-->
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 65

ಬದಲಾಗೋಣವೇ ಪ್ಲೀಸ್.....! ಸಂಚಿಕೆ - 65

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
                   
                  ಒಬ್ಬ ಮೃದಂಗ ವಾದಕನು ಪ್ರತಿ ದಿನವೂ ದೇವರ ಬೆಟ್ಟದ ಮಧ್ಯದಲ್ಲಿ ಮೃದಂಗವನ್ನು ಸುಂದರವಾಗಿ ನುಡಿಸುತ್ತಿದ್ದನು. ಅವನು ಮೃದಂಗ ನುಡಿಸುತ್ತಿದ್ದ ಸರಿಯಾದ ಸಮಯಕ್ಕೆ ಆಕಳ ಕರುವೊಂದು ಬಂದು ಕೂರುತಿತ್ತು. ಕುತೂಹಲ ತಡೆಯಲಾರದೆ ಒಂದು ದಿನ ಮೃದಂಗ ವಾದಕನು ಆಕಳ ಕರುವಿನಲ್ಲಿ "ಅಯ್ಯಾ ಕರುವೇ, ಪ್ರತಿ ದಿನ ನಾನು ಮೃದಂಗ ಬಾರಿಸುವ ಹೊತ್ತಿಗೆ ಸರಿಯಾಗಿ ಬಂದು ಕುಳಿತುಕೊಳ್ಳುತ್ತಿರುವುದು ಯಾಕೆ ? ನಿನಗೆ ನನ್ನ ರಾಗ ಇಷ್ಟವಾಯಿತೋ ಅಥವಾ ನನ್ನ ಹಾಡುಗಾರಿಕೆ ಇಷ್ಟವಾಯಿತೋ ?" ಎಂದು ಕೇಳಿದನು. ಅದಕ್ಕೆ ಕರುವು "ನನಗೆ ನಿನ್ನ ರಾಗ ಅಥವಾ ಹಾಡುಗಾರಿಕೆ ಬಗ್ಗೆ ಏನೂ ಗೊತ್ತಿಲ್ಲ. ಆದರೆ ನಿನ್ನ ಮೃದಂಗದಲ್ಲಿರುವ ಚರ್ಮ ನನ್ನ ಅಮ್ಮನದ್ದು ಅಂಥಾ ಗೊತ್ತು. ನೀನು ಪ್ರತಿ ಬಾರಿ ಚರ್ಮವನ್ನು ಮುಟ್ಟಿ ಸ್ವರ ಹೊಮ್ಮಿಸುವಾಗಲೆಲ್ಲ ನನ್ನ ಅಮ್ಮನು ನನ್ನನು ಮಾತಾಡಿಸುವಂತೆ ಭಾಸವಾಗುತ್ತದೆ. ಅದಕ್ಕೆ ತಬ್ಬಲಿಯಾದ ನಾನು ದಿನಾಲೂ ನನ್ನ ಅಮ್ಮನನ್ನು ಕಾಣಲು ಇಲ್ಲಿ ಬಂದು ಕುಳಿತಿರುವೆ" ಎಂದಿತು. ಇದು ನನ್ನ ಬಾಲ್ಯಕಾಲದಲ್ಲಿ ಹಿರಿಯಜ್ಜರೊಬ್ಬರು ಹೇಳಿದ ಸ್ವಾರಸ್ಯಕರ ಕತೆಯ ಸಾರಾಂಶವಾಗಿದೆ.
