-->
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 53

ಬದಲಾಗೋಣವೇ ಪ್ಲೀಸ್.....! ಸಂಚಿಕೆ - 53

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
    
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 53
           
         ದೇಶ ಸುತ್ತಿ ನೋಡು - ಕೋಶ ಓದಿ ನೋಡು ಎಂಬ ಪ್ರೇರಕ ಮಾತಿನಂತೆ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಹೊರಟ ಸಂದರ್ಭದಲ್ಲಿ  ಅಗತ್ಯವಾದ ಬಟ್ಟೆ ಹಾಗೂ ದಿನನಿತ್ಯ ಬಳಕೆ ಸಾಮಾನುಗಳನ್ನು ಪಟ್ಟಿ ಮಾಡಿ ಎಲ್ಲವನ್ನು ಸಂಗ್ರಹಿಸಿ ಸೇರಿಸಿದಾಗ ಸುಮಾರು 5 ಬ್ಯಾಗ್ ನಷ್ಟು ಸಾಮಾಗ್ರಿಗಳು ರಾಶಿಬಿದ್ದವು. ಲಗೇಜ್ ನ  ರಾಶಿ ನೋಡಿ "ಇದನ್ನು ಹೇಗೆ ಕೊಂಡು ಹೋಗುವುದು" ಎಂದು ಚಿಂತಾಕ್ರಾಂತನಾಗಿ ಕುಳಿತಿದ್ದಾಗ ಅಪ್ಪ ಬಂದು ತಲೆಯ ನೇವರಿಸಿ ಹೇಳಿದರು" ಮಗಾ , ನೀನು ಹೋಗುತ್ತಿರುವುದು ಪ್ರವಾಸಕ್ಕೆ ಹೊರತು ಭಾರವಾದ ಲಗೇಜು ಹೊತ್ತುಕೊಂಡು ಹೋಗುವುದಕ್ಕಲ್ಲ. ಹಾಗಾಗಿ ಪ್ರವಾಸಿಗನಾಗಿ ಹೋಗು ಹೊರತು ಲಗೇಜುಕಾರನಾಗಿಯಲ್ಲ. ನಿನ್ನ ಗುರಿ ಪ್ರವಾಸಿ ತಾಣಗಳ ಸೌಂದರ್ಯ ಅನುಭವಿಸುವುದೇ ಹೊರತು ನಿನ್ನಲ್ಲಿರುವ ಸೌಲಭ್ಯಗಳನ್ನು ಪ್ರದರ್ಶಿಸುವುದಲ್ಲ. ನಿನ್ನ ಅತೀ ಸೌಲಭ್ಯಕ್ಕಿಂತಲೂ ಅಗತ್ಯತೆಗೆ ಬೇಕಾಗುವ ಕನಿಷ್ಠ ಸಾಮಾನುಗಳನ್ನು ಮಾತ್ರ ಬ್ಯಾಗ್ ನಲ್ಲಿ ತುಂಬಿಸು. ಇಲ್ಲಿ ರಾಶಿ ಬಿದ್ದಿರುವ ಲಗೇಜುಗಳಲ್ಲಿ  ಸರಳ ಪ್ರಯಾಣಕ್ಕೆ ಅಗತ್ಯವಾಗಿರುವ  ಹಾಗೂ ನಿನ್ನ ಬೆನ್ನು ಹೊರಬಹುದಾದಷ್ಟೇ ಭಾರದ ಸಾಮಾಗ್ರಿಗಳನ್ನು ಆಯ್ಕೆ ಮಾಡಿ ತುಂಬಿಸು.  ಉಳಿದವುಗಳ ಬಗ್ಗೆ ಮೋಹ ಬೆಳಸದೆ ಇಲ್ಲೇ ಬಿಟ್ಟುಬಿಡು.  ಆಯ್ಕೆಯ ಗೊಂದಲ ಬೇಡ. ಅಗತ್ಯ ಹಾಗೂ ಅನಗತ್ಯ ಗಳ ವ್ಯತ್ಯಾಸ ಅರಿತು ಆಯ್ಕೆ ಮಾಡು. ಆಗ ಲಗೇಜು ಹಗುರವಾಗಿ ಪ್ರವಾಸವು ಸುಖಕರವಾಗುವುದು. ಇಲ್ಲದಿದ್ದಲಿ ಕೇವಲ ಲಗೇಜು ಹೊರುವುದರಲ್ಲಿ ಹಾಗೂ ಅದನ್ನು ಇತರರ ಪಾಲಾಗದಂತೆ ಕಾಯುವುದರಲ್ಲಿಯೇ ನಿನ್ನ ಪ್ರವಾಸ ಮುಗಿಯುತ್ತದೆ. ಪ್ರವಾಸವು ಪ್ರಯಾಸವಾಗದಿರಲಿ." ಎಂದರು.
