-->
ಓ ಮುದ್ದು ಮನಸೇ ...…...! ಸಂಚಿಕೆ - 22

ಓ ಮುದ್ದು ಮನಸೇ ...…...! ಸಂಚಿಕೆ - 22

ಓ ಮುದ್ದು ಮನಸೇ ...…...! ಸಂಚಿಕೆ - 22


            
             ಮನೋಹರ್ ಮತ್ತು ಮಾನ್ಯ ಅಣ್ಣ ತಂಗಿ. ಅಣ್ಣ ಆರನೇ ತರಗತಿಯಲ್ಲಿ ಓದುತ್ತಿದ್ದರೆ ತಂಗಿ ಐದರಲ್ಲಿ ಓದುತ್ತಿದ್ದಾಳೆ. ಇವರಿಬ್ಬರೂ ಸ್ವಲ್ಪ ಸಿರಿವಂತ ಕುಟುಂಬದವರು. ಊರು ಹಳ್ಳಿಯಾದರೂ ಸವಲತ್ತಿಗೆಂದೂ ಕೊರತೆಯಾಗಿಲ್ಲ. ಶಾಲೆಗಾಗಿ ಊರಿಂದ ಸುಮಾರು ಆರು ಕಿಲೋಮೀಟರ್ ದೂರದ ಪೇಟೆಗೆ ಬರುತ್ತಿದ್ದ ಇವರಿಗೆ ಗೆಳೆಯನಾಗಿ ಸಿಕ್ಕಿದ್ದು ಹರೀಶ. ಇವನು ಸ್ವಲ್ಪ ಬಡವ, ಅಪ್ಪ ಕೂಲಿ ಕಾರ್ಮಿಕ ಆದರೂ ಮಗನಿಗೆ ಒಳ್ಳೆ ಶಿಕ್ಷಣ ಕೊಡಿಸುವ ಹಂಬಲದಿಂದ ಪೇಟೆಯ ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿದ್ದ. ಹರೀಶನೂ ಆರನೇ ತರಗತಿಯವನಾದ್ದರಿಂದ ಸಹಜವಾಗಿ ಮನೋಹರನಿಗೆ ಗೆಳೆಯನಾದ. ಇಬ್ಬರ ಮನೆಯೂ ಕೂಗಳತೆ ದೂರದಲ್ಲಿದ್ದದ್ದರಿಂದ ಶಾಲೆಗೆ ಹೋಗೋದು ಬರೋದು ಜೊತೆಯಾಗಿಯೇ ನಡೆಯುತ್ತಿತ್ತು.
       ಇವರ ಮನೆಯಿಂದ ಸುಮಾರು ಎರಡು ಕಿಲೋಮೀಟರ್ ನ ವರೆಗೆ ಡಾಂಬರ್ ರಸ್ತೆಯಿಲ್ಲ, ಮಣ್ಣು ದಾರಿ. ಈ ಎರಡು ಕಿಲೋಮೀಟರ್ ಕಳೆದ ಮೇಲೆ ಪೇಟೆಗೆ ಹೋಗುವ ಮುಖ್ಯ ರಸ್ತೆ ಸಿಗುತ್ತೆ. ಅಲ್ಲಿಂದ ಶಾಲಾ ವಾಹನದಲ್ಲಿ ಇವರ ಪ್ರಯಾಣ. ಪ್ರತೀದಿನ ಮನೋಹರ ಮತ್ತವನ ತಂಗಿ ಮಾನ್ಯಾಳನ್ನು ಅವರಪ್ಪ ಹಳೇಕಾಲದ ಜೀಪೊಂದರಲ್ಲಿ ಮುಖ್ಯರಸ್ತೇವರೆಗೂ ಬಿಟ್ಟುಹೋದರೆ ಹರೀಶನಿಗೆ ಕಾಲುನಡಿಗೆಯೇ ಗತಿ. ಮನೋಹರ ಮತ್ತು ಮಾನ್ಯಾಳಿಗೂ ಹರೀಶನಂತೆ ನಡೆದುಕೊಂಡು ಬರೋದಂದ್ರೆ ತುಂಬಾ ಇಷ್ಟ. ಅದ್ರೆ ಅವರಪ್ಪ "ಆ ಮಣ್ಣು ರಸ್ತೇಲಿ ನಡ್ಕೊಂಡು ಹೋದ್ರೆ ಬಟ್ಟೆ ಎಲ್ಲಾ ದೂಳಾಗ್ತದೆ, ಅಷ್ಟು