-->
ಅಕ್ಕನ ಪತ್ರ - 25ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 25ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 25ಕ್ಕೆ
ಮಕ್ಕಳ ಉತ್ತರ : ಸಂಚಿಕೆ - 1


     ಮಕ್ಕಳ ಜಗಲಿಯಲ್ಲಿ......... ಮಕ್ಕಳಿಗೆ ಬಹಳ ಆಪ್ತವಾದ ತೇಜಸ್ವಿ ಅಂಬೆಕಲ್ಲು ಇವರು ಬರೆಯುತ್ತಿರುವ ಅಕ್ಕನ ಪತ್ರ ವಿದ್ಯಾರ್ಥಿಗಳಲ್ಲಿ ಕಾಳಜಿಯನ್ನು ಮೂಡಿಸುವ ಪ್ರಯತ್ನವಾಗಿದೆ. ಓದುವ ಅಭಿರುಚಿ ಹಾಗೂ ಬರೆಯುವ ಕೌಶಲ್ಯ ಬೆಳೆಸಬೇಕೆನ್ನುವುದು ಮಕ್ಕಳ ಜಗಲಿಯ ಉದ್ದೇಶ...... ಜಗಲಿಯಲ್ಲಿ ಅನೇಕ ಮಕ್ಕಳು ನಿರಂತರವಾಗಿ ಬರೆಯುತ್ತಿದ್ದು ಬರೆಯುವ ಇನ್ನಷ್ಟು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ. ವಿದ್ಯಾರ್ಥಿಗಳ ಸ್ವ- ಅನಿಸಿಕೆಯನ್ನು ಭಾವನಾತ್ಮಕವಾಗಿ ಬರೆದು ಕಳುಹಿಸಿದ ಪತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ ........  
       ಪ್ರೀತಿಯ ಅಕ್ಕನಿಗೆ ವೈಷ್ಣವಿ ಕಾಮತ್ ಮಾಡುವ ನಮಸ್ಕಾರಗಳು. ನಾವು ಪರಿಸರವನ್ನು ಉಳಿಸಿ ಬೆಳೆಸಬೇಕು. ನಮಗೆ ಪರಿಸರದ ಬಗ್ಗೆ ಪ್ರೀತಿ, ಕಾಳಜಿ ಇರಬೇಕು. ನಮ್ಮ ಹುಟ್ಟುಹಬ್ಬ ಅಥವಾ ಯಾವುದೇ ಸಂತೋಷದ ಸವಿನೆನಪಿಗೆ ಒಂದೊಂದು ಗಿಡವನ್ನು ನೆಟ್ಟು ಬೆಳೆಸಿದಾಗ ಪರಿಸರವು ಚೆನ್ನಾಗಿರುತ್ತದೆ. ಅದರಿಂದ ನಮಗೆ ಖುಷಿ ಸಿಗುತ್ತದೆ. ಇಂದು ನೆಟ್ಟ ಗಿಡ ನಾಳೆ ಮರವಾಗಿ ಬೆಳೆದು ಸಕಲ ಜೀವಿಗಳಿಗೂ ಆಶ್ರಯ ನೀಡುತ್ತದೆ. ಪರಿಸರದ ಬಗ್ಗೆ ಕಾಳಜಿ ವಹಿಸಿ ಉಳಿಸಿ ಬೆಳೆಸಲು ಪ್ರೇರೇಪಿಸಿದ ಸುಂದರ್ ಲಾಲ್ ಬಹುಗುಣ, ಸಾಲು ಮರದ ತಿಮ್ಮಕ್ಕ ಮತ್ತು ತುಳಸಿಗೌಡರಂತಹ ಅದೆಷ್ಟೋ ಮಹಾನ್ ವ್ಯಕ್ತಿಗಳಿಗೆ ನಾವು ಚಿರರುಣಿಯಾಗಿರಬೇಕು. ನಮ್ಮಿಂದ ಕಿಂಚಿತ್ತಾದರೂ ಪರಿಸರವನ್ನು ಉಳಿಸುವ ಕಾಯಕವು ನಡೆಯಲಿ. ಧನ್ಯವಾದಗಳೊಂದಿಗೆ............
