-->
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 66

ಬದಲಾಗೋಣವೇ ಪ್ಲೀಸ್.....! ಸಂಚಿಕೆ - 66

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
    
                ಹೆಚ್ಚಿನವರ ಬದುಕೆಲ್ಲ ಬರೀ ಹುಡುಕುವುದರಲ್ಲೇ ಕಳೆದು ಹೋಗುತ್ತಿದೆ. ಏನು ಮತ್ತು ಯಾವುದನ್ನು ಹುಡುಕುತ್ತಿದ್ದೇವೆ ಅಂತ ಗೊತ್ತಾಗುತ್ತಿಲ್ಲ! ಎಲ್ಲಿ ಹುಡುಕಾಡುತ್ತಿದ್ದೇವೆ ಎಂಬುದೂ ಗೊತ್ತಿಲ್ಲ. ಆದರೆ ನಮ್ಮ ಹುಡುಕಾಟದ ಹಿಂದೆ..... ಹುಡುಕಾಟ ಮಾತ್ರ ನಿಂತಿಲ್ಲ. ನಾವು ಹುಡುಕುತ್ತಿರುವ ವಸ್ತು ಅಥವಾ ವಿಚಾರವು ನಮ್ಮ ಕಣ್ಣೆದುರೇ ಇದ್ದರೂ ಅದನ್ನು ಗುರುತಿಸಲಾಗುತ್ತಿಲ್ಲ. ಶುಭ್ರ ಬೆಳಕಿದ್ದರೂ ತಡಕಾಡೋ ಕುರುಡನಂತೆ ಇನ್ನೂ ಹುಡುಕಾಡುತ್ತಾ ಇದ್ದೇವೆ !. ಮತ್ತೆ ಮತ್ತೆ ಹುಡುಕಾಡುತ್ತಿದ್ದೇವೆ. ಕಾಣದ ವಸ್ತುವಾದರೆ ಹುಡುಕೋದರಲ್ಲಿ ಅರ್ಥವಿದೆ. ಆದರೆ ಕಣ್ಣೆದುರು ಕಾಣುತ್ತಿದ್ದರೂ ಹುಡುಕಾಡುವುದಕ್ಕೆ ಅರ್ಥವಿದೆಯೇ...? ಇದೆಂಥಾ ವ್ಯರ್ಥ ಹುಡುಕಾಟ...? ಇದನ್ನು ಏನೆಂದು ಅರ್ಥೈಸುವುದು...? ಕಣ್ಣೆದೆರು ಸ್ಪಷ್ಟವಾಗಿ ಕಂಡರೂ ಅದನ್ನು ಅಗೋಚರವಾಗುವಂತೆ ಮಾಡುವ ಮಾಯಾ ಪರದೆ ಯಾವುದು....? ಕಂಡರೂ ಕಾಣದಂತೆ ಮಾಡುವ ಜಡ ನಿದ್ರೆ ಯಾವುದು...? ಕಣ್ಣಿಗೆ ಅಡರಿರುವ ಮುಪ್ಪೇನು..? ಇವೆಲ್ಲವನ್ನು ಪರಿಹರಿಸುವ ಶಕ್ತಿ ಯಾವುದು..? ಅದನ್ನು ಕೊಡುವವರು ಯಾರು...? ಈ ಬದುಕೆಂಬ ನಾಟಕದಲ್ಲಿ ನ್ಯಾಯೋಚಿತವಾಗಿ ಗೆಲ್ಲುವ ಬಗೆ ಹೇಗೆ...? ಅಬ್ಬಾ , ವಿಚಿತ್ರ ವಿಚಾರ.
       ಕೆಲವರ ಹುಡುಕಾಟ ಆಸ್ತಿ- ಸಂಪತ್ತು, ವಜ್ರಾಭರಣ, ಹಣ ಇತ್ಯಾದಿ ರೂಪದಲ್ಲಿದ್ದರೆ ಇನ್ನೂ ಕೆಲವರದ್ದು ಅಧಿಕಾರ, ಅಂತಸ್ತು, ಸ್ಥಾನಮಾನ ಇದರ ಮೇಲಿರುತ್ತದೆ. ಆದರೆ ಇವೆಲ್ಲವೂ ವ್ಯರ್ಥ ಹಾಗೂ ಅಶಾಂತಿಯ ಹುಡುಕಾಟ. ಈ ಹುಡುಕಾಟವು ಇರುವ ನೆಮ್ಮದಿಯನ್ನು ವ್ಯರ್ಥವಾಗಿ ಕಳೆದುಕೊಳ್ಳುವ ಹುಡುಕಾಟ ಎಂಬುದು ಅಂತ್ಯಕಾಲದಲ್ಲಿ ಗೊತ್ತಾಗುವ ಸತ್ಯವಾಗಿದೆ. ಇದೆಲ್ಲವೂ ಋಣಾತ್ಮಕ ಫಲಿತಾಂಶ ರೂಪದಲ್ಲಿರುತ್ತದೆ. ಇದೊಂದು ತರಹ, ಒಂದು ಹನಿ ನೀರಿಗಾಗಿ ಬಾವಿಯನ್ನು ತೋಡಿದಂತೆ.
