-->
ನನ್ನ ಅಮ್ಮ ನನ್ನ ಹೆಮ್ಮೆ

ನನ್ನ ಅಮ್ಮ ನನ್ನ ಹೆಮ್ಮೆ

ಮೇ - 8 : ವಿಶ್ವ ತಾಯಂದಿರ ದಿನ
ಈ ದಿನದ ವಿಶೇಷ ಲೇಖನ

                  
     ಭೂಮಿಯ ಮೇಲೆ ಬೆಲೆ ಕಟ್ಟಲಾಗದಂತಹ ಅಮೂಲ್ಯವಾದ ಮಾಣಿಕ್ಯ ಒಂದಿದೆ ಎಂದರೆ 
ಅದು "ಅಮ್ಮ " ಮಾತ್ರ.
    ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ. ಅದುವೇ ತಾಯಿಯ ಶ್ರೇಷ್ಠತೆ. ತನ್ನ ಆಸೆ ಆಕಾಂಕ್ಷೆಗಳನ್ನೆಲ್ಲಾ ಮರೆತು ತನ್ನ ಸುಖವನ್ನು ತ್ಯಾಗ ಮಾಡಿ ಮಕ್ಕಳ ಸಂತೋಷವೇ ತನ್ನ ಸಂತೋಷವೆಂದು ತನ್ನ ಮಕ್ಕಳನ್ನು ಜಗತ್ತಿನಲ್ಲಿ ಎತ್ತರಕ್ಕೆ ಬೆಳೆಸಬೇಕೆಂದು ಮತ್ತು ಯಾರಿಂದಲೂ ಕೆಟ್ಟ ಮಕ್ಕಳು ಎಂಬ ಹೆಸರು ಬರಬಾರದೆಂದು ಎಚ್ಚರವಹಿಸುವಳು. "ನಿಮ್ಮಲ್ಲಿ ಹೇಳಲು ಸಾಧ್ಯವಾದಷ್ಟು ಸಂಪತ್ತು ಇರಬಹುದು ಮಣಗಟ್ಟಲೆ ಚಿನ್ನಾಭರಣಗಳು ಇರಬಹುದು ಆದರೆ ನಾನು ಶ್ರೀಮಂತರಿಗಿಂತ ಶ್ರೀಮಂತ ಏಕೆಂದರೆ ನನ್ನ ಬಳಿ ಬೆಲೆ ಕಟ್ಟಲಾಗದಂತಹ ತಾಯಿ ಇದ್ದಾಳೆ." ಎಂಬ ವಿದ್ವಾಂಸರ ಮಾತು ಅವಿಸ್ಮರಣೀಯ.
   ನಾನು ಕೆಳಗೆ ಬಿದ್ದಾಗ, ಓಡಿಬಂದು ಮೇಲೆತ್ತಿ, ಬಿದ್ದ ಮಗ ಎಂದು ಬಿಗಿದಪ್ಪಿಕೊಂಡು ಬಿದ್ದ ಜಾಗಕ್ಕೆ ಉಗುಳಿಸಿ, ಕರೆತಂದು ಅದರ ಬಗ್ಗೆ ಕಥೆಗಳನ್ನು ಹೇಳಿ ನನ್ನ ನೋವು ಮರೆಸಿ, ಬಿದ್ದ ಗಾಯಕ್ಕೆ ಮುತ್ತಿಟ್ಟು ನೋವನ್ನು ಮರೆಸಿದ ವಿಶ್ವದ ಏಕೈಕ ವ್ಯಕ್ತಿ ಅಮ್ಮ.      
   ನನ್ನ ತಾಯಿ ನನ್ನ ಮೊದಲ ಗುರು, ನನ್ನ ಸ್ನೇಹಿತ ಹಾಗೂ ನನ್ನ ದೇವರು. ನನ್ನನ್ನು ಜಗತ್ತಿಗೆ ಪರಿಚಯಿಸಿದ ಪವಿತ್ರ ಆತ್ಮ ಅಮ್ಮ. ಮಗು ತನ್ನ ಜೀವನದಲ್ಲಿ ಹೇಳುವ ಮೊದಲ ಪದವು ಸಹ "ಅಮ್ಮ".  
     ಅಮ್ಮನನ್ನು ವರ್ಣಿಸಲು ಪದಗಳುಂಟೆ, ವರ್ಣಿಸಲು ಹೊರಟರೆ, ಭಾಷೆಯೇ ಬಡವಿಯಾಗುವುದು. ಲೇಖನ ಕವನ ಇವೆಲ್ಲವು ಸಹಿತ ಅವಳ ಮುಂದೆ ಶೂನ್ಯದಂತೆ ಕಾಣುವುದು. ಕೆಲವೊಂದು ಸಾರಿ ಬೇರೆ ಹೆಣ್ಣು ನೊಂದಾಗ ದೌರ್ಜನ್ಯಕ್ಕೆ ಒಳಗಾದಾಗ ಮನನೊಂದು ಅಮ್ಮನನ್ನು ತೊರಯಬಾರದೆಂಬ ಮನಸ್ಸು ಮಿಡಿಯುತ್ತದೆ. ಎಲ್ಲವನ್ನೂ ತೊರೆದು ಇತರರ ಬದುಕಿಗೆ ಅಣಿಯಾಗುವುದಕ್ಕಿಂತ ಅಮ್ಮನ ಒಡಲಾಳದಲ್ಲಿ ಬದುಕಬೇಕೆಂಬ ಆಸೆ ನನ್ನದು....
    ನನಗೆ ಸೃಷ್ಟಿಕರ್ತನ ನಿಷ್ಕಲ್ಮಷ ಜೀವಿ ಎಂದರೆ ಇವಳೇ ಅಂತಾ ಗೊತ್ತಾಗಿದ್ದು ಸ್ವಲ್ಪ ತಡವೇ. ಅವಳು ನನ್ನೊಂದಿಗೆ ಇದ್ದಾಗ ನನ್ನೆದೆಯ ಭಾರವೆಲ್ಲ ಹಗುರಾಯಿತು. ಜೀವನಪೂರ್ತಿ ನಾನೆಂದು ತೊರೆಯರಲಾದ ಬಹುದೊಡ್ಡ ನನ್ನ ಪಾಲಿನ ಮಾಣಿಕ್ಯವೇ ನನ್ನವ್ವ... ನನ್ನದು ಕೂಡು ಕುಟುಂಬ. ಕೆಲಸದ ಜಂಜಾಟದಲ್ಲೂ ಅವ್ವನ ಪ್ರೀತಿ ಇತರ ನೋಡುಗರಿಗೆ ಸ್ವಲ್ಪ ಅತಿಶಯವಾಗಿ ಆಗಾಗ ಅನಿಸುತ್ತಿತ್ತು. ನನ್ನ ಬದುಕಿಗೆ ಸ್ಪೂರ್ತಿಯಾಗಿ, ಅಕ್ಷರದ ಅನ್ನ ಉಣಬಡಿಸಿದ್ದು ಸಹ ಬಡತನದಲ್ಲಿಯೇ. ಅವಳು ಕಳೆದಂತ ‌‌ನೋವಿನ ದಿನಗಳು ತನಗೆ ಹುಟ್ಟಿದ ಮಕ್ಕಳಿಗೆ ಬರಬಾರದೆಂದು,‌ ಅವಳಿಗಿಂತ ಹೆಚ್ಚಿನ ಸಂತಸದಿಂದ ಕಳೆಯಲು ಅವ್ವ ನೋವುಂಡಿದ್ದು ಅಷ್ಟಿಷ್ಟಲ್ಲ. ನಮ್ಮನ್ನು ಸದೃಢ ‌ಮಾಡಲು ತವರಮನೆಯಿಂದ ಆಕಳು ತಂದು ಹಾಲುಣಿಸಿದ್ದ ಮುಕ್ಕೋಟಿ ದೇವಿಯೇ ‌ ನನ್ನವ್ವ ಮಹಾದೇವಿ. ತನ್ನ ಮೂರು ಮಕ್ಕಳ ಏಳ್ಗೆಗಾಗಿ ಸೆಣೆಸಾಡಿದ್ದು ಅಷ್ಟಿಷ್ಟಲ್ಲ. ಅವಳಿಗೆ ಸಾಟಿಯಾಗಿ ಬದುಕಿನ ಕಷ್ಟಗಳನ್ನು‌ ಬವಣಿಸಿದರಲ್ಲಿ ಅರ್ಧ ಪಾಲು ಅಪ್ಪನದು ಕೂಡಾ... ಶ್ರೀಮಂತರ ಮಕ್ಕಳಂತೆ ನಮ್ಮನ್ನು ಪಟ್ಟಣದಲ್ಲಿ ಓದಿಸಿ‌ ನಮ್ಮ ಭವಿಷ್ಯಕ್ಕೆ ನಾವೇ ಹೊಣೆ ಎನ್ನುವ ಮಟ್ಡಿಗೆ ನಮ್ಮನ್ನು ಪೋಷಿಸಿದ ಕಣ್ಮಣಿಗಳು .