.........................................ವೈಷ್ಣವಿ ಕಾಮತ್
5ನೇ ತರಗತಿ 
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ.
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
*******************************************ಮಕ್ಕಳ ಜಗಲಿ....ಅಕ್ಕನ ಪತ್ರ...25
    ಪ್ರೀತಿಯ ಅಕ್ಕ....ನಿಮಗೆ ನಿಮ್ಮ ಪ್ರೀತಿಯ ಲಹರಿ ಮಾಡುವ ನಮನಗಳು... ನಿಮ್ಮ ಪತ್ರ ಓದಿ ಸಂತೋಷವಾಯಿತು.... ಈ ಸಲ ನನಗೆ ಜೂನ್ 5ರಂದು ಗಿಡ ನೆಡಲು ಸಾಧ್ಯವಾಗಲಿಲ್ಲ.... ನಾನು ಬೇರೆ ಕಡೆ ಇದ್ದ ಕಾರಣ ಪತ್ರ ಬರೆಯಲೂ ಸಾಧ್ಯವಾಗಲಿಲ್ಲ.... ಆದರೆ ಕಳೆದ ಸಲ ನೆಟ್ಟ ತುಳಸಿಗಿಡ ತುಂಬಾ ಚೆನ್ನಾಗಿ ಬೆಳೆದಿದೆ.... ಈಗ ಮಳೆಗಾಲ ಆದಕಾರಣ ಗಿಡಗಳಿಗೆ ನೀರು ಹಾಕುವ ಕೆಲಸ ಕಡಿಮೆ.... ನೀವು ಹೇಳಿದಂತೆ ಪರಿಸರವಾದಿಗಳಾದ ಸುಂದರ್ ಲಾಲ್ ಬಹುಗುಣ, ತಿಮ್ಮಕ್ಕ ಅವರಂತೆ ಮರವನ್ನು ಉಳಿಸಿ-ಬೆಳೆಸುವ ಕರ್ತವ್ಯ ನಮ್ಮ ಮೇಲೂ ಇದೆ... ಅವರು ತಮ್ಮ ಪರಿಸರ ಪ್ರೀತಿಯ ಮೂಲಕ ನಮ್ಮಲ್ಲಿ ಪರಿಸರ ಕಾಳಜಿಯ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.... ಅವರನ್ನು ಅನುಸರಿಸುವುದು ನಮ್ಮ ಕರ್ತವ್ಯವಾಗಿದೆ.... ನಿಮ್ಮ ಮುಂದಿನ ಪತ್ರಕ್ಕಾಗಿ ನಾನು ಕಾಯುತಿರುವೆನು.... ಇಂತಿ ನಿಮ್ಮ ಪ್ರೀತಿಯ 
......................................... ಲಹರಿ ಜಿ. ಕೆ.
8ನೇ ತರಗತಿ,
ತುಂಬೆ ಸೆಂಟ್ರಲ್ ಸ್ಕೂಲ್. ತುಂಬೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
    ನಮಸ್ತೆ ಅಕ್ಕ....... ನಾನು ಶ್ರಾವ್ಯ.... ಜೂನ್ - 5 ವಿಶ್ವ ಪರಿಸರ ದಿನ. ಇದೊಂದು ದಿನ ನಾವು ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ತೋರುತ್ತೇವೆ. ನಮ್ಮ ಪರಿಸರ ಕಾಳಜಿ ಕೇವಲ ಒಂದೇ ದಿನಕ್ಕೆ ಸೀಮಿತವಾಗಬಾರದು ಎನ್ನುವುದು ಎಲ್ಲರ ಆಶಯ. ಪರಿಸರದಿನದಂದು ಗಿಡನೆಟ್ಟು ನಂತರ ಅದರ ಕಡೆ ಮುಖ ಮಾಡಿ ಕೂಡ ನೋಡದಂತಹ ಜನರ ಸಂಖ್ಯೆಯೇ ಹೆಚ್ಚಿರುವುದು ಇದು ನಮಗೆಲ್ಲರಿಗೂ ತಿಳಿದ ವಿಚಾರ. ಆದರೆ ಹಾಗಾಗಲು ಬಿಡದೆ , ನೆಟ್ಟ ಗಿಡದ ಬೆಳೆಯುವ ಪ್ರತಿ ಹಂತದಲ್ಲೂ ಆದರ ಬೆಳವಣಿಗೆಯನ್ನು ನೋಡಿ ಖುಷಿ ಪಡುವ ಭಾವವನ್ನು ನಮ್ಮಲ್ಲಿ ಬೆಳೆಸೋಣ. ಪರಿಸರ ದಿನ ಕೇವಲ ಜೂನ್ 5ಕ್ಕೆ ಸೀಮಿತವಲ್ಲ. ಪ್ರತಿ ದಿನ ಪರಿಸರ ದಿನವಾಗಬೇಕು ಎಂದೆಲ್ಲಾ ಮಾತಲ್ಲಿ ಹೇಳುತ್ತೇವೆ. ಆದರೆ ಆಡಿದ ಮಾತು ಕಾರ್ಯರೂಪಕ್ಕೆ ಬಂದಾಗ ಮಾತ್ರ ಮಾತು ಬೆಲೆ ಕಂಡುಕೊಳ್ಳುವುದು.
