-->
ಲಾಕ್ ಡೌನ್ ಸದುಪಯೋಗಪಡಿಸಿಕೊಂಡ : ನಿಯತಿ ರಾಜೇಶ ನಾಯಕ

ಲಾಕ್ ಡೌನ್ ಸದುಪಯೋಗಪಡಿಸಿಕೊಂಡ : ನಿಯತಿ ರಾಜೇಶ ನಾಯಕ

ನಿಯತಿ ರಾಜೇಶ ನಾಯಕ 
10 ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ,  ನೆಲ್ಲಿಕೇರಿ
ಕುಮಟಾ, ಉತ್ತರ  ಕನ್ನಡ ಜಿಲ್ಲೆ.


              ಕೊರೋನ ಮಹಾಮಾರಿಯಿಂದ ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾದಾಗ ಸಾಮಾನ್ಯವಾಗಿ ಬೆಚ್ಚಿಬಿದ್ದವರೆ ಜಾಸ್ತಿ. ಶಾಲೆಗಳಂತೂ ಮುಚ್ಚಿ ವಿದ್ಯಾರ್ಥಿಗಳ ಭವಿಷ್ಯವೇ ಹಾಳಾಯಿತು ಎಂದು ಗೋಗರೆದವರೆ ಜಾಸ್ತಿ.... ಕೇವಲ ಪಠ್ಯ ಪುಸ್ತಕ , ಮಾರ್ಕ್ಸು , ಗ್ರೇಡು ಎಂದು ಚೌಕಟ್ಟು ಹಾಕಿಕೊಂಡವರಿಗೆ ತೊಂದರೆಯಾಗಿದ್ದು ಬಿಟ್ಟರೆ ಸೃಜನಶೀಲರಾಗಿ , ಕ್ರಿಯಾಶೀಲರಾಗಿ ಎಲ್ಲಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಕೊಂಡ ಮಕ್ಕಳಿಗಂತೂ ಲಾಭವಾಗಿರುವುದು ಸತ್ಯ. ತಮ್ಮ ಆಸಕ್ತಿಯ ವಿಷಯಗಳಿಗಾಗಿ ಬಿಡುವು ಹೆಚ್ಚು ಸಿಕ್ಕಿದ್ದರಿಂದ ಅನೇಕ ಮಕ್ಕಳು ಸಾಧನೆಯ ಹಾದಿಯಲ್ಲಿ ಸಾಗಿರುವ ಅನೇಕ ಮಕ್ಕಳನ್ನು ಕಾಣುತ್ತೇವೆ. ಇಂತಹ ಮಕ್ಕಳಲ್ಲಿ ನಿಯತಿಯೂ ಒಬ್ಬಳು. ನಿಯತಿ ರಾಜೇಶ ನಾಯಕ ಇವರು ಉತ್ತರ ಕನ್ನಡ ಜಿಲ್ಲೆಯ ನೆಲ್ಲಿಕೇರಿ, ಕುಮಟಾದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿನಿ. 
      ನಿಯತಿಗೆ ಬಾಲ್ಯದಿಂದಲೂ ಚಿತ್ರಕಲೆ ಎಂದರೆ ಪಂಚಪ್ರಾಣ. ಆಗೊಮ್ಮೆ ಈಗೊಮ್ಮೆ ಸಮಯಸಿಕ್ಕಾಗ ಚಿತ್ರ ಬಿಡಿಸುತ್ತಾ ಸಾಗುತ್ತಿದ್ದ ದಿನಗಳಲ್ಲಿ ಚಿತ್ರಕಲೆಯನ್ನು ವಿಶೇಷವಾಗಿ ಪ್ರೀತಿಸುತ್ತೇನೆನ್ನುವ ಕಲ್ಪನೆಯೇ ಇರಲಿಲ್ಲ. ಆಸಕ್ತಿಗೆ ಅಭಿರುಚಿಗೆ ತಕ್ಕಹಾಗೆ ಚಿತ್ರಕಲೆಯನ್ನು ನೆಚ್ಚಿಕೊಂಡು ತುಂಬಾ ಹತ್ತಿರವಾದಾಗ ಮನಸ್ಸಿಗೆ ಆಪ್ತವಾಯಿತು. 
        ಎರಡು ವರ್ಷಗಳ ಹಿಂದೆ ಕೊರೋನ ಮಹಾಮಾರಿಯೆದುರಾದಾಗ ದೇಶಾದ್ಯಂತ ಲಾಕ್ಡೌನ್ ಪೋಷಣೆಯಾಗಿತ್ತು. ಎಲ್ಲರೂ ಗಲಿಬಿಲಿ ಆದರು. ಶಾಲೆ ಮುಚ್ಚಿತು. ಪೋಷಕರಂತೂ ಚಿಂತಾಕ್ರಾಂತರಾದರು.. ಆದರೆ ನಿಯತಿಗೆ ಇದ್ಯಾವುದರ ಚಿಂತೆ ಇರಲಿಲ್ಲ. 'ಬುದ್ದಿವಂತರು ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಾರೆ'. ಎನ್ನುವಂತೆ ನಿಯತಿ ರಾಜೇಶ್ ತನ್ನ ಆಸಕ್ತಿಯ ನೆಲೆಯಾದ ಚಿತ್ರಕಲೆಯಲ್ಲಿ ಇನ್ನಷ್ಟು ಸಾಧನೆಯ ಗುರಿ ಹೊಂದಿದರು. ಪಾಠ ಪ್ರವಚನಗಳ ಬಿಡುವಿನಲ್ಲಿ ಚಿತ್ರ ಕಲೆಯ ವಿವಿಧ ಮಜಲುಗಳನ್ನು ಕಂಡುಕೊಳ್ಳುವ ಅವಕಾಶ ಪ್ರಾಪ್ತಿಯಾಯಿತು.
         ಏಳನೇ ತರಗತಿಯವರೆಗೆ ಪೆನ್ಸಿಲ್ ಶೇಡಿಂಗ್ , ರೇಖಾಚಿತ್ರಗಳು , ಕ್ರೆಯಾನ್ಸ್ , ಬಣ್ಣದ ಪೆನ್ಸಿಲ್ ಇತ್ಯಾದಿಗಳಲ್ಲಿ ಮಾತ್ರ ಚಿತ್ರ ರಚಿಸುತಿದ್ದುದಾಗಿತ್ತು. ಈ ಸಂದರ್ಭದಲ್ಲಿ ತಂದೆ ರಾಜೇಶ ನಾಯಕ , ತಾಯಿ ಆಶಾ ನಾಯಕ ಇವರ ವಿಶೇಷ ಪ್ರೋತ್ಸಾಹದಿಂದ ಬೇರೆ ಬೇರೆ ಮಾಧ್ಯಮಗಳಲ್ಲಿ ಚಿತ್ರ ರಚಿಸಲು ಪ್ರೇರಣೆ ಸಿಕ್ಕಿತು. ಬಿಡುವಿನ ಅವಧಿಯಲ್ಲಿ ಅಂತರ್ಜಾಲದ ಸಹಾಯದೊಂದಿಗೆ ವಿವಿಧ ಪ್ರಾಕಾರದ ಚಿತ್ರಗಳನ್ನು ರಚಿಸಲು ಸಹಾಯವಾಯಿತು. 
            ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕಿಯಾದ ಶ್ರೀಮತಿ ವಿದ್ಯಾ ಇವರು ಮಾರ್ಗದರ್ಶನ ನೀಡಿದರು. ಪೇಪರ್ ಮತ್ತು ಕ್ಯಾನ್ವಾಸ್ ಮೂಲಕ ಕಲಾಕೃತಿಗಳ ರಚನೆಗೆ ತೊಡಗಿಸಿಕೊಳ್ಳಲಾಯಿತು. ವಾಟರ್ ಕಲರ್ , ಆಕ್ರಿಲಿಕ್ ಕಲರ್ ಮೂಲಕ ವಿವಿಧ ನೈಜ ಚಿತ್ರಗಳು , ಭಾವಚಿತ್ರಗಳು,, ಅರೆ ನೈಜ ಚಿತ್ರಗಳು ಇಂತಹ ಶೈಲಿಯ ಚಿತ್ರ ಕಲಾಕೃತಿಗಳನ್ನು ರಚಿಸಲಾಯಿತು.
         ಬಾಲ್ಯದಿಂದಲೇ ಅನೇಕ ಚಿತ್ರಕಲಾ ಸ್ಪರ್ಧೆಯಲ್ಲಿ ನಿಯತಿ ಭಾಗವಹಿಸುತ್ತಿದ್ದು ಸಾಕಷ್ಟು ಬಹುಮಾನಗಳನ್ನು ಪಡೆದಿದ್ದಾರೆ. ಚಿತ್ರಕಲಾ ಶಿಕ್ಷಕರ ಮಾರ್ಗದರ್ಶನ ಪ್ರೇರಣೆಯಿಂದ ವಿವಿಧ ಭಾಗದ ಅನೇಕ ಬಹುಮಾನಗಳನ್ನು ಪಡೆಯಲು ಸಾಧ್ಯವಾಯಿತು. 
        ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ನಿಯತಿ ಶಾಲಾ ಪಠ್ಯ ವಿಷಯದಲ್ಲಿಯೂ ಮುಂದು. ಸ್ವಕಲಿಕೆ - ಸ್ವಯಂ ಪ್ರೇರಣೆ - ಸ್ವಯಂ ಶಿಸ್ತನ್ನು 'ನಿಯತಿ' ಸಾಧ್ಯವಾಗಿಸಿದವಳಾಗಿ ಚೌಕಟ್ಟನ್ನು ಮೀರಿ ಬೆಳೆಯುವ ಮಕ್ಕಳಿಗೆ ಸ್ಫೂರ್ತಿ ಎನಿಸಿದ್ದಾಳೆ.  
        ಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆ. ಆಸಕ್ತಿಯ ಸದುದ್ದೇಶದ ಯಾವುದೇ ಕಲಿಕೆಗಳಿರಲಿ , ಅದರಲ್ಲಿ ಸಾಮರ್ಥ್ಯ ಗಳಿಸುವುದೇ ಶಿಕ್ಷಣ. ಬೇಕು ಬೇಕು ಎಂದು ಪಡಕೊಳ್ಳುವ ನಿಜವಾದ ಶಿಕ್ಷಣ ಎಲ್ಲರದ್ದಾಗಬೇಕು. 
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ದಕ್ಷಿಣ ಕನ್ನಡ ಜಿಲ್ಲೆ
*******************************************

        ನಿಯತಿ ರಚಿಸಿರುವ ಇನ್ನಿತರ ಕಲಾಕೃತಿಗಳು

Ads on article

Advertise in articles 1

advertising articles 2

Advertise under the article