-->
ಅಕ್ಕನ ಪತ್ರ - 35 ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 35 ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 35 ಕ್ಕೆ
ಮಕ್ಕಳ ಉತ್ತರ : ಸಂಚಿಕೆ - 1


         ಮಕ್ಕಳ ಜಗಲಿಯಲ್ಲಿ......... ಮಕ್ಕಳಿಗೆ ಬಹಳ ಆಪ್ತವಾದ ತೇಜಸ್ವಿ ಅಂಬೆಕಲ್ಲು ಇವರು ಬರೆಯುತ್ತಿರುವ ಅಕ್ಕನ ಪತ್ರ ವಿದ್ಯಾರ್ಥಿಗಳಲ್ಲಿ ಕಾಳಜಿಯನ್ನು ಮೂಡಿಸುವ ಪ್ರಯತ್ನವಾಗಿದೆ. ಓದುವ ಅಭಿರುಚಿ ಹಾಗೂ ಬರೆಯುವ ಕೌಶಲ್ಯ ಬೆಳೆಸಬೇಕೆನ್ನುವುದು ಮಕ್ಕಳ ಜಗಲಿಯ ಉದ್ದೇಶ...... ಜಗಲಿಯಲ್ಲಿ ಅನೇಕ ಮಕ್ಕಳು ನಿರಂತರವಾಗಿ ಬರೆಯುತ್ತಿದ್ದು ಬರೆಯುವ ಇನ್ನಷ್ಟು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ. ವಿದ್ಯಾರ್ಥಿಗಳ ಸ್ವ- ಅನಿಸಿಕೆಯನ್ನು ಭಾವನಾತ್ಮಕವಾಗಿ ಬರೆದು ಕಳುಹಿಸಿದ ಪತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ ........
              


      ನಾನು ಪ್ರಣಮ್ಯ. ಅಕ್ಕನ ಪತ್ರ ಓದಿ ಸಂತೋಷವಾಯ್ತು. ಪತ್ರ ಓದುತ್ತಿರುವಾಗ ನನಗೆ ನನ್ನ ಜೀವನದಲ್ಲೂ ನಡೆದ ಹಲವಾರು ವಿಚಾರಗಳು ಒಂದೊಂದಾಗಿಯೇ ನೆನಪಿಗೆ ಬಂದವು. ಅಂತಹ ಸವಿನೆನಪುಗಳ ಗುಚ್ಚದಿಂದ ಆಯ್ದ ಒಂದು ನೆನಪಿನ ಎಸಳು ಇಲ್ಲಿದೆ. ಅದು ಕೃಷ್ಣಾಷ್ಟಮಿಯ ಸಮಯ. ನಮ್ಮ ಊರಿನ ಭಜನಾ ಮಂದಿರದಲ್ಲಿ ಏರ್ಪಡಿಸಿದ್ದ ಆಟೋಟಗಳಲ್ಲಿ ಭಾಗವಹಿಸಲು ನಾನೂ ಹೋಗಿದ್ದೆ. ನಾನಾಗ ಎರಡನೇ ತರಗತಿಯಲ್ಲಿ ಕಲಿಯುತ್ತಿದ್ದೆ. ನನಗೆ ಯಾಕೋ ಅಲ್ಲಿ ನೆರೆದ ಜನರನ್ನು ಕಂಡಾಗಲೇ ಭಯ ಶುರುವಾಯಿತು. ಯಾವುದೇ ಸ್ಪರ್ಧೆಗೂ ಸೇರದೆ ಹಿಂದೆ ಸರಿದೆ. ಆದರೆ ಅದೊಂದು ಚಮಾತ್ಕಾರವೆಂಬಂತೆ ನನಗೆ ಪರಿಚಯವೇ ಇರದ, ನಾನೆಂದೂ ನೋಡಿರದ ಅಜ್ಜಿಯೊಬ್ಬರು "ಹೋಗು ಆಟ ಆಡು, ಹೆದರಬೇಡ" ಎಂದು ಉತ್ತೇಜನ ನೀಡಿದರು. ಅದೇನು ಪವಾಡ ಅಂತೀರಾ....? 