-->
ಓ ಮುದ್ದು ಮನಸೇ ...…...! ಸಂಚಿಕೆ - 23

ಓ ಮುದ್ದು ಮನಸೇ ...…...! ಸಂಚಿಕೆ - 23

ಓ ಮುದ್ದು ಮನಸೇ ...…...! ಸಂಚಿಕೆ - 23       
              (ಕಳೆದ ಸಂಚಿಕೆಯಿಂದ...... ರಸ್ತೆ ಮದ್ಯದಲ್ಲೇ ಬಸ್ ನಿಲ್ಲಿಸಿದರೆ ಅದೂ ತಪ್ಪು. ಹರೀಶನ ಮುಖ ನೋಡಿದ ಮಾನ್ಯ ಥ್ಯಾಂಕ್ಸ್ ಅಂದಳು). ಅಲ್ಲಿಂದ ಸ್ವಲ್ಪ ಮುಂದೆ ಸಾಗುತ್ತಿದ್ದಂತೆ ಮುಖ್ಯ ರಸ್ತೆಯಿಂದ ತಮ್ಮೂರಿನತ್ತ ಹೋಗುವ ಮಣ್ಣುದಾರಿ ಗೋಚರಿಸಿತು. "ಇನ್ನು ಮುಂದೆ ಹೆಚ್ಚು ಶಬ್ಧ ಮಾಡುವ ಹಾಗಿಲ್ಲ" ಹರೀಶ, ಮನೋಹರ್ ಮತ್ತು ಮಾನ್ಯಾರನ್ನು ನೋಡುತ್ತ ತಾಕೀತು ಮಾಡಿದ. "ಯಾಕೆ ಶಬ್ಧ ಮಾಡಬಾರದು?" ಮಾನ್ಯ ಕೇಳಿದಳು. ಈ ಅಡವಿಯಲ್ಲಿ ಕಾಡುಕೋಳಿ, ಮೊಲ, ನವಿಲು, ಕಾಡುಬೆಕ್ಕು, ಕಾಡುಕೋಣ, ಕೆಂಪು ಅಳಿಲು, ಮುಳ್ಳುಹಂದಿ, ಕಾಡುಹಂದಿ, ಬರಿಂಕ, ಹುಲಿ ಬೆಕ್ಕು, ಸಿಂಗಳೀಕದಂತಹ ವಿಶೇಷ ತಳಿಯ ಮಂಗಗಳೊಟ್ಟಿಗೆ ವಿವಿಧ ಬಗೆಯ ಹಾವುಗಳೂ, ಪಕ್ಷಿಗಳೂ ಜೀವಿಸುತ್ತವೆ. ನಾವು ಮಾಡುವ ಶಬ್ದವು ಅವುಗಳನ್ನು ವಿಚಲಿತ ಗೊಳಿಸಿ ನಮ್ಮಮೇಲೆ ಆಕ್ರಮಿಸುವಂತೆ ಅಥವಾ ಭಯದಿಂದ ಈ ಕಾಡನ್ನು ತ್ಯಜಿಸುವಂತೆ ಮಾಡುತ್ತದೆ. ಹಾಗಾಗಿ ಈ ರಸ್ತೆಯಲ್ಲಿ ಹೋಗುವಾಗ ಶಬ್ದ ಮಾಡದೆ ಕಾಡಿನ ಪ್ರಾಣಿ ಪಕ್ಷಿಗಳನ್ನು ಅವರ ಪಾಡಿಗೆ ಅವರು ಬದುಕುವಂತೆ ಬಿಡಬೇಕು ತಿಳಿಯಿತೇ ಅಂದ ಹರೀಶ. 
