ಅಕ್ಕನ ಪತ್ರ - 23
Saturday, May 7, 2022
Edit
ಜಗಲಿಯ ಮಕ್ಕಳಿಗೆ
ಅಕ್ಕನ ಪತ್ರ - 23
ನಮಸ್ತೆ ಮಕ್ಕಳೇ,..... ಆರೋಗ್ಯವಾಗಿದ್ದೀರಿ ತಾನೇ.....? ರಜೆ ಇನ್ನೂ ಇದೆ ಅಲ್ವಾ.....? ನಮ್ಮದೇ ಕೆಲಸಗಳ ನಡುವೆ ದಿನಗಳು ಅರಿವಿಲ್ಲದೆ ಬಹಳ ಬೇಗನೆ ಕಳೆದು ಹೋಗುತ್ತಿವೆ. ತಿಳಿದುಕೊಳ್ಳಬೇಕಾಗಿರುವ ಲೆಕ್ಕವಿಲ್ಲದಷ್ಟು ವಿಚಾರಗಳು ಈ ನಡುವೆ ನಡೆದು ಹೋಗಿರುತ್ತವೆ.
ಇತ್ತೀಚೆಗೆ ಆತ್ಮೀಯರೊಬ್ಬರು ಸಂದೇಶವೊಂದನ್ನು ಕಳಿಸಿದ್ರು... ನಿಮ್ಮೊಡನೆ ಹಂಚಿಕೊಳ್ಳಬೇಕೆನಿಸಿತು. ವಸತಿ ಶಾಲೆಯ ಅಧ್ಯಾಪಕರೊಬ್ಬರು, ಪರಿಸರ ಕಾಳಜಿಯನ್ನು ತೋರಿದ ತಮ್ಮ ಮಕ್ಕಳ ಬಗ್ಗೆ ಬರೆದಿದ್ರು.
ಹೌದು...... ನಾವು ಶಾಲೆಗೆ ಹೋಗುವಾಗ ಉಪಯೋಗಿಸಿ ಶಾಯಿ ಖಾಲಿಯಾದ ಪೆನ್ನುಗಳಿಗೆ ಮತ್ತೆ ಪೆನ್ನು ಕಡ್ಡಿಗಳನ್ನು ಹಾಕುತ್ತಿದ್ದೆವು. ಖಾಲಿಯಾದ ಪೆನ್ನು ಕಡ್ಡಿಗಳಿಗೆ ಯಾವುದಾದರೂ ನೈಸರ್ಗಿಕ ಬಣ್ಣಗಳನ್ನು ತುಂಬಿ , ಬರೆದು ಖುಷಿ ಪಡ್ತಿದ್ದೆವು. ಹಿಂದೆಲ್ಲಾ ಒಂದೇ ಪೆನ್ನನ್ನು ತುಂಬಾ ಸಮಯದವರೆಗೆ ಹೀಗೆ ಕಡ್ಡಿ ಬದಲಾಯಿಸಿ ಉಪಯೋಗಿಸ್ತಿದ್ರು. ಆದರೆ ಈಗ ಶಾಯಿ ಮುಗಿದ ಕೂಡಲೇ ಹೊಸ ರಿಫಿಲ್ ಸಿಗುವುದಿದ್ದರೂ ಅದನ್ನು ಖರೀದಿಸಿ ಅದೇ ಪೆನ್ನಿ ಗೆ ಮತ್ತೆ ಹಾಕಿ ಬರೆಯುವಷ್ಟು ಕಾಳಜಿ, ಪ್ರೀತಿ, ಉಳಿತಾಯದ ಮೌಲ್ಯ, ತಾಳ್ಮೆ... ಯಾವುದೂ ಉಳಿದುಕೊಂಡಿಲ್ಲ. ಮುಗಿದಷ್ಟೂ ಪೆನ್ನುಗಳನ್ನು ಪ್ರಕೃತಿಯ ಮಡಿಲಿಗೆಸೆಯುತ್ತೇವೆ...!!
ಶಿಕ್ಷಕರು ಈ ವಿಚಾರವಾಗಿ ತರಗತಿಯಲ್ಲಿ ವಿದ್ಯಾರ್ಥಿಗಳೊಡನೆ ಚರ್ಚೆ ಮಾಡಿದ್ದರಂತೆ. ಅದೇನೋ ಹೊಳೆದ ಮಕ್ಕಳು...., ಪರಿಸರ ರಕ್ಷಣೆಯ ಸೇವೆಗಾಗಿ ಜೊತೆಯಾದರು. ಬಿಡುವಿನ ಸಮಯದಲ್ಲಿ, ಅಲ್ಲಲ್ಲಿ ಬಿದ್ದುಕೊಂಡಿದ್ದ ಸುಮಾರು 4,000 ಗಳಷ್ಟು ಪೆನ್ನುಗಳನ್ನು ಹೆಕ್ಕಿ ಒಂದೆಡೆ ಸೇರಿಸಿದ್ದಾರೆ. ಮಕ್ಕಳು ಹಾಗೂ ಆಲೋಚನೆಗೆ ಸ್ಫೂರ್ತಿ ತುಂಬಿದ ಗುರುಗಳು ಅಭಿನಂದನಾರ್ಹರು.
ಪ್ಲಾಸ್ಟಿಕ್ ಅಪಾಯವೆನ್ನುವ ಅರಿವು ನಮ್ಮೆಲ್ಲರಿಗಿದೆ. ನಾವೂ ಪೆನ್ನನ್ನು ಬಳಸುವಾಗ ಎಸೆಯುವಾಗ ಒಂದಿಷ್ಟು ಮರುಬಳಕೆಯ ಕುರಿತು ಚಿಂತಿಸಬೇಕಾಗಿದೆ. ನೀರಿನ ಬಾಟಲ್ ಗಳೂ ನಮ್ಮ ಸುತ್ತಮುತ್ತಲೂ ಲೆಕ್ಕವಿಲ್ಲದಷ್ಟು ಹರಡಿಕೊಂಡಿವೆ. ಒಬ್ಬೊಬ್ಬರ ನಿರ್ಧಾರಗಳು ಈ ನಿಟ್ಟಿನಲ್ಲಿ ಬಹಳ ಮುಖ್ಯವಾಗುತ್ತವೆ ಅಲ್ವಾ....?
ನೀವು ಇಂತಹದ್ದೇ ವಿಭಿನ್ನ ಆಲೋಚನೆಗಳ ಮೂಲಕ ಹೊಸತನಕ್ಕೆ ತೆರೆದು ಕೊಂಡಿರಲೂಬಹುದು. ಏನನ್ನಿಸುತ್ತಿದೆ......? ಬರೆದು ಕಳಿಸ್ತೀರಲ್ವಾ.....? ಮುಂದಿನ ಪತ್ರದಲ್ಲಿ ಮತ್ತೆ ಭೇಟಿಯಾಗೋಣ. ಅಲ್ಲಿಯವರೆಗೆ ಅಕ್ಕನ ನಮನಗಳು. ಆರೋಗ್ಯ ಜೋಪಾನ. ಇನ್ನು ನನ್ನ ನಿಮ್ಮ ಭೇಟಿ..... ಮುಂದಿನ ಪತ್ರದೊಂದಿಗೆ...... ಅಲ್ಲಿಯವರೆಗೆ ಅಕ್ಕನ ನಮನಗಳು.
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
****************************************