-->
ವಿಶ್ವ ಯೋಗ ದಿನಾಚರಣೆ - 2022 : ಜಗಲಿ ಮಕ್ಕಳ ವರದಿ  ಸಂಚಿಕೆ - 1

ವಿಶ್ವ ಯೋಗ ದಿನಾಚರಣೆ - 2022 : ಜಗಲಿ ಮಕ್ಕಳ ವರದಿ ಸಂಚಿಕೆ - 1

ಜೂನ್ -21
ವಿಶ್ವ ಯೋಗ ದಿನಾಚರಣೆ - 2022 : ಜಗಲಿ ಮಕ್ಕಳ ವರದಿ

        ತಮ್ಮ ಶಾಲೆಗಳಲ್ಲಿ ಜರುಗಿದ ಯೋಗ ದಿನಾಚರಣೆ ಕುರಿತು ಜಗಲಿಯ ಮಕ್ಕಳು ಬರೆದು ಕಳಿಸಿರುವ ವರದಿಗಳು ಇಲ್ಲಿವೆ..... ಜಗಲಿಯ ಮಕ್ಕಳಲ್ಲಿ ಕಾರ್ಯಕ್ರಮದ ವರದಿಯನ್ನು ಮಾಡುವ ಮತ್ತು ಬರೆಯುವ ಕೌಶಲ್ಯವನ್ನು ಮೂಡಿಸುವ ಪ್ರಯತ್ನ ಇದಾಗಿದೆ....


                                                                                                 
        ಹರಿ ಓಂ..... ನನ್ನ ಹೆಸರು ಸ್ರಾನ್ವಿ ಶೆಟ್ಟಿ ನಾನು ಓಂ ಜನಹಿತಾಯ ಶಾಲೆ ಗುಡ್ಡೆಯಂಗಡಿ ಇಲ್ಲಿಯ 9ನೇ ತರಗತಿಯ ವಿದ್ಯಾರ್ಥಿನಿ, ನಮ್ಮ ಶಾಲೆಯಲ್ಲಿ ಈ ದಿನ 8ನೇ ಯೋಗ ದಿನಾಚರಣೆ ಆಚರಿಸಿದೆವು. ನಮಗೆ ಯೋಗ ಹೇಳಿ ಕೊಡಲು (SPYSS) ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಯೋಗ ಶಿಕ್ಷಕರಾದ ಜನಾರ್ಧನ ಅಣ್ಣ ಮತ್ತು ಪುರುಷೋತ್ತಮ ಅಣ್ಣ ಬಂದಿದ್ದರು. ಅವರು ನಮಗೆ ಯೋಗದಿಂದ ಆಗುವ ಪ್ರಯೋಜನಗಳನ್ನು ತಿಳಿಸಿದರು. ಯೋಗ ನಮಗೆ ಪ್ರಾಚೀನ ಪರಂಪರೆಯ ದೊಡ್ಡ ಕೊಡುಗೆ, ನಮ್ಮ ಮನಸ್ಸಿನ ಆರೋಗ್ಯ, ದೇಹದ ಆರೋಗ್ಯ ಸರಿಯಾಗಿಡಲು ಯೋಗ ಪ್ರಯೋಜನವಾಗಿದೆ, ಎಂದೆಲ್ಲ ತಿಳಿಸಿದರು. ದಿನಕ್ಕೆ 3 ಲೀ ನೀರು ಕುಡಿಯಬೇಕು, ಒಣ ಹಣ್ಣುಗಳನ್ನು ತಿನ್ನಬೇಕು, ಅದರಿಂದಾಗುವ ಪ್ರಯೋಜನಗಳನ್ನು ತಿಳಿಸಿದರು. ನಮ್ಮ ಶಾಲೆಯಲ್ಲಿ ದಿನಾ ಬೆಳಗ್ಗೆ 5 ಗಂಟೆಯಿಂದ 6.30ರ ತನಕ ಯೋಗ ತರಬೇತಿ ನೀಡುತ್ತಾರೆ, ನಾನು ಕೂಡ ಹೋಗುತ್ತಿದ್ದೇನೆ. ನಮಗೆ ಯೋಗ ದಿನವಾದ ಇಂದು ಯೋಗ ಶಿಕ್ಷಣವು ಬೆಳಗ್ಗೆ ಮೂಡಬಿದಿರೆಯ ಸಾವಿರ ಕಂಬದ ಬೀದಿಯಲ್ಲಿ ನಡೆದಿತ್ತು. ಮತ್ತೆ ಶಾಲೆಗೆ ಬಂದು ಶಾಲೆಯಲ್ಲಿ ಕೂಡ ಯೋಗ ದಿನಾಚರಣೆ ನಡೆಸಿದೆವು. ಧನ್ಯವಾದಗಳು
............................................... ಸ್ರಾನ್ವಿ ಶೆಟ್ಟಿ 
9ನೇ ತರಗತಿ 
ಓಂ ಜನಹಿತಾಯ ಇಂಗ್ಲಿಷ್ ಮೀಡಿಯಂ 
ಸ್ಕೂಲ್ ಗುಡ್ಡೆಯಂಗಡಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************