ಅಷ್ಟು ಹೇಳಿ ಮುಂದೆ ಸಾಗುವಷ್ಟರಲ್ಲಿ ಮಂಗಗಳ ಹಿಂಡೊಂದು ರಸ್ತೆಯಲ್ಲೇ ಜಿಗಿದಾಡುತ್ತಿತ್ತು. ಅವುಗಳನ್ನು ನೋಡಿದ ಮಾನ್ಯ ಭಯದಿಂದ ಅಣ್ಣನ ಕೈಯ್ಯನ್ನು ಗಟ್ಟಿಯಾಗಿ ಹಿಡಿದುಕೊಂಡಳು. ಭಯ ಪಡಬೇಡ ಅವು ನಮಗೆ ಏನೂ ಮಾಡುವುದಿಲ್ಲ. ಈ ರಸ್ತೆಯಲ್ಲಿ ಹೋಗುವ ಜನರು ತಿನ್ನಲು ಏನಾದರು ಕೊಟ್ಟಾರು ಎನ್ನುವ ನಿರೀಕ್ಷೆಯಲ್ಲಿ ಅವು ಕಾಯುತ್ತಾ ಕುಳಿತಿವೆಯಷ್ಟೇ, ಅಂದ ಹರೀಶ. "ಅವ್ಯಾಕೆ ನಾವು ಕೊಡುವ ಆಹಾರಕ್ಕೆ ಕಾಯುತ್ತಿವೆ?" ಅಂದ ಮನೋಹರ, ಹರೀಶನ ಮುಖ ನೋಡಿದ. ನನ್ನಪ್ಪ ಯಾವಾಗಲೂ ಹೇಳುತ್ತಿರುತ್ತಾರೆ, ನಮ್ಮೂರಲ್ಲಿ ಮೊದಲೆಲ್ಲ ಅಲ್ಲೊಂದು ಇಲ್ಲೊಂದು ಮನೆಗಳಿದ್ದವಂತೆ. ಇಡೀ ಊರು ಹೆಚ್ಚು ಮರಗಿಡಗಳಿಂದ ಆವರಿಸಿಕೊಂಡಿತ್ತಂತೆ. ಆದರೆ ದಿನಗಳು ಕಳೆದಂತೆ ಜನರ ಜೊತೆ-ಜೊತೆಗೆ ಮನೆಗಳ ಸಂಖ್ಯೆಯೂ ಹೆಚ್ಚಾಯಿತಂತೆ. ಜನರು ಮನೆ ನಿರ್ಮಿಸಲು ಕಾಡನ್ನು ಕಡಿಯುತ್ತ ಅಲ್ಲಿನ ಜಾಗವನ್ನು ಆಕ್ರಮಿಸಿಕೊಳ್ಳುತ್ತಾ ಸಾಗಿದರಂತೆ. ಹಾಗಾಗಿ ಇವತ್ತು ಈ ಜಾಗದಲ್ಲಿ ಕಾಡಿಗಿಂತ ಜನರ ವಾಸವೇ ಹೆಚ್ಚಾಗಿದೆ. ಇದರಿಂದಾಗಿ ಕಾಡಲ್ಲಿ ಈ ಪ್ರಣಿಗಳಿಗೆ ಆಹಾರ ನೀಡುತ್ತಿದ್ದ ಸಂಪಿಗೆ, ಮುರುಗಲ, ಪಿನ್ನೇರಳೆ, ಮುಳ್ಳಣ್ಣು, ಹೆಬ್ಬಲಸು, ಜಂಬೆ, ಬೈನೆ, ಮಾವು, ಜಾಣಿಗೆ, ಚಳ್ಳೆ, ಕಲ್ಲುಬಾಳೆ, ನೆಂಜಲ, ಪರಗಿ, ಸುರಗಿಯಂತಹ ಮೊದಲಾದ ಹಣ್ಣಿನ ಮರಗಳು ನಾಶಗೊಂಡಿವೆ. ಹಾಗಾಗಿ ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿನತ್ತ ಬರುತ್ತಿವೆ. ಈ ಮಂಗಗಳೂ ಅಷ್ಟೇ ದಾರಿಹೋಕರು ನೀಡ ಬಹುದಾದ ಆಹಾರಕ್ಕಾಗಿ ಕಾದು ಕೂತಿವೆ.