3 ಆಟಗಳಲ್ಲಿ ನನಗೆ ಬಹುಮಾನ ಸಿಕ್ಕಿತು. ನನಗಂತೂ ಬಹಳ ಖುಷಿಯಾಯಿತು. ಅಲ್ಲಿಂದ ಆರಂಭವಾದ ಯಶಸ್ಸು ಇಂದಿಗೂ ನನ್ನ ಜೀವನದಲ್ಲಿ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸುವ ಮುಖೇನ, ಕಲಿಕೆಯಲ್ಲಿ ತೊಡಗಿಸಿಕೊಳ್ಳುವ ಮುಖೇನ ನನ್ನ ಕೈ ಹಿಡಿಯುತ್ತಿದೆ ಎಂಬುದೇ ನನಗೆ ಹೆಮ್ಮೆ. ನನ್ನ ಬೆನ್ನು ತಟ್ಟಿದ ಅಜ್ಜಿ ಯಾರೆಂದೆ ನನಗೆ ಇಂದಿಗೂ ತಿಳಿದಿಲ್ಲ. ಆದರೂ ಎಂದೆಂದಿಗೂ ನಾನು ಅವರನ್ನು ಮರೆಯಲ್ಲ. ಯಾರೇ ಆಗಲಿ ನಮ್ಮ ಪ್ರತಿಭೆಗೆ ಬೆಳಕು ಚೆಲ್ಲುವ ಪ್ರತಿಯೋರ್ವರೂ ನಮ್ಮ ಸುಂದರ ಭವಿಷ್ಯಕ್ಕೆ ಕಾರಣರು. ಅಂತಹ ಎಲ್ಲ ಬೆಂಬಲಿಗರಿಗೂ ನನ್ನ ಮನದಾಳದಿಂದ ಕೃತಜ್ಞತೆಯನ್ನು ಸಲ್ಲಿಸಲು ಸಂತೋಷಪಡುತ್ತೇನೆ. ಅಕ್ಕನ ಮುಂದಿನ ಪತ್ರಕ್ಕಾಗಿ ಕಾಯುತ್ತ, ನನ್ನ ನೆನಪಿನ ಅಂಗಳಕ್ಕೆ ಬೆಳಕು ನೀಡಿದ ಎಲ್ಲರಿಗೂ ಧನ್ಯವಾದ ಸಮರ್ಪಿಸುತ್ತಿರುವ.....
.............................................. ಪ್ರಣಮ್ಯ . ಜಿ
10ನೇ ತರಗತಿ
ಸಂತಜಾರ್ಜ್ ಆಂಗ್ಲಮಾಧ್ಯಮ ಪ್ರೌಢಶಾಲೆ ನೆಲ್ಯಾಡಿ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************

       
      ಪ್ರೀತಿಯ ಅಕ್ಕನಿಗೆ ಶಿಶಿರ್ ಮಾಡುವ ನಮಸ್ಕಾರಗಳು ಹಾಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ನಾನು ಕ್ಷೇಮವಾಗಿರುವೆ. ನಿಮ್ಮ ಪತ್ರ ಓದಿ ಸಂತೋಷವಾಯಿತು. ಈಗ ನಮ್ಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಕನ್ನಡ ಸಂಘ ಉದ್ಘಾಟನೆಯ ಕಾರ್ಯಕ್ರಮಕ್ಕೆ ತಯಾರಿ ನಡೆಯುತ್ತಿದೆ. ಅದರ ಜೊತೆಗೆ ಶಾಲಾ ಕ್ರೀಡಾಕೂಟದ ನಿಮಿತ್ತ ಬೇರೆ ಬೇರೆ ಕ್ರೀಡೆಗಳ ಸ್ಪರ್ಧೆಯು ನಡೆಯುತ್ತಿದೆ. ನಿಮ್ಮ ಪತ್ರ ಓದಿದಾಗ ಶಿಶಿರ್ ಎಂಬ ಮುಗ್ಧ ಬಾಲಕನ ಶಾಲಾ ದಿನದಲ್ಲಿ ನಡೆದ ಘಟನೆ ನೆನಪಾಯಿತು. ನಾನು ಎರಡನೇಯ ತರಗತಿಯಲ್ಲಿ ಓದುತ್ತಿದ್ದೆ. ಒಂದು ದಿನ ನಾನು ಮಧ್ಯಾಹ್ನ ಊಟ ಮಾಡಲು ನೋಡುವಾಗ ಟಿಫಿನ್ ಬ್ಯಾಗ್ ನಾಪತ್ತೆಯಾಗಿತ್ತು. ಎಲ್ಲೂ ಹುಡುಕಿದರು ಸಿಗಲಿಲ್ಲ. ಬಹುಶಃ ನಾನು ಟಿಫಿನ್ ಬ್ಯಾಗ್ ಮನೆಯಿಂದಲೇ ತರಲಿಲ್ಲವೇನೋ ಎಂದು ನನ್ನ ತರಗತಿ ಶಿಕ್ಷಕಿ ಅಶ್ವಿನಿ ಟೀಚರ್ ಭಾವಿಸಿ ನನಗೆ ಶಾಲಾ ಬಿಸಿಯೂಟದಿಂದ ಊಟ ತರಿಸಿಕೊಟ್ಟರು. ಸಂಜೆ ಮನೆಗೆ ಬಂದಾಗ ನನ್ನ ಅಮ್ಮ ಟಿಫಿನ್ ಬ್ಯಾಗ್ ಎಲ್ಲಿ ಎಂದು ಕೇಳಿದಾಗ ಶಾಲೆಯಲ್ಲಿ ನಡೆದ ಘಟನೆಯನ್ನು ಹೇಳಿದೆ. ಮರುದಿವಸ ಅಮ್ಮ ಶಾಲೆಗೆ ಬಂದು ವಿಚಾರಿಸಿದಾಗ ನನ್ನ ಟಿಫಿನ್ ಬ್ಯಾಗನ್ನು ಯಾರೋ ಶಾಲಾ ಹಿಂಬದಿಯ ಗೇಟಿಗೆ ಸಿಕ್ಕಿಸಿದ್ದು ತಿಳಿಯಿತು. ಇವತ್ತು ಆ ಘಟನೆ ನೆನೆದು ನಗು ಬರುತ್ತದೆ. ಅಕ್ಕ ನಿಮಗೆ 67ನೇ ವರ್ಷದ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
.............................................. ಶಿಶಿರ್ ಎಸ್
10ನೇ ತರಗತಿ 
ಎಸ್.ಎಲ್.ಎನ್.ಪಿ. ವಿದ್ಯಾಲಯ 
ಪಾಣೆಮಂಗಳೂರು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************



    ನಮಸ್ತೆ ಅಕ್ಕ.. ನಾನು ಶ್ರಾವ್ಯ. ದಸರಾ ರಜೆ ಬೇಗನೇ ಮುಗಿದು ಬಿಟ್ತು.... ಆದ್ರೆ ರಜಾ ಮಾತ್ರಾ ತುಂಬಾ ಮಜಾ ಇತ್ತು. ದಸರಾ ರಜೆಯಲ್ಲಿ ಹಲವು ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನ ಪಡೆದೆವು. ನನ್ನ ಅಜ್ಜಿ ಮನೆ ವಿಟ್ಲ. ಇಲ್ಲಿ ಪ್ರತೀ ವರ್ಷ ಅದ್ದೂರಿಯಾಗಿ ದಸರಾ ಉತ್ಸವ ನಡೆಯುತ್ತದೆ. ಈ ಬಾರಿಯ ದಸರಾಕ್ಕೆ ನಾವು ಚಿಕ್ಕಮ್ಮ, ದೊಡ್ಡಮ್ಮ, ಅತ್ತೆ ಹಾಗೂ ಅವರ ಮಕ್ಕಳು ಹೀಗೆ ನಾವು ಎಲ್ಲರೂ ಅಜ್ಜಿಮನೆಯಲ್ಲಿ ಒಟ್ಟುಸೇರಿದ್ದೆವು. ಈ ಸಂದರ್ಭ ನಾವು ನಮ್ಮ ಬಾಲ್ಯದ ದಿನಗಳ ಬಗ್ಗೆ ಮಾತಾಡಿದ್ದೆವು. ನಾವು ಎಳೆಯ ಕೂಸಿದ್ದಾಗ ಮಾಡುತ್ತಿದ್ದ ಹಠ, ಅಮ್ಮ ತೊಟ್ಟಿಲಲ್ಲಿ ಹಾಕಿ ಎಷ್ಟು ತೂಗಿದರೂ ಅಳುತ್ತಿದ್ದುದು, ಬಾಯಿಯಲ್ಲಿ ಬೆರಳು ಚೂಪಿ ಮಲಗುತ್ತಿದ್ದುದು, ಹೀಗೆ ಒಬ್ಬೊಬ್ಬರ ಬಗ್ಗೆಯೂ ಚರ್ಚಿಸಿದ್ದೆವು ಮತ್ತು ನಾವು ಚಿಕ್ಕದಿರುವಾಗ ಆಡುತ್ತಿದ್ದ ಆಟ, ದಸರಾ ಸಂದರ್ಭದಲ್ಲಿ ಹುಲಿವೇಷ ನೋಡಿ ಹೆದರುತ್ತಿದ್ದುದು ಹೀಗೆ ಅನೇಕ ವಿಚಾರ ಹಂಚಿಕೊಂಡಿದ್ದೆವು. ನಾವೆಲ್ಲ ಒಟ್ಟು ಸೇರಿ ದಸರಾ ಉತ್ಸವಕ್ಕೆ ಹೋಗಿದ್ದು ಇದೆಲ್ಲಾ ಯಾವತ್ತೂ ಮರೆಯಲಾಗದ ಕ್ಷಣ. ನಾವು ಕಳೆದ ಸವಿನೆನಪನ್ನು ಮೆಲುಕು ಹಾಕಿಸಿದ್ದು ನನಗೆ ತುಂಬಾ ಸಂತೋಷವಾಯಿತು... ಧನ್ಯವಾದ ಅಕ್ಕ..
