-->
ಹಕ್ಕಿ ಕಥೆ : ಸಂಚಿಕೆ - 54

ಹಕ್ಕಿ ಕಥೆ : ಸಂಚಿಕೆ - 54

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ


               
          ಮಕ್ಕಳೇ ನಮಸ್ತೇ.... ಈ ವಾರದ ಹಕ್ಕಿ ಕಥೆಗೆ ಸ್ವಾಗತ.. ಒಂದು ದಿನ ಬಸ್ ನಲ್ಲಿ ಪ್ರಯಾಣ ಹೊರಟಿದ್ದೆ. ಮಧ್ಯಾಹ್ನದ ಊಟಕ್ಕಾಗಿ ಬಸ್ ಹೈವೇ ಹತ್ತಿರದ ಹೋಟೆಲ್ ಒಂದರ ಬಳಿ ನಿಂತಿತು. ನನಗೂ ಬಹಳ ಹಸಿವೆಯಾದ್ದರಿಂದ ಇಳಿದು ಬೇಗನೇ ಊಟ ಮುಗಿಸಿದೆ. ಇನ್ನೂ ಹಲವಾರು ಮಂದಿ ಪ್ರಯಾಣಿಕರು ಊಟ ಮಾಡುತ್ತಿದ್ದರು. ನಾನು ಮತ್ತೆ ಬಂದು ಬಸ್ಸಿನಲ್ಲಿ ನನ್ನ ಸೀಟಿನಲ್ಲಿ ಕುಳಿತುಕೊಂಡೆ. ಬಸ್ ನಿಂತ ಜಾಗದ ಆ ಕಡೆಗೆ ರಸ್ತೆಯ ಒಂದು ಬದಿ ಪೂರ್ತಿ ಗದ್ದೆಗಳು. ಅದರ ಬದಿಯಲ್ಲಿ ವಿದ್ಯುತ್ ತಂತಿಗಳು. ಒಂದೊಂದೇ ಕಂಬವನ್ನು ಮುಟ್ಟುತ್ತಾ ಹಾದು ಹೋಗಿದ್ದವು. ಹಾಗೇ ನೋಡುತ್ತಿದ್ದಾಗ ಅಲ್ಲೊಂದು ಹಕ್ಕಿ ಕಾಣಿಸಿತು.
       ಸುಮಾರು ಕಾಗೆಯ ಗಾತ್ರದ ಹಕ್ಕಿ. ಅದರೆ ಕಪ್ಪು ಬಣ್ಣವಲ್ಲ. ತಲೆ, ಹೊಟ್ಟೆ, ರೆಕ್ಕೆ, ಬಾಲಗಳೆಲ್ಲ ಆಕರ್ಷಕವಾದ ನೀಲಿಬಣ್ಣ. ಮುಖ, ಕುತ್ತಿಗೆಯ ಭಾಗಗಳಲ್ಲಿ ತಿಳಿ ಕಂದು ಬಣ್ಣ. ಪಕ್ಕನೇ ನೋಡಿದರೆ ನೀಲಿಬಣ್ಣದಲ್ಲಿ ಅದ್ದಿದಂತೆ ಕಾಣುವ ಸುಂದರ ಹಕ್ಕಿ. ಕರ್ನಾಟಕ ಮಾತ್ರವಲ್ಲದೆ, ಆಂಧ್ರಪ್ರದೇಶ, ಒಡಿಶಾ ಮೊದಲಾದ ರಾಜ್ಯಗಳ ರಾಜ್ಯಪಕ್ಷಿ ಇದು. ನವಿಲಿನ ನಂತರ ಸುಂದರವಾದ ನೀಲವರ್ಣ ಹೊಂದಿರುವ ಆಕರ್ಷಕ ಪಕ್ಷಿ ಇದು. ಅದಕ್ಕಾಗಿಯೇ ಇದನ್ನು ಕರ್ನಾಟಕದ ರಾಜ್ಯ ಪಕ್ಷಿ ಎಂದು ಆರಿಸಿದ್ದಾರೆ. ಕಂಠದಲ್ಲಿ ನೀಲಿ ಬಣ್ಣ ಇಲ್ಲವಾದರೂ ಅದ್ಯಾಕೋ ಇದರ ಹೆಸರು ಶಿವನ ಹೆಸರಾದ ನೀಲಕಂಠ ಎಂದಾಗಿದೆ. 
