-->
ಪ್ರೀತಿಯ ಪುಸ್ತಕ : ಸಂಚಿಕೆ - 14

ಪ್ರೀತಿಯ ಪುಸ್ತಕ : ಸಂಚಿಕೆ - 14

ಪ್ರೀತಿಯ ಪುಸ್ತಕ
ಸಂಚಿಕೆ - 14

       ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ. 

                                                          ಈದಿಗಾ 
       ಪ್ರೀತಿಯ ಮಕ್ಕಳೇ...... ಈದಿಗಾ ಒಂದು ಮುದ್ದು ಮುದ್ದು ಪುಸ್ತಕ. ಪುಟ್ಟ ಹುಡುಗ ಹಾಮೀದನ ಕಥೆ. ಅಮ್ಮ ಅಪ್ಪನನ್ನು ಕಳಕೊಂಡು ಅಜ್ಜಿ ಅಮೀನಾಳ ಜೊತೆಗೆ ಬದುಕುವ ಪುಟ್ಟ ಹುಡುಗ. ಕಿತ್ತು ತಿನ್ನುವ ಬಡತನದಲ್ಲಿ ಬೆಳೆಯುತ್ತಿರುವ ಮಗು. ಆಗಷ್ಟೇ ರಂಜಾನಿನ ಮೂವತ್ತು ದಿನಗಳು ಕಳೆದು ಹಬ್ಬ ಬಂದ ದಿನದ ಕಥೆ ಇದು. ಊರಿನ ಜನರೆಲ್ಲಾ ಈದಿಗಾಕ್ಕೆ ಹೋಗುವ ಸಂಭ್ರಮದಲ್ಲಿ ಇದ್ದಾರೆ. ಹಮೀದಾ ತಾನೂ ಕೂಡಾ ಗೆಳೆಯರ ಜೊತೆಗೆ ಹೊರಡುತ್ತಾನೆ. ಗೆಳೆಯರ ಕೈಯಲ್ಲಿ ಒಂದಿಷ್ಟು ಹಣ ಇದೆ. ಹಮೀದಾನ ಕೈಯಲ್ಲಿ ಇರುವುದು ಮೂರು ಪೈಸೆ. ಅದು ಬಹಳ ಬಹಳ ಕಡಿಮೆ ಹಣ. ಇರಲಿ, ಜಾತ್ರೆಗೆ ಖುಶಿ ಖುಶಿಯಾಗಿಯೇ ಹೋಗುತ್ತಾನೆ. ಅವನ ಬಳಿ ಇರುವ ಹಣದಲ್ಲಿ ಅವನಿಗೆ ಏನು ಕೊಂಡುಕೊಳ್ಳಬೇಕು ಅಂತ ಗೊತ್ತೇ ಆಗುವುದಿಲ್ಲ. ಗೆಳೆಯರು ಬೇರೆ ಬೇರೆ ತರಹದ ಗೊಂಬೆ ತೆಗೆದುಕೊಳ್ಳುತ್ತಾರೆ, ಮಿಠಾಯಿ ತಿನ್ನುತ್ತಾರೆ. ಹಮೀದಾನಿಗೆ ಆಸೆ ಆಗುತ್ತದೆ. ಆದರೂ ಅವು ಯಾವುದನ್ನೂ ಕೊಂಡುಕೊಳ್ಳದೆ ಕೊನೆಗೆ ತನ್ನಲ್ಲಿ ಇರುವ ಹಣದಲ್ಲಿ ಏನೋ ಒಂದು ಕೊಂಡುಕೊಳ್ಳುತ್ತಾನೆ, ಅವನು ಏನು ಕೊಂಡುಕೊಂಡ, ಯಾಕೆ ಅದನ್ನೇ ಕೊಂಡುಕೊಂಡ ಎಂಬುದನ್ನು ತಿಳಿಯಲು ಪುಸ್ತಕ ಓದಿ.. ನನಗಂತೂ ಇದನ್ನು ಓದಿದಾಗ ಕಣ್ಣಲ್ಲಿ ನೀರು ತುಂಬಿತ್ತು. ಬೇಸರದಿಂದ ಅಲ್ಲ, ಮುದ್ದಿನಿಂದ. ಚಿತ್ರಗಳು ಕೂಡಾ ಚೆನ್ನಾಗಿವೆ. ಜಾತ್ರೆಯ ಚಿತ್ರಣ ಚೆನ್ನಾಗಿ ಮೂಡಿಬಂದಿವೆ. 
ಲೇಖಕರು: ಪ್ರೇಮಚಂದ್  
ಅನುವಾದ: ಪಂಚಾಕ್ಷರಿ ಹಿರೇಮಠ 
ಚಿತ್ರಗಳು: ಪಿ.ಬಿ. ಕಾವಡಿ  
ಪ್ರಕಾಶಕರು: ನ್ಯಾಶನಲ್ ಬುಕ್ ಟ್ರಸ್ಟ್, ಇಂಡಿಯಾ   
ಬೆಲೆ: ರೂ 8 (ಹಳೆಯ ಪುಸ್ತಕ, ಈಗ ಬೆಲೆ ಬದಲಾಗಿರಲೂಬಹುದು)
ಆರನೇ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. ದೊಡ್ಡವರು ಚಿತ್ರ ತೋರಿಸುತ್ತಾ ಚಿಕ್ಕ ಮಕ್ಕಳಿಗೂ ಇದನ್ನು ಓದಿ ಹೇಳಬಹುದು. 
.................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************

Ads on article

Advertise in articles 1

advertising articles 2

Advertise under the article