           ವಿದ್ಯಾರ್ಥಿಗಳಾದ ನಾವು ನಮ್ಮ ಈ ವಯಸ್ಸಿನಲ್ಲಿ ಪ್ರಕೃತಿಯ ಕಡೆಗೆ ಹೆಚ್ಚಿನ ಕಾಳಜಿ ತೋರಿದಲ್ಲಿ , ಮುಂದಿನ ದಿನಗಳಲ್ಲಿ ನಮ್ಮಿಂದಾದರೂ ಸ್ವಲ್ಪ ಮಟ್ಟಿನಲ್ಲಿ ಗಿಡ-ಮರಗಳನ್ನು ಕೊಡುಗೆಯಾಗಿ ನೀಡಬಹುದು. ನಮಗಾಗಿ ಹಿರಿಯರು ಉಳಿಸಿ ತಂದಿರುವ ಈ ಪ್ರಕೃತಿಯನ್ನು ನಾವು ಮುಂದಿನ ಪೀಳಿಗೆಗೆ ಉಳಿಸಿಕೊಡಬೇಕಾದುದು ನಮ್ಮ ಕರ್ತವ್ಯ. ಇದನ್ನು ನಾವು ಮೊದಲು ಅರಿಯಬೇಕು. ಪರಿಸರವನ್ನು ಹಸಿರಾಗಿಡುವ ಬಗೆಗೆ ಹೆಚ್ಚಿನ ಗಮನ ಹರಿಸೋಣ. ಹಸಿರೇ ಉಸಿರು ಎಂಬುದನ್ನು ಸದಾ ನೆನಪಿನಲ್ಲಿಡೋಣ. ಪ್ರಕೃತಿ ಉಳಿಸಿ ಬೆಳಸೋಣ. ಅಕ್ಕ ನೀವು ಸದಾ ನಮ್ಮಲ್ಲಿ ಒಂದಲ್ಲ ಒಂದು ಒಳ್ಳೆಯ ವಿಚಾರ ಪ್ರಸ್ತಾಪ ಮಾಡುತ್ತೀರಿ. ಈ ಬಾರಿಯೂ ಪ್ರಕೃತಿಯ ಒಳಿತಾಗಿ ನಾವೇನು ಮಾಡಿದ್ದೇವೆ ಮತ್ತು ನಾವೇನು ಮಾಡಬೇಕು ಎನ್ನುವುದನ್ನು ನಮಗೆ ತಿಳಿಸುವ ವಿಚಾರ ಮಾಡಿದ್ದೀರಿ. ಧನ್ಯವಾದ ನಿಮ್ಮ ಹಾರೈಕೆ ಸದಾ ನಮ್ಮ ಜೊತೆಗಿರಲಿ....... ಧನ್ಯವಾದ
............................................................ ಶ್ರಾವ್ಯ 
ದ್ವಿತೀಯ ಪಿ.ಯು.ಸಿ.
