ಸಂಚಾರಿಯ ಡೈರಿ : ಸಂಚಿಕೆ - 13
Thursday, October 6, 2022
Edit
ಸಂಚಾರಿಯ ಡೈರಿ : ಸಂಚಿಕೆ - 13
ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ
"ಇರುವ ಭಾಗ್ಯವ ನೆನೆದು ಬಾರೆನೆಂಬುವುದನು ಬಿಡು, ಹರುಷಕ್ಕಿದೆ ದಾರಿ ಮಂಕುತಿಮ್ಮ" ಎಂಬ ಡಿವಿಜಿ ಯವರ ವಚನ ಅಕ್ಷರಶಃ ಪಾಲಿಸುವ ಮನುಷ್ಯ ಜನಾಂಗ ಎಂದರೆ ನಮ್ಮ ಆದಿವಾಸಿಗಳು. ಇದ್ದುದರಲ್ಲೇ ಹಿಟ್ಟಿಟ್ಟು, ತುಂಡು ಬಟ್ಟೆ ತೊಟ್ಟು, ಪಟ್ಟಣದ ಪೊಟ್ಟಣ ತೆರೆಯದೆ ತಮ್ಮದೇ ಲೋಕದಲ್ಲಿ ಸುಖವಾಗಿರುವ ಜನಾಂಗಗಳು ಕಾಡಿನ ಮನುಜರು. ಅಂತಹ ಮಹನೀಯರ ಕಡೆಗೆ ತೆರಳಿದ ಪ್ರವಾಸ ಕಥನದ ಅನುಭವ ರೋಚಕ !
ಅಸ್ಸಾಂನಲ್ಲಿ ಲಖಿಂಪುರ್, ಉಡಾಲ್ಗುರಿ, ಕಾಮರೂಪ್, ಮಂಗಲದೊಯಿನಂತಹ ವಿಶಿಷ್ಟ ಜಿಲ್ಲೆಗಳಿಗೆ ಭೇಟಿ ಕೊಟ್ಟಿದ್ದ ನನಗೆ, ಕಾರ್ಬಿ ಆಂಗ್ಲಂಗ್ ಜಿಲ್ಲೆಗೆ ಭೇಟಿ ನೀಡುವ ಆಸೆಯಿತ್ತು. ಅಲ್ಲಿ ನನಗೋರ್ವ ಕಾರ್ಬಿ ಜನಾಂಗದ ಗೆಳೆಯನಿದ್ದ. ಕಾರ್ಬಿಗಳು ಅಸ್ಸಾಮಿಗರಂತೆ ಇಂಡೋ ಮಂಗೋಲಾಯಿಡ್‌ಗಳಾದರೂ, ಭಾಷೆಯಲ್ಲಂತೂ ಒಂದಿನಿತೂ ಸಾಮ್ಯತೆಗಳಿಲ್ಲ!ಮೊದಲ ಬಾರಿ ಕಾರ್ಬಿ ಭಾಷೆ ಕೇಳಿದಾಗ ಇದೇನು ಚೈನೀಸ್, ಜಪಾನೀಸ್ ಥರ ಇದೆಯಲ್ಲ ಎಂಬ ಭಾವನೆ ಬರುತ್ತದೆ.
