
ಜೀವನ ಸಂಭ್ರಮ : ಸಂಚಿಕೆ - 44
Sunday, July 17, 2022
Edit
ಜೀವನ ಸಂಭ್ರಮ : ಸಂಚಿಕೆ - 44
ಮಕ್ಕಳೇ...... ನಿಮಗೆ ಸೂರ್ಯನ ಬಗ್ಗೆ ಎಷ್ಟು ಗೊತ್ತು....? ನಾವೆಲ್ಲ ತಿಳಿದುಕೊಂಡಿರುವುದು ಸೂರ್ಯನಿಂದ ಶಾಖ ಮತ್ತು ಬೆಳಕು ಬರುತ್ತದೆ ಎಂದು. ಈ ಶಾಖ ಮತ್ತು ಬೆಳಕಿನಿಂದ ಆಗುವ ಮಹತ್ವ ಏನು ನೋಡೋಣ.
ನಾವೆಲ್ಲ ಸ್ವಾಭಾವಿಕ ಶಕ್ತಿಯ ಮೂಲ ಸೂರ್ಯ ಎಂದು ತಿಳಿದಿದ್ದೇವೆ. ಅಂದರೆ ನೈಸರ್ಗಿಕವಾಗಿ ದೊರಕುವ ಶಕ್ತಿಯ ಮೂಲ. ಇದು ಹೇಗೆ ಶಕ್ತಿಯ ಮೂಲ....? ನಾವು ಬದುಕಲು ಆಹಾರ ಬೇಕು. ಸಸ್ಯಹಾರಿಗಳಾಗಲಿ, ಮಾಂಸಾಹಾರಿಗಳಾಗಲಿ ನಮಗೆ ಆಹಾರ ಬೇಕು. ಮಾಂಸಕ್ಕೆ ಬಳಸುವ ಪ್ರಾಣಿಗಳು ಸಹ ಸಸ್ಯವನ್ನೇ ಅವಲಂಬಿಸಿವೆ. ಅಂದರೆ ಜೀವಿಗಳು ಬದುಕಲು ಸಸ್ಯಗಳು ಬೇಕು. ಈ ಸಸ್ಯಗಳು ಬದುಕಲು ಸೂರ್ಯನ ಬೆಳಕು ಬೇಕು. ನಾವು ಯಾವುದೇ ಗಿಡವನ್ನು ಬೆಳಕಿನಲ್ಲಿ ಇಡದೆ , ಅದಕ್ಕೆ ಎನ್ ಪಿ ಕೆ ಗೊಬ್ಬರ ಹಾಕಿ , ನೀರು ಹಾಕಿದರೂ ಗಿಡ ಬೆಳೆಯುವುದಿಲ್ಲ. ಎಲೆಯ ಬಣ್ಣ ಬದಲಾಗುತ್ತದೆ. ಸರಿಯಾಗಿ ಬೆಳೆಯುವುದಿಲ್ಲ. ನಾವು ಹೊರಗಿನಿಂದ ನೀಡುವ ಎನ್ ಪಿಕೆ ಅಂದರೆ ಸಾರಜನಕ , ರಂಜಕ ಮತ್ತು ಪೊಟಾಸಿಯಂ ಸಸ್ಯದ ಬೆಳವಣಿಗೆಗೆ ಬೇಕು. ಆದರೆ ಸೂರ್ಯನ ಬೆಳಕು ಬೀಳದಿದ್ದರೆ ಬೆಳೆಯುವುದಿಲ್ಲ. ಸಸ್ಯ ಬೆಳೆಯಲು ತನ್ನ ಆಹಾರ ತಾನೇ ತಯಾರು ಮಾಡಿಕೊಳ್ಳುತ್ತದೆ. ಅದಕ್ಕೆ ಸ್ವಪೋಷಕಗಳು ಎನ್ನುತ್ತೇವೆ. ಅಂದರೆ ತಮ್ಮ ಪೋಷಣೆಯನ್ನು ತಾವೇ ಮಾಡಿಕೊಳ್ಳುತ್ತದೆ. ಗಾಳಿಯಲ್ಲಿ ಕೇವಲ ಆಮ್ಲಜನಕ ಮಾತ್ರ ಇರುವುದಿಲ್ಲ. ಸಾರಜನಕ , ಇಂಗಾಲದ ಡೈಯಾಕ್ಸೈಡ್ ಮತ್ತು ಇಂಗಾಲದ ಮಾನಾಕ್ಸೈಡ್ ಸೇರಿದಂತೆ ಅನೇಕ ಅನಿಲಗಳ ಮಿಶ್ರಣ. ತಮ್ಮ ಆಹಾರವನ್ನು ತಾವೇ ತಯಾರು ಮಾಡಿಕೊಳ್ಳುತ್ತವೆ. ಇದಕ್ಕೆ ದ್ಯುತಿಸಂಶ್ಲೇಷಣೆ ಎನ್ನುತ್ತೇವೆ. ವಾತಾವರಣದಲ್ಲಿರುವ ಇಂಗಾಲದ ಡೈಯಾಕ್ಸೈಡ್ ಅನ್ನು ಸಸ್ಯದ ಎಲೆಗಳು ನೇರವಾಗಿ ಬಳಸುತ್ತದೆ. ಬೇರಿನಿಂದ ನೀರನ್ನು ಹೀರಿ ಕಾಂಡದ ಮೂಲಕ ಎಲೆಗಳಿಗೆ ಬರುತ್ತದೆ. ಸಸ್ಯದ ಎಲೆಗಳು ಹಸಿರು ಬಣ್ಣದಿಂದ ಕೂಡಿವೆ. ಕಾರಣ ಹಸಿರಾದ ಎಲ್ಲಾ ಭಾಗದಲ್ಲೂ ಪತ್ರಹರಿತ್ತು ಇರುತ್ತದೆ. ಇದು ಸೂರ್ಯನ ಕಿರಣ ಹೀರಲು ಸಹಾಯ ಮಾಡುತ್ತದೆ. ಹೀಗೆ ಸೂರ್ಯನ ಬೆಳಕಿನ ಸಹಾಯದಿಂದ ಇಂಗಾಲದ ಡೈಯಾಕ್ಸೈಡ್ ಮತ್ತು ನೀರಿನಿಂದ ಸಸ್ಯಗಳು ಆಹಾರ ತಯಾರಿಸುತ್ತವೆ ಇದನ್ನೇ ದ್ಯುತಿಸಂಶ್ಲೇಷಣೆ ಎನ್ನುತ್ತೇವೆ. ಅಂದರೆ ಸೂರ್ಯನ ಶಕ್ತಿ ಸಸ್ಯದ ಎಲೆಗಳಲ್ಲಿ ಆಹಾರವಾಗಿ ಸೇರುತ್ತವೆ. ಇದನ್ನೇ ಪ್ರಾಣಿಗಳು ತಿನ್ನುತ್ತವೆ. ಸಸ್ಯಹಾರಿಗಳು ಸೇವಿಸುವ ಆಹಾರದಲ್ಲೂ ಸೂರ್ಯನ ಶಕ್ತಿ , ದ್ಯುತಿಸಂಶ್ಲೇಷಣೆ ಮೂಲಕ ಸಸ್ಯಗಳಲ್ಲಿದ್ದು, ಸಸ್ಯಗಳ ಮೂಲಕ ಪ್ರಾಣಿದೇಹ ಸೇರುತ್ತದೆ. ಸಸ್ಯಗಳನ್ನು ಮಾಂಸಾಹಾರಿಗಳು ಸೇವಿಸುವ ಮೂಲಕ ಆ ಸೂರ್ಯನ ಶಕ್ತಿ ಸಸ್ಯಹಾರಿಗಳ ಮೂಲಕ ಮಾಂಸಾಹಾರಿಗಳ ದೇಹ ಸೇರುತ್ತದೆ. ನಾವು ಸೇವಿಸುವ ಎಲ್ಲಾ ಹಣ್ಣು-ಹಂಪಲು, ತರಕಾರಿ ,ದಾನ್ಯ, ಮಾಂಸ , ಮೀನು ಎಲ್ಲದರಲ್ಲೂ ಸೂರ್ಯನ ಶಕ್ತಿಯೇ ಇರುತ್ತದೆ. ನಾವು ಸೇವಿಸುವ ಎಲ್ಲಾ ಆಹಾರದಲ್ಲಿರುವ ಶಕ್ತಿ ಸೂರ್ಯನ ಶಕ್ತಿ. ಇದು ನಿಸರ್ಗದಲ್ಲಿ ಸ್ವಾಭಾವಿಕವಾಗಿ ದೊರಕುತ್ತದೆ.
