ಹಕ್ಕಿ ಕಥೆ : ಸಂಚಿಕೆ - 68
Tuesday, October 11, 2022
Edit
ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ ನಮಸ್ತೇ... ಈ ವಾರದ ಹಕ್ಕಿ ಕಥೆಗೆ ಸ್ವಾಗತ. ಸಂಸೆ ಶಾಲೆಯಲ್ಲಿ ನಾನು ಅಧ್ಯಾಪಕನಾಗಿ ಕೆಲಸ ಮಾಡುತ್ತಿದ್ದ ದಿನಗಳು, ಮಳೆಗಾಲ ಕಳೆದ ಮೇಲೆ ಕಳಸದಿಂದ ಸುಮಾರು ಹತ್ತು ಕಿಲೋಮೀಟರ್ ದೂರದ ಸಂಸೆಗೆ ಪ್ರತಿ ದಿನ ಸೈಕಲ್ ತುಳಿದುಕೊಂಡು ಹೋಗುತ್ತಿದ್ದೆ. ಅಂಕು ಡೊಂಕಿನ, ಏರು ತಗ್ಗಿನ ಹಾವು ಹರಿದಂತೆ ಕಣುವ ದಾರಿಯಲ್ಲಿ ಬೆಳಗ್ಗೆ ಮತ್ತು ಸಂಜೆ ಸೈಕಲ್ ತುಳಿಯುವುದು ಒಂದು ಅದ್ಭುತ ಅನುಭವ. ಬೆಳಗ್ಗೆ ಹೋಗಲು ಒಂದು ಗಂಟೆ, ಸಂಜೆ ಹಿಂದೆ ಬರಲು ಒಂದು ಗಂಟೆ. ಕಾಫಿ ಮತ್ತು ಟೀ ತೋಟಗಳ ನಡುವೆ ಕ್ರಮಿಸುವ ದಾರಿಯಲ್ಲಿ ಸೈಕಲ್ ತುಳಿಯುವಾಗ ಮುಂದಿನ ತಿರುವಿನಲ್ಲಿ ವಾಹನ ಬರುವ ಮೊದಲೇ ಅದರ ಶಬ್ದ ಕೇಳಿಸಿ ಬಿಡುತ್ತಿತ್ತು. ಅಷ್ಟೊಂದು ನಿಶ್ಶಬ್ದ ಮತ್ತು ನಿರ್ಜನ ಬೀದಿ ಅದು.
ಅಂತಹ ಬೀದಿಯಲ್ಲಿ ಪುಟ್ಟ ಹಕ್ಕಿ ಕೂಗಿದರೂ ಅದರ ಶಬ್ದ ಸೈಕಲ್ ಸವಾರನಾದ ನನ್ನ ಕಿವಿಗೆ ಕೇಳಿಸಿ ಬಿಡುತ್ತಿತ್ತು. ರಸ್ತೆಯಂಚಿನಲ್ಲಿ ತೋಟಗಳ ಬೇಲಿಯ ಮೇಲೆ ಕುಳಿತ, ಆ ಕಡೆಯಿಂದ ಈ ಕಡೆಗೆ ಹಾರುವ ಹಕ್ಕಿಗಳಿಗೆ ಹಾಯ್ ಎಂದು ಹೇಳುತ್ತಾ ದಾರಿ ಸಾಗಿದ್ದೇ ತಿಳಿಯುತ್ತಿರಲಿಲ್ಲ. ಸಂಸೆಯ ಪೇಟೆ ದಾಟಿ ಮುಂದೆ ಬಂದರೆ ಅಲ್ಲೊಂದು ನದಿ, ಸೋಮಾವತೀ ಎಂದು ಅದರ ಹೆಸರು. ಕುದುರೆಮುಖ ಪರ್ವತದ ತಪ್ಪಲಿನಲ್ಲಿ ಹುಟ್ಟಿ, ಸಂಸೆಯ ಮೂಲಕ ಹರಿದು ಮುಂದೆ ಭದ್ರಾ ನದಿಯನ್ನು ಸೇರುತ್ತಿತ್ತು. ಅದನ್ನು ದಾಟಿ ಹೋಗಲು ಒಂದು ಸೇತುವೆ. ಸೇತುವೆಯಲ್ಲಿ ನಿಂತು ಹರಿಯುತ್ತಿದ್ದ ಸೋಮಾವತಿಯನ್ನು ನೋಡುವುದೇ ಚಂದ.
