-->
ಅಕ್ಕನ ಪತ್ರ - 29 ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 29 ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 29 ಕ್ಕೆ
ಮಕ್ಕಳ ಉತ್ತರ : ಸಂಚಿಕೆ - 1


         ಮಕ್ಕಳ ಜಗಲಿಯಲ್ಲಿ......... ಮಕ್ಕಳಿಗೆ ಬಹಳ ಆಪ್ತವಾದ ತೇಜಸ್ವಿ ಅಂಬೆಕಲ್ಲು ಇವರು ಬರೆಯುತ್ತಿರುವ ಅಕ್ಕನ ಪತ್ರ ವಿದ್ಯಾರ್ಥಿಗಳಲ್ಲಿ ಕಾಳಜಿಯನ್ನು ಮೂಡಿಸುವ ಪ್ರಯತ್ನವಾಗಿದೆ. ಓದುವ ಅಭಿರುಚಿ ಹಾಗೂ ಬರೆಯುವ ಕೌಶಲ್ಯ ಬೆಳೆಸಬೇಕೆನ್ನುವುದು ಮಕ್ಕಳ ಜಗಲಿಯ ಉದ್ದೇಶ...... ಜಗಲಿಯಲ್ಲಿ ಅನೇಕ ಮಕ್ಕಳು ನಿರಂತರವಾಗಿ ಬರೆಯುತ್ತಿದ್ದು ಬರೆಯುವ ಇನ್ನಷ್ಟು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ. ವಿದ್ಯಾರ್ಥಿಗಳ ಸ್ವ- ಅನಿಸಿಕೆಯನ್ನು ಭಾವನಾತ್ಮಕವಾಗಿ ಬರೆದು ಕಳುಹಿಸಿದ ಪತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ ........