ಶ್ರೀ ರಾಮ ವಿದ್ಯಾಕೇಂದ್ರ -ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
*******************************************
    ನಮಸ್ತೇ..... ಅಕ್ಕ. ನಾನು ಅಕ್ಷಿತ.. ನಾನು ಚೆನ್ನಾಗಿದ್ದೇನೆ ನೀವು ಚೆನ್ನಾಗಿದ್ದೀರಿ ಎಂದು ಭಾವಿಸುತ್ತೇನೆ.. ನಿಮ್ಮ ಪತ್ರದಿಂದ ಏನು ಅರಿತೆ ಎಂದರೆ. ನಾವು ಗಿಡಗಳನ್ನೆಲ್ಲ ನೆಟ್ಟು ಭೂಮಿಯಲ್ಲಿ ಅರಣ್ಯಗಳನ್ನು ಹೆಚ್ಚಿಸಬೇಕು. ಅರಣ್ಯಗಳಿಂದ ನಮಗೆ ತುಂಬಾ ಉಪಯೋಗಗಳಿವೆ. ಗಿಡಗಳನ್ನು ನೆಟ್ಟು ಪ್ರೀತಿಸುವುದರಲ್ಲಿ ಒಬ್ಬರಾದ ಸಾಲು ಮರದ ತಿಮ್ಮಕ್ಕ ಹತ್ತಿರ ಹತ್ತಿರ 8000 ಮರಗಳನ್ನು ನೆಟ್ಟಿದ್ದಾರೆ. ನಾನು ಮೊನ್ನೆ ಒಂದು ಅಡಿಕೆ ಗಿಡ ನೆಟ್ಟಿದ್ದೆ ಅದಕ್ಕೆ ಯಾವಾಗಲೂ ನೀರು ಹಾಕಿ ಸಾಕುತಿದ್ದೇನೆ.. ಹಾಗೂ ನಾನು ಮತ್ತು ನನ್ನ ಅಣ್ಣ ತುಂಬಾ ಗಿಡಗಳನ್ನು ನೆಟ್ಟಿದ್ದೇವೆ.. ನಾವು ಹೀಗೆಯೆ ಗಿಡಗಳನ್ನು ನೆಟ್ಟು ಭೂಮಿಯನ್ನು ಹಚ್ಚ ಹಸಿರಿನಿಂದ ತುಂಬಿಸೋಣ.. ಧನ್ಯವಾದಗಳು..
......................................................... ಅಕ್ಷಿತ.
10ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ - ಕೊಳ್ನಾಡು 
ಬಂಟ್ಟಾಳ ತಾಲೂಕು , ದ.ಕ ಜಿಲ್ಲೆ
*******************************************      ನಮಸ್ತೇ ಅಕ್ಕ: ನಾನು ನಿಮ್ಮ ಪ್ರೀತಿಯ ತಮ್ಮ ಭವಿತ್ ಕುಲಾಲ್ ಮಾಡುವ ನಮಸ್ಕಾರಗಳು. ನಿಮ್ಮ ಪತ್ರ ಓದಿ ನನಗೆ ಆನಂದವಾಯಿತು ಅಕ್ಕ. ನಾನು ಕ್ಷೇಮವಾಗಿದ್ದೇನೆ. ನೀವು ಕ್ಷೇಮ ಎಂದು ಭಾವಿಸುತ್ತೇನೆ. ಗಿಡ ಮರಗಳನ್ನು ಕಡಿಯಬಾರದು ಎಂದು ಹೇಳುತ್ತಾರೆ. ಆದರೆ ಕಡಿಯುವುದು ತಪ್ಪಿಲ್ಲ ಎಂದು ನನಗೆ ಅನಿಸುತ್ತದೆ. ಕೆಲವೊಂದು ಮರಗಳನ್ನು ಅನಿವಾರ್ಯವಾಗಿ ಕಡಿಯಬೇಕಾದ ಸಂದರ್ಭಗಳು ಬಂದು ಬಿಡುತ್ತದೆ. ಮರಗಳನ್ನು ಕಡಿಯುತ್ತಾರೆ, ಆದರೆ ಮರ ಕಡಿದರೂ, ಪುನಃ ಅದೇ ಜಾಗದಲ್ಲಿ ಇನ್ನೊಂದು ಗಿಡ ನೆಡಬೇಕು. ಆಗ ಗಿಡ ದೊಡ್ಡದಾಗಿ ಮರ ಆಗಬಹುದು, ಹೀಗೆ ಪ್ರತಿಯೊಬ್ಬರು ಮಾಡುವುದರಿಂದ, ಗಿಡ, ಮರಗಳು ಬೆಳೆದು ಪರಿಸರ ನೋಡಲು ಬಹಳ ಮನೋಹರವಾಗಿರುತ್ತದೆ. ನಮಗೆ ಗಾಳಿ, ತಂಪಾದ ನೆರಳು, ಹಣ್ಣು ಇತ್ಯಾದಿ ದೊರೆಯುತ್ತದೆ. ಗಿಡ, ಮರಗಳನ್ನು ಬೆಳೆಸಿ ಪರಿಸರವನ್ನು ಉಳಿಸೋಣ. ಧನ್ಯವಾದಗಳು ಅಕ್ಕ.