       ಈ ಕಥೆಗೆ ಬಹು ಆಯಾಮಗಳಿದೆ. ಅದರಲ್ಲಿ ಒಂದು ಆಯಾಮ ಈ ರೀತಿ ಅರ್ಥೈಸಬಹುದು. ಒಮ್ಮೊಮ್ಮೆ ನಾವು ಭಾವಿಸಿರುವ ಭಾವನೆಯ ಕಲ್ಪನೆಯಲ್ಲಿಯೇ ಹಾರಾಡುತ್ತಿರುತ್ತೇವೆ. ನಮ್ಮನ್ನು ನಾವು ಅತಿರೇಕವಾಗಿಯೂ, ಬಹು ದೊಡ್ಡ ಸಾಧಕರಾಗಿಯೋ ಕಲ್ಪಿಸಿಕೊಂಡಿರುತ್ತೇವೆ. ನಾವೇ ಶ್ರೇಷ್ಠರು, ನಾವೇ ಜ್ಞಾನಿಗಳು, ನಾವೇ ಶ್ರೀಮಂತರು, ನಾವೇ ಬುದ್ದಿವಂತರು, ನಾವೇ ದೊಡ್ಡ ಕಲಾವಿದರು, ನಾವೇ ಕೊಡುಗೈ ದಾನಿಗಳು.. ಹೀಗೆ ಏನೇನೋ ಕಲ್ಪಿಸಿ ಮಾಯಾಲೋಕದಲ್ಲಿ ವಿಹರಿಸುತ್ತಿರುತ್ತೇವೆ. ಆದರೆ ವಾಸ್ತವವಾಗಿ ನಾವು ಆ ಮಟ್ಟದಲ್ಲಿರುವುದಿಲ್ಲ. ನಮ್ಮ ಜತೆಗಿರುವವರು ಅವರವರ ಸ್ವಾರ್ಥ ಅಥವಾ ನಿಸ್ವಾರ್ಥ ಭಾವಕ್ಕನುಗುಣವಾಗಿ ನಮ್ಮನ್ನು ಭಿನ್ನವಾಗಿ ಕಲ್ಪಿಸಿರುತ್ತಾರೆ. ನಮ್ಮನ್ನು ಬೇರೆ ಬೇರೆ ರೂಪದಲ್ಲಿ ನೋಡುತ್ತಿರುತ್ತಾರೆ. ನಮ್ಮನ್ನು ಬಹು ರೀತಿಯಲ್ಲಿ ಗುರುತಿಸಿರುತ್ತಾರೆ. ಯಾವಾಗ ನಾವು ನಮ್ಮನ್ನು ನಾವಿರುವ ವಾಸ್ತವ ಸ್ಥಿತಿಯಲ್ಲಿ ಅರ್ಥೈಸುತ್ತೇವೋ ಆಗ ನಾವು ಸಾರ್ಥಕ ಬದುಕನ್ನು ಸಾಗಿಸಬಹುದು. ವಾಸ್ತವ ಅರಿಯದೇ ಅನವಶ್ಯಕವಾದ ಕಲ್ಪನಾ ಲೋಕದಲ್ಲಿಯೇ ತೇಲಾಡುತ್ತಿದ್ದರೆ ಬದುಕು ಗೊಂದಲದ ಗೂಡಾಗುವುದು ನಿಶ್ಚಿತ. ಇತರೆ ಜೀವಿಗಳಂತೆ ಮಾನವನು ಕೂಡಾ ಈ ಪರಿಸರದ ಒಂದು ಅಂಶ ಎಂದು ಭಾವಿಸಿ ಪರಿಸರ ಚಕ್ರದಲ್ಲಿ ಸರಳವಾಗಿ ಬದುಕಲು ಯಾವಾಗ ಪ್ರಾರಂಭಿಸುತ್ತಾನೋ ಅಲ್ಲಿಗೆ ನೆಮ್ಮದಿಯ ಬದುಕು ಆರಂಭವಾಗುವುದರಲ್ಲಿ ಸಂಶಯವಿಲ್ಲ. ಸ್ಫರ್ಧಾ ರಹಿತರಾಗಿ ಸ್ಫೂರ್ತಿ ಸಹಿತರಾಗಿ ಪ್ರತಿಕ್ಷಣವನ್ನು ಅನುಭವಿಸುತ್ತಾ ಬದುಕಲು ಕಲಿಯೋಣ. ಎಲ್ಲದರಲ್ಲೂ ದೇವರನ್ನು - ಮಾನವತ್ವವನ್ನು ಕಾಣೋಣ. ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?. 
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************


Ads on article

Advertise in articles 1

advertising articles 2

Advertise under the article