-->
ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ : ಸಂಚಿಕೆ- 27

ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ : ಸಂಚಿಕೆ- 27

ಜಗಲಿಯ ಮಕ್ಕಳಿಗೆ 
ಅಕ್ಕನ ಪತ್ರ - 27


                ನಮಸ್ತೆ ಮಕ್ಕಳೇ.... ಮುಂಗಾರಿನ‌ ಅನುಭವ.... ಮಳೆ ಯಾವತ್ತಿದ್ದರೂ.... ಹೊಸದೊಂದು ಖುಷಿ ಅಲ್ವಾ...? ಮಳೆಯ ಜೊತೆಗಿನ ನನ್ನ ನೆನಪುಗಳೆಲ್ಲವನ್ನೂ ಮೆಲುಕು ಹಾಕುತ್ತಾ..... ಸಿಹಿ ಕಹಿಯ ಬದುಕಿನ ಯಾನದಲ್ಲಿ ನಾನು ಬಹಳಷ್ಟು ಸಂಭ್ರಮದಿಂದ ನಿಮ್ಮೊಡನಿದ್ದೇನೆ... 
ನೀವು ಹೇಗಿದ್ದೀರಿ ...?
    ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
    ಕಲ್ಲಾಗು ಕಷ್ಟಗಳ ಮಳೆಯ ವಿಧಿ‌ ಸುರಿಯೆ
    ಬೆಲ್ಲ ಸಕ್ಕರೆಯಾಗು ದೀನ‌ ದುರ್ಬಲರಿಂಗೆ 
    ಎಲ್ಲರೊಳಗೊಂದಾಗು -ಮಂಕುತಿಮ್ಮ
ಬದುಕಿನ ಪಾಠವನ್ನು ಕಗ್ಗಗಳ ಮೂಲಕ ಕಟ್ಟಿ ಕೊಟ್ಟ ಅದ್ವಿತೀಯ ಸಾಹಿತಿ ಡಿ.ವಿ.ಜಿ.
     ಮಳೆಯ ನಡುವೆ ಮನದ ಯೋಚನೆಗೆ ಸುಳಿದು, ಬರೆಹಕ್ಕೆ ಸೆರೆಸಿಕ್ಕ ಡಾll ದೇವನಹಳ್ಳಿ ವೆಂಕಟಪ್ಪ ಗುಂಡಪ್ಪ ಎನ್ನುವ ನನ್ನ ಅತ್ಯಂತ ಪ್ರಿಯವಾದ ವ್ಯಕ್ತಿಯ ಬಗ್ಗೆ ನಿಮ್ಮಲ್ಲಿ ಮಾತನಾಡಬೇಕೆನಿಸಿತು. ಅವರ ಸರಳತೆ ಬೆರಗು ಮೂಡಿಸುವಂತಹದ್ದು.
    ಅವರಿಗೆ ನೊಬೆಲ್, ಜ್ಞಾನಪೀಠ ಪ್ರಶಸ್ತಿಗಳು ಬರಲಿಲ್ಲ... ಆದರೆ ಪ್ರಶಸ್ತಿಗಳನ್ನು ಮೀರಿದ ಶ್ರೇಷ್ಠತೆ ಅವರ ಕೃತಿ ಮಂಕುತಿಮ್ಮನ ಕಗ್ಗಕ್ಕಿದೆ. ಹಾಗಾಗಿ ಡಿ.ವಿ.ಜಿ.ನಮಗಿನ್ನೂ ನೆನಪು. ಜ್ಞಾನದ ಪರ್ವತವೇ ಆಗಿದ್ದ ಡಿ.ವಿ.ಜಿ ಯವರು ಯಾವುದೇ ಪ್ರಶಸ್ತಿ ಸನ್ಮಾನಗಳಿಂದ ದೂರವೇ ಇರುತ್ತಿದ್ದರು. ಅವರ *ಜೀವನ‌‌ ಧರ್ಮಯೋಗ* ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ‌ ಪ್ರಶಸ್ತಿ ಬಂದ ಸಮಯ. ಅಭಿಮಾನಿಗಳು ಪ್ರೀತಿಯಿಂದ ಸನ್ಮಾನವನ್ನು ಏರ್ಪಡಿಸಿದ್ದರು. ಬಹಳ ಮುಜುಗರದಿಂದಲೇ ಒಪ್ಪಿಕೊಂಡರು. ವೇದಿಕೆಯಲ್ಲಿ ನೀಡಿದ ಒಂದು ಲಕ್ಷ ರೂಪಾಯಿಗಳ ಹಣದ ಚೀಲವನ್ನು ಅವರ ಬಳಿಯೇ ಕುಳಿತುಕೊಂಡಿದ್ದ ಸಾಹಿತಿ ನಿಟ್ಟೂರು ಶ್ರೀನಿವಾಸರಾಯರ ಕೈಗಿತ್ತು, ಈ ಹಣವನ್ನು ಗೋಖಲೆ ಸಾರ್ವಜನಿಕ ಸಂಸ್ಥೆಗೆ ಉಪಯೋಗಿಸಿಕೊಳ್ಳಿ ಎಂದು ನಿರಾಳರಾದರು.