.............................................. ಶ್ರಾವ್ಯ
ದ್ವಿತೀಯ ಪಿಯುಸಿ
ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************



     ಪ್ರೀತಿಯ ಅಕ್ಕನಿಗೆ ದನಿ ಮಾಡುವ ನಮಸ್ಕಾರಗಳು. ನಾನು ಕ್ಷೇಮವಾಗಿದ್ದೇನೆ. ನಿಮ್ಮ ಕ್ಷೇಮವನ್ನು ಬಯಸುತ್ತೇನೆ. ನಾನು ರಜೆಯಲ್ಲಿ ಕೆಲವು ಕಡೆ ಸುತ್ತಾಟ ಮಾಡಿದ್ದೇನೆ. ನಾವು ಶಿಶಿಲಕ್ಕೆ ಹೋಗಿರುವುದು ತುಂಬಾ ಖುಷಿ ಕೊಟ್ಟಿದೆ. ಅಲ್ಲಿ ನದಿಯಲ್ಲಿ ಮೀನುಗಳನ್ನು ನೋಡಿದೆ. ಅವುಗಳಿಗೆ ತಿಂಡಿ ಹಾಕಿದ್ದೇನೆ. ಅದರ ಜೊತೆಗೆ ತುಂಬಾ ಹೊತ್ತು ಕಳೆದಿದ್ದೇನೆ. ಅಜ್ಜಿ ಮನೆಗೆ ಹೋಗಿ ಅಲ್ಲಿಗೆ ಹತ್ತಿರವಿರುವ ನೆಲ್ಲಿತೀರ್ಥ ಗುಹೆಗೆ ಹೋಗಿದ್ದೆ. ಪರಿಸರದಲ್ಲಿ ಎಷ್ಟೆಲ್ಲ ವಿಚಿತ್ರಗಳಿದೆಯಲ್ಲಾ ಅಕ್ಕಾ... ಅದನ್ನು ನೋಡುವಾಗ ನನಗೆ ಹಾಗೆ ಅನಿಸಿತು. ಗುಹೆಯೊಳಗೆ ನೀರಿನಲ್ಲಿ ತೆವಳಿಕೊಂಡು ಮೊಣಕಾಲು ಇಟ್ಟುಕೊಂಡು ಹೋಗಬೇಕಿತ್ತು. ನಾವು ಹಾಗೆ ಹೋದೆವು.. ಅಮ್ಮನಿಗೆ ಸ್ವಲ್ಪ ಭಯವಾಯಿತು.. ನನಗೆ ಭಯವಾಗಲಿಲ್ಲ. ಖುಷಿಯಾಯಿತು. ನಂತರ ರಜೆಯಲ್ಲಿ ಯಕ್ಷಗಾನ ಕ್ಲಾಸಿಗೆ ಹೋಗಿದ್ದೇನೆ. ದೀಪಾವಳಿಯನ್ನು ಹಣತೆ ಹಚ್ಚಿ, ಬಲೀಂದ್ರಗೆ ಕೂ ಹಾಕಿ ಆಚರಿಸಿದ್ದೇವೆ. ಅಕ್ಕಾ ನನಗೆ ಪತ್ರ ಬರೆಯಲು ಖುಷಿಯಾಗುತ್ತಿದೆ. ತುಂಬಾ ನೆನಪುಗಳು ಆಗುತ್ತವೆ. ನಿಮಗೆ ಧನ್ಯವಾದಗಳು.
