
ಜೀವನ ಸಂಭ್ರಮ : ಸಂಚಿಕೆ - 43
Sunday, July 10, 2022
Edit
ಜೀವನ ಸಂಭ್ರಮ : ಸಂಚಿಕೆ - 43
ಮಕ್ಕಳೇ, ನಾವು ನಿಸರ್ಗದ ಕೊಡುಗೆ. ನಿಸರ್ಗ ನಮಗಾಗಿ, ನಮ್ಮ ಬದುಕಿಗಾಗಿ, ಗಾಳಿ , ಬೆಳಕು , ನೀರು , ಹಣ್ಣು , ತರಕಾರಿ , ಆಹಾರ ಧಾನ್ಯ ಮತ್ತು ಹಾಗೂ ಉಷ್ಣತೆಗಾಗಿ ಸೂರ್ಯ ಎಲ್ಲವನ್ನು ನೀಡಿದೆ. ಆದರೂ ನಾವು ಬಡವರಾಗಿ ಬದುಕುತ್ತಿದ್ದೇವೆ. ನಾವು ಶ್ರೀಮಂತರಾಗಿ ಬದುಕಬೇಕು. ಹಾಗಾದರೆ ಯಾವುದರಲ್ಲಿ ಶ್ರೀಮಂತರಾದರೆ ನಮ್ಮ ಬದುಕು ಶ್ರೀಮಂತವಾಗುತ್ತದೆ....? ನೋಡೋಣ ಈ ಲೇಖನ ಓದಿ........
ಮಕ್ಕಳೇ, ಜೀವನದ ಉದ್ದೇಶ ಸುಂದರವಾಗಿ ಮತ್ತು ಸಂತೋಷವಾಗಿ ಬದುಕಬೇಕು. ಸುಂದರವಾಗಿ ಬಾಳಬೇಕಾದರೆ, ನಮ್ಮ ಜೀವನ ಸುಂದರವಾಗಬೇಕು. ಅಂದರೆ ನಾವು ಮಾಡುವ ಎಲ್ಲಾ ಕೆಲಸ ಸುಂದರವಾಗಿರಬೇಕು. ನಮ್ಮ ನೋಟದಲ್ಲಿ ಸೌಂದರ್ಯ ಕಾಣಬೇಕು , ಮಾಧುರ್ಯದ ಧ್ವನಿ ಕೇಳಬೇಕು , ಸುವಾಸನೆ ಸವಿಯಬೇಕು, ರುಚಿರುಚಿಯಾದ ಆಹಾರ ಸೇವಿಸಬೇಕು ಮತ್ತು ಕೈಯಿಂದ ಸುಂದರ ಕೆಲಸ ಮಾಡಬೇಕು. ಆದರೆ ಇಷ್ಟರಿಂದ ಜೀವನ ಸುಂದರ ಆಗುವುದಿಲ್ಲ. ಮನಸ್ಸು ಕೂಡಾ ಸುಂದರವಾಗಿರಬೇಕು. ಸುಂದರ ಮನಸ್ಸು ಒಂದು ಸಂಪತ್ತು. ಮನಸ್ಸು ಸುಂದರವಾಗಿದ್ದರೆ...... ಕಾಣೋದೆಲ್ಲವೂ , ಆಡೋದೆಲ್ಲವೂ , ಮಾಡೋದೆಲ್ಲವೂ ಸುಂದರವಾಗಿರುತ್ತದೆ. ಹಾಗಾಗಿ ನಾವು ಸುಂದರ ಮನಸ್ಸನ್ನು ರೂಪಿಸಿಕೊಳ್ಳಬೇಕು.
ನಮ್ಮ ಹೃದಯದಲ್ಲಿ ಪ್ರೀತಿ, ಪ್ರೇಮ ಮತ್ತು ಸಂತೋಷ ತುಂಬಿರಬೇಕು. ಇವು ನಮ್ಮ ಜೀವನದ ದೊಡ್ಡ ಸಂಪತ್ತು. ಪ್ರೀತಿ , ಪ್ರೇಮ ಮತ್ತು ಸಂತೋಷ ಇರುವ ಕಡೆ ದ್ವೇಷ, ಮತ್ಸರ ಮತ್ತು ಅಸೂಯೆ ಬರಲು ಸಾಧ್ಯವಿಲ್ಲ. ಹಾಗಾದರೆ ಇದಕ್ಕೆ ಅಡ್ಡಿಯಾಗವುದೇನು...? ಸಂತೋಷದ ಅಡ್ಡಿಗೆ ಕಾರಣ, ವಸ್ತುಗಳ ಸಂಚಯ , ಕಂಡಿದ್ದೆಲ್ಲಾ ಬೇಕೆನ್ನುವ ದುರಾಸೆ , ಹಿಂದಿನ ವೈಭವ ಈಗಿಲ್ಲ ಎನ್ನುವ ಚಿಂತೆ , ಹಿಂದಿನ ಕಹಿ ಘಟನೆ ನೆನೆದು ಕೊರಗುವುದು , ಭವಿಷ್ಯದ ಬಗ್ಗೆ ಭಯ ಮತ್ತು ಹೋಲಿಸಿಕೊಳ್ಳುವುದು.
ಒಂದು ಘಟನೆ ನೋಡೋಣ. ಒಬ್ಬ ಹೂವಿನ ವ್ಯಾಪಾರಿ ಒಂದು ಊರಿನಲ್ಲಿದ್ದ. ಆತನ ಬಳಿ ಅನೇಕ ಸುಗಂಧಭರಿತ , ವೈವಿಧ್ಯಮಯ, ವರ್ಣಮಯ ಹೂಗಳಿದ್ದವು. ಒಬ್ಬ ವ್ಯಕ್ತಿ ಹೋಗಿ ವೈವಿಧ್ಯಮಯ, ಸುಗಂಧ ಭರಿತ , ಅನೇಕ ವಿಧದ ಸುವಾಸನೆಯ ಹೂಗಳನ್ನು ಖರೀದಿಸುತ್ತಾನೆ. ಮನೆಗೆ ಸಂತೋಷದಿಂದ ಬರುತ್ತಾನೆ. ಅವುಗಳನ್ನು ಪತ್ನಿಗೆ ನೀಡುತ್ತಾನೆ. ಪತ್ನಿ ಅದರಲ್ಲಿ ಒಂದು ಹೂವನ್ನು ಮುಡಿದು ಆನಂದ ಪಡುತ್ತಾಳೆ. ಉಳಿದ ಹೂಗಳನ್ನು ಅನಂತರ ಮುಡಿಯಲು ನಿರ್ಧರಿಸಿ, ಜೋಪಾನವಾಗಿ ಕಾಪಾಡಲು ನಿರ್ಧರಿಸುತ್ತಾಳೆ. ಆದರೆ ಮುಡಿದ ಹೂವು ಬಾಡುವ ಹೊತ್ತಿಗೆ , ಉಳಿದ ಹೂಗಳೂ ಬಾಡಿರುತ್ತವೆ. ಆಕಾರ ಮತ್ತು ಸುಗಂಧಗಳನ್ನು ಕಳೆದುಕೊಂಡಿರುತ್ತದೆ. ಖರೀದಿಸಿದ ಉದ್ದೇಶ ಈಡೇರಿಕೆ ಅಯಿತೆ......? ಇಲ್ಲ. ಏಕೆಂದರೆ ಈ ಜಗತ್ತಿನ ಎಲ್ಲಾ ವಸ್ತುಗಳು ಇದ್ದ ಹಾಗೆ ಖಾಯಂ ಆಗಿ ಇರೋದಿಲ್ಲ. ಸದಾ ಬದಲಾಗುತ್ತಿರುತ್ತದೆ. ರೂಪ ,ಆಕಾರ ಕಳೆದುಕೊಳ್ಳುತ್ತವೆ. ಕ್ರಮೇಣ ನಶಿಸಿಹೋಗುತ್ತದೆ. ನಾವು ಗಳಿಸಿದ ವಸ್ತು ಬಳಸಿ ಆನಂದಿಸಲಿಲ್ಲ ಎಂಬ ಕೊರಗು ಶುರವಾಗುತ್ತದೆ. ಸಂಪಾದಿಸಿದ ಹಣ ಕೂಡಿಡಲು ಆಯಿತೇ ವಿನಹ ಅನುಭವಿಸಲು ಸಂತೋಷಪಡಲು ಆಗಲಿಲ್ಲ. ಏಕೆ ಹೀಗಾಯಿತು......? ಜ್ಞಾನದ ಕೊರತೆ. ಯಾವುದೇ ವಸ್ತು ಖರೀದಿಸುವಾಗ, ಅದು ಎಷ್ಟು ಹೊತ್ತು ಇರುತ್ತದೆ ಅನ್ನುವ ಜ್ಞಾನವಿದ್ದರೆ , ಹೀಗೆ ಕೂಡಿಡುತ್ತಿರಲಿಲ್ಲ. ಹಾಗಾದರೆ ಖರೀದಿಯ ತತ್ವವೇನು.....? ಯಾವುದೇ ವಸ್ತು ಖರೀದಿಸುವಾಗ , ಕೊರತೆಯಾಗಲಿ , ಹೆಚ್ಚುವರಿಯಾಗಲಿ ಆಗಬಾರದು. ಎಷ್ಟು ಬೇಕು ಅಷ್ಟು ಮಿತವಾಗಿ ಖರೀದಿಸಬೇಕು. ಖರೀದಿಸಿರುವುದನ್ನು ಬಳಸಿ ಅನುಭವಿಸಿ ಸಂತೋಷಪಡಬೇಕು. ಆಗ ಬೇರೊಬ್ಬರು ಆನಂದ ಪಡಲು ವಸ್ತುಗಳು ಇರುತ್ತವೆ. ನಮ್ಮ ಹಣ ಉಳಿತಾಯವಾಗುತ್ತದೆ. ಅದೇ ರೀತಿ ಭೂಮಿ, ಚಿನ್ನ , ಮುತ್ತು , ರತ್ನ ಮತ್ತು ವಜ್ರಗಳಿಗೂ ಕೂಡ. ಜೀವನವೆಂದರೆ ಕೇವಲ ಗಳಿಕೆ ಅಲ್ಲ, ಸಂಗ್ರಹವಲ್ಲ. ಬಳಸಿ ಸಂತೋಷ ಪಡುವುದು. ಆಗ ಇರುವುದನ್ನು ಬಳಸಿ ಸಂತೋಷಪಡುವುದನ್ನು ಕಲಿಯುತ್ತೇವೆ. ಆಗ ನಮಗೆ ಕೊರತೆ ಕಾಣುವುದಿಲ್ಲ.