      ಇದಾದ ಮರುದಿನ..... ಡಿ.ವಿ.ಜಿ ಯವರ ಮನೆಯ ಪಕ್ಕದ ಅಂಗಡಿಗೆ ಪತ್ರಕರ್ತರೊಬ್ಬರು ಹೋಗಿದ್ದರು. ಅದೇ ಸಮಯದಲ್ಲಿ ಡಿ.ವಿ.ಜಿ ಯವರ ಮನೆಯಿಂದ ಹುಡುಗನೊಬ್ಬ ಒಂದು ಚೀಟಿಯನ್ನು ತಂದು ಅಂಗಡಿಯವನಿಗೆ ಕೊಟ್ಟ. ಅದನ್ನು ಓದಿದ ಅಂಗಡಿಯವನು, "ಸರಿ.ಕೊಡುತ್ತೇನೆ" ಎಂದರು. ಪತ್ರಕರ್ತರಿಗೆ ಕುತೂಹಲ. ಚೀಟಿಯಲ್ಲಿ ಏನಿರಬಹುದೆಂದು ಇಣುಕಿದರು. ಅದರಲ್ಲಿ ಹೀಗಿತ್ತು. "ಮನೆಗೆ ನೆಂಟರು ಬಂದಿದ್ದಾರೆ. ಕಾಫಿ ಪುಡಿ, ಸಕ್ಕರೆ ಮುಗಿದು ಹೋಗಿದೆ. ಈಗಲೇ ಕೊಡಲು ದುಡ್ಡಿಲ್ಲ. ಇನ್ನೊಮ್ಮೆ ಕೊಟ್ಟರೆ ಆಗಬಹುದೇ....?"
      ಆಶ್ಚರ್ಯ ಆಲ್ವಾ.....? ಹಿಂದಿನ ದಿನವಷ್ಟೇ ಸನ್ಮಾನದ ಒಂದು ಲಕ್ಷ ರೂಪಾಯಿಯನ್ನು ತಮ್ಮದಲ್ಲವೆಂದು ಒಪ್ಪಿಸಿದರು. ಮನೆಯಲ್ಲಿ ಹಣದ ಸಮಸ್ಯೆ...! ಅವರು ನಿಧನರಾದ ನಂತರ ಅವರ ಕೋಣೆಯಲ್ಲಿ ಎಷ್ಟೋ ಮೌಲ್ಯದ ಚೆಕ್ಕುಗಳನ್ನು ಬ್ಯಾಂಕಿಗೆ ಕೊಡದೆ ಹಾಗೆಯೇ ಉಳಿಸಿಕೊಂಡಿದ್ದರು....!
    ಪ್ರಚಾರ, ಪ್ರಶಸ್ತಿ, ಸನ್ಮಾನ ಗಳಿಂದ ಬಹಳಷ್ಟು ದೂರವೇ ಉಳಿದಿದ್ದರೂ ಡಿ.ವಿ.ಜಿ ಪ್ರತಿಯೊಬ್ಬ ಪ್ರಜ್ಞಾವಂತ ಕನ್ನಡಿಗರ ಹೃದಯದಲ್ಲಿ ಅತ್ಯಂತ ಗೌರವದ ಸ್ಥಾನದಲ್ಲಿದ್ದಾರೆ....!
    ‌ಪ್ರಶಸ್ತಿಗಳನ್ನು ಪಡೆಯಲು ಇನ್ನಿಲ್ಲದಂತೆ ಪ್ರಯತ್ನಿಸಿ ಒಂದಷ್ಟು ದಿನ‌ ಸಾಮಾಜಿಕ‌ ಮಾಧ್ಯಮಗಳಲ್ಲಿ‌ ಸುದ್ದಿಯಾಗಿ, ಬಳಿಕ‌ ಜಗತ್ತನ್ನೇ ತೊರೆದವರಂತೆ ಅಜ್ಞಾತರಾಗುವ ಈಗಿನ‌ ಪ್ರಚಾರ ಪ್ರಿಯತೆಯ ನಡುವೆ , ನಮ್ಮ ಹಿರಿಯರ ಇಂತಹ ಮೌಲ್ಯಗಳು ಎಂದಿಗೂ ಆದರ್ಶ ಅಲ್ವಾ...?