.................................. ದನಿ ಮಣಿನಾಲ್ಕೂರು
5 ನೇ ತರಗತಿ
ದ.ಕ.ಜಿ.ಪಂ.ಹಿ.ಪ್ರಾ ಶಾಲೆ, ದೇವಶ್ಯಮೂಡೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************
      



   ನಮಸ್ತೇ ಅಕ್ಕಾ, ಪ್ರೀತಿಯ ಅಕ್ಕನಿಗೆ ಸಾತ್ವಿಕ್ ಗಣೇಶ್ ಮಾಡುವ ನಮಸ್ಕಾರಗಳು. ನಾನು ಕ್ಷೇಮವಾಗಿರುವೆನು. ನಾನು 3ನೇ ತರಗತಿಯಲ್ಲಿ ಇರುವಾಗ ಅಜ್ಜನ ಮನೆಯಿಂದ ಅವರ ಜೊತೆ ದುಬಾರೆಗೆ ಹೋಗಿದ್ದೆ. ಅಲ್ಲಿ ತುಂಬಾ ಆನೆಗಳು ಇದ್ದವು. ಚಿಕ್ಕ ಚಿಕ್ಕ ಆನೆ ನೋಡಿ ನನಗೆ ತುಂಬಾ ಸಂತೋಷವಾಯಿತು. ಅಲ್ಲಿ ಆನೆ ನೀರಿನಲ್ಲಿ ಆಟವಾಡುವುದು ನೋಡಲು ತುಂಬಾ ಖುಷಿ ಆಯಿತು. ಇದನ್ನು ನನಗೆ ಯಾವತ್ತೂ ಮರೆಯಲು ಸಾಧ್ಯವೇ ಇಲ್ಲ. ಬಿಸಿಲಿನಲ್ಲಿ ತುಂಬಾ ಹೊತ್ತು ಸರತಿ ಸಾಲಿನಲ್ಲಿ ನಿಂತು ಬೋಟ್ ನಲ್ಲಿ ನೀರು ದಾಟಿ ಹೋಗಬೇಕಿತ್ತು. ನನಗೆ ಆನೆ ಎಂದರೆ ತುಂಬಾ ತುಂಬಾ ಪ್ರೀತಿ. ಬಿಸಿಲು ಆದರೂ ತುಂಬಾ ಆನೆ ಗಳನ್ನು ನೋಡುವ ಆಸೆಯಿಂದ ಬಿಸಿಲನ್ನೂ ಲೆಕ್ಕಿಸದೆ ನಾನು ಮನೆಯರೊಂದಿಗೆ ಸಾಲಿನಲ್ಲಿ ಅರ್ಧ ಗಂಟೆ ನಿಂತು ಹೋಗಿದ್ದೆ. ಅಲ್ಲಿಗೆ ತಲುಪಿದಾಗ ತುಂಬಾ ಸಂತಸವಾಗಿತ್ತು. ಧನ್ಯವಾದಗಳು ಅಕ್ಕಾ.
........................................ ಸಾತ್ವಿಕ್ ಗಣೇಶ್ 
8ನೇ ತರಗತಿ 
ಸರಕಾರಿ ಪದವಿ ಪೂರ್ವ ಕಾಲೇಜು ವೇಣೂರು
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
*******************************************     



       ಅಕ್ಕನಿಗೆ ನನ್ನ ನಮನಗಳು ನಾನು ಪೂಜಾ. ಹೇಗಿದ್ದೀರಿ ಅಕ್ಕ..... ನಾನು ಐದನೆ ತರಗತಿಯಲ್ಲಿ ಇದ್ದಾಗ ಸ್ಪರ್ಧೆಗಳು ನಡೆಯುತಿತ್ತು. ಆಗ ನನಗೆ ಭಾಷಣ ಸ್ಪರ್ಧೆ ಎಂದರೆ ತುಂಬಾ ಇಷ್ಟ. ನಾನು ಭಾಷಣ ಸ್ಪರ್ಧೆಗೆ ಸೇರಿದೆ. ನಾನು ಭಾಷಣ ಮಾಡುವಾಗ ನನಗೆ ತುಂಬಾ ಹೆದರಿಕೆಯಾಯಿತು. ಆದ್ರೂ ನಾನು ಚೆನ್ನಾಗಿ ಮಾಡಿದೆ. ನಂತರ ಶಿಕ್ಷಕರು ನನ್ನ ಹತ್ತಿರ ಬಂದು ಪ್ರಶಂಶಿಸಿದರು. ನನಗೆ ತುಂಬಾ ಖುಶಿಯಾಯಿತು. ಅಂದು ನಾನು ಭಾಷಣ ಸ್ಪರ್ದೆಯಲ್ಲಿ ಪ್ರಥಮ ಸ್ತಾನ ಪಡೆದೆನು. ಈಗಲೂ ನಾನು ಭಾಷಣ ಮಾಡುತ್ತಿದ್ದೇನೆ. ಈ ವರ್ಷ ಕಬಡ್ಡಿಯಲ್ಲಿ ನಾನು ರಾಷ್ಠ ಮಟ್ಟದ ತನಕ ಹೋಗಿದ್ದೇನೆ. ಈ ವಿಷಯವನ್ನೆಲ್ಲ ನಿಮ್ಮಲ್ಲಿ ಹಂಚಿಕೊಂಡ ಕಾರಣ ನನಗೆ ತುಂಬ ಖುಶಿಯಾಯಿತು ಅಕ್ಕ...... ರಾಮ್ ರಾಮ್....