 
             ನಾನು ಸುಮಧ್ವ ರಾಜ್ ಭಟ್........ ಅಂತರಾಷ್ಟ್ರೀಯ ಯೋಗ ದಿನವನ್ನು ಪ್ರತಿ ವರ್ಷ ಜೂನ್ 21ರಂದು ಆಚರಿಸಲಾಗುತ್ತದೆ.
11ಡಿಸೆಂಬರ್ 2014ರಂದು ವಿಶ್ವ ಸಂಸ್ಥೆಯು ಸಾಮಾನ್ಯ ಸಭೆ ಜೂನ್ 21ಅನ್ನು ಅಂತರಾಷ್ಟ್ರೀಯ ಯೋಗ ದಿನವಾಗಿ ಅಂಗೀಕರಿಸಲಾಯಿತು. ಯೋಗವನ್ನು ಮಾಡುವಾಗ ಶುದ್ಧವಾದ ಗಾಳಿ ಪರಿಸರ ಅಗತ್ಯವಾಗಿರುತ್ತದೆ. ಬೆಳಗಿನ ಜಾವ ಅಥವಾ ಸಂಜೆಯ ಸಮಯದಲ್ಲಿ ಅಭ್ಯಾಸ ಮಾಡುವುದು ಹೆಚ್ಚು ಉತ್ತಮ ಮತ್ತು ಫಲಕಾರಿ. ನಮ್ಮ ಶಾಲೆಯಲ್ಲಿ ಇಂದು ನಾನು ಮತ್ತು ನನ್ನ ಸ್ನೇಹಿತರು ಒಟ್ಟು ಸೇರಿ ತುಂಬಾ ಖುಷಿಯಿಂದ ಯೋಗದ ದಿನಾಚರಣೆಯನ್ನು ಆಚರಿಸಿದೆವು. ನಮ್ಮ ಶಾಲಾ ದೈಹಿಕ ಶಿಕ್ಷಕ ಗಣೇಶ್ ಸರ್ ಇಂದು ಒಳ್ಳೆಯ ರೀತಿಯಲ್ಲಿ ಯೋಗವನ್ನು ಹೇಳಿ ಕೊಟ್ಟರು. ಇಂದು ನಾವು ಇಡೀ ಶಾಲಾ ವಿದ್ಯಾರ್ಥಿ - ವಿದ್ಯಾರ್ಥಿನಿಯರು ಒಳ್ಳೆಯ ರೀತಿಯಲ್ಲಿ ಸದುಪಯೋಗ ಪಡೆದೆವು. 
................................... ಸುಮಧ್ವ ರಾಜ್ ಭಟ್ 
4 ನೇ ತರಗತಿ 
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಕುಕ್ಕೇಹಳ್ಳಿ ಉಡುಪಿ
ಉಡುಪಿ ತಾಲೂಕು , ಉಡುಪಿ ಜಿಲ್ಲೆ
********************************************