ಅಂದಹಾಗೆ ಕಾರ್ಬಿ ಜನಾಂಗ ಅಸ್ಸಾಂನ ಮೂರ್ನಾಲ್ಕು ಜಿಲ್ಲೆಗಳಲ್ಲಿ ಹಂಚಿ ಹೋಗಿದ್ದಾರೆ. ನಾನು ತೆರಳಿದ ಪ್ರದೇಶ ಝೆಂಕಾ ಎಂಬ ಊರು. ಅಸ್ಸಾಂನ ರಾಜಧಾನಿ ದಿಸ್ಪುರ್‌ನಿಂದ ಸುಮಾರು 3 ಗಂಟೆಯ ಪ್ರಯಾಣ ಮಾಡಿದ್ದೆ. ಗುವಾಹಟಿ ರೈಲ್ವೆ ಸ್ಟೇಷನ್‌ನಿಂದ ಲಂಕಾ ಎಂಬ ರೈಲು ನಿಲ್ದಾಣ ತಲುಪಿದ್ದೆ. ಅಲ್ಲಿ ತಲುಪಿದಾಗ ಸಂಜೆ ಐದೂವರೆ! ಅಸ್ಸಾಂನ ಬಹುತೇಕ ಊರುಗಳಲ್ಲಿ ಸಂಜೆ ಐದೂವರೆಯ ನಂತರ ವಾಹನಗಳು ಸಿಗೋದು ವಿರಳ. ನಾನಂತು ಏನು ಮಾಡಲಿ ಎಂಬ ದಿಗ್ಭ್ರಾಂತಿಯಲ್ಲಿದ್ದೆ. ಲಂಕಾದಿಂದ ಝೆಂಕಾಗೆ ಇಪ್ಪತ್ತು ಕಿಲೋಮೀಟರ್ ದೂರ ಎಂದು ಗೂಗಲ್ ಮ್ಯಾಪ್ ತೋರಿಸುತ್ತಿತ್ತು. ಆದದ್ದಾಗಲಿ ಎಂದು ಟೋಟೋ (ಅಸ್ಸಾಂ/ಈಶಾನ್ಯ ರಾಜ್ಯಗಳಲ್ಲಿ ಆಟೋಗಿಂತಲೂ ಟೋಟೋ ಎನ್ನುವ ಗಾಡಿ ಹೆಚ್ಚಾಗಿ ಕಾಣಸಿಗುತ್ತವೆ) ಗಾಡಿಯವನ ವಿಚಾರಿಸಿದಾಗ ಕೈಯ ಐದು ಬೆರಳುಗಳನ್ನು ನನ್ನ ವದನದ ನೇರಕ್ಕೆ ಅರಳಿಸಿದ ಅಂದರೆ ಐನೂರು! ನೋ ವೇ ಎಂದು ನಾನು ಹಿಂದಿರುಗಿದಾಗ ಒಂದು ರಿಕ್ಷಾ ಸಿಕ್ಕಿತು. ಅದರಲ್ಲಿ ಬರೀ ಐದು ಕಿಲೋಮೀಟರ್ ದೂರದ ಸಾರಿಯಾಲಿ ಎಂಬಲ್ಲಿ ಬಂದೆ. ಅಲ್ಲೂ ಏನೂ ಇಲ್ಲ ! (ನಾನು ತೆರಳಿದ ದಿನದ ಮರುದಿನ ಆ ಜಿಲ್ಲೆಯಲ್ಲಿ ನರೇಂದ್ರ ಮೋದಿಯವರ ಸಭೆ ಇತ್ತಂತೆ, ಆ ಕಾರಣಕ್ಕಾಗಿ ಬಹುತೇಕ ವಾಹನಗಳು ಬುಕ್ ಆಗಿದ್ದವಂತೆ) ಕೊನೆಗೆ ಯಾವುದೋ ಓಪನ್ ಜೀಪ್ ಮೇಲೇರಿ ಖೆರೋನಿ ಎಂಬ ಊರಿಗೆ ತಲುಪಿದೆ. ಅಲ್ಲಿಂದ ಝೆಂಕಾಗೆ ಆಟೋ ಹಿಡಿದು ಗೆಳೆಯನ ಮನೆ ತಲುಪಿದಾಗ ಗಂಟೆ ಒಂಭತ್ತೂವರೆ!
ಕಾರ್ಬಿಗಳು ಬಹು ಸರಳ ಜೀವಿಗಳು. ಬಿದಿರನ್ನು ಸೀಳಿ, ಕೋಲುಗಳಂತೆ ಒಂದನ್ನೊಂದು ಜೋಡಿಸಿ ಮನೆ ಕಟ್ಟುತ್ತಾರೆ ಅದನ್ನು ಗೋಡೆಗಳಂತೆ ಮಣ್ಣು ಮೆತ್ತಿ ನಿಲ್ಲಿಸುತ್ತಾರೆ. ಮಣ್ಣು ಸವರಿದ ಮೇಲೆ ಸೆಗಣಿ ಸಾರಿಸುತ್ತಾರೆ. ಕಿಟಕಿಗಳನ್ನು ವಿವಿಧ ಆಕಾರಗಳಲ್ಲಿ, ವಿಭಿನ್ನ ರೀತಿಯಲ್ಲಿ ನಿರ್ಮಿಸುತ್ತಾರೆ. ಆದರೆ ಎಲ್ಲದಕ್ಕೂ ಮೂಲವಸ್ತುಗಳು ಬಿದಿರು, ಮಣ್ಣು ಹಾಗೂ ಸಗಣಿ ಮಾತ್ರ. ಮನೆಯ ಮೇಲೆ ಮುಳಿಹುಲ್ಲಿನ ಛಾವಣಿ. ಮನೆಯ ಮಧ್ಯದಿಂದ ಹೊಗೆ ಹೋಗಲು ಒಂದು ಚಿಮಣಿ. ನಾ ಹೋಗಿದ್ದ ದಿನದ ರಾತ್ರಿ ಧೋ ಎಂದು ಗಾಳಿ ಮಳೆ ಸುರಿಯತೊಡಗಿತ್ತು. ಆಗ ಮನೆಯ ಅಂಚಿನಲ್ಲಿ ಹಾಕಿದ್ದ ಕಬ್ಬಿಣದ ಟಿನ್ ಶೀಟುಗಳು ಟಪ್‌ಟಪ್ ಎಂದು ಹಾರತೊಡಗಿ, ಮನೆಯೊಳಗೆಲ್ಲಾ ನೀರಿನ ಹನಿಗಳು ಹಾರಿಬಂದಿದ್ದವು!