......................................... ಭವಿತ್ ಕುಲಾಲ್
7ನೇ ತರಗತಿ 
ದ. ಕ. ಜಿ. ಪಂ ಹಿರಿಯ ಪ್ರಾಥಮಿಕ 
ಶಾಲೆ ಕಲ್ಲಡಕ (Kalladka)  
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ ,
*******************************************        ನಮಸ್ತೇ, ಪ್ರೀತಿಯ ಅಕ್ಕನಿಗೆ ಸಾತ್ವಿಕ್ ಮಾಡುವ ನಮಸ್ಕಾರಗಳು. ನಾವೆಲ್ಲರೂ ಕ್ಷೇಮದಿಂದ ಇರುವೆವು. ಬಾಹ್ಯ ಸನ್ನಿವೇಶಗಳನ್ನು ಒಳಗೊಂಡ ನಮ್ಮ ಸುತ್ತಲಿನ ವಾತಾವರಣವೇ ಪರಿಸರವಾಗಿದೆ. ಪರಿಸರದಲ್ಲಿ ಗಾಳಿ, ಬೆಳಕು, ಉಷ್ಣತೆ, ನೀರು , ಸಸ್ಯವರ್ಗ, ಪ್ರಾಣಿ ವರ್ಗಗಳು ಇವೆ. ಮರವು ನಮಗೆ ಗಾಳಿ, ನೆರಳು , ಆಶ್ರಯ ಮತ್ತು ಶುದ್ಧ ವಾಯು ವನ್ನು ನಮಗಿತ್ತು ನಮ್ಮನ್ನು ಸಂರಕ್ಷಿಸುತ್ತದೆ. ನಾವು ಕೂಡ ಮರವನ್ನು ಸಂರಕ್ಷಿಸಬೇಕು. ಸ್ವಚ್ಛ ಗಾಳಿಯು ನಮಗೆ ಸಿಗಬೇಕಾದರೆ ನಾವು ಮರಗಿಡಗಳನ್ನು ನಾಶ ಮಾಡದೆ ನೆಟ್ಟು ಬೆಳೆಸಬೇಕು. ವರುಷಕ್ಕೊಮ್ಮೆ ಪರಿಸರ ದಿನಾಚರಣೆ ಎಂದು ಆಚರಣೆ ಮಾಡುವುದರೊಂದಿಗೆ ಬಿಡುವಿನವೇಳೆಯಲ್ಲಿ ಕೂಡ ಗಿಡಗಳನ್ನು ನೆಟ್ಟರೆ ಒಳ್ಳೆಯದು ಅಲ್ಲವೇ...?, ಕಸ- ಕಡ್ಡಿಗಳನ್ನು , ಪ್ಲಾಸ್ಟಿಕ್ ಬೇಡದ ವಸ್ತುಗಳನ್ನು ಎಲ್ಲೆಂದರಲ್ಲಿ ಹಾಕದೆ ಪರಿಸರವನ್ನು ಹಾಳುಮಾಡದೆ ನೀರು, ಮಣ್ಣು ಹಾಳಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಮಕ್ಕಳಾದ ನಾವು ಈ ನಮ್ಮ ಪರಿಸರಕ್ಕೆ ಒಳ್ಳೆಯ ಕೆಲಸವನ್ನೇ ಮಾಡೋಣ. ನಮ್ಮ ಪರಿಸರ ಸ್ವಚ್ಛ ಪರಿಸರ , ಸುಂದರ ಪರಿಸರವಾಗಿ ಯಾವಾಗಲೂ ಉಳಿಯಲಿ. ಧನ್ಯವಾದಗಳು ಅಕ್ಕಾ.....