ದೂರ ಹೋಗೋದ್ರಲ್ಲೇ ತಿಂದದ್ದೆಲ್ಲಾ ಕರ್ಗಿ ಹೋಗ್ತದೆ, ಸುಮ್ನೆ ಗಾಡಿ ಹತ್ತಿ" ಎಂದು ಗದರುವುದುಂಟು. ಈ ಮಕ್ಕಳು ಆರಾಮಾಗಿ ಗಾಡಿಯಲ್ಲಿ ಹೋಗೋದನ್ನು ಬಿಟ್ಟು ನಡೆದು ಹೋಗೋದನ್ನೇ ಇಷ್ಟ ಪಡೋದಕ್ಕೆ ಕಾರಣವೂ ಇದೆ. ಪ್ರತಿದಿನ ಶಾಲೆಗೆ ಬರುವ ಹರೀಶ ಖಾಲೀ ಕೈಯ್ಯಲ್ಲಿ ಬಂದದ್ದೇ ಇಲ್ಲ. ಒಮ್ಮೆ ನೇರಳೇ ಹಣ್ಣು, ಇನ್ನೊಮ್ಮೆ, ಸಂಪಿಗೆ, ಬುಗುರಿ, ಗೇರು, ಜಂಬೆ, ಪೇರಲೆ, ಮುರುಗಲ ಕಾಡಿನಲ್ಲಿ ಸಿಗುವ ಒಂದಲ್ಲೊಂದು ಹಣ್ಣನ್ನು ತನ್ನ ಪಾಟೀ ಚೀಲದ ಹೊರ ಜೇಬಿನಲ್ಲಿ ತುಂಬಿ ತರುತ್ತಿದ್ದ. ಇನ್ನು, ವಿವಿಧ ಹೂವು, ಎಲೆಗಳು, ಬಿನ್ನ ವಿಭಿನ್ನ ಆಕೃತಿಯ ಕಲ್ಲುಗಳು ಅವನ ಪಾಟೀ ಚೀಲದಲ್ಲಿ ಸೇರಿಕೊಳ್ಳುತ್ತಿದ್ದವು. ಅವನೆಂದು ಕಾಲಿಗೆ ಬೂಟು ಹಾಕಿದ್ದಿಲ್ಲ. ಹಳ್ಳ ದಾಟೋಕೆ ಕಾಲು ಸಂಕವಿದ್ದರೂ ಹವಾಯಿ ಚಪ್ಪಲಿಗಳನ್ನು ತನ್ನ ಕೈಯ್ಯಲ್ಲಿ ಹಿಡಿದು ನೀರಲ್ಲೇ ಹಾದು ಬರೋದು ಅವನ ವಾಡಿಕೆ. ಹಾಗಂತ ಅವನಪ್ಪ ಎಂದೂ ಗದರಿದ್ದಿಲ್ಲ, ದೂರದಲ್ಲಿ ನಿಂತು ಮಗನ ಕಾಳಜಿ ವಹಿಸುತ್ತಿದ್ದ ಅಪ್ಪ ಮಗನಿಗಾಗಿ ಹಳ್ಳದ ಪುಟಾಣಿ ಮೀನುಗಳನ್ನು ಹಿಡಿದು ಬಾಟಲಿಯೊಂದರಲ್ಲಿ ತುಂಬಿಕೊಡೋದು, ಕಾಗದದ ದೋಣಿ ಮಾಡಿ ಮಗನ ಕೈಯ್ಯಿಂದ ನೀರಲ್ಲಿ ಬಿಡಿಸೋದು, ಚಿಟ್ಟೆ ಹಿಡಿದು ಅದರ ಬಾಲಕ್ಕೆ ದಾರ ಕಟ್ಟಿ ಮಗನ ಪಾಟೀ ಚೀಲಕ್ಕೆ ಸಿಕ್ಕಿಸೋದು, ಒಟ್ಟಾರೆ ಮನೆಯಿಂದ ಮುಖ್ಯ ರಸ್ತೆಗಿದ್ದ ಆ ಎರಡು ಕಿಲೋಮೀಟರ್ ದಾರಿ ಇವರಿಬ್ಬರ ಸ್ವರ್ಗ. ಇಲ್ಲಿ ಸಿಗುವ ಅನುಭವ ಎಲ್ಲಾ ಸಿರಿವಂತಿಕೆಯನ್ನೂ ಮೀರಿದ್ದು. ಇದರಲ್ಲಿ ಹಾದು ಹೋಗುವ ಮನಸ್ಸುಗಳಿಗೆ ಯಾವ ಮನೋವೈದ್ಯರ ಅಗತ್ಯವೂ ಇರಲಿಕ್ಕಿಲ್ಲ. ಹಾಗಾಗಿಯೇ ಹರೀಶ ಹಿನ್ನೆಲೆಯಲ್ಲಿ ಮಾತ್ರ ಬಡವ ಇನ್ನೆಲ್ಲದರಲ್ಲೂ ಸಿರಿವಂತ.