.................................................. ಪೂಜಾ 
ಎಂಟನೇ ತರಗತಿ
ವಿವೇಕಾನಂದ ಕನ್ನಡ ಮಾದ್ಯಮ ಶಾಲೆ 
ತೆಂಕಿಲ ಪುತ್ತೂರು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************



       ನಮಸ್ತೆ ಅಕ್ಕಾ ನಾನು ನಿಭಾ. ನಿಮ್ಮ ಪತ್ರ ಓದಿ ಸಂತೋಷವಾಯಿತು. ಹೌದು ನೀವು ನಿಮ್ಮ ಅಜ್ಜಿಮನೆಯ ಬಗ್ಗೆ ಹೇಳುತ್ತಿದ್ದರೆ ನನಗೆ ನನ್ನ ಅಜ್ಜಿಮನೆಯ ನೆನಪಾಯಿತು. ಹೌದು ಅಜ್ಜಿಮನೆ ಎಂದರೆ ಒಂದು ಖುಷಿ ಭಾವನೆಯೇ ಬೇರೆ. ನೀವು ಹೇಳಿದ ಹಾಗೇ ನಾನು 2ನೇ ತರಗತಿಯಲ್ಲಿ ಒಮ್ಮೆ ನನ್ನ ಅಜ್ಜಿಮನೆಯಲ್ಲಿ ಪೂಜೆ ಇದ್ದ ದಿನ ಅಮ್ಮ, ಅಪ್ಪ, ತಮ್ಮ ಎಲ್ಲರೂ ಅಜ್ಜಿಮನೆಗೆ ಹೋಗಿದ್ದರು. ಆದರೆ ನನಗೆ ಶಾಲೆಗೆ ರಜೆ ಮಾಡಲು ಇಷ್ಟವಿರಲಿಲ್ಲ. ಆದ್ದರಿಂದ ನಾನು ಆ ದಿನ ಶಾಲೆಗೆ ಹೋಗಿದ್ದೆ. ಸಂಜೆ ಬಂದು ಮನೆಯಲ್ಲಿ ಅಜ್ಜಿ ಮಾತ್ರ ಇದ್ರು. ಉಳಿದವರೆಲ್ಲ ಅಲ್ಲಿ ಹೋಗಿದ್ದರಿಂದ ನನಗೆ ತುಂಬಾ ಬೋರ್ ಆಗುತ್ತಿತ್ತು. ಹಾಗೇ ಅಜ್ಜಿಮನೆಗೆ ಫೋನ್ ಮಾಡಿದೆ. ಅಲ್ಲಿ ಅವರ ಸಂತೋಷವನ್ನು ಕೇಳಿ ನನಗೆ ದುಃಖವಾಗುತ್ತಿತ್ತು ನಾನು ಅಲ್ಲಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು. ಇರಲಿ ಅದು ಕಳೆದ ಕ್ಷಣ, ಮೊನ್ನೆ ದಸರಾ ರಜೆಯಲ್ಲಿ ಅಜ್ಜಿಮನೆಗೆ ಹೋಗಿದ್ದಾಗ ಆಗಲೂ ನನಗೆ ಸರಿಯಾಗಿ ಕಾಲ ಕಳೆಯಲು ಆಗ್ಲಿಲ್ಲ. ಕಾರಣ ಪರೀಕ್ಷೆ ಆದರೂ ಏನು ಪ್ರಯೋಜನ ಪರೀಕ್ಷೆಯನ್ನು ಮತ್ತೆ ಮುಂದೂಡಿದರು. ಹೀಗೆ ಅಜ್ಜಿಮನೆಯ ಬಗ್ಗೆ ಹೇಳಲು ತುಂಬಾ ಇದೆ. ಆಹ್ಹ್ ನನ್ನ ಅಜ್ಜಿಮನೆ ನಿಮ್ಮ ಶಾಲೆಯ ಪಕ್ಕದಲ್ಲೇ ಇದೆ. ಮುಂದೊಮ್ಮೆ ಅಜ್ಜಿಮನೆಗೆ ಬಂದರೆ ನಿಮ್ಮನ್ನು ಭೇಟಿಯಾಗಲು ಇಚ್ಛೆಸುತ್ತೇನೆ. ಧನ್ಯವಾದಗಳು ಅಕ್ಕಾ....
