-->
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 63

ಬದಲಾಗೋಣವೇ ಪ್ಲೀಸ್.....! ಸಂಚಿಕೆ - 63

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು

                      
        ನೀರಿನಾಳದೊಳಗಿದ್ದ ಮುತ್ತನ್ನು ಯಾರೋ ಕೇಳಿದರಂತೆ "ಅಯ್ಯಾ ಮುತ್ತೇ... ನೀನೆಷ್ಟು ಸುಂದರ. ನಿನ್ನಷ್ಟು ಬೆಲೆ ಬಾಳುವವರು ಯಾರೂ ಇಲ್ಲ. ನಿನ್ನನ್ನು ಎಲ್ಲರೂ ನೋಡ ಬಯಸುತ್ತಾರೆ. ನಿನ್ನಂತೆ ಆಗಬಯಸುತ್ತಾರೆ. ಆದರೆ ನೀನೇಕೆ ಯಾರಿಗೂ ಕಾಣದ ಈ ನೀರಿನಾಳದೊಳಗೆ ಇರುವೆ. ಎಲ್ಲರಿಗೂ ಕಾಣುವಂತೆ ನೀರಿನ ಮೇಲ್ಭಾಗದಲ್ಲಿ ವಾಸಿಸಬಹುದಲ್ಲವೇ....?" .
 ಅದಕ್ಕೆ ಮುತ್ತು "ಅಯ್ಯಾ... ನಾನು ನೀರಿನ ಮೇಲೆ ಇದ್ದರೆ ಎಲ್ಲರೂ ಕಷ್ಟ ಪಡದೆ ನನ್ನನ್ನು ನೋಡಬಹುದಿತ್ತು. ಎಲ್ಲರ ಜತೆ ನಾನು ಇರಬಹುದಿತ್ತು. ಆದರೆ ನನಗೆ ಯಾವುದೇ ಬೆಲೆ ಸಿಗುತ್ತಿರಲಿಲ್ಲ. ಏಕೆಂದರೆ ಅರ್ಹರ ಜತೆಗೆ ಕೆಲವು ಅನರ್ಹರಿಗೂ ನಾನು ಅನಾಯಾಸವಾಗಿ ಸಿಗುತ್ತಿದ್ದೆ. ಆ ಅನರ್ಹರು ನನ್ನ ವಂಶವನ್ನೇ ಎಗ್ಗಿಲ್ಲದೆ ನಿರ್ನಾಮ ಮಾಡುತ್ತಿದ್ದರು. ಇದರಿಂದ ನನ್ನ ಅಸ್ತಿತ್ವವೇ ಇರುತ್ತಿರಲಿಲ್ಲ. ಆದರೆ ನೀರಿನಾಳದಲ್ಲಿರುವುದರಿಂದ ಅರ್ಹರಿಗೆ ಮಾತ್ರ ಸಿಗುತ್ತೇನೆ. ನೀರಿನ ಆಳವನ್ನು ಅರಿತು ಸಾಹಸಿ ಭಾವದಿಂದ ಈಜಾಡಿ ಸಾಧನೆ ಮಾಡಿ ನೀರಿನಾಳ ತಲುಪಿದವರಿಗೆ ಮಾತ್ರ ಸಿಗುತ್ತೇನೆ. ಸೋಮಾರಿಗಳಿಗೆ, ಅನರ್ಹರಿಗೆ, ಸ್ವಾರ್ಥಿಗಳಿಗೆ ನಾನು ಎಂದೂ ಸಿಗೋಲ್ಲ" ಎಂದಿತು.
        ಮುತ್ತಿನ ಮಾತು ಅಕ್ಷರಶಃ ಸತ್ಯ. ಯಶಸ್ಸು ಎಂಬುದು ನೀರಿನಾಳದಲ್ಲಿರುವ ಮುತ್ತಿನಂತೆ ಅಪರೂಪವು ಅಮೂಲ್ಯವೂ ಆಗಿರುವ ಶ್ರೇಷ್ಠ ರತ್ನ. ಹೊಸತನ ಹುಡುಕಾಟ ಭಾವ, ಸಾಹಸಿ ಪ್ರವೃತ್ತಿ , ನಿರಂತರ ಅಧ್ಯಯನ ದೃಷ್ಟಿ , ಯಾವುದೇ ಹಾಗೂ ಯಾರದ್ದೇ ಶಿಫಾರಸ್ಸಿಗೆ ಒಳಗಾಗದೆ ಮುಕ್ತ ನಡೆ - ನುಡಿ, ನಿಜವಾದ ಕಲಿಕಾಸಕ್ತಿ ಹೀಗೆ ಹಲವಾರು ಅಂಶಗಳಿಂದ ಸಂಪನ್ನರಾಗಿ ಬದುಕಿನಾಳ ಹಾಗೂ ವಿಷಯದಾಳಕ್ಕೆ ತಲುಪಿದಾಗ ಮಾತ್ರ ಸಿಗುವ ಅನರ್ಘ್ಯ ಮುತ್ತೇ - ಯಶಸ್ಸು.  
       ನಿಜವಾದ ಯಶಸ್ವಿಗೆ ಅಡ್ಡ ಮಾರ್ಗವಿಲ್ಲ. ಬೆಲೆಬಾಳುವ ಹಾಸಿಗೆ ಕೊಳ್ಳಬಹುದು ಆದರೆ ನಿದ್ದೆಯನ್ನಲ್ಲ. ಅರಮನೆ ಕೊಳ್ಳಬಹುದು ಆದರೆ ನೆಮ್ಮದಿಯನ್ನಲ್ಲ. ಔಷಧಿ ಕೊಳ್ಳಬಹುದು ಆದರೆ ಆರೋಗ್ಯವನ್ನಲ್ಲ. ಪುಸ್ತಕಗಳನ್ನು ಕೊಳ್ಳಬಹುದು ಆದರೆ ಜ್ಞಾನವನ್ನಲ್ಲ. ಪ್ರಸಾಧನ (ಮೇಕಪ್) ಕಿಟ್ ಕೊಳ್ಳಬಹುದು ಆದರೆ ಸೌಂದರ್ಯವನ್ನಲ್ಲ. ಸಂಪತ್ತುಕೊಳ್ಳಬಹುದು ಆದರೆ ಸಾಧನೆಯನ್ನಲ್ಲ. ಅದರಂತೆ ಬಿರುದು - ಪದವಿಗಳನ್ನು ಕೊಳ್ಳಬಹುದು ಆದರೆ ಯಶಸ್ಸನ್ನು ಕೊಳ್ಳಲಾಗದು. ಯಶಸ್ಸನ್ನು ಖರೀದಿಸಲಾಗದು ಅದನ್ನು ರಾಜಮಾರ್ಗದಿಂದ ಮಾತ್ರ ಸಾಧಿಸಬಹುದು. ನೀರಿನೊಳಗಿನ ಮುತ್ತನ್ನು ಹುಡುಕಿ ಪಡೆದಂತೆ ಬದುಕಿನ ಸಾಧನೆಯ ಮುತ್ತನ್ನು ಪರಿಶ್ರಮದಿಂದ ಸಂಪಾದಿಸೋಣ. ಆ ರಾಜಮಾರ್ಗದಲ್ಲಿಯೇ ಪಯಣಿಸಿ ಯಶವನ್ನು ಹೊಂದೋಣ. ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?. 
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************

Ads on article

Advertise in articles 1

advertising articles 2

Advertise under the article