       ಮೊನ್ನೆ ಕಾಡು ಹಂದಿಗಳ ಹಿಂಡು ಹಾಡ-ಹಗಲೇ ನಮ್ಮ ಹಿತ್ತಲಿನ ತೋಟಕ್ಕೆ ಲಗ್ಗೆ ಇಟ್ಟು ಬಾಳೆ ದಿಂಡನ್ನೆಲ್ಲಾ ಅಗೆದುಹಾಕಿವೆ, ಅಂದ ಮನೋಹರ. ಹೌದು ಹೌದು ನಮ್ಮಪ್ಪ ತೋಟದ ಬದುವಿನಲ್ಲಿ ಕಾಡು ಹಂದಿಗಳನ್ನು ಕೊಲ್ಲಲು ಉರುಳೊಂದನ್ನು ಮಾಡಿಟ್ಟಿದ್ದಾರೆ, ಮಾನ್ಯ ಧ್ವನಿಗೂಡಿಸಿದಳು. ತಪ್ಪು ತಪ್ಪು...! ಮೊನ್ನೆ ತಾನೆ ಲಕ್ಷ್ಮಿ ಟೀಚರ್ ವಿಜ್ಞಾನ ಪಾಠ ಮಾಡುವಾಗ ನಿಸರ್ಗ ಚಕ್ರದಲ್ಲಿ ಎಲ್ಲಾ ಜೀವಿಗಳ ಪ್ರಾಮುಖ್ಯತೆ ಮತ್ತು ಕೊಡುಗೆಯನ್ನು ತಿಳಿಸಿಲ್ಲವೇ? ನಿಮ್ಮ ಮನೆಯ ಗದ್ದೆಗೊಮ್ಮೆ ಹೋಗು ಮತ್ತು ಗದ್ದೆಯಲ್ಲಿ ನಿಂತ ನೀರಿನಡಿಯಲ್ಲಿ ಭತ್ತದ ಗಿಡದ ಬುಡದ ಸುತ್ತಲೂ ಸೂಕ್ಷ್ಮವಾಗಿ ಗಮನಿಸು. ಮಣ್ಣಿನ ಮೇಲ್ಪದರದಲ್ಲಿ ಸಣ್ಣ-ಸಣ್ಣ ರಂದ್ರಗಳು ಗೋಚರಿಸುತ್ತವೆ. ಅವು ಎರೆಹುಳು ಮತ್ತು ಏಡಿಗಳಿಂದ ನಿರ್ಮಾಣಗೊಂಡ ರಂದ್ರಗಳು. ಈ ರಂದ್ರಗಳು ಮಣ್ಣಿನ ಮೇಲ್ಪದರವನ್ನು ಸಡಿಲ ಗೊಳಿಸಿ ನೀರು ಸುಲಭವಾಗಿ ಇಂಗುವಂತೆಯೂ ಮತ್ತು ಗಿಡದ ಬೇರುಗಳು ಸಮೃದ್ದವಾಗಿ ಹರಡಿಕೊಂಡು ಬೆಳೆಯಲು ಸಹಕರಿಸುತ್ತವೆ. ಅಷ್ಟು ಪುಟ್ಟ ಎರೆಹುಳು ಪರೋಕ್ಷವಾಗಿ ರೈತನಿಗೆ ಉತ್ತಮ ಫಸಲು ಕೊಡುವಲ್ಲಿ ಸಹಕರಿಸುತ್ತದೆ ಎಂದರೆ ನಂಬಲಸಾಧ್ಯವಲ್ಲವೇ? ಹಾಗೆಯೇ ಅಂತಹ ಸೂಕ್ಷ್ಮಾತಿ ಸೂಕ್ಷ್ಮ ಕೆಲಸಗಳು ಈ ಭೂಮಿಯ ಮೇಲಿರುವ ಎಲ್ಲಾ ಜೀವರಾಶಿಗಳಿಂದಲೂ ನಿರಂತರವಾಗಿ ನಡೆಯುತ್ತಿದೆ. ಆದುದರಿಂದ ನಾವು ಯಾವ ಜೀವಿಯನ್ನೂ ಪ್ರಕೃತಿಗೆ ವಿರುದ್ಧವಾಗಿ ಕೊಲ್ಲಬಾರದು. ಪ್ರಾಣಿಗಳನ್ನು ಕೊಲ್ಲುವುದು ಕೇವಲ ಕಾನೂನಾತ್ಮಕ ಅಪರಾಧವಷ್ಟೇ ಅಲ್ಲದೆ ಪಕೃತಿಗೆ ವಿರುದ್ಧವಾದ ವರ್ತನೆಯಾಗುತ್ತದೆ. 