ಜೀವಿಗಳಲ್ಲಿ ಶೀತ ರಕ್ತ ಪ್ರಾಣಿಗಳು ಮತ್ತು ಬಿಸಿ ರಕ್ತ ಪ್ರಾಣಿಗಳೆಂದು ವರ್ಗೀಕರಿಸುತ್ತೇವೆ. ಹಾಗೆ ಭೂಮಿಯನ್ನು ಉಷ್ಣವಲಯ, ಸಮಶೀತೋಷ್ಣವಲಯ ಮತ್ತು ಶೀತ ವಲಯ ಎಂದು ವರ್ಗೀಕರಿಸುತ್ತೇವೆ. ಇದನ್ನು ನಾವು ಉಷ್ಣತೆಯನ್ನು ಆಧರಿಸಿ ವರ್ಗೀಕರಿಸುತ್ತೇವೆ. ಆ ಉಷ್ಣತೆಗೆ ಅನುಗುಣವಾಗಿ ಸಸ್ಯ ಮತ್ತು ಪ್ರಾಣಿಗಳು ಕಂಡುಬರುತ್ತವೆ. ಅಂದರೆ ಸಸ್ಯ ಮತ್ತು ಪ್ರಾಣಿಗಳಿಗೆ ಬೇಕಾದ ಉಷ್ಣತೆ ಇದೇ ಸೂರ್ಯನಿಂದ ದೊರಕುತ್ತದೆ. ಅಂದರೆ ಸಸ್ಯ ಮತ್ತು ಪ್ರಾಣಿಯ ಅಳಿವು ಉಳಿವು ಸೂರ್ಯನನ್ನೇ ಅವಲಂಬಿಸಿದೆ. ಈ ಭೂಮಂಡಲದಲ್ಲಿ ಸಸ್ಯಗಳು ಮತ್ತು ಪ್ರಾಣಿಗಳು ಬದುಕಲು ಉಷ್ಣತೆ ಬೇಕು.
ಮಳೆಯೂ ಕೂಡ ಸೂರ್ಯನನ್ನೇ ಅವಲಂಬಿಸಿದೆ. ಸೂರ್ಯನ ಶಾಖದಿಂದ ಸಾಗರದ ನೀರು ಆವಿಯಾಗುತ್ತದೆ. ಈ ನೀರಾವಿ ಹಗುರವಾಗಿರುವುದರಿಂದ ಮೇಲೆ ಏರುತ್ತದೆ. ಮೇಲೇರಿದಂತೆ ಶಾಖ ಕಳೆದುಕೊಳ್ಳುತ್ತದೆ. ಶಾಖ ಕಡಿಮೆಯಾದಂತೆ ಘನೀಕರಿಸಿ ಮೋಡವಾಗುತ್ತದೆ. ಈ ಮೋಡ ಚಲಿಸಿ ಇಡೀ ಭೂಮಂಡಲಕ್ಕೆ ಮಳೆ ಸುರಿಸುತ್ತದೆ. ಸೂರ್ಯನ ಶಾಖ ಇಲ್ಲದಿದ್ದರೆ ಮಳೆ ಇರುತ್ತಿರಲಿಲ್ಲ ಅಲ್ಲವೇ.....?
