-->
ದಿನ ನಿತ್ಯ ಪರಿಸರ ದಿನ.. : ವಿಶೇಷ ಲೇಖನ

ದಿನ ನಿತ್ಯ ಪರಿಸರ ದಿನ.. : ವಿಶೇಷ ಲೇಖನ

ದಿನೇಶ್ ಹೊಳ್ಳ.
ಕಲಾವಿದ , ಲೇಖಕರು , ಪರಿಸರ ಪ್ರೇಮಿ
ಮಂಗಳೂರು , ದಕ್ಷಿಣ - ಕನ್ನಡ ಜಿಲ್ಲೆ

             
        ವಿಶ್ವ ಪರಿಸರ ದಿನಾಚರಣೆ ಕೇವಲ ಜೂನ್ 5ಕ್ಕೆ ಮಾತ್ರ ಸೀಮಿತವಲ್ಲ. ಪ್ರತಿದಿನವೂ ಪರಿಸರ ದಿನಾಚರಣೆ ಮಾಡುವಂತಹ ಸಂದಿಗ್ಧತೆ ಮತ್ತು ಅನಿವಾರ್ಯತೆ ಇಂದು ನಮ್ಮ ಎದುರು ಇದೆ. ಆದರೆ ಇಂದಿನ ಪರಿಸ್ಥಿತಿ ಏನಾಗಿದೆ ಎಂದರೆ ಕೇವಲ ಪ್ರಚಾರಕ್ಕಾಗಿ ಜೂನ್ 5 ರಂದು ಒಂದಷ್ಟು ಸಂಘ, ಸಂಸ್ಥೆಗಳು ಒಂದಷ್ಟು ಶೋಕಿ ಜನರು ಅಲ್ಲಲ್ಲಿ ಗಿಡ ನೀಡುತ್ತಾರೆ. ಜೂನ್ 6 ರಂದು ತಾವು ನೆಟ್ಟ ಗಿಡಗಳನ್ನು ಮರೆಯುತ್ತಾರೆ, ಅಲ್ಲಿಗೆ ಅವರ ಪರಿಸರ ದಿನಾಚರಣೆ ಮುಕ್ತಾಯ ಆಗುತ್ತದೆ. ಅವರು ನೆಟ್ಟ ಗಿಡಗಳು ಒಣಗಿ ಸಾಯುತ್ತವೆ. ಆದರೆ ಅವರು ನೆಟ್ಟ ಗಿಡಗಳ ಫೋಟೋಗಳು ಅವರ ಜೊತೆ ಶಾಶ್ವತ ಜೀವಂತ ಆಗಿ ಇರುತ್ತದೆ. ಇಂತಹ ಪರಿಸರ ದಿನಾಚರಣೆ ತುಂಬಾ ಅಪಾಯಕಾರಿ ಮತ್ತು ಅಪರಾಧಿಗಳ ಬಿಂಬ ಅದು. ಯಾಕೆಂದರೆ ಅವರು ನೆಟ್ಟು ಸಾಯಲು ಬಿಟ್ಟ ಆ ಗಿಡಗಳು ಎಲ್ಲೋ ನರ್ಸರಿಯಲ್ಲಿ ಅಥವಾ ಅರಣ್ಯ ಇಲಾಖೆಯ ತೋಟದಲ್ಲಿ ಜೀವಂತ ಆಗಿ ಇರುತ್ತಿದ್ದವು. ಅಂತಹ ಬೆಳೆಯುವ ಗಿಡಗಳನ್ನು ತಂದು ನೆಟ್ಟು ಕೊಂದ ಅಪರಾಧ ಮತ್ತು ಅಪವಾದವನ್ನು ಮೈ ಮೇಲೆ ಎಳೆಯುವುದಕ್ಕಿಂತ ಸುಮ್ಮನಿದ್ದರೆ ಒಳಿತು. 
      ಪರಿಸರ ದಿನಾಚರಣೆಯಂದು ಗಿಡ ನೆಟ್ಟ ಕೂಡಲೇ ಅವರು ಪರಿಸರ ಪ್ರೇಮಿಗಳಾಗುವುದಿಲ್ಲ. ನೆಟ್ಟ ಗಿಡಗಳನ್ನು ಸಾಕಿ, ಸಲಹಿ ಪೋಷಿಸಿದರೆ ಮಾತ್ರ ಅದು ಪರಿಸರ ಪ್ರೇಮ ಆಗುತ್ತದೆ. ನೆಡುವುದಕ್ಕಿಂತ ತಮ್ಮ ಸುತ್ತ ಮುತ್ತ ಈಗಾಗಲೇ ಬೆಳೆಯುತ್ತಿರುವ ಮರ, ಗಿಡಗಳನ್ನು ಕಡಿಯದಂತೆ ಉಳಿಸಿ ಬೆಳೆಸುವುದು ಎಲ್ಲಕಿಂತ ದೊಡ್ಡ ಪರಿಸರ ಪ್ರೇಮವಾಗಿ ಸಾರ್ಥಕ ಆಗುತ್ತದೆ. 