        ಕಾಡು ಹಂದಿಯು ಭತ್ತದ ಗದ್ದೆಗೆ ಲಗ್ಗೆಯಿಟ್ಟು ಅಲ್ಲಿನ ಭತ್ತವನ್ನು ತಿಂದು ಮತ್ತೆ ಕಾಡಿಗೆ ಹೋಗುತ್ತದೆ. ಕಾಡಿನಲ್ಲಿ ಅದು ವಿಸರ್ಜಿಸುವ ಮಲದ ಮೂಲಕ ಭತ್ತದ ಬೀಜಗಳೂ ಹೊರಬಂದು ಹಳ್ಳ, ಕೊಳ್ಳ ಮತ್ತು ಕೆರೆ ದಂಡೆಯ ತಪ್ಪಲಿನಲ್ಲಿ ನೈಸರ್ಗಿಕವಾಗಿ ಚಿಗುರೊಡೆಯುತ್ತವೆ. ಹೀಗೆ ಬೆಳೆವ ಭತ್ತವು ಅಲ್ಲಿ ಜೀವಿಸುವ ಅದೆಷ್ಟೋ ಕೀಟ ಮತ್ತು ಪಕ್ಷಿಗಳಿಗೆ ಆಹಾರವಾಗುತ್ತವೆ. ನಾವು ಬೆಳೆಯುವ ಯಾವುದೇ ಬೆಳೆಯಿದ್ದರೂ ಅದು ನಿಸರ್ಗದ ಕೊಡುಗೆ. ಹಾಗಾಗಿ ಪ್ರಾಣಿ ಪಕ್ಷಿಗಳ ಮೂಲಕ ತನಗೆ ಬರಬೇಕಾದ ಪಾಲನ್ನು ನಿಸರ್ಗವೇ ಪಡೆದುಕೊಳ್ಳುತ್ತದೆ, ಅಂತ ನನ್ನಪ್ಪ ಯಾವಾಗಲೂ ಹೇಳುತ್ತಿರುತ್ತಾರೆ, ಅನ್ನುತ್ತಾ ಹರೀಶ ಅಡಿಕೆ ತೋಟದ ಬದುವಿನಲ್ಲಿದ್ದ ಸಣ್ಣದೊಂದು ಹಳ್ಳಕ್ಕೆ ಹಾಕಿದ್ದ ಅಡಿಕೆಮರದ ಸಂಕವನ್ನು ದಾಟಿಸಲು ಮಾನ್ಯಾಳ ಕೈಹಿಡಿದ. ಜಾಗರೂಕತೆಯಿಂದ ಹಳ್ಳ ದಾಟಿದ ಮೂವರೂ ಅದೇ ತೋಟದಲ್ಲಿದ್ದ ಕಾಲುದಾರಿಯಲ್ಲಿ ಮುಂದೆ ಸಾಗಿದರು. ತೋಟದ ದಾರಿ ಮುಗಿದು ಹುಲ್ಲಿನ ದಿಬ್ಬವೊಂದನ್ನು ಹತ್ತಿ ತೋಟಕ್ಕೆ ಸೊಪ್ಪು ಕೊಯ್ಯುವ ಬೆಟ್ಟದ ಬುಡದಲ್ಲಿ ಒತ್ತೊತ್ತಾಗಿ ಬೆಳೆದಿದ್ದ ಗಿಡಗಳ ಹಿಂಡೊಂದನ್ನು ತೋರಿಸುತ್ತ ಹರೀಶ ಹೇಳಿದ "ಅಲ್ಲಿ ಹುಲಿದೇವರ ಮೂರ್ತಿಯಿದೆ ನೋಡಿದ್ದೀರಾ?" ಅಂದ. ಮಾನ್ಯ ಕುತೂಹಲದಿಂದ ಇಲ್ಲಾ ಇಲ್ಲಾ ಅಂದಳು. ಬನ್ನಿ ತೋರಿಸುತ್ತೇನೆ ಅನ್ನುತ್ತ ಹರೀಶ ಮುಂದೆ ಸಾಗಿದ. ಒಮ್ಮೆಲೇ ಹಿಂತಿರುಗಿ ನಿಲ್ಲಿ...! ಎಂದವನೇ ಇಬ್ಬರ ಕಾಲಿನತ್ತ ಕಣ್ನು ಹಾಯಿಸಿದ. ಗಾಬರಿಗೊಂಡ ಮನೋಹರ ಏನಾಯಿತು ಮಾರಾಯ? ಎನ್ನುತ್ತ ಹರಿಶನ ಮುಖ ನೋಡಿದ. ಕಾಲಿನಲ್ಲಿರುವ ಬೂಟು ಅಲ್ಲೇ ಬಿಚ್ಚಿಡಿ, ಇದು ದೇವರ ಸ್ಥಾನ ಅನ್ನುತ್ತ ತಾನೂ ತನ್ನ ಚಪ್ಪಲಿಯನ್ನು ಅಲ್ಲೇ ಕಳಚಿಟ್ಟು ಮುಳ್ಳಿನ ಪೊದೆಯೊಂದನ್ನು ಹಿಡಿದೆಳೆದು ಅವರಿಬ್ಬರಿಗೂ ಮುಂದೆ ಹೋಗಲು ದಾರಿಮಾಡಿಕೊಟ್ಟ. ಸ್ವಲ್ಪ ಮುಂದೆ ಸಾಗುತ್ತಲೇ ಗಿಡಗಳ ಹಿಂಡಿನ ನಡುವೆ ಹುತ್ತದಾಕಾರದ ಮಣ್ಣಿನ ರಚನೆ ಮತ್ತು ಅಲ್ಲಲ್ಲಿ ಹರಡಿ ಬಿದ್ದಿರುವ ಒಣಗಿದ ಅಡಕೆ, ಹಿಂಗಾರ, ತೆಂಗಿನಕಾಯಿ ತುಣುಕುಗಳು ಮತ್ತು ಹುತ್ತದ ಬುಡದಲ್ಲೊಂದು ಹಿತ್ತಾಳೆಯ ದೀಪ ಗೋಚರಿಸಿತು. ಮಾನ್ಯ ಅಂದಳು "ಎಲ್ಲಿದೆ ಹುಲಿದೇವರ ಮೂರ್ತಿ?" ಅಲ್ಲಲ್ಲಿ ಹರಿಯುತ್ತಿದ್ದ ಕಪ್ಪು ಇರುವೆಯ ಸಾಲನ್ನು ಗಮನಿಸುತ್ತ ಒಂದೊಂದೆ ಹೆಜ್ಜೆಯನ್ನಿಡುತ್ತ ಹುತ್ತದ ಬಳಿ ಬಂದ ಹರೀಶ ಮುಂದೆ ಬಾಗಿ ಇಣುಕಿದ, ಹರೀಶನನ್ನೇ ಅನುಕರಿಸಿದ ಮಾನ್ಯ ಮತ್ತು ಮನೋಹರ ಹುತ್ತದ ಮೇಲ್ಬಾಗದಿಂದ ಕೆಳಗಿರುವ ಹೊಂಡದಂತ ಆಕಾರ ಮತ್ತದರ ಕೆಳಗೆ ಪುಟ್ಟದೊಂದು ಹುಲಿದೇವರ ವಿಗ್ರಹ ಕಂಡು ಮೂಖವಿಸ್ಮಿತರಾದರು. ಒಂದು ಕ್ಷಣ ಅವರ ಎರಡೂ ಕಣ್ಣುಗಳು ಮುಚ್ಚಿಕೊಂಡವು, ಹಸ್ತಗಳು ಒಂದಾದವು. ಈ ದೇವರಿಗೆ ಯಾಕೆ ಗುಡಿ ಕಟ್ಟಿಲ್ಲಾ? ಮಾನ್ಯ ಕೇಳಿದಳು. ಇದಕ್ಕೆ ಗುಡಿ ಕಟ್ಟೋ ಹಾಗಿಲ್ಲವಂತೆ, ಕಾಡೇ ಇದರ ದೇವಾಲಯ ಅಂತ ಒಮ್ಮೆ ದೀಪಾವಳಿಯ ಸಂದರ್ಭ ಪೂಜೆಗಾಗಿ ಬಂದಾಗ ಪೂಜಾರಿಯವರು ಹೇಳಿದ್ದನ್ನು ಕೇಳಿದ್ದೇನೆ. ಪ್ರತೀ ವರ್ಷ ದೀಪಾವಳಿಯಲ್ಲಿ ಊರಿನವರೆಲ್ಲ ಭತ್ತದ ತೆನೆ, ಅಡಕೆ, ತೆಂಗು, ಹಿಂಗಾರ ತಂದು ದೇವರಿಗೆ ಅರ್ಪಿಸುತ್ತಾರೆ. ಈ ದೇವರು ಊರಿನ ಹೊಲ ಮತ್ತು ದನಕರುಗಳನ್ನು ಕಾಯುತ್ತದೆಯಂತೆ. ಹರೀಶನ ವಿವರಣೆಯನ್ನು ಆಸಕ್ತಿಯಿಂದ ಕೇಳುತ್ತಿದ್ದ ಮನೋಹರ ಗಿಡವೊಂದರಲ್ಲಿದ್ದ ಬಣ್ಣದ ಕಾಯಿ ಕೀಳಲು ಮುಂದಾದ. "ಹೇ ಅಲ್ಲೇ ನಿಲ್ಲು ಅದನ್ನು ಕೀಳಬೇಡ" ಎನ್ನುತ್ತ ಮುಂದೆ ಹೋಗುತ್ತಿದ್ದ ಮನೋಹರನನ್ನು ತಡೆದ ಹರೀಶ "ಈ ಕಾಡು ಹುಲಿದೇವರದ್ದು ಇಲ್ಲಿನ ಯಾವ ಗಿಡವನ್ನೂ ಕಡಿಯುವಂತಿಲ್ಲ" ಅಂದ. "ದೇವರೇ ಎಲ್ಲವನ್ನೂ ಸೃಷ್ಟಿಸಿರುವಾಗ ಅವರಿಗೇಕೆ ಈ ಕಾಡು?" ಅಂದಳು ಮಾನ್ಯ. ಈ ಕಾಡಿನಿಂದ ಮರವನ್ನು ಕಡಿದೊಯ್ದು ನಮ್ಮೂರಿನ ಗಿರಿಯಣ್ಣನ ಅಪ್ಪ ತನ್ನ ಮನೆಯ ನಿರ್ಮಾಣದಲ್ಲಿ ಬಳಸಿಕೊಂಡಿದ್ದನಂತೆ ಮನೆ ಸಂಪೂರ್ಣ ನಿರ್ಮಾಣವಾಗಿ ಇನ್ನೇನು ಅದರಲ್ಲಿ ಉಳಿದುಕೊಳ್ಳಬೇಕು ಅನ್ನುವಷ್ಟರಲ್ಲಿ ಮನೆಯ ಗೋಡೆಯ ಮೂಲೆ-ಮೂಲೆಗಳಲ್ಲಿ ಮಣ್ಣಿನ ಹುತ್ತ ಬೆಳೆಯಲಾರಂಭಿಸಿತಂತೆ, ಎಷ್ಟೇ ನಾಶಮಾಡಿದರೂ ಮತ್ತೆ ಮತ್ತೆ ಬೆಳೆಯುತ್ತ ಇಡೀ ಮನೆಯನ್ನೇ ಅವರಿಸಿಕೊಂಡಿತ್ತಂತೆ ಹುತ್ತ. ಭಯಗೊಂಡು ಅರ್ಚಕರಲ್ಲಿ ಕೇಳಿದಾಗ ಇದು ಹುಲಿದೇವರ ಕಾಡಿನಿಂದ ಕಡಿದು ತಂದ ಮರವನ್ನು