ಅಂದಹಾಗೆ ನನ್ನ ಗೆಳೆಯನ ಹೆಸರು ಮಿರ್ಜಿಂಗ್ ಎಂಗಿ ಎಂದು. ಅವರು ಕ್ರಿಶ್ಚಿಯನ್ ಧರ್ಮ ಸ್ವೀಕರಿಸಿದ ಕಾರ್ಬಿ ಜನಾಂಗದವರಾದರೆ, ಅವನ ಅಕ್ಕ-ಪಕ್ಕದ ಮನೆಯಲ್ಲಿದ್ದ ಮಾವಂದಿರೆಲ್ಲಾ ಹಿಂದೂ ಧರ್ಮ ಸ್ವೀಕರಿಸಿದ ಕಾರ್ಬಿ ಬುಡಕಟ್ಟು ಜನಾಂಗದವರಾಗಿದ್ದರು. ಆದರೆ ಇವರು ತೀರಾ ಧರ್ಮದ ಕಟ್ಟಾಳುಗಳಲ್ಲ..
ಕಾರ್ಬಿ ಜನಾಂಗದ ಆಹಾರ ಪದ್ಧತಿ ಅತ್ಯಂತ ಸರಳ ಹಾಗೂ ಬಹು ನೈಸರ್ಗಿಕವಾಗಿದೆ. ತಮ್ಮದೆ ಗದ್ದೆಯಲ್ಲಿ ಬೆಳೆದ ಅಕ್ಕಿ, ತರಕಾರಿಗಳನ್ನೇ ಅಡುಗೆಗೆ ಬಳಸುತ್ತಾರೆ. ಕಾಡಿನಲ್ಲಿ ಸಿಗುವ ವಿಶೇಷ ಸೊಪ್ಪುಗಳನ್ನು ಬೇಯಿಸಿ, ಅದಕ್ಕೆ ಬಿದಿರಿನೊಳಗೆ ಉಪ್ಪು ಸೇರಿಸಿ ಒಣಗಿಸಿದ ಮೀನಿನ ಜತೆ ಬೇಯಿಸುತ್ತಾರೆ.
ಪ್ರತಿಯೊಂದು ಅಡುಗೆಗೂ ಇಂಗ್ತಿ- ಬಿರಿಕ್ (ಇಂಗ್ತಿ ಎಂದರೆ ಉಪ್ಪು- ಬಿರಿಕ್ ಎಂದರೆ ಮೆಣಸು) ಅತಿಯಾಗಿ ಬಳಸುತ್ತಾರೆ. ಪ್ರತಿ ಅಡುಗೆಯ ಜತೆ ಬೇಳೆಯಿಂದ ದಾಲ್ ಮಾಡುತ್ತಾರೆ. ಅದಕ್ಕೆ ಕಡ್ಡಾಯವಾಗಿ ಆಲೂಗಡ್ಡೆ ಹಾಕುತ್ತಾರೆ. ಕೆಲವು ಸೊಪ್ಪುಗಳನ್ನು ಚೆನ್ನಾಗಿ ಬೇಯಿಸಿ, ಅದನ್ನು ಹಿಚುಕಿ ಅದಕ್ಕೆ ಬೆಂದ ಬೇಳೆಯನ್ನು ಸೇರಿಸಿ ಅನ್ನದ ಜತೆ ನೀಡುತ್ತಾರೆ. ಬರೀ ತರಕಾರಿ ಮಾತ್ರವಲ್ಲ ಮಾಂಸವೂ ಇವರಿಗೆ ಮೆಚ್ಚಿನ ಊಟ. ಅದರಲ್ಲೂ ಹಂದಿಮಾಂಸ ಇವರಿಗೆ ಅತ್ಯಂತ ಪ್ರಿಯವಾದದ್ದು. ಅದರ ಜತೆ ನಾಟಿಕೋಳಿ, ಬಾತುಕೋಳಿಗಳನ್ನೂ ಆಹಾರದಲ್ಲಿ ಬಳಸುತ್ತಾರೆ. ಶ್ವೇತ ವರ್ಣದ ಪಾರಿವಾಳಗಳಿಗೆ ಮನೆಯ ಛಾವಣಿಯಲ್ಲಿ ಚಿಕ್ಕ ಗೂಡುಗಳನ್ನು ಮಾಡಿ, ಮನೆಗೆ ಅತಿಥಿಗಳು ಆಗಮಿಸಿದಾಗ ಅದರ ಅಡುಗೆ ತಯಾರಿಸುತ್ತಾರೆ.