      ನಮಸ್ತೇ ಅಕ್ಕ..... ನಾನು ಶ್ರಾವ್ಯ. ಬದುಕು ಸಂಭ್ರಮವಾಗುವುದು ಯಾವಾಗ....? ನೀವು ಕೇಳಿದ ಈ ಒಂದು ಪ್ರಶ್ನೆ ಯ ಕುರಿತಾಗಿ ಈ ದಿನಗಳಲ್ಲಿ ಹೆಚ್ಚಿನ ಚಿಂತನೆಯ ಅಗತ್ಯವಿದೆ. ನಾವು ನಮ್ಮ ತನವನ್ನು ದೂರವಾಗಿಸಿ , ಬೇರಾವುದೋ ನಿರ್ಜೀವ ವಸ್ತು, ಚಟಗಳಿಗೆ ದಾಸರಾಗುತ್ತಿದ್ದೇವೆ. ನಮ್ಮನ್ನು ನಾವು ಕಳೆದುಕೊಳ್ಳುತ್ತಿದ್ದೇವೆ..... ನಮ್ಮ ಖುಷಿ ಸಂತೋಷವನ್ನು ಒಳ್ಳೆಯ ವಿಚಾರ ಗಳಲ್ಲಿ ಕಂಡುಕೊಂಡಾಗ ಬದುಕು ಸಂಭ್ರಮವಾಗಬಹುದು. ಉತ್ತಮ ಅವಕಾಶ ಒಳ್ಳೆಯ ದಾರಿ ಸದಾ ನಮ್ಮ ಮುಂದಿರುತ್ತದೆ. ಅದು ನಮ್ಮದಾಗಬೇಕು ಎಂದಾದಲ್ಲಿ ನಮ್ಮ ಆಯ್ಕೆಯೂ ಉತ್ತಮವಾಗಿರಬೇಕು. ನನ್ನಲ್ಲಿರುವ ಹವ್ಯಾಸವೆಂದರೆ ಪುಸ್ತಕ ಓದುವುದು, ಇದು ನನಗೆ ಖುಷಿ ನೀಡುತ್ತದೆ. ಯಾವುದೇ ಪುಸ್ತಕ ಇರಲಿ ಒಮ್ಮೆ ಓದಲಾರಂಭಿಸಿದ ಮೇಲೆ ನಮ್ಮನ್ನು ಅದರತ್ತ ಸೆಳೆದುಬಿಡುತ್ತದೆ. ನಾನೇನು ಹೆಚ್ಚು ಪುಸ್ತಕ ಓದಿಲ್ಲ ಆದರೆ ಇನ್ನೂ ಓದಬೇಕೆಂಬ ಹಂಬಲ ನನಲ್ಲಿ ವೃದ್ಧಿಯಾಗಿದೆ. ಪುಸ್ತಕ ಓದುವುದರಿಂದ ಒಳ್ಳೆಯ ವಿಚಾರಗಳನ್ನು ಗ್ರಹಿಸುವ ಅವಕಾಶ ಇರುತ್ತದೆ.
         ಹವ್ಯಾಸಗಳೇ ಹಾಗೇ ಒಮ್ಮೆ ನಮ್ಮನ್ನು ಸೇರಿಕೊಂಡರೆ ನಾವೇ ಬೇಡವೆಂದರೂ ಅದು ನಮ್ಮನ್ನು ಬಿಡುವುದಿಲ್ಲ. ಹೀಗಿರುವಾಗ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಂಡಾಗ ಅದನ್ನು ನಮ್ಮಿಂದ ದೂರವಿಡುವ ಚಿಂತೆ ಇರುವುದಿಲ್ಲ. ಬದುಕು ಇತ್ತೀಚಿನ ದಿನಗಳಲ್ಲಿ ಯಾಂತ್ರಿಕತೆಯತ್ತ ವಾಲುತ್ತಿದೆ. ನಮ್ಮನ್ನು ಯಾಂತ್ರಿಕತೆಯೆಡೆ ತಳ್ಳುವ ಮೊಬೈಲ್ - ಟಿ.ವಿ ಜಾಲತಾಣಗಳಿಂದ ಒಂದೆರಡು ಹೆಜ್ಜೆ ಹಿಂದೆ ಸರಿಯೋಣ. ನಮ್ಮನ್ನು ಸದಾ ಖುಷಿಯಾಗಿರಿಸುವ ಎಷ್ಟೋ ವಿಚಾರಗಳು ಕಲೆಯ ಜೊತೆಗಿದೆ, ಪ್ರಕೃತಿಯ ಜೊತೆಗಿದೆ. ಅವುಗಳ ಜೊತೆ ಹೆಚ್ಚಿನ ಸಂಬಂಧ ಬೆಳೆಸೋಣ..... ಸದಾ ಒಳ್ಳೆಯ ವಿಚಾರ ಪ್ರಸ್ತಾಪಿಸುವ ಅಕ್ಕನಿಗೆ ಧನ್ಯವಾದ...
................................................... ಶ್ರಾವ್ಯ
ದ್ವಿತೀಯ ಪಿಯುಸಿ
ಶ್ರೀ ರಾಮ ವಿದ್ಯಾಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************



