-->
ಸಂಚಾರಿಯ ಡೈರಿ : ಸಂಚಿಕೆ - 19

ಸಂಚಾರಿಯ ಡೈರಿ : ಸಂಚಿಕೆ - 19

ಸಂಚಾರಿಯ ಡೈರಿ : ಸಂಚಿಕೆ - 19

       ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ
              
               
              ಗೂಗಲ್‌ನಲ್ಲಿ ಭಾರತದ ಅತ್ಯಂತ ಶ್ರೀಮಂತ ದೇವಾಲಯ ಯಾವುದೆಂದು ಹುಡುಕಿದರೆ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ, ಶಿರಡಿ ಸಾಯಿಬಾಬಾ ಮಂದಿರ ಹೀಗೆಲ್ಲಾ ಬರಬಹುದು. ಆದರೆ ಮೂಲಾರ್ಥದಲ್ಲಿ ಅನಿಯಮಿತ ಲೆಕ್ಕವೇ ಮಾಡಲಾಗದ ಸಂಪತ್ತನ್ನ ಹೊಂದಿ ಜಗದಗಲ ಅಭಯ ನೀಡುತ್ತಿರುವ ಆಲಯವೊಂದು ನಮ್ಮ ಭಾರತದಲ್ಲಿದೆ. ಅದೇ ಕೇರಳ ರಾಜ್ಯದ ರಾಜಧಾನಿಯಾದ ತಿರುವನಂತಪುರಂ ನಲ್ಲಿರುವ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಾಲಯ. ಭಾರತದ ಭವ್ಯ ಗೋಪುರ, ಕಲಾತ್ಮಕತೆ, ವಾಸ್ತುಶಿಲ್ಪಕ್ಕೆ ಹೆಸರಾದ ಈ ಮಂದಿರಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಿರುತ್ತಾರೆ..
      ಈ ದೇವಾಲಯದ ಬಗ್ಗೆ ವಿಷ್ಣು ಪುರಾಣ, ಮತ್ಸ್ಯ ಪುರಾಣ, ವರಾಹ ಪುರಾಣ ಇತ್ಯಾದಿಗಳಲ್ಲಿ ಉಲ್ಲೇಖವಿದೆ. ದೇವಾಲಯದ ಕುರಿತು ಸಂಗಂ ಸಾಹಿತ್ಯದಲ್ಲೂ ಕೂಡಾ ಉಲ್ಲೇಖ ಇದೆ. ತಮಿಳು ಕವಿ ನಮ್ಮಾಳ್ವರ್ ಕೂಡಾ ದೇವಾಲಯದ ಭಕ್ತನಾಗಿ, ಹಲವಾರು ಕೃತಿಗಳನ್ನ ಬರೆದಿದ್ದನು ಎಂಬ ಐತಿಹ್ಯವಿದೆ.
 ದೇವಾಲಯದ ವಾಸ್ತುಶಿಲ್ಪ ಚೇರ ಮತ್ತು ದ್ರಾವಿಡ ಶೈಲಿಯಲ್ಲಿದ್ದು, ದೇವಳದ ಮುಂದೆ ದೊಡ್ಡ ಗೋಪುರವಿದೆ. ಚಿತ್ತಾಕರ್ಷಕ ಕೆತ್ತನೆಗಳು ದೇವಾಲಯದ ಒಳಗಿನ ಕಂಬಗಳಲ್ಲಿ ಕಾಣಸಿಗುತ್ತವೆ. ಗರ್ಭಗುಡಿಯಲ್ಲಿ ದೇವರು ಶಯನಾವಸ್ಥೆಯಲ್ಲಿ ಇದ್ದು, ಪ್ರಸನ್ನ ಭಾವ ಮೂಡಿಸುತ್ತದೆ..               
           ಅಂದಹಾಗೆ ತಿರುವನಂತಪುರಂ ನ ಈ ದೇವಾಲಯದ ನಿರ್ವಣೆಯನ್ನು ತಿರುವಾಂಕೂರು ರಾಜಮನೆತನ ಮಾಡುತ್ತದೆ. ಆದರೆ ೨೦೧೧ ರಲ್ಲಿ ಈ ದೇವಾಲಯದ ಆದಾಯದಲ್ಲಿ ಅವ್ಯವಹಾರ ನಡೆಯುತ್ತಿದೆ ಎಂಬ ಆರೋಪ ಬಂದಾಗ ಕೇರಳ ಹೈಕೋರ್ಟ್ ಕೇರಳ ರಾಜ್ಯ ಸರ್ಕಾರಕ್ಕೆ ಶೀಘ್ರ ಕ್ರಮಕ್ಕೆ ಆದೇಶ ನೀಡಿತ್ತು. ಅದಕ್ಕೆ ವಿರುದ್ಧವಾಗಿ ರಾಜಮನೆತನ ಸುಪ್ರೀಂ ಕೋರ್ಟ್ ಕದ ತಟ್ಟಿದಾಗ ನ್ಯಾಯಾಲಯ ಒಂದು ಸಮಿತಿಯ ಮೂಲಕ ದೇವಾಲಯದ ಸಂಪತ್ತನ್ನ ಲೆಕ್ಕ ಮಾಡುವ ಆದೇಶ ನೀಡಿತು. ಈ ಸಮಯದಲ್ಲಿ ಲೆಕ್ಕವಿಲ್ಲದಷ್ಟು ಆಭರಣ, ನಾಣ್ಯಗಳು, ರತ್ನಗಳ ಭಂಡಾರವೇ ಸಿಕ್ಕಿತು. ಅದಾಗ್ಯೂ ಕೋಣೆ ಸಂಖ್ಯೆ- B ಯನ್ನು ತೆರೆಯಲು ವಿವಾದ ಹುಟ್ಟಿಕೊಂಡ ಕಾರಣ ಅದು ಅಲ್ಲೇ ಉಳಿದುಬಿಟ್ಟಿತು. ೨೦೨೦ ರಲ್ಲಿ ಸುಪ್ರೀಂ ಕೋರ್ಟ್ ದೇವಾಲಯದ ಆಡಳಿತದ ಹಕ್ಕು ರಾಜಮನೆತನಕ್ಕೆ ಸೇರಿದ್ದು ಎಂಬ ಹೊಸ ಆದೇಶ ನೀಡಿತು..       
 
           ತಿರುವನಂತಪುರಂ ನಗರಕ್ಕೆ ಬೆಂಗಳೂರು/ಮಂಗಳೂರಿನಿಂದ ರೈಲು ಸಂಪರ್ಕವಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣವೂ ಇದೆ. ಬಸ್ ,ಆಟೋ ಸೌಲಭ್ಯಗಳೂ ಸಹ ಇವೆ..
  ಉಳಿದಂತೆ ತಿರುವನಂತಪುರಂನಲ್ಲೇ ಇರುವ ಕೆಲವು ಪ್ರಸಿದ್ಧ ಬೀಚ್‌ಗಳು, ಅಟ್ಟುಕಾಲ್ ಭಗವತಿ ದೇವಸ್ಥಾನ, ಲುಲುಮಾಲ್ ನೋಡಿಕೊಂಡು ಬರಲು‌ ಮರೆಯದಿರಿ!
......................................... ಸುಭಾಸ್ ಮಂಚಿ 
ಕಾಡಂಗಾಡಿ , ಮಂಚಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
Mob : 9663135413
******************************************

Ads on article

Advertise in articles 1

advertising articles 2

Advertise under the article