ಒಂದು ದಿನ ಹೀಗೆ ನಿಂತು ನೋಡುತ್ತಿದ್ದಾಗ ಸೇತುವೆಯ ಕೆಳಗಿನಿಂದ ಆಕಾಶಕ್ಕೆ ಹಾರಿದ ಹಕ್ಕಿಯೊಂದು ಯಾವುದೋ ಸಣ್ಣ ಹುಳವೊಂದನ್ನು ಹಿಡಿದುಕೊಂಡು ಬಂದಿತು. ವಿದ್ಯುತ್ ತಂತಿಯ ಮೇಲೆ ಎರಡು ಪುಟಾಣಿ ಮರಿಗಳು ಚೀಂವ್ ಚೀಂವ್ ಎಂದು ಗುಟುಕಿಗಾಗಿ ಬಾಯಿ ತೆರೆದು ಕಾಯುತ್ತಿದ್ದವು. ತಲೆಯ ಮೇಲೊಂದು ಕಡುಕಂದು ಬಣ್ಣದ ಟೋಪಿ, ಬೆನ್ನು, ರೆಕ್ಕೆ, ಬಾಲಗಳೆಲ್ಲ ಸುಂದರವಾದ ಕಡುನೀಲಿ ಬಣ್ಣ, ಕುತ್ತಿಗೆಯಿಂದ ಹೊಟ್ಟೆಯ ಭಾಗವೆಲ್ಲ ಶುಭ್ರ ಬಿಳೀ ಬಣ್ಣ. ಬಾಲದ ತುದಿಗೆ ಎರಡು ತಂತಿಯಂತಹ ರಚನೆ. ಮರಿಗಳಿಗೆ ಗುಟುಕು ನೀಡಿದ್ದೇ ತಡ ಕೆಳಕ್ಕೆ ಡೈವ್ ಹೊಡೆದು ಗಾಳಿಯಲ್ಲಿ ತೇಲುತ್ತಾ ಯುದ್ಧ ವಿಮಾನದಂತೆ ಹಾರಾಡುತ್ತಾ ಇನ್ನೊಂದು ಹುಳುವನ್ನು ಹಿಡಿದು ತಂದು ಮರಿಗಳಿಗೆ ಗುಟುಕು ತಿನ್ನಿಸುತ್ತಿತ್ತು.
ಒಂದು ಹಕ್ಕಿ ಹಾರಿ ಕೆಲವೇ ಕ್ಷಣದಲ್ಲಿ ಮತ್ತೆ ತಿರುಗಿ ಬರುತ್ತಿದೆ ಎಂದುಕೊಂಡಿದ್ದೆ. ಸ್ವಲ್ಪ ಹೊತ್ತಿನಲ್ಲಿ ಮರಿಗಳ ಹೊಟ್ಟೆ ತುಂಬಿದಾಗ ಒಂದೇ ರೀತಿ ಕಾಣುವ ಎರಡು ಹಕ್ಕಿಗಳು ಮರಿಗಳ ಸಮೀಪ ಬಂದು ಕುಳಿತವು. ಆಗಲೇ ತಿಳಿದದ್ದು ಗಂಡು ಮತ್ತು ಹೆಣ್ಣು ಹಕ್ಕಿಗಳೆರಡೂ ನೋಡಲು ಒಂದೇ ರೀತಿ ಇರುತ್ತವೆ ಮತ್ತು ಎರಡೂ ಹುಳುಗಳನ್ನು ಹಿಡಿದು ತಂದು ಮರಿಗಳಿಗೆ ತಿನ್ನಿಸುತ್ತವೆ ಎಂದು. ಈ ಹಕ್ಕಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹುಡುಕಿದಾಗ ಇದರ ಹೆಸರಿಗೂ ಇದು ಹುಳು ಹಿಡಿಯುವ ವಿಧಾನಕ್ಕೂ ಇರುವ ಸಂಬಂಧ ತಿಳಿದು ಆಶ್ಚರ್ಯವಾಯಿತು.
ಆಕಾಶದಲ್ಲಿ ಹಾರಾಡುತ್ತಲೇ ಪುಟಾಣಿ ಕೀಟಗಳನ್ನು ಗುರುತಿಸಿ ವೇಗವಾಗಿ ಅದರತ್ತ ಹಾರಿ ಬಾಯಿ ತೆರೆದುಕೊಂಡೇ ಅವುಗಳನ್ನು ನುಂಗುವುದರಿಂದ ಈ ಹಕ್ಕಿಗಳನ್ನು Swallow ಎಂದು ಕರೆಯುತ್ತಾರೆ. ಸ್ವಾಲೋ ದಲ್ಲಿ ಇನ್ನೂ ಅನೇಕ ಉಪಜಾತಿಗಳಿವೆ. ತಂತಿಯಂತಹ ಉದ್ದನೆಯ ಎರಡು ಬಾಲಗಳಿರುವುದರಿಂದ Wire-tailed Swallow ಎಂದು ಕರೆಯುತ್ತಾರೆ. ಸೇತುವೆಯ ಕೆಳಗಡೆ ಮಣ್ಣು ಮತ್ತು ಹುಲ್ಲುಗಳನ್ನು ಬಳಸಿ ಸೇತುವೆಯ ತಳಭಾಗಕ್ಕೆ ಅಂಟಿಸಿದಂತಹ ಗೂಡನ್ನು ಮಾಡಿ ಮೊಟ್ಟೆ ಇಟ್ಟು ಮರಿ ಮಾಡುತ್ತದೆ. ನಿಮ್ಮ ಆಸುಪಾಸಿನಲ್ಲೂ ಈ ಹಕ್ಕಿ ನೋಡಲು ಸಿಗಬಹುದು.
ಕನ್ನಡದ ಹೆಸರು: ತಂತಿ ಬಾಲದ ಕವಲು ತೋಕೆ
ಇಂಗ್ಲೀಷ್ ಹೆಸರು: Wire-tailed Swallow
ವೈಜ್ಞಾನಿಕ ಹೆಸರು: Hirundo smithii
ಚಿತ್ರ : ಅರವಿಂದ ಕುಡ್ಲ
ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************