       ಮಕ್ಕಳ ಜಗಲಿಯ ಎಲ್ಲಾ ಪ್ರೀತಿ ಪಾತ್ರರಿಗೂ ಆತ್ಮೀಯ ಶುಭ ನಮನಗಳು.... ನಾನು ಪ್ರಿಯ,  
ಅಕ್ಕ..... ಬಾಲ್ಯದ ಹವ್ಯಾಸಗಳ ಮಾತು - ಕಥೆಗಳ ಜೊತೆಗಿನ ನಿಮ್ಮ ಇಂದಿನ ಪತ್ರ ತುಂಬಾ ಸೊಗಸಾಗಿದೆ.... ನೀವು ಒಳ್ಳೆಯ ಹವ್ಯಾಸಿಗಳು ಹಾಗೂ ಯಾವ ಹವ್ಯಾಸಗಳನ್ನು ರೂಡಿಸಿಕೊಳ್ಳದವರ ಬಗ್ಗೆ ತಿಳಿಸಿದ್ದೀರಿ... ನಾನು ಕೂಡಾ ಕೆಲವು ಒಳ್ಳೆಯ ಹವ್ಯಾಸಗಳನ್ನು ಚಿತ್ರಕಲೆ, ಪ್ರಬಂಧ , ಕ್ರಾಫ್ಟ್, ಭಾಷಣ, ಓದುವ ಹಾಗೂ ಬರೆಯುವ ಹವ್ಯಾಸಗಳನ್ನು ಬೆಳೆಸಿಕೊಂಡಿದ್ದೇನೆ.... ನಾನು ಮನೆಯಲ್ಲಿ ಬಿಡುವಿನ ಸಮಯದಲ್ಲಿ ಪುಸ್ತಕವನ್ನು ಓದುತ್ತೇನೆ... ಒಂದು ದಿನ "ಚುರುಕು ಮತಿ" ಎಂಬ ಪುಸ್ತಕವನ್ನು ಓದುತ್ತಿರುವಾಗ "ನಾವು ಪ್ರತಿ ಕೆಲಸವನ್ನು ಮಾಡುವುದಕ್ಕೆ ಮುನ್ನ ಇದು ನನ್ನ ಪಾಲಿನ First, best, must, last ಎಂದೇ ಪರಿಗಣಿಸಬೇಕು" ಹಾಗೂ "ನಾವು ಶೇ.90 ರಷ್ಟು ಪ್ರಯತ್ನ ಪಟ್ಟಾಗ ಕರುಣಾಕರನಾದ ದೇವರು ಶೇ.10 ರಷ್ಟು grace marks ಕೊಟ್ಟು ಕಾಪಾಡುತ್ತಾನೆಂಬ ಸದಾಶಯ ನಮ್ಮಲ್ಲಿರಬೇಕು" ಎಂದಿತ್ತು. ಯಾಕೋ ಈ ಮಾತನ್ನು ನಿಮ್ಮೆಲ್ಲರ ಜೊತೆ ಹಂಚಿಕೊಳ್ಳಬೇಕೆಂದು ಅನಿಸಿತು. ಈ ಮಾತುಗಳು ನಮ್ಮ ಕೆಲಸದ ಬಗೆಗಿನ ಮನಸ್ಥಿತಿಯನ್ನು, ಪ್ರೀತಿಯನ್ನು, ಆಸಕ್ತಿಯನ್ನು ಹೆಚ್ಚಿಸುತ್ತವೆ ಅಲ್ವಾ.... ಅಕ್ಕ.....  ಒಳ್ಳೆಯ ಸಂದೇಶ ನೀಡುವ ಪತ್ರವನ್ನು ಪ್ರತಿ ದಿನಾಲೂ ನಮ್ಮ ಜೊತೆ ಹಂಚಿಕೊಳ್ಳುವ ನಿಮಗೆ ಧನ್ಯವಾದಗಳು...........
................................................... ಪ್ರಿಯ.
ಪ್ರಥಮ ಪಿ.ಯು.ಸಿ
ಸರಕಾರಿ ಪದವಿ ಪೂರ್ವ ಕಾಲೇಜು , ಅಳದಂಗಡಿ.
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
*******************************************