.................................................. ನಿಭಾ
9ನೇ ತರಗತಿ
ಸ ಪ ಪೂ ಕಾಲೇಜು ಕೊಂಬೆಟ್ಟು 
(ಪ್ರೌಢಶಾಲಾ ವಿಭಾಗ)
ಪುತ್ತೂರು ತಾಲೂಕು, ದ. ಕ. ಜಿಲ್ಲೆ
*******************************************


       ಪ್ರೀತಿಯ ಅಕ್ಕನಿಗೆ ನಿಮ್ಮ ಪ್ರೀತಿಯ ತಂಗಿ ಸಿಂಚನಾ ಮಾಡುವ ನಮನಗಳು. ನಾನು ತುಂಬಾ ಚೆನ್ನಾಗಿದ್ದೇನೆ. ನೀವು ಕೂಡ ಚೆನ್ನಾಗಿದ್ದೀರಿ ಎಂದು ಭಾವಿಸುತ್ತೇನೆ ಅಕ್ಕ. ಅಕ್ಕ ನಿಮಗೆ ದೀಪಾವಳಿ ಹಬ್ಬದ ಶುಭಾಶಯಗಳು. ದೀಪ ಹಚ್ಚಿ ನಿಮ್ಮ ಜೀವನ ಬೆಳಕಾಗಲಿ. ನಮ್ಮ ಮನೆಯಲ್ಲಿ ಇಂದು ಲಕ್ಷ್ಮಿ ದೇವರನ್ನು ಪೂಜಿಸುತ್ತೇವೆ. ನಮ್ಮ ಮನೆಯಲ್ಲಿ ಮೂರು ದಿನ ದೀಪ ಹಚ್ಚಿ ದೀಪಾವಳಿ ಆಚರಿಸುತ್ತಾರೆ. ಪಟಾಕಿ ಸಿಡಿಸುವುದೆಂದರೆ ನನಗೆ ತುಂಬಾ ಇಷ್ಟ. ನಾನು ನಕ್ಷತ್ರ (ಸುರುಸುರು) ಕಡ್ಡಿಯನ್ನು ಉರಿಸುತ್ತೇನೆ. ನನಗೆ ಪಟಾಕಿ ಎಂದರೆ ತುಂಬಾ ತುಂಬಾ ಇಷ್ಟ ಅಕ್ಕ. ಇಂದು ನಮ್ಮ ಮನೆಯಲ್ಲಿ ಎಲ್ಲರೂ ಒಟ್ಟಿಗೆ ಕೂತು ಊಟ ಮಾಡುವ ಸಂಭ್ರಮವೇ ಬೇರೆ. ದೀಪಾವಳಿ ಹಬ್ಬ ಎಂದರೆ ನನಗೆ ತುಂಬಾ ಇಷ್ಟ. 
.............................................. ಸಿಂಚನಾ 
5ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇಡಿಗುಳಿ 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************


ಮಕ್ಕಳ ಜಗಲಿ.... ಅಕ್ಕನ ಪತ್ರ-35
        ಪ್ರೀತಿಯ ಅಕ್ಕನಿಗೆ ನಿಮ್ಮ ಪ್ರೀತಿಯ ಲಹರಿಯು ಮಾಡುವ ನಮಸ್ಕಾರಗಳು. ಅಕ್ಕ ನಿಮ್ಮ ಪತ್ರ ಓದಿ ತುಂಬಾ ಸಂತೋಷವಾಯಿತು. ನಿಮ್ಮ ಬಾಲ್ಯದ ನೆನಪಿನ ಕಥೆಯು ತುಂಬಾ ಖುಷಿ ಕೊಟ್ಟಿತು. ಈ ಸಲದ ದೀಪಾವಳಿ ಹಬ್ಬವನ್ನು ನಾವು ತುಂಬಾ ಸಂತೋಷದಿಂದ ಆಚರಿಸಿದೆವು. ಆದರೆ ಈ ಸಲದ ದೀಪಾವಳಿ ಹಬ್ಬಕ್ಕೆ ನಾನು ಅಜ್ಜಿ ಮನೆಗೆ ಹೋಗಲಿಲ್ಲ. ಅದೇ ಬೇಸರ... ಶಾಲೆಯಲ್ಲಿ ನಡೆಯುತ್ತಿರುವ ಬೇರೆ ಬೇರೆ ಸ್ಪರ್ಧೆಗಳಿಗೆ ನಾನು ತಯಾರಿ ಮಾಡಿಕೊಳ್ಳುತ್ತಿದ್ದೇನೆ.... ಡಿಸೆಂಬರ್ ತಿಂಗಳಲ್ಲಿ ನಮ್ಮ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವವಿದೆ.... ನೀವು ಖಂಡಿತ ಬನ್ನಿ ಅಕ್ಕ.... ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ.... ಇತಿ ನಿಮ್ಮ ಪ್ರೀತಿಯ ಲಹರಿ.