       ಅದೊಂದು ಶನಿವಾರ ಶಾಲಾ ವಾಹನ ಕೆಟ್ಟು ನಿಂತಿದ್ದರಿಂದ ಈ ಮೂವರೂ ಮನೆಗೆ ನಡೆದೇ ಹೋಗುವ ಯೋಚನೆ ಮಾಡಿದರು. ಅದು ಮಟ ಮಟ ಮಧ್ಯಾಹ್ನವಾಗಿದ್ದರಿಂದ ಬಿಸಿಲು ತುಸು ಜೋರಾಗಿಯೇ ಇತ್ತು. ಶಾಲೆಯ ಗೇಟಿನ ಬಳಿ ಬಂದ ಮಕ್ಕಳನ್ನು ಕೈಹಿಡಿದು ತುಂಬಾ ಜಾಗರೂಕತೆಯಿಂದ ರಸ್ತೆ ದಾಟಿಸಿದ ಸೆಕ್ಯುರಿಟಿ ಅಂಕಲ್ ಸುಸ್ತಾಗಿ ಕುಸಿದು ಬೀಳೋದನ್ನ ಕಂಡ ಹರೀಶ ಓಡಿಬಂದು ಅವರ ಮುಖಕ್ಕೆ ತನ್ನ ಬ್ಯಾಗಲ್ಲಿದ್ದ ಬಾಟಲಿ ತೆಗೆದು ನೀರು ಚಿಮುಕಿಸಿದ, ಮತ್ತು "ಅಂಕಲ್ ನೀರು ಕುಡೀರಿ" ಎಂದು ಬಾಟಲಿಯನ್ನು ಅವರ ಕೈಯ್ಯಲ್ಲಿಟ್ಟ. ಇದನ್ನು ನೋಡುತ್ತಿದ್ದ ಮಾನ್ಯ ಹರೀಶನಲ್ಲಿ ಅಂದಳು "ನೀನು ಎಂಜಲು ಮಾಡಿದ್ದ ನೀರನ್ನು ಅವರಿಗ್ಯಾಕೆ ಕುಡಿಸ್ದೆ?" ಒಮ್ಮೆ ನಮ್ಮ ಮನೆಯಂಗಳದಲ್ಲಿ ತಲೆಸುತ್ತಿ ಬಿದ್ದ ಬಿಕ್ಷುಕ ಅಜ್ಜಿಯೊಬ್ಬರಿಗೆ ನನ್ನಮ್ಮ ನೀರು ಕುಡಿಸಿ ಆರೈಕೆ ಮಾಡಿದ್ದರು ಆಗ ನಾನೂ ಕೂಡ ಒಮ್ಮೆ ಅವರಲ್ಲಿ ಇದೇ ಪ್ರಶ್ನೆಯನ್ನ ಕೇಳಿದ್ದೆ, ಆಗ ನನ್ನಮ್ಮ "ಕಷ್ಟದಲ್ಲಿರೋರಿಗೆ ಸಹಾಯ ಮಾಡೋದಕ್ಕಿಂತ ದೊಡ್ಡ ದೇವರ ಸೇವೆ ಬೇರೊಂದಿಲ್ಲ, ಒಬ್ಬರ ಜೀವಕ್ಕಿಂತ ಮುಖ್ಯ ಇನ್ಯಾವುದೂ ಇಲ್ಲಾ" ಅಂದಿದ್ದರು ಎನ್ನುತ್ತಾ ಹರೀಶ ಮಾನ್ಯಾಳ ಕೈ ಹಿಡಿದು ಕೇಳಿದ, "ದೊಡ್ಡವಳಾದ ಮೇಲೆ ನೀನೂ ಇನ್ನೊಬ್ಬರಿಗೆ ಸಹಾಯ ಮಾಡುತ್ತೀಯಾ?" , "ಸಹಾಯ ಮಾಡೋದರಲ್ಲಿ ಎಷ್ಟು ಸಂತೋಷವಿದೆಯೆಂದು ನಿನ್ನನ್ನು ನೋಡಿ ತಿಳಿದುಕೊಂಡೆ, ಆ ಸಂತೋಷಕ್ಕಾಗಿ ಖಂಡಿತವಾಗಿಯೂ ನಾನು ಕಷ್ಟದಲ್ಲಿರೋರಿಗೆ ಸಹಾಯ ಮಾಡ್ತೀನಿ" ಅಂದಳು.