      ನಮಸ್ತೆ ಅಕ್ಕ... ನಾನು ಶುಬಿಕ್ಷಾ. ನಾನು ಚೆನ್ನಾಗಿದ್ದೇನೆ... ಹೌದು, ನೀವು ಹೇಳಿದ್ದು ನಿಜ. ಇಂದಿನ ಪರಿಸ್ಥಿತಿ ಹೇಗಾಗಿದೆ ಎಂದರೆ.. ಎಲ್ಲರೂ ಕನಸು ಕಾಣುತ್ತಾರೆ. ಆದರೆ ಅದನ್ನು ನನಸು ಮಾಡುವಲ್ಲಿ ವಿಫಲರಾಗುತ್ತಾರೆ. ಇದಕ್ಕೆ ಮುಖ್ಯ ಕಾರಣವೇ ತಮ್ಮ ಭವಿಷ್ಯದ ಚಿಂತನೆಯನ್ನು ಬಿಟ್ಟು ಕೇವಲ ಕ್ಷಣಿಕ ಸುಖವನ್ನು ಅರಸಿಕೊಂಡು ಕೊನೆಗೆ ಜೀವನವೇ ವ್ಯರ್ಥ ಎಂಬ ನಿರ್ಧಾರಕ್ಕೆ ಬಂದು ಬಿಡುತ್ತಾರೆ. ಸೋಮಾರಿತನ ಹೋಗಲಾಡಿಸುವುದು , ಒಳ್ಳೆಯ ಹವ್ಯಾಸಗಳು ಕೂಡ ನಮಗೆ ಉತ್ತಮ ದಾರಿಯನ್ನು ತೋರಿಸುತ್ತದೆ. ಇವತ್ತು ನೀವು ಹೇಳಿದ ಕಥೆ ಬಹಳ ಚೆನ್ನಾಗಿದೆ. ಮುಂದಿನ ಪತ್ರಕ್ಕಾಗಿ ಕಾತರದಿಂದ ಕಾಯುತ್ತಿರುತ್ತೇನೆ.. ಧನ್ಯವಾದಗಳು
................................................... ಶುಭಿಕ್ಷ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಕೊಡ್ಮಣ್ಣು , 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
*******************************************



    ಪ್ರೀತಿಯ ಅಕ್ಕನಿಗೆ ಸಾನ್ವಿ ಮಾಡುವ ವಂದನೆಗಳು. ನಿಮ್ಮ ಪತ್ರ ನನಗೆ ತುಂಬಾ ಇಷ್ಟವಾಯಿತು. ನೀವು ಹೇಳುತ್ತಿರುವ ಮಾತು ಅಕ್ಷರಶಃ ನಿಜ. ಹಳ್ಳಿ ಕಡೆಗಳಲ್ಲಿ ಇಂತಹ ಕ್ಲಾಸುಗಳಿಗೆ ಹೋಗಲು ಅವಕಾಶವಿರುವುದಿಲ್ಲ. ಆಗ ಅಂಥವರು ಗಿಡಗಳನ್ನು ನೆಡುವ, ಪುಸ್ತಕ ಓದುವ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ನನ್ನ ಅಭಿಪ್ರಾಯ. ಅದರಲ್ಲಿ ನನ್ನ ಹವ್ಯಾಸ ಪುಸ್ತಕ ಓದುವುದು. ಪುಸ್ತಕ ಓದುವುದು ಒಂದು ಒಳ್ಳೆಯ ಹವ್ಯಾಸ. ಪುಸ್ತಕಗಳಿಂದ ನಮಗೆ ವಿಶೇಷ ಜ್ಞಾನ ಲಭ್ಯವಾಗುತ್ತದೆ. ಪುಸ್ತಕ ಓದಿಕೊಂಡು ಹೋದ ಹಾಗೆ ನಮಗೆ ಕುತೂಹಲ ಹೆಚ್ಚಾಗುತ್ತದೆ. ಪುಸ್ತಕ ಓದುವುದರೊಂದಿಗೆ ನಾನು ಒಮ್ಮೊಮ್ಮೆ ಚಿತ್ರಕಲೆ ಹಾಗೂ ಕ್ರಾಫ್ಟ್ ಅನ್ನೂ ಮಾಡುತ್ತೇನೆ. ಹಾಗಾದರೆ ಅಕ್ಕ ಇನ್ನು ಮುಂದಿನ ಪತ್ರದಲ್ಲಿ ಮಾತನಾಡೋಣ. ಇನ್ನು ಮುಂದೆಯೂ ಇಂತಹ ಹಲವು ವಿಷಯಗಳನ್ನೂ ತಿಳಿಸಿಕೊಡಿ. ಧನ್ಯವಾದಗಳು ಅಕ್ಕ......
.......................................... ಸಾನ್ವಿ ಸಿ ಎಸ್ 
5ನೇ ತರಗತಿ 
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************




