-->
ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - 31

ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - 31

ಜಗಲಿಯ ಮಕ್ಕಳಿಗೆ 
ಅಕ್ಕನ ಪತ್ರ - 31


ನಮಸ್ತೆ ಮಕ್ಕಳೇ,
     ಅಮೃತ ಭಾರತಿಯ ಮಡಿಲಿನಲ್ಲಿ ನಾವೆಲ್ಲರೂ ಬೆಚ್ಚಗಿದ್ದೇವೆ... ಖುಷಿಯಾಗಿದ್ದೇವೆ ಅಲ್ವಾ?
     ತಾಯಿಯ ಪ್ರೀತಿಯು ಕೊಡುವ ಭಾವ ಎಂದಿಗೂ ಆಪ್ತ...! ಅಮ್ಮನನ್ನು ಹೊರತುಪಡಿಸಿದರೆ ಈ ಬಂಧನಕ್ಕೆ ಮತ್ಯಾರೂ ಸರಿ ಹೊಂದಲಾರರು ಅಲ್ವಾ ? ಮನೆಯಲ್ಲಿ ಅಪ್ಪ, ಅಮ್ಮ, ಅಜ್ಜ, ಅಜ್ಜಿ.. ಹೀಗೆ ಹಿರಿಯರೆಲ್ಲರ ಅಕ್ಕರೆಯ ಮಡಿಲಿನಿಂದ ಶಾಲೆಯ ಮಡಿಲಿಗೆ ಸರಿದ ದಿನ ನಿಮಗೆ ನೆನಪಿದೆಯೇ...? ನಿಮ್ಮ L.K.G ಅಥವಾ ಒಂದನೆಯ ತರಗತಿಯ ಮೊದಲ ದಿನಗಳು.... ಆ ದಿನಗಳಲ್ಲಿ ಅಮ್ಮನ ಪಾತ್ರ ನಿರ್ವಹಿಸಿದ ಶಿಕ್ಷಕರ ನೆನಪಿದೆಯೇ...? ಶಾಲೆಗೆ ಬರಲೊಲ್ಲದ ಕೆಲವರ ಮುಖದಲ್ಲೀಗ ನಗು ಮೂಡಿರಬಹುದು. ಇಲ್ಲದ ಹೊಟ್ಟೆ ನೋವು, ತಲೆನೋವು ಗಳ ನೆಪ ಹೇಳಿ ಶಾಲೆಯನ್ನು ತಪ್ಪಿಸಿಕೊಂಡ ದಿನಗಳೂ....!
     ಅಬ್ಬಾ...! ಮೊದಲ ದಿನ ಕೆಲವರಿಗೆ ಸಂಭ್ರಮ... ಇನ್ನು ಕೆಲವರಿಗೆ ಹೇಳಲಾಗದ ವೇದನೆ.....! ಕ್ರಮೇಣ ಶಾಲೆಯೆಂಬ ಇನ್ನೊಂದು ಮನೆ ನಮಗೆ ಒಗ್ಗಿಕೊಂಡಂತೆ... ಅಲ್ಲಿನ ಗುರುವೃಂದದವರೂ ನಮ್ಮವರೆನ್ನುವ ಭದ್ರತೆಯ ಭಾವ... ಮಾತೃ ಪ್ರೇಮವನ್ನು ಕೊಡುವ ಎಲ್ಲ ಸಂಬಂಧಗಳೂ ನೆನಪಾದಾಗಲೆಲ್ಲ ಬದುಕಿಗೆ ಸಂಭ್ರಮದ, ಸಮಾಧಾನ....
     ನಮಗೆಲ್ಲರಿಗೂ ಹೆಚ್ಚಿನ ಗುರುವೃಂದದವರು ಬೇರೆ ಬೇರೆ ಕಾರಣಗಳಿಗಾಗಿ ಇಷ್ಟ ಆಗ್ತಾರೆ ಅಲ್ವಾ ? ಮೊದಲಿದ್ದ ಗೌರವ ಕಾಲಘಟ್ಟದೊಳಗೆ ವಿಭಿನ್ನವಾಗಿ ಗೋಚರಿಸಿದರೂ, ಸುಂದರವಾದ, ಮಾದರಿ ಗುರುಪರಂಪರೆಯನ್ನು ಹೊಂದಿದ ಪವಿತ್ರ ನಾಡು ನಮ್ಮದು. ಇತ್ತೀಚಿನ ದಿನಗಳಲ್ಲಿ ಮಕ್ಕಳು ಮತ್ತು‌ ಶಿಕ್ಷಕರ ಬಾಂಧವ್ಯಗಳಿಗೂ ಬದಲಾವಣೆಯ ಗಾಳಿ ಬೀಸಿದೆ. ಪ್ರೀತಿ, ಆತ್ಮೀಯತೆ ನಮ್ಮ ನಿರೀಕ್ಷೆಯೊಳಗೆ ಬಂಧಿಯಾಗಿದೆ. ಹಿರಿಯರನ್ನು ನೋಡಿ ಎರಡು ಕರಗಳನ್ನು ಜೋಡಿಸುವ ವಿನೀತ ಭಾವವೂ‌ ಕಡಿಮೆಯೇ ಎನ್ನಬಹುದು. ನಮ್ಮ ನೇರಕ್ಕೆ ಅಳೆಯುವ ಮನಸ್ಥಿತಿ.
