******************************************