         ಸ್ವಲ್ಪ ಮುಂದೆ ನಡೆದಂತೆ ಮನೋಹರ ಮತ್ತು ಮಾನ್ಯಾ ಇಬ್ಬರನ್ನೂ ತಡೆದ ಹರೀಶ ಎದುರಿನಿಂದ ಬರುತ್ತಿದ್ದ ಕಾರೊಂದನ್ನು ತೋರಿಸುತ್ತಾ "ಆ ಕಾರಿನವರು ಏನು ಮಾಡುತ್ತಾರೆ ನೋಡಿ" ಅಂದ. ವೇಗವಾಗಿ ಬಂದ ದುಬಾರಿ ಕಾರೊಂದು ಹಳ್ಳಕ್ಕೆ ನಿರ್ಮಿಸಿದ್ದ ಪುಟ್ಟ ಸೇತುವೆ ಮೇಲೆ ನಿಂತಿತು. ಅದರಿಂದಿಳಿದ ಸೂಟು ಧರಿಸಿದ್ದ ವ್ಯಕ್ತಿಯೋರ್ವರು ಅತ್ತಿತ್ತನೋಡಿ ಹಿಂಬದಿಯ ಸೀಟಿನಲ್ಲಿದ್ದ ಕಪ್ಪು ಬಣ್ಣದ ಪ್ಲಾಸ್ಟಿಕ್ ಚೀಲವೊಂದನ್ನು ತೆಗೆದು ಹಳ್ಳಕ್ಕೆ ಎಸೆದು ಮತ್ತದೇ ಕಾರಿನಲ್ಲಿ ಹೊರಟು ಹೋದರು!. ಮನೋಹರ ಮತ್ತು ಮಾನ್ಯಾರಿಗೆ ಏನೂ ಅರ್ಥವಾಗಲಿಲ್ಲ. ಹರೀಶನ ಮುಖವನ್ನೇ ನೋಡುತ್ತಿದ್ದ ಅವರನ್ನು ನೋಡಿದ ಹರೀಶ, "ಆ ಪ್ಲಾಸ್ಟಿಕ್ ಚೀಲದಲ್ಲಿ ಅವರ ಮನೆಯ ಕಸ ಕಡ್ಡಿ, ಹಳಸಿದ ಆಹಾರ ಮುಂತಾದ ತ್ಯಾಜ್ಯವಿದೆ, ಅದನ್ನ ಹಳ್ಳಕ್ಕೆ ಎಸೆದರೆ ಹಳ್ಳದ ನೀರು ಕಲುಶಿತಗೊಳ್ಳುತ್ತದೆ. ನೀರಲ್ಲಿನ ಜೀವಿಗಳಿಗೆ ಪ್ಲಾಸ್ಟಿಕ್ ಮಾರಕವೆಂದು ಮೊನ್ನೆ ತಾನೆ ಟೀಚರ್ ಹೇಳಿಲ್ಲವೇ...?" ಅಂದ. "ನದಿಗೆ ಹಾಕೋ ಬದಲು ರಸ್ತೆಬದಿಯಲ್ಲಿ ಎಸೆಯಬಹುದಲ್ಲ" ಅಂದಳು ಮಾನ್ಯ.