ನಮ್ಮ ಬಡತನಕ್ಕೆ ಮತ್ತೊಂದು ಕಾರಣ ಹೋಲಿಸಿಕೊಳ್ಳುವುದು. ಒಂದು ವಸ್ತುನ ಪಕ್ಕ ಮತ್ತೊಂದು ವಸ್ತು ಇಟ್ಟಾಗ , ಹೋಲಿಸಿದಾಗ, ಚಿಕ್ಕದಾಗಿ ಅಥವಾ ಕೊರತೆ ಕಾಣುತ್ತದೆ. ಹೋಲಿಸಲಿಲ್ಲ ಎಂದರೆ ಕೊರತೆ ಇಲ್ಲ. ಚಿಕ್ಕದು ಅಲ್ಲ. ದೊಡ್ಡದು ಅಲ್ಲ. ನಾವು ಬಡವರಾಗಬಾರದೆಂದರೆ ಹೋಲಿಸಿಕೊಳ್ಳಬಾರದು. ಹಿಂದಿನ ವೈಭವ ನೆನಪು ಮಾಡಿಕೊಂಡು ಈಗ ಇಲ್ಲ ಎಂದು ಕೊರಗುವುದು , ಹಿಂದಿನ ಕಹಿ ಘಟನೆ ನೆನೆದು ಕೊರಗುವುದು ಸಲ್ಲದು. ಇದು ಆಗಲೇ ಮುಗಿದು ಹೋಗಿರುವುದು. ಮತ್ತೊಮ್ಮೆ ಬರುವುದಿಲ್ಲ. ಅದಕ್ಕಾಗಿ ಕೊರಗುವುದರಲ್ಲಿ ಅರ್ಥವಿಲ್ಲ. ಹಾಗೆ ಭವಿಷ್ಯ ಕುರಿತು ಚಿಂತಿಸುವುದು ತರವಲ್ಲ. ಏಕೆಂದರೆ ಅದು ಇನ್ನೂ ಬಂದಿಲ್ಲ. ಸಂತೋಷವಾಗಿರಬೇಕಾದರೆ ಬುದ್ಧ ಹೇಳಿದಂತೆ, ಈ ಕ್ಷಣದಲ್ಲಿ ವಾಸ್ತವದಲ್ಲಿ ಸುಂದರವಾಗಿ, ಸಂತೋಷವಾಗಿ ಬದುಕಬೇಕು. ಅದೇ ಸಂತೋಷಕ್ಕೆ ಕಾರಣ. ವಾಸ್ತವದಲ್ಲಿ ಏನೇ ಮಾಡಿದರೂ, ಮನಸ್ಸನ್ನು ಸುಂದರವಾಗಿ ಬಳಸಿ ಸಂತೋಷಪಡಬೇಕು. ಮನಸ್ಸಿನಲ್ಲಿ ಬೇರೆ ಏನಾದರೂ ಕಾಡುತ್ತಿದ್ದರೆ ಸಂತೋಷ ಪಡಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲಾ ಮರೆತು ಈ ಕ್ಷಣ ಸಂತೋಷವಾಗಿ ಬಾಳುವುದನ್ನು ರೂಢಿಸಿಕೊಳ್ಳಬೇಕು.
