ಶಿಕ್ಷಕರ ದಿನಾಚರಣೆಯ ವಿಶೇಷ ಲೇಖನ : ಗುರು-ಶಿಷ್ಯ
Sunday, September 4, 2022
Edit
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
ಶಿಕ್ಷಕರ ದಿನಾಚರಣೆಯ ವಿಶೇಷ ಲೇಖನ : ಗುರು-ಶಿಷ್ಯ
ಚಾಣಕ್ಯನ ಹೆಸರನ್ನು ಕೇಳದವರಿಲ್ಲ. ವಿಷ್ಣುಗುಪ್ತ ಅಥವಾ ಕೌಟಿಲ್ಯನೆಂದೂ ಅವನನ್ನು ಇತಿಹಾಸ ಗುರುತಿಸುತ್ತದೆ. ಕ್ರೈಸ್ತ ಪೂರ್ವದಲ್ಲಿದ್ದ ಮಹಾ ಶಿಕ್ಷಣ ತಜ್ಞ, ಪ್ರಖ್ಯಾತ ತತ್ವಶಾಸ್ತ್ರಜ್ಞ, ಸೂಕ್ತ ನ್ಯಾಯ ನಿರ್ಣಯಿ, ಬಲಾಢ್ಯ ರಾಜಕೀಯ ಚತುರ, ಖ್ಯಾತ ಅರ್ಥಶಾಸ್ತ್ರಜ್ಞ, ಯೋಗ್ಯ ಸಲಹೆಗಾರ... ಹೀಗೆ ಚಾಣಕ್ಯನ ನಿಪುಣತೆ ಅವಿವರಣೀಯ. ಮೌರ್ಯರಿಗಿಂತ ಹಿಂದೆ ನಮ್ಮ ದೇಶದಲ್ಲಿ ಆಳಿದ ನಂದರ ರಾಜದರ್ಬಾರಿನಲ್ಲಿ ಅವನು ಅಪಮಾನಿತನಾಗುತ್ತಾನೆ. ಬಡ ಬ್ರಾಹ್ಮಣನಾಗಿದ್ದ ಮಹಾ ಮೇಧಾವಿ ಚಾಣಕ್ಯನು ನಂದರ ದರ್ಪದ ಮುಂದೆ ಬಾಗಬೇಕಾಯಿತು. “ವಿದ್ವಾನ್ ಸರ್ವತ್ರ ಪೂಜ್ಯಂತೇ” ಎಂಬ ಮಾತು ಸುಳ್ಳಾಯಿತು. ನಂದರು ಬೀಗಿದರು. ಆದರೆ ಅದೇ ಚಾಣಕ್ಯನು ನಂದ ಸಾಮ್ರಾಜ್ಯವನ್ನು ನಾಶ ಮಾಡುವ ಶಪಥ ಮಾಡುತ್ತಾನೆ. ದನಗಾಹಿಯಾಗಿದ್ದ ಚಂದ್ರಗುಪ್ತ ಎಂಬ ಯುವಕನಲ್ಲಿ ತನ್ನಲ್ಲಿರುವ ಸಕಲ ಬಲಗಳನ್ನು ತುಂಬುತ್ತಾನೆ. ಅವನೊಂದಿಗೆ ಅಸಂಖ್ಯ ವೀರರ ಪಡೆಯೊಂದನ್ನು ಕಟ್ಟುತ್ತಾನೆ. ನಂದರ ಮೇಲೆ ಯುದ್ಧ ಸಾರಲು ಶಿಷ್ಯ ಚಂದ್ರಗುಪ್ತನಿಗೆ ಸೂಚಿಸುತ್ತಾನೆ. ಯುದ್ಧದಲ್ಲಿ ಚಂದ್ರಗುಪ್ತ ಮೌರ್ಯನ ಪಡೆ ನಂದ ವಂಶವನ್ನು ಸೋಲಿಸುತ್ತದೆ. ನಂತರ ಚಾಣಕ್ಯನ ಪವಿತ್ರ ಹಸ್ತದಿಂದ, ಚಂದ್ರಗುಪ್ತನು ಚಂದ್ರಗುಪ್ತ ಮೌರ್ಯ ಎಂಬ ಹೆಸರಿನೊಂದಿಗೆ ಪಾಟಲೀಪುತ್ರದಲ್ಲಿ ಪಟ್ಟಾಭಿಷಿಕ್ತನಾಗುತ್ತಾನೆ. ಅಂದು ಬೀಗಿದ್ದ ನಂದನು ಇಂದು ಬಾಗಿದನು. ಅಂದು ಬಾಗಿದ್ಧ ಚಾಣಕ್ಯ ಇಂದು ಬೀಗಿದನು. ಅಹಂಕಾರವೇ ಆಪತ್ತಿಗೆ ಮೂಲ, ಅಹಂಕಾರವೇ ನಮ್ಮ ನಾಶಕ್ಕೆ ಕಾರಣ ಎಂಬುದನ್ನು ಈ ಕಥೆಯು ನಿರೂಪಿಸುವುದರ ಜೊತೆಗೆ ಗುರು ಮತ್ತು ಶಿಷ್ಯರ ಬಲಾಢ್ಯವಾದ ಸಂಬಂಧವು ಸಾಧನೆಯ ರಾಜಪಥವೂ ಆಗಬಲ್ಲುದೆಂಬುದನ್ನು ಸಾರುತ್ತದೆ.