       "ರಸ್ತೆ ಬದಿಯಲ್ಲಿ ಎಸೆದರೆ ತರಕಾರಿ, ಆಹಾರ ಮುಂತಾದವುಗಳ ಜೊತೆ ಜೊತೆಗೆ ಪ್ಲಾಸ್ಟಿಕ್ ಚೀಲವನ್ನೂ ತಿನ್ನುವ ಅದೆಷ್ಟೋ ಹಸುಗಳು ಸಾಯುತ್ತವೆ ಗೊತ್ತೇ..? ಹಾಗೆ ಸತ್ತ ಹಸುವೊಂದರ ಹೊಟ್ಟೆಯೊಳಗಿಂದ ಕೇಜಿಗಟ್ಟಲೆ ಪ್ಲಾಸ್ಟಿಕ್ ಹೊರತೆಗೆದ ವಿಡಿಯೋವೊಂದನ್ನ ಮೊನ್ನೆ ತಾನೆ ನನ್ನ ಪಕ್ಕದ ಮನೆಯ ಅಣ್ಣನ ಮೊಬೈಲ್ ನಲ್ಲಿ ನೋಡಿದ್ದೇನೆ." ಅಂದ ಹರೀಶ. ಹಾಗಿದ್ದರೆ ಮನೆಯಲ್ಲಿನ ತ್ಯಾಜ್ಯವನ್ನು ಏನು ಮಾಡೋದು..? ಪ್ರಶ್ನೆಯಿತ್ತ ಮನೋಹರ. ಹಸಿ ತ್ಯಾಜ್ಯದಿಂದ ಮನೆಯಲ್ಲೇ ಗೊಬ್ಬರ ತಯಾರಿಸಲು ಬೇಕಾದ ಸಲಕರಣೆಗಳು ಅಂಗಡಿಯಲ್ಲಿ ಸಿಗುತ್ತವೆಯಂತೆ ಮತ್ತು ಒಣ ತ್ಯಾಜ್ಯವನ್ನು ಬೇರೆ ಮಾಡಿ ವಾರಕ್ಕೊಮ್ಮೆ ಬರುವ ತ್ಯಾಜ್ಯ ವಾಹನಕ್ಕೆ ಕೊಟ್ಟರೆ ಒಳ್ಳೆಯದು ಅನ್ನುವಷ್ಟರಲ್ಲೇ ದೋಬ್...! ಎಂದು ಜೋರಾದ ಶಬ್ಧ ಕೇಳಿಸಿತು. ತಿರುಗಿ ನೋಡಿದರೆ ಬೈಕಿಗೂ ಮತ್ತು ಬಸ್ಸಿಗೂ ಡಿಕ್ಕಿಯಾಗಿತ್ತು, ಬೈಕ್ ಸವಾರ ದೂರಕ್ಕೆ ಎಸೆಯಲ್ಪಟ್ಟಿದ್ದ ಅವನ ತಲೆಗೆ ತೀವ್ರವಾದ ಪೆಟ್ಟುತಗುಲಿದ್ದರಿಂದ ತಕ್ಷಣ ಅಲ್ಲಿದ್ದವರು ಅವನನ್ನ ಇನ್ನೊಂದು ಗಾಡಿಯಲ್ಲಿ ಆಸ್ಪತ್ರೆಗೆ ಕರೆದೊಯ್ದರು. ದೂರದಲ್ಲೇ ನಿಂತು ನೋಡುತ್ತಿದ್ದ ಮಾನ್ಯ ಹರೀಶನನ್ನ ಕೇಳಿದಳು, ಅವರು ಬದುಕುಳಿಯುತ್ತಾರಾ...? ಗೊತ್ತಿಲ್ಲಾ, ತಲೆಗೆ ಹೆಲ್ಮೆಟ್ ಧರಿಸಿದ್ದಿದ್ದರೆ ಇಷ್ಟೊಂದು ಪೆಟ್ಟು ತಗುಲುತ್ತಿರಲಿಲ್ಲ, ನನಗೆ ಕೆಲವೊಮ್ಮೆ ಕೆಲವೊಬ್ಬರು ಬೈಕ್ ಓಡಿಸೋದನ್ನ ನೋಡಿದ್ರೆ ಭಯ ಆಗ್ತದೆ, ಅವರು ಇನ್ನೊಬ್ಬರಿಗೂ ತೊಂದರೆ ಕೊಡ್ತಾರೆ. ಮೊನ್ನೆ ಟೀವಿಯಲ್ಲಿ ಇಂತಹದ್ದೇ ಯಾಕ್ಸಿಡೆಂಟ್ ನೋಡಿದೆ, ಆಗಲೇ ಗೊತ್ತಾಯ್ತು ಬಾರತದಲ್ಲಿ ದಿನವೊಂದಕ್ಕೆ 1214 ಯಾಕ್ಸಿಡೆಂಟ್ ಗಳು ನಡೆಯುತ್ತವಂತೆ. ಅದರಲ್ಲಿ ಸುಮಾರು 377 ಜನ ಪ್ರಾಣ ಕಳೆದುಕೊಳ್ತಾರಂತೆ. ಇದಕ್ಕೆಲ್ಲ ಪ್ರಮುಖ ಕಾರಣ ಸವಾರರು ಮಾಡುವ ತಪ್ಪುಗಳಂತೆ. "ಏನೆಲ್ಲಾ ತಪ್ಪುಗಳು...?" ಮಾನ್ಯ ಕೇಳಿದಳು. ಅತಿಯಾದ ವೇಗ, ರಸ್ತೆನಿಯಮ ತಿಳಿದುಕೊಳ್ಳದಿರುವುದು , ಕೆಲವೊಮ್ಮೆ ಗೊತ್ತಿದ್ದರೂ ಪಾಲಿಸದಿರುವುದು. ಕೆಲವರು ಕುಡಿದು ಗಾಡಿ ಓಡಿಸ್ತಾರಂತೆ. ನಾವೂ ಕೂಡ ಯಾವತ್ತೂ ಎಲ್ಲೆಂದರಲ್ಲಿ ರಸ್ತೆ ದಾಟಬಾರದು ಮತ್ತು ದಾಟುವಾಗ ತಾಳ್ಮೆಯಿಂದ ಎರಡು ಬದಿಯಲ್ಲಿ ವಾಹನಗಳನ್ನು ಗಮನಿಸಿ ದಾಟಬೇಕು. ಈಗ ನಡೆದ ಯಾಕ್ಸಿಡೆಂಟ್ ನಲ್ಲಿ ಬಸ್ಸಿನ ಡ್ರೈವರ್ ಅವರದ್ದೂ ತಪ್ಪಿದೆ, ಎಲ್ಲಿ ಬೇಕಂದರಲ್ಲಿ ಬಸ್ಸು ನಿಲ್ಲಿಸಬಾರದು ತಾನೆ...? ಎಲ್ಲಿ ಬಸ್ ಸ್ಟ್ಯಾಂಡ್ ಇದೆಯೋ ಅಲ್ಲೇ ನಿಲ್ಲಿಸಬೇಕು. ರಸ್ತೆ ಮದ್ಯದಲ್ಲೇ ಬಸ್ ನಿಲ್ಲಿಸಿದರೆ ಅದೂ ತಪ್ಪು. ಹರೀಶನ ಮುಖ ನೋಡಿದ ಮಾನ್ಯ ಥ್ಯಾಂಕ್ಸ್ ಅಂದಳು. (ಮುಂದುವರಿಯುವುದು).
...............................ಡಾ. ಗುರುರಾಜ್ ಇಟಗಿ
ಸಂಶೋಧಕರು ಮತ್ತು ಆಪ್ತ-ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು, ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
mob : +91 94837 16589
********************************************

Ads on article

Advertise in articles 1

advertising articles 2

Advertise under the article