ನಮ್ಮ ಸಂತೋಷಕ್ಕಾಗಿ ನಿಸರ್ಗ ಏನು ಮಾಡಿದೆ.....? ಅದರಿಂದ ನಾವು ಹೇಗೆ ಶ್ರೀಮಂತರಾಗಬಹುದು....? ನೋಡೋಣ . ನಿಸರ್ಗದ ರಮ್ಯ, ಮನೋಹರ, ಅದ್ಭುತ, ವೈವಿಧ್ಯಮಯ ಮತ್ತು ವರ್ಣಮಯ ಜಗತ್ತನ್ನು ನೋಡಿ ಸಂತೋಷ ಪಡಲು ಕಣ್ಣು ನೀಡಿದೆ. ಈ ಅದ್ಭುತ ಸೌಂದರ್ಯ ನೋಡಿ ಕಣ್ಣನ್ನು ಶ್ರೀಮಂತ ಗೊಳಿಸಬೇಕು. ವೈವಿಧ್ಯಮಯವಾದ ಮಧುರವಾದ ಧ್ವನಿ ಕೇಳಿ ಸಂತೋಷ ಪಡಬೇಕು ಹಾಗೂ ಕಿವಿಯನ್ನು ಮಧುರ ಧ್ವನಿಯಿಂದ ಶ್ರೀಮಂತ ಗೊಳಿಸಬೇಕು. ಸುವಾಸನೆಯನ್ನು ಆಘ್ರಾಣಿಸಿ ಮೂಗು ಶ್ರೀಮಂತ ಗೊಳ್ಳಬೇಕು. ರುಚಿಯಿಂದ ನಾಲಿಗೆ ಶ್ರೀಮಂತ ಕೊಳ್ಳಬೇಕು. ಮಧುರ ಮಾತುಗಳನ್ನಾಡಿ ಇರುವ ಸ್ಥಳ ಸ್ವರ್ಗ ಮಾಡಿ ಬಾಯಿ ಶ್ರೀಮಂತ ಗೊಳಿಸಬೇಕು. ಕೈಗಳನ್ನು ಬಳಸಿ ಸುಂದರ ಕೆಲಸ ಮಾಡಿ ಕೈಗಳನ್ನು ಶ್ರೀಮಂತ ಗೊಳಿಸಬೇಕು. ಸುಂದರ ತಾಣಗಳಿಗೆ ನಡೆದು ಸೌಂದರ್ಯವನ್ನು ಸವಿದು ಕಾಲನ್ನು ಶ್ರೀಮಂತ ಗೊಳಿಸಬೇಕು. ಈಗಾಗಲೇ ಅನುಭವ ಲೇಖನದಲ್ಲಿ ಹೇಳಿದಂತೆ, ಜಗತ್ತಿನಲ್ಲಿ ಎಲ್ಲರೂ ಶ್ರೀಮಂತರಲ್ಲ. ಎಲ್ಲರೂ ಬಡವರಲ್ಲ. ಪ್ರತಿಯೊಬ್ಬರೂ ಒಂದು ವಿಷಯದಲ್ಲಿ ಶ್ರೀಮಂತರು. ಉಳಿದ ವಿಷಯದಲ್ಲಿ ಬಡವರೇ. ಆದರೆ ನಾವು ಐಶ್ವರ್ಯಗಳ ಹಿಂದೆ ಬಿದ್ದಿದ್ದೇವೆ. ಒಂದು ಬಂದು ಸೇರುತ್ತಿದ್ದಂತೆ , ಮತ್ತೊಂದು ಆಸೆ ಅದರ ನಂತರ ಮಗದೊಂದು ಆಸೆ. ಇದು ಎಂದೂ ಪೂರ್ಣಗೊಳ್ಳುವುದಿಲ್ಲ. ಜೀವನ ಎಂದರೆ ಅಪೂರ್ಣ. ಜೀವನ ಅಪೂರ್ಣವಾಗಿರಬೇಕಾದರೆ ಅಪೂರ್ಣವನ್ನು ಪೂರ್ಣ ಮಾಡಲು ಸಾಧ್ಯವಿಲ್ಲ. ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದಾದ ಮೇಲೆ, ಪೂರ್ಣಗೊಳಿಸಲು ಪ್ರಯತ್ನಿಸಬಾರದು. ಸಿಕ್ಕಿದ್ದನ್ನು ಬಳಸಿ ಅನುಭವಿಸಿ ಸಂತೋಷಪಡಬೇಕು. ಈ ಅನುಭವಗಳು ನಮ್ಮನ್ನು ಸದಾ ಸಂತೋಷದಲ್ಲಿರುವಂತೆ ನೋಡಿಕೊಳ್ಳುತ್ತದೆ. ಅಂದರೆ ಮನಸ್ಸು , ಪ್ರೀತಿ, ಪ್ರೇಮ , ಸಂತೋಷ ಮತ್ತು ಅನುಭವಗಳೇ ಅಲ್ಲವೇ ಶ್ರೀಮಂತ ಜೀವನ.
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************