ಬಳಸಿಕೊಂಡಿದ್ದರ ಪ್ರಭಾವ ಅಂದರಂತೆ. ಹಾಗಾಗಿ ಇವತ್ತಿಗೂ ಅವರ ಮನೆ ಪಾಳು ಬಿದ್ದಿದೆ ಮತ್ತು ಅಲ್ಲಿಂದ ಇಲ್ಲಿಯವರೆಗೆ ಯಾರೂ ಕೂಡ ಈ ಕಾಡಿನಲ್ಲಿ ಏನನ್ನೂ ಕಡಿಯುವುದಿಲ್ಲ. ದೇವರ ಮಹಿಮೆಯೋ ಭಯವೋ ಗೊತ್ತಿಲ್ಲ ಈ ಕಾಡು ಮಾತ್ರ ಊರಿನವರ ಅತಿಕ್ರಮಣದಿಂದ ಉಳಿದುಕೊಂಡಿದೆ. ಮೂರು ದಾರಿ ಕೂಡುವ ಸ್ಥಳಕ್ಕೆ ಬಂದು ನಿಂತ ಹರೀಶ ತನ್ನ ಬಲಬದಿಗೆ ಕೈ ತೋರಿಸುತ್ತ ಅಂದ, "ಈ ಹುಲ್ಲಿನ ಬೇಣದ ಆಚೆಯೇ ನಿಮ್ಮ ಮನೆಯಿರೋದು ನಿಧಾನ ಹೋಗಿ, ನಾಳೆ ಶಾಲೆಯಲ್ಲಿ ಸಿಗೋಣ". ಹರೀಶನೊಟ್ಟಿಗಿನ ಈ ಪ್ರಯಾಣ ಮನೋಹರ ಮತ್ತು ಮಾನ್ಯಾಳ ಬದುಕಿನ ಅವಿಸ್ಮರಣೀಯ ಕ್ಷಣವಾಗಿತ್ತು. ಆ ಅದ್ಭುತ ಕ್ಷಣಗಳ ಗುಂಗಿನಲ್ಲಿ ಮಿಂದೇಳುತ್ತಿದ್ದ ಅವರಿಬ್ಬರೂ ಹರೀಶನಿಗೆ ಏನನ್ನೂ ಹೇಳುವ ಸ್ಥಿತಿಯಲ್ಲಿಲ್ಲ, "ಬಾಯ್" ಅಂದವರೇ ತಮ್ಮ ಮನೆಯತ್ತ ನಡೆದರು. (ಮುಂದುವರಿಯುವುದು) 
...............................ಡಾ. ಗುರುರಾಜ್ ಇಟಗಿ
ಸಂಶೋಧಕರು ಮತ್ತು ಆಪ್ತ-ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು, ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
mob : +91 94837 16589
********************************************


Ads on article

Advertise in articles 1

advertising articles 2

Advertise under the article