ಐವತ್ತು ವರ್ಷದಿಂದೀಚೆ ಕಾರ್ಬಿ ಜನಾಂಗದ ಕೃಷಿ ಪರಂಪರೆಯಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಭತ್ತ, ಜೋಳ ಬೆಳೆಯುತ್ತಿದ್ದವರು 'ಕಬ್ಬನ್ನ' ಬೆಳೆಯತೊಡಗಿದರು. ಕಬ್ಬಿನ ಜತೆ ಸೆಣಬನ್ನು ಸಹ ಇಲ್ಲಿ ಬೆಳೆಯುತ್ತಾರೆ. (ನಮ್ಮ ಕರಾವಳಿಯಲ್ಲಿ ಒಲೆ ಉರಿಸೋವಾಗ ಮೊದಲು ತೆಂಗಿನ ಒಣಗರಿಗಳನ್ನು ಬಳಸುವಂತೆ, ಈ ಒಣಗಿದ ಸೆಣಬಿನ ಕಡ್ಡಿಗಳು (ಮೊರಾ ಅಪಾಂಗ್) ಕಡ್ಡಿಗಳನ್ನು ಒಂದರ ಮೇಲೊಂದು ಪೇರಿಸಿ ಕಟ್ಟಿಡುತ್ತಾರೆ. ಇದನ್ನು ಒಲೆ ಉರಿಸೋವಾಗ ಚಿಕ್ಕ ಚಿಕ್ಕದಾಗಿ ಕತ್ತರಿಸಿ ಬಳಸುತ್ತಾರೆ. ಐವತ್ತು ವರ್ಷಗಳ ಸುಧೀರ್ಘ ವ್ಯವಸಾಯ ವ್ಯವಧಾನದಲ್ಲಿ, ಕಬ್ಬಿನಿಂದ ಬೆಲ್ಲವನ್ನು ತಯಾರಿಸುವ, ಕಬ್ಬಿನ ರಸ ಹಿಂಡುವ, ದೊಡ್ಡ ದೊಡ್ಡ ಬೆಲ್ಟೆಡ್ ಯಂತ್ರಗಳು ಬಂದವು. ಅದೇ ಕಾರಣಕ್ಕಾಗಿ ಬಿಹಾರದಿಂದ ಕಾರ್ಮಿಕರನ್ನು ಆ ಕಾಲದಲ್ಲಿ ತರಿಸಿಕೊಂಡಿದ್ದರು. ಅದರ ಪರಿಣಾಮವಾಗಿ ಇಂದು ಕಾರ್ಬಿ ಬುಡಕಟ್ಟು ಜನಾಂಗಕ್ಕೆ ಸಮವಾಗಿ ಬಿಹಾರಿಗಳ ಜನಸಂಖ್ಯೆ ಈ ಜಿಲ್ಲೆಯಲ್ಲಿದೆ. ಇದೇ ಕಾರಣಕ್ಕಾಗಿ ಇಲ್ಲಿ ಮೂಲ ನಿವಾಸಿ- ವಲಸಿಗ ಎಂಬ ವಾದ ವಿವಾದಗಳು ಪದೇ ಪದೇ ಏಳುತ್ತಿರುತ್ತವೆ.