      ತಂದೆಯ ಸಲಹೆಯಂತೆ ನನಗೆ  ಅತ್ಯಗತ್ಯವಾದ ಸಾಮಾನುಗಳನ್ನು ಆರಿಸಿ ಕೇವಲ ಒಂದು ಬ್ಯಾಗ್ ಗಾಗುವಷ್ಟು ಹೊಂದಾಣಿಕೆ ಮಾಡಿ ಹಗುರವಾಗಿ ಪ್ರವಾಸಕ್ಕೆ ಹೋದೆ. ಲಗೇಜು ಗಮನ ಬಿಟ್ಟು ಪ್ರವಾಸಕ್ಕೆ ಗಮನ ಕೇಂದ್ರೀಕೃತ ಮಾಡಿ ಸುಖಕರ ಪ್ರಯಾಣವನ್ನು ಹೊಂದಿದೆ.
       ಹೌದಲ್ವ  ಗೆಳೆಯರೇ.... ನಮ್ಮ ಬದುಕೇ ಒಂದು ಪ್ರವಾಸ. ನಾವೆಲ್ಲರೂ ಪ್ರವಾಸಿಗರು. ಬದುಕಿನ ಪ್ರವಾಸದಲ್ಲಿ ಪ್ರಯಾಸ ಪಡದೆ ಮುಂದೆ ಸಾಗಲು ನಾವು ಹೊರಬೇಕಾದ ಲಗೇಜುಗಳನ್ನು ಜಾಗರೂಕರಾಗಿ ಆರಿಸಬೇಕಾಗಿದೆ. ಪ್ರಯಾಸಕರ ಲಗೇಜುಗಳೆಂದರೆ ಅತ್ಯಾಸೆ  , ಅತಿಯಾದ ಸ್ವಾರ್ಥ, ಪರಿಸರದ ಮೇಲಿನ ಆಕ್ರಮಣ , ಆಸ್ತಿ - ಅಂತಸ್ತಿನ ವ್ಯಾಮೋಹ , ಇನ್ನೊಬ್ಬರ ಬಗ್ಗೆ ಮತ್ಸರ , ಸ್ಟೇಟಸ್ (ಸ್ಥಾನಮಾನ ) , ಅಧಿಕಾರ ವ್ಯಾಮೋಹ, ವೈಭೋಗ ಸೌಲಭ್ಯಗಳಿಗಾಗಿ  ಪರದಾಟ.. ಹೀಗೆ ಪಟ್ಟಿ ಮಾಡಬಹುದು. ಇಂಥಹ ಖರ್ಚು ಭರಿತ ಹಾಗೂ ಮೋಹಭರಿತ ಪ್ರಯಾಸಕರದ ಲಗೇಜುಗಳನ್ನು  ಬಿಟ್ಟು ಪ್ರವಾಸ ಹೋಗಲಾರದ ಸ್ಥಿತಿಯನ್ನು ತಲುಪಿದ ಕಾರಣ ಬದುಕು ಪ್ರಯಾಸವಾಗಿದೆ. ಲಗೇಜುಗಳ ಮೋಹದಿಂದ  ಪ್ರವಾಸದ ಸುಖ ಕಡಿಮೆಯಾಗಿ ಬದುಕಿನ ನೆಮ್ಮದಿ ದೂರವಾಗಿದೆ.  ಆಧುನಿಕ ಸೌಲಭ್ಯಗಳಿಲ್ಲದಿದ್ದರೂ ನಮ್ಮ ಪೂರ್ವಜರ ಬದುಕು ಸುಖಮಯವಾಗಿರಲು ಕಾರಣವಾದ ಅಂಶಗಳನ್ನು ನಾವು ಅರ್ಥೈಸಬೇಕಾಗಿದೆ. ಅವರ ಪ್ರಕೃತಿ ಸಹಜ ಆಡಂಬರ ರಹಿತ  ಸರಳ ಬದುಕಿನ  ಕಾರಣ ಅವರೆಲ್ಲ ನೂರಾರು ವರ್ಷ ಸುಖವಾಗಿ ರೋಗ ರಹಿತರಾಗಿ ಬದುಕಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ನಾವು ಸಹ ಸರಳವಾಗಿ ಲಭ್ಯವಿರುವ ಹಾಗೂ ಬದುಕಿಗೆ ಅವಶ್ಯವಿರುವ ಶಾಂತಿ,  ಪ್ರೀತಿ, ಪರಸ್ಪರ ವಿಶ್ವಾಸ , ಇದ್ದುದರಲ್ಲಿ ಸಂತೃಪ್ತಿ , ಪ್ರಾಕೃತಿಕ ಸಹಜ ಜೀವನ ಶೈಲಿ ,  ಸರಳತೆ , ನಿಸ್ವಾರ್ಥ,   ಆಶೆಯಲ್ಲಿನ  ಮಿತಿ , ಸ್ಟೇಟಸ್ ಗಾಗಿ ಅನಾರೋಗ್ಯಕರ ಸ್ಪರ್ಧೆಗಳಿಂದ ದೂರವಿರುವಿಕೆ... ಇತ್ಯಾದಿ ಭಾರರಹಿತ ಲಗೇಜುಗಳ ಮೂಲಕ ಬದುಕಿನ  ಪ್ರವಾಸ ಹೊರಟರೆ ಬದುಕು  ನೆಮ್ಮದಿಯ ತಾಣದಲ್ಲಿ ನಿಂತು ಸಹಜ ಸುಖವನ್ನು ಅನುಭವಿಸಬಹುದು.  ಸುಖಕರ ಜೀವನ ನಡೆಸಬಹುದು. 
      ಬದುಕಿನ ಪ್ರವಾಸದಲ್ಲಿ ರಾಶಿಗಟ್ಟಲೆ ಲಗೇಜುಗಳ ಭಾರ ಹೊತ್ತು ತಿರುಗಾಡುವ ಅಗತ್ಯವಿಲ್ಲ. ಎಲ್ಲ ಮೂಟೆಗಳ ಹೊತ್ತು ಕಸದ ತೊಟ್ಟಿಯಾಗುವ ಬದಲು ಅಗತ್ಯವಾದ ಮೂಟೆಗಳ ಹೊತ್ತು ರಸದ  ವ್ಯಕ್ತಿತ್ವ ಬೆಳೆಸೋಣ. ನೀವು ಒಳ್ಳೆಯ ಪ್ರವಾಸಿಗರನ್ನು ಗೂಗಲ್ ನಲ್ಲಿ ಹುಡುಕುತ್ತಾ ಹೊರಡಬೇಡಿ. ಅವರೆಂದು ಸಿಗಲಾರರು. ಏಕೆಂದರೆ ಅವರಂತೆ ಬದುಕಲು ಸಾಧ್ಯವಿಲ್ಲ. ನಿಮಗೆ ನೀವೇ ಒಳ್ಳೆಯ ಪ್ರವಾಸಿಗರು. ನೀವೇ ಒಳ್ಳೆಯ ಪ್ರವಾಸಿಗರಾಗಿ. ಇನ್ನೊಬ್ಬರನ್ನು ನೀವು ಹುಡುಕುವ ಬದಲು ನಿಮ್ಮನ್ನೇ ಇನ್ನೊಬ್ಬರು ಹುಡುಕುವಂಥ ಪ್ರವಾಸಿಗರಾಗಿ.  ನಿಮ್ಮ ಭಾವನೆಗಳಿಗೆ ಸ್ಪಂದಿಸದ ಸಹ ಪ್ರವಾಸಿಗರಿಗೆ ನಿಮ್ಮ ಅಮೂಲ್ಯ ಸಮಯ ಮತ್ತು ಪ್ರೀತಿಯನ್ನು ಕೊಟ್ಟು ಕಾಲಹರಣ ಮಾಡಬೇಡಿ. ತಕ್ಷಣವೇ  ಸ್ಪಂದಿಸುವ ಪ್ರವಾಸಿಗರಿಗೆ ಸಮಯ ಮತ್ತು ಪ್ರೀತಿ ನಿರಾಕರಿಸಬೇಡಿ. ಪ್ರವಾಸದ ಮಧ್ಯೆ ಬರುವ  ಕಷ್ಟಗಳಿಗೆ ಹೆದರದೆ ಧೈರ್ಯದಿಂದ ಎದುರಿಸಿ. ಎಲ್ಲಾ ಕ್ಷಣಗಳನ್ನು ಆನಂದಿಸುತ್ತಾ ಮುಂದುವರಿಯಿರಿ. ಬದುಕಿನ ಪ್ರವಾಸವನ್ನು ಪ್ರಯಾಸವಾಗದಂತೆ ಅನುಭವಿಸಲು ಬದಲಾಗೋಣ. ಈ  ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?. 
...........................  ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************

Ads on article

Advertise in articles 1

advertising articles 2

Advertise under the article