     ಕೊರೋನಾ ಸಾಂಕ್ರಾಮಿಕದ ನಂತರ ಮತ್ತೆ ಮೊದಲಿದ್ದ ಹಾಗೆ ಪಠ್ಯೇತರ ವಿಚಾರಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶಗಳು... ಜಗಲಿಯಲ್ಲಿ ಸಕ್ರಿಯವಾಗಿರುವ ಎಲ್ಲ ಮಕ್ಕಳೂ ಪ್ರತಿಭಾನ್ವಿತರು... ಈಗ ನಮಗೆ ಜವಾಬ್ದಾರಿ... ಮಾಧ್ಯಮಗಳಿಲ್ಲದೆ ಇಂತಹ ಹೊಸ ವಿಚಾರಗಳನ್ನು ಕಲಿಯುವ ಅವಕಾಶಗಳಿಂದ ವಂಚಿತರಾದ ನಮ್ಮ ಗೆಳೆಯ ಗೆಳತಿಯರಲ್ಲಿಯೂ ಅಪೂರ್ವವಾದ ಪ್ರತಿಭೆಗಳಿರಬಹುದು. ಶಿಕ್ಷಕರು ಶಾಲೆಯಲ್ಲಿ ಬಹಳಷ್ಟು ಕೇಳಿಕೊಂಡರೂ ಯಾವುದರಲ್ಲೂ ಆಸಕ್ತಿ ಇಲ್ಲದೆ, ಕಲಿಯುವ ಕುತೂಹಲವನ್ನು ಹೊಂದಿರದ ಮಕ್ಕಳಿರಬಹುದು. ಅವರನ್ನೆಲ್ಲ ಕಲಿಕೆಯೊಳಗೆ ತರಬೇಕಿದೆ. ಭಾಷಣ, ಪ್ರಬಂಧ, ಚಿತ್ರಕಲೆ, ಹಾಡು, ನೃತ್ಯ.... ಹೀಗೆ ಇನ್ನೂ ಅನೇಕ ಕ್ಷೇತ್ರಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಾಗ ಏಕತಾನತೆ ಕಡಿಮೆಯಾಗಿ ಲವಲವಿಕೆ ಮೂಡುತ್ತದೆ. ಅವಕಾಶಗಳು ಬಂದಾಗ ಸಮರ್ಪಕವಾಗಿ ಉಪಯೋಗಿಸಿಕೊಂಡು, ನಮ್ಮ ಜೊತೆಗೆ ಇತರರನ್ನೂ ಬೆಳೆಸುವ ವಿಶಾಲತೆಯನ್ನು ಮೂಡಿಸಿಕೊಳ್ಳೋಣ. ಭಾವನೆಗಳಿಲ್ಲದೆ ವ್ಯವಹರಿಸುವ ಯಂತ್ರಗಳಾಗಿರುವವರಲ್ಲಿ ಹೊಸ ಚೈತನ್ಯ ಮೂಡಿಸಿ, ಅವರೊಳಗಿನ ಸಾಧ್ಯತೆ, ಸಾಮರ್ಥ್ಯ, ಪ್ರತಿಭೆಗಳು ಅನಾವರಣಗೊಳ್ಳಬೇಕಿದೆ.
     ನಮಗೇ ಅರಿವಿಲ್ಲದ ನಮ್ಮನ್ನು ಪರಿಚಯಿಸಿ ನಮ್ಮ ಅಸ್ತಿತ್ವವನ್ನು ಭದ್ರಗೊಳಿಸುವಲ್ಲಿ ನಿಸ್ವಾರ್ಥವಾಗಿ ತೊಡಗಿಸಿಕೊಂಡಿರುವ ಗುರುಬಳಗದವರನ್ನು ಪ್ರೀತಿ, ಗೌರವದಿಂದ ಸ್ಮರಿಸೋಣ. ಜಗಲಿಯಲ್ಲಿ ಕುಳಿತುಕೊಂಡು ನಿಮ್ಮಲ್ಲಿ ಮಾತನಾಡಿದರೆ ಏನೋ ಸಮಾಧಾನ. ನಿಮ್ಮ ಸ್ಪಂದನೆಯೂ ಅಷ್ಟೇ ಪ್ರೀತಿಯನ್ನು ತುಂಬಿಕೊಂಡಿರುತ್ತದೆ. ಧನ್ಯವಾದಗಳು ನಿಮಗೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂತಸದ ಕ್ಷಣಗಳನ್ನು ಹೊತ್ತು ಬಂದ ಪತ್ರಗಳೆಲ್ಲವೂ ತಲುಪಿವೆ. ನಾವೆಲ್ಲರೂ ಓದಿ ಖುಷಿಪಟ್ಟೆವು.
     ಈ ದಿನದ ಪತ್ರ ಓದಿದ ನಿಮಗೇನನ್ನಿಸಿತು?ಬರೆದು ಕಳಿಸ್ತೀರಲ್ಲ. ಆರೋಗ್ಯ ಜೋಪಾನ. ಮುಂದಿನ ಪತ್ರದಲ್ಲಿ ಮತ್ತೆ ಭೇಟಿಯಾಗೋಣ. ಅಲ್ಲಿಯವರೆಗೆ ಅಕ್ಕನ ನಮನಗಳು.
................................... ತೇಜಸ್ವಿ ಅಂಬೆಕಲ್ಲು
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
****************************************


Ads on article

Advertise in articles 1

advertising articles 2

Advertise under the article