-->
ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 

                                  ಛೇ! ಎಡವಟ್ಟಾಗಿ ಹೋಯಿತು ಎಂದು ಹೇಳುವುದನ್ನು ಕೇಳಿದ್ದೇವೆ. ಮಕ್ಕಳಿಗೆ, “ಏನಿದು ಎಡವಟ್ಟು ಎಂದರೆ ...?” ಎಂದು ಅನಿಸುತ್ತಿರಬಹುದು. ನೀವು ಎಡವಟ್ಟುಗಳನ್ನು ಮಾಡಿದ್ದರೆ ಈ ಅನಿಸಿಕೆ ಖಂಡಿತವಾಗಿಯೂ ನಿಮ್ಮಲ್ಲಿ ಉದ್ಭವಿಸದು. ಸಿನೇಮಾ ಶೂಟಿಂಗ್ ನಲ್ಲಿ ಆದ ಎಡವಟ್ಟಿನಿಂದ, ಖಳ ನಾಯಕನಿಗೆ ಗಾಯ, ಪಠ್ಯಪುಸ್ತಕದ ಎಡವಟ್ಟು ಸಾರ್ವಜನಿಕ ವಲಯದಲ್ಲಿ ಬೆರಗುಗಳನ್ನು ಸೃಷ್ಟಿಸಿತು ಹೀಗೆ ಬೇರೆ ಬೇರೆ ಎಡವಟ್ಟುಗಳ ಬಗ್ಗೆ ಪತ್ರಿಕೆಗಳಲ್ಲೂ ಓದುತ್ತೇವೆ.   
      ಕಾಳಿದಾಸ ಮಹಾ ಕವಿಯ ಹೆಸರು ಕೇಳಿರುವಿರಿ ತಾನೇ? ಆತ ಒಬ್ಬ ಕುರುಬ. ಮಂದ ಮತಿಯವನಾಗಿದ್ದ ಇವನು ಮಾಡಿದ ಎಡವಟ್ಟಿನ ಕಾರಣದಿಂದಾಗಿಯೇ ಕುರುಬ ಯುವಕ ವರರತ್ನ ಕವಿ ಕಾಳೀದಾಸನಾದನೆಂದು ಕಥೆಯಿದೆ. ಈತನು ಕೊಂಬೆಯ ಮೇಲೆ ಕುಳಿತು ಆ ಕೊಂಬೆಯ ಬುಡವನ್ನು ಕಡಿಯುತ್ತಿದ್ದನಂತೆ. ಈತ “ಹೆಡ್ಡ” ಎಂದರಿತ ಆ ರಾಜ್ಯದ ಮಂತ್ರಿಯು ರಾಜನ ಮಗಳೊಂದಿಗೆ ಈತನಿಗೆ ಕುತಂತ್ರದ ಉದ್ದೇಶದಿಂದ ಮದುವೆ ಮಾಡಿಸಿದನು. ಆದರೆ ಮದುವೆಯ ರಾತ್ರಿ ರಾಜಕುಮಾರಿಗೆ ತಾನು ಮದುವೆಯಾದ ವ್ಯಕ್ತಿಯು ಬರೇ ‘ಮೂಢ’ ಎಂದು ತಿಳಿದಳು. ಊರಿನ ಕಾಳೀ ದೇವಾಲಯದಲ್ಲಿ ರಾತ್ರಿಯಿಡೀ ಭಕ್ತಿಯಿಂದ ದೇವಿಯ ನಾಮಸ್ಮರಣೆ ಮಾಡುವಂತೆ ಹೇಳುವಳು. ಕಾಳೀದೇವಿ ಕರುಬ ಯುವಕನಿಗೆ ಒಲಿದು ವರನೀಡಿದಳು. ಅದರಿಂದಾಗಿ ಆತ ಮಹಾ ಜ್ಞಾನಿಯೂ, ಕವಿಯೂ, ಸಂಸ್ಕೃತ ವಿದ್ವಾಂಸನೂ ಆದನಂತೆ.  
ಮಾಡುವ ಎಡವಟ್ಟು ಕೆಲವೊಮ್ಮೆ ಅನುಕೂಲವೂ ಆಗಬಹುದು. ಹಾಗಾಗಿಯೇ, “ಆದದ್ದು ಒಳ್ಳೆಯದೇ ಆಯಿತು.” ಎಂಬ ಮಾತು ಕೆಲವೊಮ್ಮೆ ಎಡವಟ್ಟುಗಳು ಅನುಕೂಲಕರವೂ ಆಗುತ್ತವೆ ಎಂದೇ ಹುಟ್ಟಿರಬಹುದು. 