         ಹಬ್ಬ ಹರಿದಿನಗಳಲ್ಲಿ ಅವಳು ಹಳೆಯ ಸೀರೆಯನ್ನುಟ್ಟು ನಮಗೆ ಹೊಸ ಬಟ್ಟೆ ತೊಡಿಸಿ ಸಂಭ್ರಮಿಸಿದ ಸಂತಸ, ನಮಗೆ ಬಿಸಿರೊಟ್ಟಿ ತಟ್ಟಿ ಅವಳು ಮಾತ್ರ ತಂಗಳ ರೊಟ್ಟಿ ತಿಂದು, ಯಾವುದೋ ದಿನ ರುಚಿಯಾಗಿ ಮಾಡಿದಾಗ ನಮಗೆ ಬಡಿಸಿ ಮಿಕ್ಕಿದರೆ ತಿನ್ನುವದು ಇಲ್ಲವಾದರೆ ಅನಾರೋಗ್ಯದ ನೆಪ ಹೇಳಿ ಜರಿಯುವದು. ಹೇಳುತ್ತಾ ಹೋದರೆ ಮುಗಿಯದ ಮಹಾಚರಿತ್ರೆ ಅವಳದ್ದು.
      ಹೊತ್ತು ಹೆತ್ತು ಲಾಲಿ ಆಡಿಸಿ ಜಗತ್ತು ತೋರಿಸಿದ ಕರುಣೆಯ ಅಪರಂಜಿಯನ್ನು ಬಿಟ್ಟು ಮತ್ತೊಬ್ಬರ ಬದುಕಿನ ಜೀವನ ಜ್ಯೋತಿ ಬೆಳಗಿಸಲು ಕೆಲವೊಂದು ಸಾರಿ ಮನಸ್ಸು ಒಪ್ಪುವುದಿಲ್ಲ. ನಿನಗೆ ಒಪ್ಪಿಗೆಯಾದರೆ ನಿನ್ನ ಅಂಗೈ ಜೀವಿಯಾಗಿ ನಿನ್ನ ಬಳಿ ಕೊನೆ ಉಸಿರು ಇರುವವರೆಗೆ ಬದುಕುವ ಆಸೆ ನನ್ನದು.
       ಇಂದು ವಿಶ್ವ ಅಮ್ಮಂದಿರ ಆಚರಣೆ ಅದೊಂದು ದಿನವಾಗಿ ಉಳಿಯದೆ ಅಮ್ಮಂದಿರು ಅನಾಥ ಆಶ್ರಮ ಸೇರದಂತೆ ಈ ಜಗತ್ತು ಕಣ್ಮರೆಯಾಗುವ ತನಕ ಅಮ್ಮಂದಿರನ್ನು ಪೂಜಿಸುವ ಪರಂಪರೆಯನ್ನು ಉಳಿಸೋಣ...
.................................ಮಲ್ಲೇಶಯ್ಯ ಹೆಚ್.ಎಂ. 
ಶಿಕ್ಷಕರು 
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ರಾಮಕುಂಜ , ಪುತ್ತೂರು , ದ.ಕ. ಜಿಲ್ಲೆ
******************************************




Ads on article

Advertise in articles 1

advertising articles 2

Advertise under the article