        ಕೆಲವರದ್ದು ಜ್ಞಾನದ ಹುಡುಕಾಟ. ಇದು ಬದುಕಿನ ಸತ್ಯವನ್ನು, ಪ್ರಕೃತಿಯ ಅದ್ಭುತ ಸೃಷ್ಟಿಯ ಗುಟ್ಟನ್ನು ತಿಳಿಸುತ್ತದೆ. ಅಂತಿಮವಾಗಿ ಧನಾತ್ಮಕ ಫಲಿತಾಂಶ ರೂಪದಲ್ಲಿರುತ್ತದೆ. ಇನ್ನೂ ಕೆಲವರದ್ದು ನೆಮ್ಮದಿಯ ಹುಡುಕಾಟ. ಇರುವುದರಲ್ಲಿಯೇ ಪ್ರಕೃತಿಯ ಸರಳ ನಿಯಮಗಳನ್ನು ಪಾಲಿಸಿಕೊಂಡು ನೆಮ್ಮದಿಯ ಬದುಕಿನ ಸವಿಯನ್ನು ಅನುಭವಿಸುತ್ತಿರುವುದು ಇವರ ಗುಟ್ಟು. ಹುಡುಕಾಟದ ವಸ್ತು ನಮ್ಮೆದುರು ಇದೆ. ಆದರೆ ಸತ್ಯವನ್ನು ಅಥವಾ ಅಸತ್ಯವನ್ನು ಹುಡುಕಾಡುತ್ತಿದ್ದೇವೆಯೇ...? ಎಂಬುದು ನಾವು ಅರ್ಥೈಸಿದರೆ ಬದುಕು ಸರಳವಾಗಿರುತ್ತದೆ. ನೆಮ್ಮದಿಯ ಬದುಕಿಗೆ ಹುಡುಕಾಡುತ್ತಿರುವ ಖುಷಿ, ನಗು, ಆರೋಗ್ಯ, ಸಹಕಾರ, ಭಾಂಧವ್ಯ ಇವೆಲ್ಲವೂ ನಾವು ಮಾನಸಿಕವಾಗಿ ಸಧೃಡವಾಗಿದ್ದರೆ ಪ್ರಕೃತಿಯಲ್ಲಿ ಎಲ್ಲವೂ ಉಚಿತವಾಗಿ ಸಿಗುತ್ತದೆ. ಆದರೆ ಮಾನವ ಜನಾಂಗ ಮಾತ್ರ ಕಲ್ಪಿಸಿಕೊಂಡಿರುವ ಆಸ್ತಿ, ಅಂತಸ್ತು, ಅಧಿಕಾರ, ಹಣ ಇತ್ಯಾದಿಗಳು ಉಚಿತವಾಗಿ ಸಿಗಲ್ಲ. ನನ್ನನ್ನು ಪ್ರೀತಿಸುವ ಜನರು ಹಾಗೂ ಪ್ರಕೃತಿಯೇ ನನ್ನ ಆಸ್ತಿ-ಸಂಪತ್ತು , ಹಣ - ಅಧಿಕಾರ ಎಂದು ಅರ್ಥೈಸಿದರೆ ಮತ್ತು ಆ ಬದಲಾವಣೆಯನ್ನು ನಮ್ಮಲ್ಲಿ ನಾವು ತಂದುಕೊಂಡರೆ ವ್ಯರ್ಥ ಹುಡುಕಾಟವನ್ನು ನಿಲ್ಲಿಸಬಹುದು. ನನ್ನನ್ನು ನಾನು ಅರಿತರೆ ಮಾಯ ಪರದೆ ಸರಿಯಬಹುದು. ಸತ್ಯದ ಬೆಳಕು ಹರಿಯಬಹುದು. ಬನ್ನಿ ಹುಡುಕಾಟದ ರೀತಿಯಲ್ಲಿ ಬದಲಾಗೋಣ. ನೆಮ್ಮದಿಯ ಬದುಕಿಗೆ ಬೇಕಾಗಿರುವುದನ್ನೇ ಹುಡುಕೋಣ. ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?. 
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************

Ads on article

Advertise in articles 1

advertising articles 2

Advertise under the article