......................................... ಸಾತ್ವಿಕ್ ಗಣೇಶ್
8ನೇ ತರಗತಿ 
ಸರಕಾರಿ ಪದವಿ ಪೂರ್ವ ಕಾಲೇಜು ವೇಣೂರು 
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.

*******************************************
 

       ನಮಸ್ತೆ ಅಕ್ಕ. ನಾನು ಕೃತಿಕಾ. ಹಲವಾರು ಒಳ್ಳೊಳ್ಳೆಯ ಮನಮುಟ್ಟುವ ಬರಹಗಳಿಂದ ನಮ್ಮನ್ನು ಆಕರ್ಷಿಸುತ್ತಿರುವಿರಿ. ಕೆಲವೊಮ್ಮೆ ನಿಮ್ಮ ಪತ್ರಕ್ಕೆ ಉತ್ತರ ಬರೆಯಲು ಸಾಧ್ಯವಾಗದಿದ್ದರೂ ಅದನ್ನು ಓದಿದ ಖುಷಿ ನನಗೆ. ಜೂನ್ 5 1974ರಿಂದ ವಿಶ್ವಸಂಸ್ಥೆಯು ಪ್ರಕೃತಿಯನ್ನು ಬೆಳೆಸಿ - ಉಳಿಸಲು ಪರಿಸರದ ದಿನವನ್ನು ಆಚರಿಸಿತು. ಅಂದಿನಿಂದ ಪ್ರತೀ ವರ್ಷ ನಮ್ಮ ಪರಿಸರದ ಕಾಳಜಿಯನ್ನು ಮಾಡುತ್ತಿದ್ದೇವೆ. ಆದರೆ ಪರಿಸರದ ಮಹತ್ವವನ್ನು ತಿಳಿದ ಜ್ಞಾನವಂತರೇ ಪರಿಸರದ ನಾಶಕ್ಕೆ ನಾಂದಿಯಾಗುತ್ತಿದ್ದಾರೆ. ನಾವು ಪರಿಸರ ದಿನದಂದು ಎಷ್ಟೇ ಗಿಡವನ್ನು ನೆಟ್ಟರೂ ನಮ್ಮ ಭೂಮಿಗೆ ಪ್ಲಾಸ್ಟಿಕ್ ಗಳಂತಹ ಒಂದೇ ಒಂದು ವಸ್ತುವನ್ನು ಹಾಕಿದರೆ ಅದಕ್ಕೆ ಯಾವುದೇ ಅರ್ಥವಿಲ್ಲ. ಆದ್ದರಿಂದ ಪ್ರತೀ ಕ್ಷಣ ಪ್ರಕೃತಿ ಹಾಗೂ ನಮ್ಮೀ ನೆಲವನ್ನು ಸ್ವಚ್ಛವಿಡುವ ಕಾರ್ಯ ಮಾಡಬೇಕಾಗಿದೆ. ಪರಿಸರದ ಮೂಲಕ ನಮ್ಮ ಜೀವವನ್ನು ಉಳಿಸೋಣ. ಧನ್ಯವಾದಗಳು
.................................................. ಕೃತಿಕಾ. ಕೆ
10ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ , ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************    ನಮಸ್ತೇ ಅಕ್ಕ.... ನಾನು ಬಿಂದುಶ್ರೀ... ಸಾಲು ಮರದ ತಿಮ್ಮಕ್ಕ ನ ಬಗ್ಗೆ ನಾನು ಚಿಕ್ಕ ಇರುವಾಗ ಓದಿದ ನೆನಪು. ಅವರ ಬಗ್ಗೆ ತುಂಬಾ ವಿವರಗಳು ಇದ್ದವು. ನೀವು ಸ್ವಲ್ಪ ವಿವರ ಹೇಳಿದ್ದಿರಿ. ಅವರು ನಮ್ಮ ಈ ಭೂಮಿಯಲ್ಲಿ ತುಂಬಾ ಗಿಡಗಳನ್ನು ನೆಟ್ಟಿದ್ದಾರೆ. ನೀವು ಬರೆದಿರುವ ಪತ್ರ ಚೆನ್ನಾಗಿದೆ ಅಕ್ಕಾ.   
............................................... ಕೆ. ಬಿಂದುಶ್ರೀ
ಪ್ರಥಮ ಪಿಯುಸಿ 
ವಿವೇಕಾನಂದ ಕಾಲೇಜು, ಪುತ್ತೂರು 
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************


   ಎಲ್ಲರಿಗೂ ಆತ್ಮೀಯ ಶುಭ ವಂದನೆಗಳು... ನಾನು ಪ್ರಿಯ........ ವಿಶ್ವ ಪರಿಸರ ದಿನದಂದು ಎಲ್ಲೆಡೆಯೂ ಹಚ್ಚ ಹಸುರಿನ ಹೊಳಪು..! ಈ ಹಸಿರು ಸೊಬಗನ್ನು... ಉಳಿಸಿ ಬೆಳೆಸುವ ಪ್ರಯತ್ನ ನಮ್ಮೆಲ್ಲರದು... ನನಗನಿಸುತ್ತದೆ "ಪ್ರಕೃತಿ ಮಾತೆ" ಯು ಪ್ರಕೃತಿಯ ಸಂಪತ್ತಾದ ಮರ - ಗಿಡಗಳನ್ನು ಮನುಜನು ಕಡಿದಾಗ ಎಷ್ಟು ಮುನಿಸಿದರೂ ಸಹ... ಪರಿಸರ ದಿನದಂದು ಚಿಕ್ಕ ಮಕ್ಕಳು , ದೊಡ್ಡವವರು ಎಲ್ಲರೂ ಒಟ್ಟಾಗಿ ಹಸುರಾದ ಗಿಡಗಳನ್ನು ನೆಟ್ಟು ಬೆಳೆಸಿದಾಗ ಅವಳ ಮೊಗದಲ್ಲಿ ಕಿರುನಗೆ ಬೀರಬಹುದೇನೋ...!!!? 
ಅಕ್ಕ... ನಿಮ್ಮ ಪತ್ರದಲ್ಲಿ ಚಿಪ್ಕೊ, ಅಪ್ಪಿಕೋ ಚಳುವಳಿಗಳ ಬಗ್ಗೆ ಓದುತ್ತಿರುವಾಗ ನಂಗೆ ಹೈಸ್ಕೂಲಿನ ಸಮಾಜ ವಿಜ್ಞಾನ ಪಾಠವು ಮರುಕಳಿಸಿತು.... ನಮಗೆ ಆ ವಿಷಯಗಳೆಲ್ಲವನ್ನು ಪುನರ್ಮನನ ಮಾಡಿದ್ದೀರಿ... ನಾವೆಲ್ಲರೂ ಪರಿಸರವನ್ನು ಹಸಿರಾಗಿಸುವ ಜೊತೆಗೆ ಅದನ್ನು ಪೋಷಿಸೋಣ... ಇಂದು ನಿಮ್ಮ ಪತ್ರಕ್ಕೆ ಉತ್ತರ ಕಳಿಸುವ ಮೂಲಕ ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ... ಇಂದಿನ ಒಳಿತು ವಿಷಯಗಳ ನಿಮ್ಮ ಪತ್ರಕ್ಕಾಗಿ ಧನ್ಯವಾದಗಳು.......
..................................................... ಪ್ರಿಯ. 