       ಎಡವಟ್ಟು ಎಂದರೆ, ಮಾಡುವ ಅಥವಾ ಆಗುವ ದೋಷ ಯಾ ತೊದರೆಗಳೆಂದೇ ಅರ್ಥ. ಅಡುಗೆ ಮಾಡಿ ಒಗ್ಗರಣೆ ಹಾಕಬೇಕು. ಸಾಸಿವೆಯೆಂದು ಭ್ರಮಿಸಿ ರಾಗಿಯನ್ನು ಕಾದ ಎಣ್ಣೆಗೆ ಹಾಕಿ ಒಗ್ಗರಣೆ ಮಾಡಿದರೆ ಒಗ್ಗರಣೆಯ ಉದ್ದೇಶ ವಿಫಲವಾಗುತ್ತದೆ. ಫಲ ಭರಿತ ಮಾವಿನ ಹಣ್ಣನ್ನು ಪಲಭರಿತ ಎಂದು ತಪ್ಪಾಗಿ ಬರೆದರೆ ಅನರ್ಥವಾಗುತ್ತದೆ. ಪಲ ಎಂದರೆ ಮಲ ಎಂದರ್ಥ. ಹಣ್ಣನ್ನು ಹೆಣ್ಣೆಂದು ಬರೆದು ಹೊಡೆತ ತಿಂದವರಿದ್ದಾರೆ. ಮಾವನಿಗೆ ಪತ್ರ ಬರೆದ ಅಳಿಯ ಮಹಾಶಯನು, “ನಾನು ರವಿವಾರ ಬರುತ್ತೇನೆ. ಒಳ್ಳೆಯ ಹಣ್ಣನ್ನು ನನಗೆ ಕೊಡಬೇಕು.” ಎಂದು ಒಕ್ಕಣೆಯಿರಬೇಕಿತ್ತು. ಅವನು ಮಾಡಿದ ಒಂದೇ ಒಂದು ಎಡವಟ್ಟು ಎಂದರೆ ಹಣ್ಣನ್ನು ಹೆಣ್ಣನ್ನು ಎಂದು ಬರೆದು ಬಿಟ್ಟ. ಮಾವ ಕೋಪದಿಂದ ಅಬ್ಬರಿಸಿದರೆ ಕಾರಣ ಅಳಿಯನ ಎಡವಟ್ಟು ಅಲ್ಲವೇ?
         ಕೆಲವರು ಅವಸರ ಪುತ್ರರಿರುತ್ತಾರೆ. ಗಡಿಬಿಡಿಯಲ್ಲಿ ಬಂದ ಮದುವೆಯ ಕಾಗದದಲ್ಲಿ ತಾರೀಕನ್ನು ನೋಡಿರುತ್ತಾರೆ. ನೋಡಿದ ತಾರೀಕಿಗೆ ಹೋದರೆ ಅಲ್ಲಿ ಮದುವೆ ಯಾರದ್ದೋ ನಡೆಯುತ್ತಿರುತ್ತದೆ. ತಾನೆಲ್ಲಿ ಎಡವಟ್ಟು ಮಾಡಿದ್ದೇನೆಂದು ವಿಮರ್ಶಿಸಿದಾಗ ಅವನಿಗೆ ತಿಳಿಯುತ್ತದೆ, ಮದುವೆ ಮುಂದಿನ ತಿಂಗಳ ಇದೇ ದಿನ ಎಂದು. ಅವನ ಎಡವಟ್ಟಿನಿಂದ ಸಮಯ ಹಾಳು ಹಣ ಹಾಳು; ಗೌರವವೂ ಹಾಳು. ಆದುದರಿಂದ ಎಡವಟ್ಟು ಮಾಡದ ಜಾಗೃತಿ ಮತ್ತು ಸ್ಥಿತ ಪ್ರಜ್ಞೆ ನಮ್ಮದಾಗಬೇಕು.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
********************************************

Ads on article

Advertise in articles 1

advertising articles 2

Advertise under the article