ಅಸ್ಸಾಂ ರಾಜ್ಯದಲ್ಲಿ ಒಂದು ವಿಶೇಷ ಪದ್ಧತಿ ಇದೆ. ಇಲ್ಲಿ ನೆಲೆಸಿರುವ ನೂರಾರು ಜನಾಂಗಗಳಿಗೆ ಒಂದೊಂದು ವಿಧದ ಘಮೂಸಾ ಇವೆ. ಘಮೂಸಾ ಅಂದರೆ ಅಂದವಾಗಿ ನೇಯ್ದು, ಚುಕ್ಕಿ ಚಿತ್ರ ಬರೆದ ಶಾಲು ಎಂಬರ್ಥ. ಅಸ್ಸಾಮಿ ಮಾತೃಭಾಷಿಗರು ಗುಲಾಬಿ ಮತ್ತು ಬಿಳಿ ಬಣ್ಣ ಮಿಶ್ರಿತ ಶಾಲನ್ನು ಅತಿಥಿಗಳಿಗೆ ಉಡುಗೊರೆಯಾಗಿ ನೀಡುತ್ತಾರೆ. ಕರ್ಬಿ ಜನಾಂಗದವರು ಕಡುಕೆಂಪು ಬಣ್ಣ, ಮಧ್ಯೆ ಮಧ್ಯೆ ಕಪ್ಪು ಬಣ್ಣದ ಪಟ್ಟಿ ಇರುವ ಶಾಲು ನೀಡುತ್ತಾರೆ. ಮಿಶಿಂಗ್ ಜನಾಂಗದ ಶಾಲು ಕೆಂಪು ಬಣ್ಣದ್ದಾದರೆ, ಬೋಡೋ ಜನಾಂಗ ಹಸಿರು ಬಣ್ಣದ ಶಾಲನ್ನು ಹೊಂದಿದ್ದಾರೆ.
ಅಸ್ಸಾಂನಲ್ಲಿ ಈಗಲೂ ಸಹ ಕೈಮಗ್ಗ ಜೀವಂತವಾಗಿದೆ. ಕಾರ್ಬಿ ಜನರೂ ಹತ್ತಿಯ ನೂಲನ್ನು ತಂದು ಬಟ್ಟೆ, ಚೀಲಗಳನ್ನು ನೇಯುತ್ತಾರೆ. ಹಿಂದೆಲ್ಲಾ ಸಾಂಪ್ರದಾಯಿಕ ಬಟ್ಟೆಗಳನ್ನೇ ಧರಿಸುತ್ತಿದ್ದ ಈ ಜನಾಂಗ ಈಗ ಆಧುನಿಕ ಬಟ್ಟೆಗಳನ್ನು ಬಳಸುತ್ತಾರೆ.
2018 ರಲ್ಲಿ ಇಲ್ಲಿ ಕಾರ್ಬಿ ಆಂಗ್ಲಾಂಗ್ ನ ಜಲಪಾತ ನೋಡಲು ನೋಡಲು ಬಂದಿದ್ದ ಅಸ್ಸಾಂ ರಾಜ್ಯದ ಇಬ್ಬರು ಹುಡುಗರನ್ನು ಇಲ್ಲಿಯ ಸ್ಥಳೀಯರು ಹಿಡಿದಿದ್ದರಂತೆ. ಇವರು ಮಕ್ಕಳ ಕಳ್ಳರು ಎಂಬ ಗುಮಾನಿಯಿಂದ ಅವರನ್ನು ಥಳಿಸಿ, ಕೊಂದು ಹಾಕಿದ್ದರು. ಸ್ವತಃ ನಾವು ಅಸ್ಸಾಮಿನವರೇ, ನಾವು ಏನೂ ಮಾಡಿಲ್ಲವೆಂದರೂ ಹತ್ಯೆ ಮಾಡಿದ್ದರು. ಆ ಘಟನೆಯ ನಂತರ ಈ ಭಾಗಕ್ಕೆ ಹೊರಗಡೆಯವರಿಗೆ ಬರಲು ಹಿಂಜರಿಕೆಯಾಗತೊಡಗಿತು. ಅದಾಗ್ಯೂ ಆ ಒಂದು ವಿಚಾರಕ್ಕೆ ಇಡೀ ಜನಾಂಗದ ನಿಂದನೆ ಸರಿಯಲ್ಲ! ಹೊರಗಿನಿಂದ ಬಂದವರನ್ನು ಸ್ನೇಹಪೂರ್ವಕವಾಗಿಯೇ ಸ್ವಾಗತಿಸುತ್ತಾರೆ. ಇರುವುದರಲ್ಲೇ ಹಂಚಿಕೊಂಡು ಪ್ರೀತಿಸುವವರು