     ನಮಸ್ತೇ ಅಕ್ಕಾ..... ಪ್ರೀತಿಯ ಅಕ್ಕನಿಗೆ ಸಾತ್ವಿಕ್ ಮಾಡುವ ನಮಸ್ಕಾರಗಳು..... ನಾನು ಕ್ಷೇಮವಾಗಿರುವೆನು. ನಿಮ್ಮ ಪತ್ರವನ್ನು ಓದಿದೆ.
ನೀವು ಹೇಳಿದಂತೆ ನಾವು ಯಾವುದಾದರೂ ಹವ್ಯಾಸ ವನ್ನು ರೂಢಿಸಿ ಕೊಂಡರೆ ನಮಗೆ ಸಮಯ ಕಳೆದು ಹೋದದ್ದು ಗೊತ್ತಾಗುವುದೇ ಇಲ್ಲ..... ನಾವು ಸಮಯವನ್ನು ದುರುಪಯೋಗ ಪಡಿಸದೇ ಸದುಪಯೋಗ ಪಡಿಸಿಕೊಳ್ಳಬೇಕು. ನಮ್ಮ ಸೋಮಾರಿತನವನ್ನು ಬಿಟ್ಟು ಶಾಲೆಯ ಕೆಲಸವನ್ನು ಮಾಡಿದ ಮೇಲೆ ನಮಗೆ ಸಿಕ್ಕಿದ ಸಮಯದಲ್ಲಿ ನಾವು ನಮಗೆ ಸಾಧ್ಯ ಆಗುವಂತಹ ಚಿತ್ರ, ಕಥೆ, ಕವನ, ಕ್ರಾಫ್ಟ್ ಮೊದಲಾದವುಗಳನ್ನು ಮಾಡುವ ಹವ್ಯಾಸವನ್ನು ಇಟ್ಟುಕೊಳ್ಳಬಹುದು. ಆಗ ಅಪ್ಪ,ಅಮ್ಮ ಅವರಿಗೂ ಸಂತಸವಾಗುತ್ತದೆ. ನಮಗೂ ಮುಂದೆ ಯಾವಾಗಲಾದರೂ ನಾವು ಮಾಡಿದ ಕೆಲಸ ನೋಡುವಾಗ ಸಂತಸವಾಗುತ್ತದೆ. ನಾನು ಬಿಡುವಿನ ವೇಳೆಯಲ್ಲಿ ಚಿತ್ರ ಮಾಡುವುದು, ಚೆಂಡೆ ಭಾರಿಸುವುದು, ಪುಸ್ತಗಳನ್ನು ಓದುವ ಅಭ್ಯಾಸವನ್ನು ಇಟ್ಟುಕೊಂಡಿದ್ದೇನೆ..... ಧನ್ಯವಾದಗಳು ಅಕ್ಕಾ...
........................................ ಸಾತ್ವಿಕ್ ಗಣೇಶ್ 
8ನೇ ತರಗತಿ
ಸರಕಾರಿ ಪ್ರೌಢ ಶಾಲೆ ವೇಣೂರು
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************