.............................................. ಲಹರಿ ಜಿ.ಕೆ.
8ನೇ ತರಗತಿ,
ತುಂಬೆ ಸೆಂಟ್ರಲ್ ಸ್ಕೂಲ್. ತುಂಬೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************



           ಪ್ರೀತಿಯ ಅಕ್ಕನಿಗೆ ನಿನಾದ್ ಮಾಡುವ ನಮನಗಳು. ದಸರಾ ರಜೆಯಲ್ಲಿ ನಾನು ಅಜ್ಜಿ ಮನೆಗೆ ಹೋಗಿದ್ದೆ. ಅಲ್ಲಿ ಅಜ್ಜಿಯ ಜೊತೆ ಮಾತಾಡಿ ಖುಷಿ ಆಯಿತು. ಅಲ್ಲಿ ಸ್ವಲ್ಪ ದಿನಗಳವರೆಗೆ ಇದ್ದು ಅಲ್ಲಿಂದ ಕಾಂತಾರ ಸಿನಿಮಾ ನೋಡಲು ದೊಡ್ಡಪ್ಪ ದೊಡ್ಡಮ್ಮ ಚಿಕ್ಕಪ್ಪ ಚಿಕ್ಕಮ್ಮ ಅಕ್ಕನ ಜೊತೆ ಹೋದೆವು. ಸಿನಿಮಾ ಬಹಳ ಚೆನ್ನಾಗಿತ್ತು. ನೋಡಬೇಕು ಅಂತ ತುಂಬಾ ದಿನದಿಂದ ಆಶೆ ಇತ್ತು. ಮರುದಿವಸ ಅಪ್ಪ ಅಮ್ಮ ತಂಗಿ ನಾನು ಗುರುವಾಯನಕೆರೆಗೆ ದೊಡ್ಡಮ್ಮನ ಮನೆಗೆ ಹೋದೆವು. ದೊಡ್ಡಮ್ಮನ ಮನೆಯಲ್ಲಿರುವ ಹೊಳೆಗೆ ದೊಡ್ಡಪ್ಪನ ಜೊತೆ ಹೋಗಿ ಸ್ವಲ್ಪ ಆಟ ಆಡಿದೆ ತುಂಬಾ ಖುಷಿಯಾಯಿತು. ಅಕ್ಟೋಬರ್ 4ಕ್ಕೆ ನಾನು ಯಕ್ಷಗಾನದಲ್ಲಿ ಮೊದಲ ಗೆಜ್ಜೆ ಕಟ್ಟಿ ಕುಣಿದದ್ದು ಯಕ್ಷ ಗುರುಗಳು ಕಿಶನ್ ರಾವ್ ನೂಜಿಪ್ಪಾಡಿ ಸರ್ ನನ್ನ ಕಾಲಿಗೆ ಗೆಜ್ಜೆ ಕಟ್ಟಿದಾಗ ಬಹಳ ಸಂತೋಷ ಆಯಿತು. ಮುಂದಕ್ಕೆ ಯಕ್ಷಗಾನವನ್ನು ಚೆನ್ನಾಗಿ ಕಲಿಯುವ ಆಸೆ ಇದೆ. ನನಗೆ ರಜೆಯು ಬಹಳ ಖುಷಿ ಸಂಭ್ರಮವನ್ನು ನೀಡಿದೆ. ಮುಂದಿನ ಪತ್ರಕ್ಕೆ ಕಾಯುತ್ತಿದ್ದೇನೆ.
..................................... ನಿನಾದ್ ಕೈರಂಗಳ್
5 ನೇ ತರಗತಿ
ಶ್ರೀರಾಮ ವಿದ್ಯಾ ಕೇಂದ್ರ ಪ್ರಾಥಮಿಕ ಶಾಲೆ 
ಹನುಮಾನ್ ನಗರ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article