     ಜಗಲಿಯಲ್ಲಿ ಪ್ರತಿ ವಾರವೂ ಬರುವ ವಾಣಿ ಮೇಡಂ ಅವರ ಪುಸ್ತಕ ಪರಿಚಯ, ಅರವಿಂದಣ್ಣನ ಹಕ್ಕಿಕಥೆ, ಗೋಪಾಲಕೃಷ್ಣ ಸರ್ ಅವರ ಬದಲಾಗೋಣವೇ ಪ್ಲೀಸ್.... , ರಮೇಶ್ ಬಾಯಾರು ಸರ್ ಅವರ ಸ್ಪೂರ್ತಿಯ ಮಾತುಗಳು , ಜ್ಞಾನೇಶ್ ಸರ್ ಅವರ ಜೀವನ ಸಂಭ್ರಮದ ಮಾತುಗಳು , ರಮೇಶ್ ನಾಯ್ಕ ಉಪ್ಪುಂದ ರವರ ಪದದಂಗಳ , ಗುರುರಾಜ ಇಟಗಿಯವರ ಓ ಮುದ್ದು ಮನಸೇ.... ಇನ್ನೂ ಅನೇಕ ಹಿರಿಯರು ಸಾಂದರ್ಭಿಕವಾಗಿ ಮಾತನಾಡುತ್ತಿರುತ್ತಾರೆ ಅಲ್ವಾ....? ಅವರೆಲ್ಲರ ಮಾತುಗಳು ನಮ್ಮ ಅರಿವಿನೊಳಗೆ ಪಸರಿಸಿದಾಗ ಬದುಕು ವಾಸ್ತವದತ್ತ ಹೊರಳಿಕೊಳ್ಳುತ್ತದೆ...
    ಹೆಚ್ಚು ಮಾತನಾಡಿದೆ ಅಲ್ವಾ....? ಮಳೆ ಮತ್ತು ನೀವು...ಇಷ್ಟ ನನ್ಗೆ.. ಸಮಯ ಸರಿದದ್ದೇ ಗೊತ್ತಾಗ್ಲಿಲ್ಲ. ಮೊನ್ನೆಯ ಪತ್ರಕಥೆಗೆ ಎಷ್ಟು ಚಂದದ ಪ್ರತಿಕ್ರಿಯೆಗಳು....! 
    ಶ್ರಾವ್ಯ ಮುಂದುವರೆಸಿದ ಕಥೆಯ ಜೊತೆ, ಭವಿತ್ ಕುಲಾಲ್, ಶಿಶಿರ್ ಎಸ್, ಲಹರಿ ಜಿ.ಕೆ, ಧೀರಜ್ ಕೆ ಆರ್, ಧನ್ವಿ ರೈ ಕೋಟೆ, ಶ್ರೇಯ, ಸಾನ್ವಿ ಸಿ ಎಸ್, ಸ್ರಾನ್ವಿ ಶೆಟ್ಟಿ, ಸಾತ್ವಿಕ್ ಗಣೇಶ... ಎಲ್ಲರ ಪ್ರೀತಿಯ ಪ್ರತಿಕ್ರಿಯೆಗಳು ತುಂಬಾ ಆಪ್ತವಾಗಿದ್ದವು.
        ಓದಿ ಮನದಲ್ಲಿಯೇ ಪ್ರತಿಕ್ರಿಯಿಸುವ ಇನ್ನೂ‌ ಅನೇಕರಿದ್ದೀರಿ. ನಿಮ್ಮ ಭಾವನೆಗಳೂ ಅಕ್ಷರ ರೂಪವನ್ನು ಪಡೆದುಕೊಳ್ಳಲಿ. ಹೆಚ್ಚು ಹೆಚ್ಚು ಓದಿದಷ್ಟು ಬರೆಯಲ ಸಾಧ್ಯವಾಗುತ್ತದೆ. ಬರೆವಣಿಗೆಯಿಂದ ಯೋಚನೆಗಳು ಇನ್ನಷ್ಟು ಪ್ರಬುದ್ಧವಾಗುತ್ತವೆ. ನೀವು ಬರೆಯುತ್ತಲೇ ಇರಿ. ಓದಿ‌ ಸಂಭ್ರಮಿಸಲು ನಾವಿದ್ದೇವೆ. ಮುಂದಿನ‌ ಪತ್ರದಲ್ಲಿ ಮತ್ತೆ ಭೇಟಿಯಾಗೋಣ. ಆರೋಗ್ಯ ಜೋಪಾನ. ಅಲ್ಲಿಯವರೆಗೆ ಅಕ್ಕನ ನಮನಗಳು. 
................................... ತೇಜಸ್ವಿ ಅಂಬೆಕಲ್ಲು
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
****************************************



Ads on article

Advertise in articles 1

advertising articles 2

Advertise under the article