     ನನ್ನ ಹೆಸರು ಪೂರ್ವಿ ಕೆ.ಎಸ್. ಪಂಜಿಕಲ್ಲು ಶಾಲೆಯ ವಿದ್ಯಾರ್ಥಿನಿ. ಮೊದಲಿಗೆ ಎಲ್ಲರಿಗೂ ವಿಶ್ವ ಯೋಗ ದಿನದ ಶುಭಾಶಯಗಳು. ನಮ್ಮ ಶಾಲೆಯಲ್ಲಿ ತುಂಬಾ ಚೆನ್ನಾಗಿ ಯೋಗ ದಿನವನ್ನು ಆಚರಿಸಿದೆವು. ಕಳೆದ ವರ್ಷಕ್ಕಿಂತಲೂ ತುಂಬಾ ಚೆನ್ನಾಗಿ ನಡೆಯಿತು. ಮೊದಲಿಗೆ ಸಭಾಂಗಣದಲ್ಲಿ ನಮ್ಮ ತಂಡದಿಂದ ಯೋಗ ಗೀತೆಯನ್ನು ಹಾಡಿದೆವು. ನಂತರ ದೀಪ ಹಚ್ಚುವ ಮೂಲಕ ಯೋಗ ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ್ದ ನಮ್ಮ ಶಾಲೆಯ ಮುಖ್ಯೋಪಾಧ್ಯಾಯರು ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಚಾಲನೆ ನೀಡಿದರು. ದೀಪ ಹಚ್ಚುವ ಸಮಯದಲ್ಲಿ ನಾವು ಶುಭಗೀತೆ ಯನ್ನು ಹಾಡಿದೆವು. ನಮಗೆ ಯೋಗವನ್ನು ಕಲಿಸಿದ ಗುರುಗಳಾದ ವಿನೋದ ಟೀಚರ್ರವರ ಮಾತುಗಳನ್ನು ಕೇಳಿ ತುಂಬಾ ಖುಷಿಪಟ್ಟೆವು. ದಿನಾಲು ಮುಂಜಾನೆ ಬೇಗ ಎದ್ದು ಯೋಗ ಮಾಡುವ ವಿದ್ಯಾರ್ಥಿಗಳಿಂದ ಅನಿಸಿಕೆಗಳನ್ನು ಕೇಳಿದೆವು. ಶಿಕ್ಷಕರು ಕೂಡ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ರಾಮ್ ದೇವ್ ಬಾ ಬಾ ಇವರ ಶಿಷ್ಯನ ಜೊತೆ ಕಳೆದ ಸಮಯವನ್ನು ನಮಗೆ ಮುಖ್ಯೋಪಾಧ್ಯಾಯರು ಹೇಳಿದರು. ಎಲ್ಲಾ ವಿಧ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿ ಯೋಗವನ್ನು ಮಾಡಿದೆವು. ಇದು ನಮ್ಮ ಶಾಲೆಯಲ್ಲಿ ನಡೆದ ವಿಶ್ವ ಅಂತಾರಾಷ್ಟ್ರೀಯ ಯೋಗ ದಿನವಾಗಿದೆ. ಎಲ್ಲಾ ಸಹಪಾಠಿಗಳು ಒಂದೇ ರೀತಿಯ ಬಟ್ಟೆಗಳನ್ನು ಧರಿಸಿ ತುಂಬಾ ಉತ್ಸಾಹದಿಂದ, ಆನಂದದಿಂದ ಯೋಗದಿವನ್ನು ಆಚರಿಸಿದೆವು..
................................... ಪೂರ್ವಿ ಕೆ.ಎಸ್
10ನೇ ತರಗತಿ 
ಸರಕಾರಿ ಪ್ರೌಢಶಾಲೆ ಪಂಜಿಕಲ್ಲು  
ಪಂಜಿಕಲ್ಲು ಅಂಚೆ ಮತ್ತು ಗ್ರಾಮ 
ಬಂಟ್ವಾಳ ತಾಲೂಕು. ದಕ್ಷಿಣ ಕನ್ನಡ ಜಿಲ್ಲೆ
********************************************