ಪ್ರಥಮ ಪಿ.ಯು.ಸಿ
ಸರಕಾರಿ ಪದವಿ ಪೂರ್ವ ಕಾಲೇಜು , ಅಳದಂಗಡಿ. ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
*******************************************


      ನಮಸ್ತೆ ಅಕ್ಕ. ನಾನು ನಿಮ್ಮ ಮುದ್ದಿನ ತಂಗಿ ಧೃತಿ. ನಾನು ಚೆನ್ನಾಗಿದ್ದೇನೆ. ನೀವು ಹೇಗಿದ್ದೀರಾ... ?. ಅಕ್ಕ ನಿಮಗೂ ಸಹ ಪರಿಸರ ದಿನದ ಶುಭಾಶಯಗಳು. ನಾನು ಸಹ ಗಿಡವನ್ನು ನೆಟ್ಟಿದ್ದೇನೆ. ನಾನು ಹುಟ್ಟುಹಬ್ಬದ ದಿನದಂದು ಕಳೆದ ವರ್ಷ ನೆಟ್ಟ ಹೂವಿನ ಗಿಡ ಈಗ ದೊಡ್ಡದಾಗಿ ಅದು ಈಗ ಹೂ ಕೊಡುತ್ತಿದೆ. ಅದಕ್ಕೆ ದಿನಾಲು ನೀರು ಹಾಕಿ ಬೆಳೆಸಿದ ಕಾರಣ ಅದು ನನಗೆ ದಿನಾಲೂ ದಾಸವಾಳವನ್ನು ಕೊಡುತ್ತದೆ. ಇರಲಿ ಒಂದು ಹೂವಾದರೂ ಅರಳಿತು ಎಂತಾದರೆ ಅದರಂತೆಯೇ ಅಂದಿನ ದಿನ ಸಹ ನನಗೆ ಬಹಳ ಖುಷಿಯಾಗಿ, ಸುಂದರವಾಗಿರುತ್ತದೆ ಅಂತ ನಂಬಿದ್ದೇನೆ. ಇನ್ನು ಮುಂದೆಯೂ ಸಹ ಒಂದು ಗಿಡವನ್ನು ಕಡಿದರೆ ಅದರ ಬದಲು ಎರಡು ಗಿಡವನ್ನು ನೆಡುತ್ತೇನೆ ಎಂದು ಹೇಳುತ್ತಾ 
ಧನ್ಯವಾದಗಳೊಂದಿಗೆ, 
.............................................................ಧೃತಿ 
10 ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
*******************************************         ನಮಸ್ತೆ ಅಕ್ಕ........ ನಾನು ಸ್ರಾನ್ವಿ .... ನೀವು ಹೇಗಿದ್ದೀರ.... ? ನಾವು ಚೆನ್ನಾಗಿದ್ದೇವೆ, ನಿಮ್ಮ ಪತ್ರ ಓದಿದೆ,  ಗಿಡ ನೆಡುವುದರ ಜೊತೆಗೆ ನಮ್ಮ ಪರಿಸರವನ್ನು ಉಳಿಸಿಕೊಳ್ಳಲು ನಾವು ಸಿಕ್ಕಲೆಲ್ಲಾ ಪ್ಲಾಸ್ಟಿಕ್ ಎಸೆಯುವುದನ್ನು  ಕಡಿಮೆ ಮಾಡಬೇಕು. ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗುವುದಿಲ್ಲ. ಇದರಿಂದಾಗಿ ಗಿಡ ಮರಗಳು ಚೆನ್ನಾಗಿ ಬೆಳೆಯುವುದಿಲ್ಲ.  ನಾವು ನೆಟ್ಟ ಗಿಡಗಳಿಗೆ ಸರಿಯಾಗಿ ನೀರು ಗೊಬ್ಬರ ಹಾಕಿ ಬೆಳೆಸಬೇಕು. ನಮ್ಮ ಮುಂದಿನ ಜೀವನಕ್ಕೆ ಒಳ್ಳೆ ಗಾಳಿ ಒಳ್ಳೆ ಆರೋಗ್ಯ ಸಿಗಬೇಕಾದರೆ ನಾವು ಗಿಡಮರಗಳನ್ನು ಬೆಳೆಸಬೇಕು. ಹಸಿರು ನಮ್ಮ ಉಸಿರಾಗಬೇಕು ಅಕ್ಕ...... ಧನ್ಯವಾದ ಅಕ್ಕ

......................................... ಸ್ರಾನ್ವಿ ಶೆಟ್ಟಿ  
9ನೇ ತರಗತಿ
ಓಂ ಜನಹಿತಾಯ ಇಂಗ್ಲಿಷ್ ಮೀಡಿಯಂ
ಸ್ಕೂಲ್ ಗುಡ್ಡೆಯಂಗಡಿ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************Ads on article

Advertise in articles 1

advertising articles 2

Advertise under the article