ಕಾರ್ಬಿಗಳು. ಕಾರ್ಬಿ ಭಾಷೆ ಬಾರದಿದ್ದರೂ ಅಸ್ಸಾಮಿ ಭಾಷೆಯಲ್ಲಿಯೇ ವ್ಯವಹರಿಸಿ, 'ಬೆಯಾ ನಪಾಬಿ ರೇ ಖಾನಾ ಭಾಲ್ ಕೊರಾ ನಾಯಿ ಬುಲಿ' (ಬೇಜಾರು ಮಾಡ್ಕೋಬೇಡ, ಊಟ ತಿಂಡಿ ಚೆನ್ನಾಗಾಗಿಲ್ಲ ಎಂದು) ಹೇಳಿದ್ದರು. ನಾನು ಹೊರಡುವ ದಿನ ಕಾರ್ಬಿ ಜನಾಂಗದ ಘಮೂಸಾ ಕೊಟ್ಟು ಸತ್ಕರಿಸಿದರು. ಮೂರು ದಿನಗಳ ಕಾಲ ಅವರ ಮನೆಯಲ್ಲಿದ್ದು ಕಾರ್ಬಿ ಭಾಷೆಯಲ್ಲಿ ಅನ್ ಎಂದರೆ ಅನ್ನ ಎಂಬ ಒಂದೇ ಕನ್ನಡ ಶಬ್ದ ಕಂಡುಹಿಡಿದೆ. ಒಟ್ಟಾರೆ ಅವರ ಪ್ರೀತಿಗೆ ಮನಸೋತಿದ್ದೆ.
ಆಧುನಿಕತೆಯ ಕಡೆ ನಿಧಾನವಾಗಿ ವಾಲುತ್ತಿರುವ ಈ ಜನಾಂಗದ ನವ ತರುಣರೂ ಎಲ್ಲರ ತರಹ ಉದ್ಯೋಗ ನಿರೀಕ್ಷೆಯಲ್ಲಿದ್ದಾರೆ. ಕೆಲವರು ಓದಿದ ಮೇಲೂ ತಮ್ಮ ಜಮೀನಿನಲ್ಲಿ ಕೃಷಿ ಕೆಲಸ ಮುಂದುವರಿಸಿದ್ದಾರೆ. ರಾಜಕೀಯ ಪಕ್ಷಗಳ ಬಾಲಗೋಂಚಿಯಾದ ಕೆಲವು ಯುವಕರು ಅತ್ತಿಂದತ್ತ ಸುತ್ತಾಡುತ್ತ, ಕೊನೆಗೆ ಎಲ್ಲಿಯೂ ಸಲ್ಲದವರಾಗಿ ಇಂದು ಕಾರ್ಬಿ ಆಂಗ್ಲಂಗ್ ಪ್ರತ್ಯೇಕ ರಾಜ್ಯದ ಗುಲ್ಲೆಬ್ಬಿಸುತ್ತಿದ್ದಾರೆ. ಹೆಚ್ಚುತ್ತಿರುವ ಬಿಹಾರಿ-ಬಂಗಾಳಿ ಜನಸಂಖ್ಯೆಯಿಂದಾಗಿ ಕಾರ್ಬಿ ಜನರು "We are fighting for our existence of ethnic identity" ಎಂದು ಘೋಷಿಸಿದ್ದಾರೆ. ಹಳ್ಳಿ ಹಳ್ಳಿಗೂ ರಸ್ತೆ, ವಿದ್ಯುತ್, ನೀರು ಇತ್ಯಾದಿ ಅಭಿವೃದ್ಧಿ ಚಟುವಟಿಕೆಗಳು ತಲುಪಿದರೂ ಸಹ ತಮ್ಮ ಅಸ್ತಿತ್ವ ಎಂಬ ಭಾವನಾತ್ಮಕ ಅಂಶ ಪದೇ ಪದೇ ಏಳುತ್ತಿರುತ್ತಲೇ ಇರುತ್ತದೆ.
ಕಾಡಂಗಾಡಿ , ಮಂಚಿ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
Mob : 9663135413
******************************************