        ನಾನು ಜನನಿ. ಪಿ....... ಅಂತರಾಷ್ಟ್ರೀಯ ಯೋಗ ದಿನಾಚರಣೆ 'ಮಾನವೀಯತೆಗಾಗಿ ಯೋಗ' ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಮ್ಮ ಶಾಲೆಯಲ್ಲಿ ಆಚರಿಸಲಾಯಿತು. 10 ಗಂಟೆಗೆ ನಮ್ಮ ಪ್ರತಿದಿನದ ಪ್ರಾರ್ಥನೆಯನ್ನು ಹಾಡಿದೆವು. ಯೋಗದ ಆರಂಭದ ಪ್ರಾರ್ಥನೆ ಹಾಡಿ, ನಂತರ ಸೂರ್ಯ ನಮಸ್ಕಾರದ 12 ಹಂತಗಳನ್ನು ಕ್ರಮಬದ್ಧವಾಗಿ ಮಾಡಿದೆವು. ಯೋಗದ ಬಗ್ಗೆ ಪ್ರತಿಜ್ಞೆ ಮಾಡಿದೆವು. ಒಬ್ಬೊಬ್ಬರು ಒಂದೊಂದು ಯೋಗಾಸನವನ್ನು ಮಾಡಿ ತೋರಿಸಿದರು. ನಂತರ ಪ್ರಾಣಾಯಾಮಗಳನ್ನು ಮಾಡಿದೆವು. ನಾನು ಕುಳಿತು ಮಾಡುವ ಆಸನವನ್ನು ಮಾಡಿದೆ. ಕೆಲವರು ನಿಂತು ಮಾಡುವ ಆಸನಗಳು, ಕುಳಿತು ಮಾಡುವ ಆಸನಗಳು, ಮಲಗಿ ಮಾಡುವ ಆಸನಗಳನ್ನು ಮಾಡಿದರು. ಮತ್ತೆ ಐದು ನಿಮಿಷ ಧ್ಯಾನ ಮಾಡಿ ಸ್ವಸ್ತಿ ಮಂತ್ರವನ್ನು ಹಾಡಿ ಕೊನೆಗೊಳಿಸಿದೆವು. 
................................... ಜನನಿ. ಪಿ
6ನೇ ತರಗತಿ 
ದ. ಕ. ಜಿ. ಪ. ಉ. ಹಿ. ಪ್ರಾ. ಶಾಲೆ ಕೊಯಿಲ ಕೆ.ಸಿ. ಫಾರ್ಮ. ಕೊಯಿಲ ಗ್ರಾಮ 
ಕಡಬ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
********************************************



          ನನ್ನ ಹೆಸರು ನಂದನ್ ಕೆ .ಹೆಚ್. ನನ್ನ ಸರಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟು (ಪ್ರೌಢಶಾಲಾ ವಿಭಾಗ ) ಇಲ್ಲಿ ವಿಶ್ವ ಯೋಗ ದಿನವನ್ನು ದಿನಾಂಕ 21 /6/2022 ರಂದು ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ದೈಹಿಕ ಶಿಕ್ಷಣ ಶಿಕ್ಷಕಿ ಗೀತಾಮಣಿ ಇವರು ನೆರವೇರಿಸಿದರು. ಶಿಕ್ಷಕಿ ಮಮತಾ ರೈ ಇವರು ಯೋಗದ ಮಹತ್ವವನ್ನು ತಿಳಿಸಿದರು.  NCC ಮಾರ್ಗದರ್ಶಿ ಶಿಕ್ಷಕರಾದ ಗ್ರೆಗರಿ ರೋನಿ ಪಾಯ್ಸ್ ಇವರ ಮಾರ್ಗದರ್ಶನದಡಿಯಲ್ಲಿ ಎಲ್ಲಾ ವಿದ್ಯಾರ್ಥಿಗಳು ವಿವಿಧ ಆಸನಗಳನ್ನು ಮಾಡಿದರು. ಯೋಗದಿಂದ ಆಗುವ ಪ್ರಯೋಜನಗಳನ್ನು ತಿಳಿದೆವು. ಪ್ರಾಣಾಯಾಮಗಳನ್ನು ಸಹ ಅಭ್ಯಾಸ ಮಾಡಿದೆವು. ವಾರದ ನಡೆದ ಅಭ್ಯಾಸ ಕಾರ್ಯಕ್ರಮದಿಂದಾಗಿ ಈ ದಿನದ ಯೋಗ ಆಚರಣೆಯು ಬಹಳ ಅಚ್ಚುಕಟ್ಟಾಗಿ ನಡೆಯಿತು. NCC ವಿದ್ಯಾರ್ಥಿಗಳು ಯೋಗ ಪ್ರದರ್ಶನದ ಮುಂದಾಳತ್ವವನ್ನು ವಹಿಸಿದ್ದರು. ಶಾಲೆಯ ಎಲ್ಲಾ ಅಧ್ಯಾಪಕ ವೃಂದದವರು ಸಹ ನಮ್ಮೊಂದಿಗೆ ಯೋಗಾಭ್ಯಾಸದಲ್ಲಿ ಪಾಲ್ಗೊಂಡರು.
................................... ನಂದನ್ ಕೆ ಹೆಚ್
8ನೆ ತರಗತಿ , ಬಿ ವಿಭಾಗ
ಸರಕಾರಿ ಪದವಿ ಪೂರ್ವ ಕಾಲೇಜು 
ಕೊಂಬೆಟ್ಟು (ಪ್ರೌಢಶಾಲಾ ವಿಭಾಗ )
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
********************************************