      ನಮಸ್ತೇ ಅಕ್ಕ. ನಾನು ಬಿಂದುಶ್ರೀ... ಇತ್ತೀಚಿಗೆ ಮನೆಯಲ್ಲಿ ಮೊಬೈಲ್ ಗಳ ಸಂಖ್ಯೆ ಹೆಚ್ಚಾಗಿದೆ. ನಮ್ಮಲ್ಲಿರುವ ಹವ್ಯಾಸಗಳು ತುಂಬಾ ಇದೆ. ಆದರೆ ಅದನ್ನು ಬಿಟ್ಟು ಮೊಬೈಲ್ ಹಾಗೂ ಟಿವಿ ಯನ್ನು ನೋಡುತ್ತೇವೆ. ನಮಗೆ ಇಷ್ಟ ವಾದ ಹವ್ಯಾಸಗಳನ್ನು ನಾವು ಸಂತೋಷದಿಂದ ಮಾಡಿದರೆ ನಮ್ಮ ಮನಸ್ಸಿಗೂ ಖುಷಿ. ಅಕ್ಕಾ ನೀವು ಹೇಳಿದ ಹಾಗೆ ಹವ್ಯಾಸಗಳನ್ನು ಮಾಡಬೇಕು. ನನಗೆ ನೃತ್ಯ ಮಾಡುವುದು ನನ್ನ ನೆಚ್ಚಿನ ಹವ್ಯಾಸ. ಹಾಗೆಯೇ ಇನ್ನು ಕೆಲವು ಹವ್ಯಾಸಗಳು ಇವೆ.....       
............................................ ಕೆ ಬಿಂದು ಶ್ರೀ
ಪ್ರಥಮ ಪಿ.ಯು.ಸಿ
ವಿವೇಕಾನಂದ ಪದವಿ ಪೂರ್ವ ಕಾಲೇಜು , ಪುತ್ತೂರು.
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
*******************************************                       

    
      ಮಕ್ಕಳ ಜಗಲಿಯ ವೃಂದಕ್ಕೆ ಆತ್ಮೀಯ ನಮನಗಳು.... ನಾನು ಪೂರ್ತಿ... ಪ್ರೀತಿಯ ಅಕ್ಕನಿಗೆ ನನ್ನ ನಮನಗಳು..... ಎಂದಿನಂತೆ ಪ್ರೀತಿ, ಕಾಳಜಿ, ಮೌಲ್ಯ ತುಂಬಿರುವ ನಿಮ್ಮ ಪತ್ರಗಳಲ್ಲಿ ಇಂದು ನೀವು ಹವ್ಯಾಸಗಳನ್ನು ಬೆಳೆಸಿಕೊಳ್ಳುವವರ ಜೀವನದ ಖುಷಿಗಳ ಬಗ್ಗೆ , ಹಾಗೂ ಯಾವ ಚಟುವಟಿಕೆಗಳಲ್ಲೂ ಭಾಗಿಯಾಗದೆ ಹಾಗೆಯೇ ಸೋಮಾರಿಯಾಗಿ ಇರುವವರ ಬಗ್ಗೆ ತಿಳಿಸಿದ್ದೀರಿ..... ನಾನು ಕೂಡಾ ಒಳ್ಳೆಯ ಹವ್ಯಾಸಗಳು ಭಾಷಣ, ಚಿತ್ರಕಲೆ, ಸಂಗೀತ, ಯಕ್ಷಗಾನ, ಕವನ ರಚನೆ, ಓದುವುದು, ಬರೆಯುವುದು ಮುಂತಾದವುಗಳನ್ನು ಬೆಳೆಸಿಕೊಂಡಿದ್ದೇನೆ.... ನಾವು ಕಲಿಕೆಯಲ್ಲಿ ಮಾತ್ರವಲ್ಲದೆ ಇತರ ಚಟುವಟಿಕೆ ಗಳಲ್ಲಿ ಭಾಗಿಯಾದರೆ ನಮ್ಮ ಅಭಿರುಚಿ ಹೆಚ್ಚುತ್ತದೆ.....
ಎಂಬುದನ್ನು ನಮ್ಮೆಲ್ಲರಿಗೂ ತಿಳಿಸಿದ್ದಕ್ಕಾಗಿ ಧನ್ಯವಾದಗಳು ಅಕ್ಕ....
ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ...
ವಂದನೆಗಳು........
............................................ ಪೂರ್ತಿ 
9ನೇ ತರಗತಿ.
ಸರಕಾರಿ ಪ್ರೌಢಶಾಲೆ ನಾರಾವಿ.
ದಕ್ಷಿಣ ಕನ್ನಡ ಜಿಲ್ಲೆ , ಬೆಳ್ತಂಗಡಿ ತಾಲೂಕು.
*******************************************



ನಮಸ್ತೆ ಅಕ್ಕ ನಾನು ಸ್ರಾನ್ವಿ ಶೆಟ್ಟಿ. ನಾನು ಚೆನ್ನಾಗಿದ್ದೇವೆ, ನೀವು ಚೆನ್ನಾಗಿದ್ದೀರ ತಾನೆ. ನಿಮ್ಮ ಪತ್ರ ಓದಿದೆ ಅಕ್ಕ. ನಿಜ ಅಕ್ಕ ದಿನವಿಡೀ ಟಿವಿ ಪೋನ್ ಅಂತ ಇರುವ ಬದಲು ಯಾವುದಾದರೂ ಚಟುವಟಿಕೆಯಲ್ಲರುವಂತೆ ನಮ್ಮ ಮನಸ್ಸನ್ನು ಹತೋಟಿಯಲ್ಲಿಡಬೇಕು. ನಾನು ಕೂಡ ಟಿವಿ ನೋಡುತ್ತೇನೆ. ರಜೆ ಇದ್ದಾಗ ಅದು ಸಿಂಚನ್ ಏನೀಮೇಷನ್ ಶೋ, ಅದು ಮಾತ್ರ ಟಿವಿ ಓನ್ ಮಾಡಿ ನಾನು ನನ್ನಷ್ಟಕ್ಕೆ ಡ್ರಾಯಿಂಗ್ ಮಾಡುತ್ತಿರುತ್ತೇನೆ. ಅದು ಮನೆಯಲ್ಲಿ ಒಬ್ಬಳಿಗೆ ಬೋರಾಗುತ್ತೆ ಅದಕ್ಕೆ, ಒಮ್ಮೊಮ್ಮೆ ಮೊಬೈಲ್ ಕೂಡ ನೋಡುತ್ತೇನೆ, ಯಾವುದಾದರೂ ಹಾಡು ಚಿತ್ರ ಹುಡುಕುತ್ತಿರುತ್ತೇನೆ. ನಮ್ಮ ಮನೆಯಲ್ಲಿ 5 ಬೆಕ್ಕು ಇದೆ, 4ನಾಯಿ ಇದೆ, 3ದನ 3ಕರು ಇದೆ, ಟೈಮ್ ಸಿಕ್ಕಿದಾಗ ಇವುಗಳೊಂದಿಗೆ ಮಾತನಾಡುತ್ತೇನೆ, ಅವುಗಳಿಗೆ ತಿಂಡಿ ಕೊಡುತ್ತೇನೆ, ಟೈಲರಿಂಗ್ ಮೆಷಿನಲ್ಲಿ ಸುಮ್ಮನೆ ಸ್ಟಿಚ್ ಮಾಡುತ್ತಿರುತ್ತೇನೆ, ಇವೆಲ್ಲಾ ನನ್ನ ಮನೆಯಲ್ಲಿ ಇರುವಾಗಿನ ಹವ್ಯಾಸಗಳು ಅಕ್ಕ. ಧನ್ಯವಾದ ಅಕ್ಕ
.................................................. ಸ್ರಾನ್ವಿ ಶೆಟ್ಟಿ 
9ನೇ ತರಗತಿ 
ಓಂ ಜನಹಿತಾಯ ಇಂಗ್ಲಿಷ್ ಮೀಡಿಯಂ 
ಸ್ಕೂಲ್ ಗುಡ್ಡೆಯಂಗಡಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************


Ads on article

Advertise in articles 1

advertising articles 2

Advertise under the article