ಹಿಮಾಲಯದಿಂದ ದಕ್ಷಿಣಕ್ಕೆ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಗಳಲ್ಲಿ ಸಾಮಾನ್ಯವಾಗಿ ಸಿಗುವ ಪಕ್ಷಿ ಇದು ಎಂದು ಪಕ್ಷಿ ತಜ್ಷರು ಹೇಳುತ್ತಾರೆ. ಫೆಬ್ರವರಿಯಿಂದ ಮೇ ತಿಂಗಳಿನ ನಡುವೆ ಸಂತಾನಾಭಿವೃದ್ಧಿ ಮಾಡುವ ಈ ಪಕ್ಷಿ ತನ್ನ ಸಂಗಾತಿಯನ್ನು ಆಕರ್ಷಿಸಲು ಗಾಳಿಯಲ್ಲಿ ಮಾಡುವ ಆಕರ್ಷಕ ಹಾರಾಟ ನೋಡುವಂಥದ್ದು ಎಂದು ಕಂಡವರು ಹೇಳುತ್ತಾರೆ. ಹಾಗೆ ಆಕಾಶದಲ್ಲಿ ರೋಲ್ ಮಾಡುವ ಕಾರಣಕ್ಕೇ ಇದರ ಹೆಸರು ಇಂಗ್ಲೀಷಿನಲ್ಲಿ ಇಂಡಿಯನ್ ರೋಲರ್ ಎಂದಾಗಿರಬೇಕು.
       ಕರೆಂಟಿನ ತಂತಿ ಅಥವಾ ಕೊಂಬೆಗಳಲ್ಲಿ ಕುಳಿತು ಗದ್ದೆಗಳಲ್ಲಿ ಹರಿದಾಡುವ ಹಲ್ಲಿ, ಕೀಟ, ಕಪ್ಪೆಗಳನ್ನು ಹಿಡಿದು ತಿನ್ನುವ ಈ ಹಕ್ಕಿ ರೈತನಿಗೆ ಅತ್ಯಂತ ಉಪಕಾರಿ ಎನ್ನುತ್ತಾರೆ. ಕೆಲವೊಮ್ಮೆ ಮೈತುರಿಕೆಯ ನಿವಾರಣೆಗಾಗಿ ಮಣ್ಣಿನಲ್ಲಿ ಹೊರಳಾಟ ಅಥವಾ ಮಣ್ಣಿನ ಸ್ನಾನ ಮಾಡುತ್ತದೆಯಂತೆ. ಮರದ ಪೊಟರೆಗಳು ಅಥವಾ ಕಟ್ಟಡದ ಸಂಧಿಗಳಲ್ಲಿ ಕಡ್ಡಿ, ತರಗೆಲೆಗಳನ್ನು ಜೋಡಿಸಿ ಗೂಡು ಮಾಡಿ ಮೊಟ್ಟೆ ಇಟ್ಟು ಮರಿ ಮಾಡುತ್ತದೆಯಂತೆ. ಬಯಲು ಸೀಮೆ, ಮಲೆನಾಡು, ಕರಾವಳಿ ಭಾಗಗಳಲ್ಲಿ ಎಲ್ಲ ಕಡೆಗೂ ಈ ಹಕ್ಕಿ ಕಾಣಲು ಸಿಗುತ್ತದೆ. ಸಾಮಾನ್ಯವಾಗಿ ಒಂಟಿಯಾಗಿ ತಂತಿಯ ಮೇಲೆ ಕುಳಿತು ನೆಲದ ಮೇಲೆ ಹರಿದಾಡುವ ಜೀವಿಗಳನ್ನು ಗಮನಿಸುತ್ತಾ ಇರುತ್ತದೆ. ನಿಮ್ಮೂರಲ್ಲೂ ಈ ನೀಲಕಂಠ ನೋಡಲು ಸಿಗಬಹುದು.... ಗಮನಿಸ್ತೀರಲ್ಲ..
ಕನ್ನಡದ ಹೆಸರು: ನೀಲಕಂಠ
ಇಂಗ್ಲೀಷ್ ಹೆಸರು: Indian Roller
ವೈಜ್ಞಾನಿಕ ಹೆಸರು: Coracias benghalensis
ಚಿತ್ರ ಕೃಪೆ : ಶಿವಸುಬ್ರಹ್ಮಣ್ಯ
ಛಾಯಾಚಿತ್ರ : ಅರವಿಂದ ಕುಡ್ಲ
ಮುಂದಿನವಾರ ಇನ್ನೊಂದು ಹೊಸ ಹಕ್ಕಿ ಕಥೆಯೊಂದಿಗೆ ಸಿಗೋಣ.. ಬಾಯ್..
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************


Ads on article

Advertise in articles 1

advertising articles 2

Advertise under the article