
ಪ್ರೀತಿಯ ಪುಸ್ತಕ : ಸಂಚಿಕೆ - 5
Friday, May 6, 2022
Edit
ಪ್ರೀತಿಯ ಪುಸ್ತಕ
ಸಂಚಿಕೆ - 5
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ.
ಪ್ರೀತಿಯ ಮಕ್ಕಳೇ, ' ಮಕ್ಕಳಿಗಾಗಿ ಸಂವಿಧಾನ ' ನಾನೇ ಬರೆದ ಪುಸ್ತಕ. ಅದಕ್ಕಾಗಿ ಇದರ ಪರಿಚಯ ಮಾತ್ರ ಮಾಡುತ್ತೇನೆ. ಚೆನ್ನಾಗಿದೆಯೋ ಇಲ್ಲವೋ, ನಿಮಗೆ ಉಪಯೋಗವಾಯಿತೋ ಅನ್ನುವುದನ್ನು ನೀವು ಓದಿದ ಮೇಲೆ ನೀವೇ ನನಗೆ ಹೇಳಬೇಕಷ್ಟೆ. ನಾನು ಚಿಕ್ಕವಳಿರುವಾಗ ಮನಸ್ಸಿಗೆ ಏನೇನೋ ಪ್ರಶ್ನೆಗಳು ಬರುತ್ತಿದ್ದವು. “ನೀನು ಹುಡುಗಿ ಮನೆಕೆಲಸ ಎಲ್ಲಾ ಕಲಿತುಕೊಳ್ಳಬೇಕು” ಅಂತ ದೊಡ್ಡವರು ಹೇಳುವಾಗ “ಹುಡುಗರು ಯಾಕೆ ಮನೆಕೆಲಸ ಮಾಡಬಾರದು.....?” ಅಂತ ಪ್ರಶ್ನೆ ಹುಟ್ಟುತ್ತಿತ್ತು. “ಆ ಜಾತಿಯವರು , ಈ ಜಾತಿಯವರನ್ನು ಮುಟ್ಟಬಾರದು” ಅಂತ ಹೇಳುವಾಗ ಆಶ್ಷರ್ಯವಾಗುತ್ತಿತ್ತು. “ಮುಟ್ಟಿದರೆ ಏನಾಗುತ್ತದೆ” ಅಂತ ಕೇಳುತ್ತಿದ್ದೆ. ಆಮೇಲೆ ದೊಡ್ಡವಳಾಗುತ್ತಾ ಬಂದಾಗ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿದವು, ಮತ್ತೆ ಕೆಲವು ಹೊಸಾ ಪ್ರಶ್ನೆಗಳು ಹುಟ್ಟಿಕೊಂಡವು. ನಿಮ್ಮಂತಹ ಮಕ್ಕಳ ಜೊತೆಗೆ ಮಾತಾಡುವಾಗ ಅವರೂ ಇಂತಹ ಒಂದಷ್ಟು ಪ್ರಶ್ನೆ ಕೇಳುತ್ತಾರೆ. ಈ ಎಲ್ಲಾ ಕುತೂಹಲಗಳನ್ನು ಇಟ್ಟುಕೊಂಡೇ ಈ ಪುಸ್ತಕ ನಿಮಗಾಗಿ ಬರೆದದ್ದು.
ಇದರಲ್ಲಿ ನಮ್ಮ ದೇಶದ ಸಂವಿಧಾನದ ಕಿರುಚಿತ್ರಣ ಇದೆ. ಚಿಕ್ಕವಳಿರುವಾಗ ಸಂವಿಧಾನ ಅಂತ ಒಂದು ಇದೆ ಅಂತ ಗೊತ್ತಿತ್ತು. ಆಮೇಲೆ ಅದರ ಬಗ್ಗೆ ತಿಳಿದುಕೊಳ್ಳುತ್ತಾ ಬಂದ ಹಾಗೆಯೇ ಅದರ ಮೇಲೆ ಪ್ರೀತಿ ಗೌರವ ಹುಟ್ಟಿತು. ನಾವು ಚಿಕ್ಕವರಾಗಲಿ ದೊಡ್ಡವರಾಗಲೀ ಎಲ್ಲರೂ ಇದರ ಬಗ್ಗೆ ತಿಳಿದುಕೊಳ್ಳಲೇ ಬೇಕು; ಎಂತಹಾ ಒಳ್ಳೆಯ ವಿಚಾರಗಳು ಇವೆಯಲ್ಲಾ ಅನಿಸಿತು.
ಈಗ ಇದು ನಿಮಗಾಗಿ.. ಓದಿ ನೋಡಿ.. ಓದುವಾಗ ಕೆಲವೊಮ್ಮೆ ಖುಶಿ ಅನಿಸಬಹುದು. ಕೆಲವೊಮ್ಮೆ ಬೋರಾಗಲೂ ಬಹುದು. ಆದರೂ ನೀವು ಓದಲೇ ಬೇಕು. ಈ ಎಲ್ಲಾ ವಿಚಾರಗಳನ್ನು ಅರ್ಥಮಾಡಿಕೊಳ್ಳಬೇಕು ಅಂತ ನನ್ನ ಆಸೆ.
ಲೇಖಕರು: ವಾಣಿ ಪೆರಿಯೋಡಿ
ಚಿತ್ರಗಳು: ಪ್ರಿಯಂವದಾ ಓಶಿನ್ (ಎಮಿಲಿ)
ಪ್ರಕಾಶಕರು: ಲಡಾಯಿ ಪ್ರಕಾಶನ ಗದಗ (9480286844)
ಬೆಲೆ: ರೂ.80/-
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************