ಮನೆಯೇ ಮೊದಲ ಪಾಠ ಶಾಲೆ, ಜನನಿ ತಾನೇ ಮೊದಲ ಗುರುವು ಎಂಬ ಮಾತೂ ಇದೆ. ವ್ಯಕ್ತಿಯೊಬ್ಬನಿಗೆ ಶಾಲೆಯಲ್ಲಿ ಪಾಠ ಹೇಳಿದವರು ಮಾತ್ರವೇ ಗುರುವಾಗಿರುವುದಲ್ಲ. “ಸಾರಾಯದಾ ದಾರಿಯನು ತೋರುವವರೆಲ್ಲರೂ ಗುರು” ಎಂಬುದು ಸರ್ವಜ್ಞ ವಾಣಿ. ಮಹಾತ್ಮಾ ಗಾಂಧೀಜಿ, ಛತ್ರಪತಿ ಶಿವಾಜಿ, ಭೀಮಾರಾವ್ ಅಂಬೇಡ್ಕರ್, ಸ್ವಾಮೀ ವಿವೇಕಾನಂದ ಮುಂತಾದವರೆಲ್ಲರೂ ತಾಯಿಯಿಂದ ಪ್ರೇರಣೆ ಪಡೆದವರು. ರಾಮಕೃಷ್ಣ ಪರಹಂಸರಂತಹ ಗುರುಗಳು ವಿವೇಕಾನಂದರಂತಹ ದೃಷ್ಟಾರರನ್ನು ಸೃಷ್ಟಿಸಿದರು. ವಿದ್ಯಾರ್ಥಿಗಳು ನಾವು ಹೇಳಿದುನ್ನು ಕೇಳ ಬೇಕಾದವರು, ಸಂಬಳ ಪಡೆಯಲಿಕ್ಕಿರುವವರು ನಾವು ಎಂಬ ಮನೋಭಾವದಿಂದ ಹೊರಬಂದು ತ್ಯಾಗದ ಮನೋಭಾವದಿಂದ ಜೀವನವನ್ನು ಶಿಷ್ಯರಿಗೆ ಸಮರ್ಪಣೆ ಮಾಡುವ ಗುರು ಪರಂಪರೆಯೇ ಇಂದಿನ ಬೇಕುಗಳಲ್ಲಿ ಮೊದಲನೇಯದು. ತದೇಕ ಚಿತ್ತದಿಂದ ಸರ್ವ ವಿದ್ಯೆಯನ್ನೂ ತನ್ನದಾಗಿಸಿಕೊಳ್ಳುವ ಮತ್ತು ಅತೀವ ಜ್ಞಾನದಾಹಿಯಾದ ಶಿಷ್ಯ ಪರಂಪರೆಯೂ ಇಂದಿನ ಬೇಕುಗಳಲ್ಲಿ ಎರಡನೇಯದು. ಗುರು ಶಿಷ್ಯ ಜೋಡಿಗಳು ಸಬಲರಾಗುವುದರಿಂದ ದೇಶವು ಎತ್ತರೆತ್ತರಕ್ಕೆ ಏರುವುದರಲ್ಲಿ ಸಂದೇಹವಿಲ್ಲ.
“ವಿದ್ಯಾ ಸಾಹಿತ್ಯ ಸಂಗೀತ ಕಲಾ ವಿಹೀನಃ ಸಾಕ್ಷಾತ್ ಪಶುಃ ಪುಚ್ಛ ವಿಷಾಣ ವಿಹೀನಃ” ಎಂದು ಅನುಭವಿಗಳ ಮಾತಿದೆ. ಶಾಲಾ ಕಾಲೇಜುಗಳಲ್ಲಿ ಓದಿ ಪದವಿಗಳಿಸಿದ ಕೋಡು ಬಾಲಗಳಿಲ್ಲದ ಪಶುಗಳು ನಾವಾಗಬೇಕೇ? ಸಕಲವನ್ನೂ ನಮ್ಮೊಳಗೆ ತುಂಬಿಕೊಂಡು; ಭಾರತವನ್ನು ಬೆಳಗಿಸುವ, ವಿಶ್ವಗುರು ಪಟ್ಟದ ಮಾನ ಸನ್ಮಾನಗಳಿಗೆ ಭಾಜನಗೊಳಿಸುವ ಜ್ಞಾನ ಕೋವಿದ ದೇಶಭಕ್ತರು ನಾವಾಗಬೇಕೇ ಎಂಬ ಚಿಂತನೆ ನಮ್ಮದಾಗಲಿ. ದೇಶ ಕಟ್ಟುವ ವ್ಯಕ್ತಿತ್ವಗಳನ್ನು ರೂಪಿಸುವ ಗುರು-ಶಿಷ್ಯ ಜೋಡಿಗಳು ಅಧಿಕಗೊಳ್ಳುತ್ತಿರಲಿ. ಸುಯೋಗ್ಯ ಗುರು ಶಿಷ್ಯ ಸಂಬಂಧವೇ ದೇಶಕ್ಕೆ ಬಲ.
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
********************************************