ಸಂಚಾರಿಯ ಡೈರಿ : ಸಂಚಿಕೆ - 5
Friday, August 12, 2022
Edit
ಸಂಚಾರಿಯ ಡೈರಿ : ಸಂಚಿಕೆ - 5
ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ
ಬೀಹೂ ಹಬ್ಬ ಬಂದರೆ ಸಾಕು ಅಸ್ಸಾಂ ರಾಜ್ಯದಲ್ಲಿ ಖುಷಿಯೋ ಖುಷಿ! ನೃತ್ಯ , ಆಟ , ಓಟಗಳ ಜತೆ-ಜತೆಗೆ ತಿಂಡಿ ತಿನಿಸುಗಳ ವೈಭೋಗಕ್ಕೂ ಕೊರತೆ ಇರೋದಿಲ್ಲ. ಅಂತಹ ತಿನಿಸುಗಳಲ್ಲಿ ದೊಡ್ಡ ಸ್ಥಾನ ಪಡೆದಿರುವುದೇ ಈ 'ಪೀಠಾ'.... ಪೀಠಾ ಎಂದರೆ ಅಕ್ಕಿಯಿಂದ ತಯಾರಿಸಲಾದ ತಿಂಡಿ. ಇವು ವಿಶಿಷ್ಟ ಎನಿಸಿಕೊಂಡಿರುವುದು ಇವುಗಳ ಆಕಾರ ಹಾಗೂ ರುಚಿಗಾಗಿ...!
ಈ ಪೀಠಾ ತಯಾರಿಸಲು ಬೇಕಾದ ಮೂಲ ವಸ್ತು ಎಂದರೆ ಅಕ್ಕಿ ಮತ್ತು ಬೆಲ್ಲ. ಈ ಅಕ್ಕಿಯನ್ನ ಪುಡಿಮಾಡುವ ವಿಧಾನವೂ ವಿಶೇಷ. ದಕ್ಷಿಣ ಭಾರತದ ರೀತಿಯಲ್ಲಿ ಒರಳು , ಬೀಸುವ ಕಲ್ಲಾಗಲೀ ಇದಕ್ಕೆ ಉಪಯೋಗವಾಗುವುದಿಲ್ಲ. ಇಲ್ಲಿ ಬಳಕೆಯಾಗೋದು 'ಢೆಕ್ಕಿ' ಎಂಬ ಸಾಧನ.ಈ ಢೆಕ್ಕಿ ಎನ್ನುವುದು ಮರದಿಂದ ತಯಾರಿಸಿದ ಸಾಧನ. ಒಂದು ಉದ್ದನೆಯ ಮರದ ತುಂಡಿನ ತುದಿಗೆ ಕಬ್ಬಿಣ ಅಥವಾ ಮರದ ತುಂಡನ್ನು ಸಿಕ್ಕಿಸಿರುತ್ತಾರೆ. ತುಳಿದಾಗ ತುದಿ ಚಿಕ್ಕದಾಗಿ ರಚಿತವಾದ ಹೊಂಡದ ಮೇಲೆ ಬೀಳುವಂತಿರುತ್ತದೆ. ಅದನ್ನ ಚೌಕಾಕಾರದ ಸೆಂಟರ್‌ನಲ್ಲಿ (ನಮ್ಮ seesaw ರೀತಿಯಲ್ಲಿ) ಮೆಟ್ಟಿದಾಗ ಒಂದು ಭಾಗ ಮೇಲೆ ಇನ್ನೊಂದು ಭಾಗ ಹೊಂಡದಲ್ಲಿರುವ ಅಕ್ಕಿಯನ್ನು ಕುಟ್ಟಿ ಪುಡಿಮಾಡುತ್ತದೆ.
ಢೆಕ್ಕಿಯಲ್ಲಿ ಪುಡಿಯಾದ ಅಕ್ಕಿಯನ್ನ ಕಾವಲಿಯ ಮೇಲೆ ಸ್ವಲ್ಪ ಸ್ವಲ್ಪವೇ ಹರಡುತ್ತಾರೆ , ಅದಕ್ಕೆ ಬೆಲ್ಲ, ಎಳ್ಳಿನ ಪುಡಿ ಹಾಕಿ ಚಪಾತಿಯನ್ನ ರೋಲ್ ಮಾಡಿದಂತೆ ಮಾಡುತ್ತಾರೆ. ಇದೇ ಥರಾ ಎಲ್ಲವನ್ನೂ ಪೇರಿಸಿಟ್ಟು ಬಹಳಷ್ಟು ದಿನಗಳವರೆಗೆ ಸಂಗ್ರಹಿಸಿಟ್ಟುಕೊಂಡು ಬೆಳಗ್ಗಿನ ತಿಂಡಿಗೆ ಇದನ್ನೇ ಬಳಸಿಕೊಳ್ಳುತ್ತಾರೆ.
ಇನ್ನೂ ಇದೇ ಹಿಟ್ಟಿಗೆ , ಬೆಲ್ಲದ ನೀರು ಸೇರುಸಿ ಕಜ್ಜಾಯದಂತೆ ತಟ್ಟಿ ಎಣ್ಣೆಯಲ್ಲಿ ಕರಿದರೆ 'ತೇಲ್ ಪೀಠಾ' ಎಂದು ಕರೆಯುತ್ತಾರೆ....
ಮುಂದಿನ ವಾರ ಇನ್ನಷ್ಟು ಹೊಸ ಊರುಗಳ ಹೊಸ ಸುದ್ದಿಗಳೊಂದಿಗೆ ಮತ್ತೆ ಸಿಗುತ್ತೇನೆ... ಬಾಯ್....
ಕಾಡಂಗಾಡಿ , ಮಂಚಿ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
Mob : 9663135413
******************************************