ಈ ಸೂರ್ಯನ ಶಾಖವನ್ನು ನಾವು ಅನೇಕ ವಿಧದಲ್ಲಿ ಬಳಸುತ್ತೇವೆ. ಇದೇ ಸೂರ್ಯನ ಶಾಖದಿಂದ ವಿದ್ಯುತ್ ತಯಾರಿಸುತ್ತೇವೆ. ಸೂರ್ಯ ನವೀಕರಿಸಬಹುದಾದ ಸಂಪನ್ಮೂಲ. ಎಷ್ಟು ಬಳಸಿದರೂ ಮುಗಿಯುವುದಿಲ್ಲ. ಸೂರ್ಯನ ಶಾಖದಿಂದ ವಿದ್ಯುತ್ ತಯಾರಿಸಿ, ಅದನ್ನು ಬ್ಯಾಟರಿಯಲ್ಲಿ ಸಂಗ್ರಹಿಸಿ, ಅನೇಕ ವಿಧದಲ್ಲಿ ಬಳಸುತ್ತೇವೆ. ಇದು ಅಷ್ಟೇ ಅಲ್ಲದೆ ವಿಶ್ವ ಎಂದರೆ ವೈವಿಧ್ಯಮಯ , ವರ್ಣಮಯ ಮತ್ತು ಅದ್ಭುತ ಜಗತ್ತು. ಇದನ್ನು ನೋಡಲು ಬೆಳಕು ಬೇಕು. ಅಂತಹ ಬೆಳಕನ್ನು ಸೂರ್ಯ ನೀಡುತ್ತಿದ್ದಾನೆ. ತಮಗೆಲ್ಲ ಗೊತ್ತಿರುವಂತೆ ಸೂರ್ಯನಲ್ಲಿ ಏಳು ಬಣ್ಣಗಳು ಕೂಡಿರುತ್ತವೆ. ಈ ಸೂರ್ಯನ ಬೆಳಕನ್ನು ಸ್ಪೆಕ್ಟ್ರಮ್ ಮೂಲಕ ಹಾಯಿಸಿದಾಗ ಏಳು ಬಣ್ಣಗಳು ಗೋಚರಿಸುತ್ತದೆ. ಇದನ್ನು ಬೆಳಕಿನ ವರ್ಣವಿಭಜನೆ ಎನ್ನುತ್ತೇವೆ. ಹಾಗಾಗಿ ನಾವು ವಸ್ತುಗಳ ಬಣ್ಣವನ್ನು ಚೆನ್ನಾಗಿ ಗ್ರಹಿಸಲು ಸೂರ್ಯನ ಬೆಳಕು ಬೇಕು. ನಾವು ಎಷ್ಟೋ ವೇಳೆ ಬಟ್ಟೆ ಅಂಗಡಿಗೆ ಹೋದಾಗ, ಕೃತಕ ಬೆಳಕಿನಲ್ಲಿ ಬಟ್ಟೆಯ ಬಣ್ಣ ನೋಡಿ ಮೋಸ ಹೋಗುತ್ತೇವೆ. ಏಕೆಂದರೆ ಕೃತಕ ಬೆಳಕು ಸಹಜ ಬಣ್ಣವನ್ನು ಮರೆಮಾಚುತ್ತದೆ. ನೈಜ ಬಣ್ಣ ತೋರಿಸುವುದು ಸೂರ್ಯನ ಬೆಳಕು ಮಾತ್ರ. ಇದೇ ಕಾರಣಕ್ಕೆ ನಮ್ಮ ಪೂರ್ವಿಕರು ಸೂರ್ಯನನ್ನು ದೇವರೆಂದು ಪೂಜಿಸುತ್ತಿದ್ದರು. ದೇವರೆಂದರೆ ಬೆಳಕು. ಗಾಳಿ , ನೀರು ಮತ್ತು ಆಹಾರ ಮಲಿನವಾಗುತ್ತದೆ. ಆದರೆ ಬೆಳಕು ಮಲಿನವಾಗುವುದಿಲ್ಲ. ಅದಕ್ಕಾಗಿ ಪ್ರತಿಯೊಂದು ವಿಶೇಷ ಸಂದರ್ಭಗಳಲ್ಲಿ ದೀಪ ಬೆಳಗಿಸುತ್ತಾರೆ. ಬೆಳಕು ಎಂದರೆ ಯಾವುದೇ ಮಲಿನವಾಗದೆ ಕತ್ತಲನ್ನು ಓಡಿಸುವುದು ಎಂದರ್ಥ. ಇದಲ್ಲವೇ ಸೂರ್ಯನ ಅದ್ಭುತ ಸಾಮರ್ಥ್ಯ.
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************