       ಎಲ್ಲರಿಗೂ ನಮಸ್ಕಾರ. ನನ್ನ ಹೆಸರು ಶುಬಿಕ್ಷಾ, ಮೊದಲಿಗೆ ಇ-ಜಗಲಿಯ ಸ್ನೇಹಿತರಿಗೆ ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳು. ನಮ್ಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಯೋಗ ಮಾಡಲು ಸರಿ ಹೊಂದುವ ಬಟ್ಟೆ ಧರಿಸಿ ಬೆಳಗ್ಗೆ 9:30 ಕ್ಕೆ ಸರಿಯಾಗಿ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಅರ್ಧ ಚಕ್ರಾಸನ, ತ್ರಿಕೋನಾಸನ, ಗರುಡಾಸನ, ಅಂಗುಷ್ಠಾಸನ, ಪದ್ಮಾಸನ, ವಜ್ರಾಸನ ಮುಂತಾದ ನಿಂತುಮಾಡುವ ಮತ್ತು ಕುಳಿತು ಮಾಡುವ ಆಸನಗಳನ್ನು ನಾನು ನನ್ನ ಶಾಲಾ ಸಹಪಾಠಿಗಳೊಂದಿಗೆ ಮಾಡಿದೆ. ಅದರೊಂದಿಗೆ ಪ್ರಾಣಾಯಾಮ ಮತ್ತು ಧ್ಯಾನದಂತಹ ಏಕಾಗ್ರತೆಯನ್ನು ವೃದ್ಧಿಸುವ ಆಸನಗಳನ್ನು ನಮ್ಮ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ನೇತೃತ್ವದಲ್ಲಿ ಮಾಡಲಾಯಿತು. ನಂತರ ನಮ್ಮ ಶಾಲಾ ಸ್ಥಾಪಕಾಧ್ಯಕ್ಷರು ಮತ್ತು ಮುಖ್ಯೋಪಾಧ್ಯಾಯರು ಯೋಗದ ಮಹತ್ವದ ಬಗ್ಗೆ ನಮಗೆ ಉತ್ತಮ ಮಾಹಿತಿ ನೀಡಿದರು. ಕೊನೆಗೆ ಕಾರ್ಯಕ್ರಮವು ಪ್ರತಿಜ್ಞೆ ಮಾಡುವ ಮೂಲಕ ಕೊನೆಗೊಂಡಿತು.....
................................... ಶುಬಿಕ್ಷಾ, 
10 ನೇ ತರಗತಿ
ಸರಕಾರಿ ಪ್ರೌಢಶಾಲೆ ಕೊಡ್ಮಾಣ್
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
********************************************



Ads on article

Advertise in articles 1

advertising articles 2

Advertise under the article