      'ಇರುವುದೊಂದೇ ಭೂಮಿ ಇದನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳೋಣ' ಎಂಬ ದ್ಯೆಯ ವಾಕ್ಯದೊಂದಿಗೆ 1974 ರಲ್ಲಿ ಜಾಗತಿಕ ಪರಿಸರ ದಿನವನ್ನು ಆಚರಿಸಲಾಯಿತು. ಅಂದಿನಿಂದ ಇಂದಿನವರೆಗೆ ಜೂನ್ 5 ರಂದು ಪ್ರಥ್ವಿ ಪೂಜೆಯನ್ನು ಮಾಡುತ್ತಾ ಬರಲಾಯಿತು. ಆದರೆ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ನಾವೇ ಎಷ್ಟು ಸಂರಕ್ಷಣೆ ಮಾಡಿದ್ದೇವೆ ಎಂಬ ಪ್ರಶ್ನೆಗೆ ಮೊದಲಾಗಿ ಉತ್ತರ ಕಂಡುಕೊಳ್ಳಬೇಕು. ಅಭಿವೃದ್ದಿ ಎಂಬ ನೆಪದಲ್ಲಿ ಎಷ್ಟು ಕಾಡನ್ನು, ಬೆಟ್ಟವನ್ನು, ನದಿಗಳನ್ನು ನಾಶ ಮಾಡುತ್ತಾ ಬಂದಿರುವರು....? ಗಣಿಗಾರಿಕೆ ಗುತ್ತಿಗೆಯಲ್ಲಿ ಎಷ್ಟೊಂದು ಪರ್ವತಗಳನ್ನು ಛಿದ್ರ ಗೊಳಿಸಿರುವರು, ನೀರಾವರಿ ಎಂಬ ಯೋಜನೆಯಲ್ಲಿ ಎಷ್ಟೊಂದು ನದಿಗಳನ್ನು ಬಂಧಿಸಿದರು. ಎಷ್ಟೊಂದು ಅರಣ್ಯವನ್ನು ಒತ್ತುವರಿ ಮಾಡಿಕೊಂಡಿರುವರು. ಇಂತವರೆ ಜೂನ್ 5 ರಂದು ಪರಿಸರ ಉಳಿಸಿ ಎಂದು ಕಾರ್ಯಕ್ರಮ ಮಾಡಿದಾಗ ಅದು ಎಷ್ಟೊಂದು ಹಾಸ್ಯಾಸ್ಪದ. ಆರ್ಥಿಕ ಅಭಿವೃದ್ದಿ ಒಂದೇ ಸುಖಮಯ ಬದುಕಿನ ರನ್ ವೇ ಎಂಬ ಪರಿಕಲ್ಪನೆಯಿಂದ ಇಂದು ಪರಿಸರದ ಒಡಲಿಗೆ ಮಾರಣಾಂತಿಕ ಏಟು ಬೀಳುತ್ತಾ ಇದೆ. ಏಟು ತಿಂದ ಪ್ರಕೃತಿ ವಾಪಾಸ್ ನಮಗೆ ಜಲ ಪ್ರವಾಹ, ಭೂ ಕುಸಿತ, ಚಂಡ ಮಾರುತ, ಸುನಾಮಿ ಎಂಬ ಪ್ರಾಕೃತಿಕ ದುರಂತಗಳ ಮೂಲಕ ಪ್ರತೀಕಾರದ ಏಟು ನೀಡುತ್ತಿದ್ದರೂ ಎಚ್ಚರ ಆಗದ ನಾವು ಪರಿಸರ ದಿನಾಚರಣೆ ಆಚರಿಸುವುದು ಯಾವ ನೈತಿಕತೆಯಿಂದ......? ಕಾಂಕ್ರೀಟು ಕಟ್ಟಡಗಳು, ಅಣೆಕಟ್ಟುಗಳು, ಸುರಂಗಗಳು, ಸೇತುವೆಗಳು, ಹೆದ್ದಾರಿ ನಿರ್ಮಾಣವೇ ನಮ್ಮ ಮೂಲ ಭೂತ ಸೌಕರ್ಯಗಳು ಎಂದು ಅರ್ಥೈಸಿಕೊಂಡ ಮಾನವ ಇದರ ಆಚೆ ನಮ್ಮ ನಿಸರ್ಗಕ್ಕೆ ಯಾವ ರೀತಿಯ ಸಹಿಸಲಾಗದ ಏಟು ಬೀಳುತ್ತದೆ ಎಂದು ಅರ್ಥ ಮಾಡಿಕೊಳ್ಳದ ವ್ಯವಸ್ಥೆಯೇ ನಮ್ಮ ದೊಡ್ಡ ದುರಂತ. ಹಾಗಂತ ಅಭಿವೃದ್ದಿ, ಸೌಕರ್ಯ ಬೇಡವೆಂದಲ್ಲ. ನಗರ ಬೆಳೆಯುತ್ತಿದ್ದಂತೆ ಬೇಡಿಕೆಗಳು, ಪೂರೈಕೆಗಳು ಹೆಚ್ಚಾಗುತ್ತಾ ಇರುತ್ತವೆ. ಆದರೆ ನಮ್ಮ ಪ್ರಕೃತಿಯನ್ನು ಕೆಡವದೇ ಅದರ ನೆಮ್ಮದಿಗೆ ಭಂಗ ತರದಂತೆ ಅಭಿವೃದ್ದಿ ಮಾಡಲು ಸಾದ್ಯ , ಆದರೆ ಇದನ್ನು ಮಾಡಲು ಇಚ್ಛಾಶಕ್ತಿ, ಕ್ರಿಯಾಶಕ್ತಿ ಮುಖ್ಯ. ಪ್ರಕೃತಿಯನ್ನು ಮುಕ್ಕಿ ತಿನ್ನುವ ಜೀರ್ಣ ಶಕ್ತಿ ಮಾತ್ರವಿದ್ದಲ್ಲಿ ಏನನ್ನೂ ನಿರೀಕ್ಷಿಸಲು ಅಸಾದ್ಯ. ಹಾಗಾದರೆ ನಿಸರ್ಗ ರಕ್ಷಣೆಗೆಂದು ಕಾನೂನುಗಳಿಲ್ಲವೇ.. ಇದೆ ಎಲ್ಲವೂ ಇದೆ ಆದರೆ ಇದು ಕ್ರಿಯಾಶೀಲ ಆಗದೇ ಕೇವಲ ಇಲಾಖೆಗಳ ಕಡತಗಳಲ್ಲಿ ಬೆಚ್ಚನೆ ಮಲಗಿವೆ. ಸ್ವಾರ್ಥ ವ್ಯವಸ್ಥೆಯೇ ಎಲ್ಲವನ್ನೂ ಅಹಂ ಎಂಬ ಅಧಿಕಾರದ ಮೂಲಕ ಕಾನೂನನ್ನೇ ಮುರಿದು ಪರಿಸರ ಭಕ್ಷಕರು ಆದಾಗ ಪ್ರಶ್ನೆಗಳಿಗೆ ಉತ್ತರಗಳು ಎಲ್ಲಿ ಲಭಿಸುತ್ತವೆ....!! 
             ಸರಿ , ಯಾರನ್ನೂ ದೋಷಾರೋಪಣೆ ಮಾಡುವುದಕ್ಕಿಂತ ನಾವೇ ಎಚ್ಚರಗೊಂಡು ಜಾಗೃತರಾಗಿ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಉಳಿಸಲು ಧನಾತ್ಮಕವಾಗಿ ಯೋಚಿಸಿ ಕ್ರಿಯಾಶೀಲರಾಗಿ ತೊಡಗಿಸಿ ಕೊಳ್ಳುವುದೇ ನಮ್ಮ ಪ್ರಕೃತಿಗೆ ನಾವು ನೀಡುವ ಪ್ರೀತಿಯ ಕೊಡುಗೆ. ವಿಶ್ವ ಪರಿಸರ ದಿನದಂದು ನಾವು ನೆಟ್ಟ ಗಿಡಗಳು ನಾವು ಬೆಳೆದಂತೆ ನಮ್ಮ ಜೊತೆ ಅವುಗಳು ಕೂಡಾ ಬೆಳೆಯುವಂತೆ ನೋಡಿ ಕೊಳ್ಳುವುದೇ ಪರಿಸರ ದಿನಾಚರಣೆ ಆಚರಿಸಿದ್ದಕ್ಕೆ ಸಾರ್ಥಕವಾಗುವುದು....
.................................. ದಿನೇಶ್ ಹೊಳ್ಳ.
ಕಲಾವಿದ , ಲೇಖಕರು , ಪರಿಸರ ಪ್ರೇಮಿ
ಮಂಗಳೂರು , ದಕ್ಷಿಣ - ಕನ್ನಡ ಜಿಲ್ಲೆ
******************************************


Ads on article

Advertise in articles 1

advertising articles 2

Advertise under the article