ಬದಲಾಗೋಣವೇ ಪ್ಲೀಸ್.....! ಸಂಚಿಕೆ - 46
Wednesday, May 18, 2022
Edit
ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 46
ತಣ್ಣನೆಯ ಪರಿಸರದಲ್ಲಿ ಮನಸ್ಸು ಹೃದಯವನ್ನು ಆಳಬೇಕೇ ? ಅಥವಾ ಹೃದಯ ಮನಸ್ಸನ್ನು ಆಳಬೇಕೇ ? ಎಂಬುದರ ಬಗ್ಗೆ ಚರ್ಚಾ ಸ್ಪರ್ಧೆಯೊಂದು ನಡೆಯುತಿತ್ತು. ಮನಸ್ಸನ್ನು ಸಮರ್ಥಿಸುವವರು ಈ ರೀತಿ ವಾದ ಮಂಡಿಸುತ್ತಿದ್ದರು. "ಮನಸ್ಸಿದ್ದರೆ ಮಾರ್ಗ. ಹೃದಯಕ್ಕಿಂತ ಮನಸ್ಸು ಮುಖ್ಯ. ಮನಸ್ಸು ಎಂಬುದು ಇದ್ದರೆ ಅಸಾಧ್ಯವೂ ಸಾಧ್ಯ. ಮನಸ್ಸಿದ್ದರೆ ಮಾತ್ರ ಪುಸ್ತಕ ಕೊಳ್ಳಬಹುದು. ಮನೆ ಕಟ್ಟಬಹುದು. ಸೌಲಭ್ಯ ಪಡೆಯಬಹುದು. ನಮಗೆ ಬೇಕಾದ ವ್ಯವಸ್ಥೆ ಮಾಡಬಹುದು. ಹೃದಯದ ಮಾತು ಕೇಳಿದರೆ ದಾಸರಾಗಿ ಬಿಡುತ್ತೇವೆ. ಮನಸ್ಸಿನ ಮಾತು ಕೇಳಿದರೆ ರಾಜರಾಗಿ ಬಿಡುತ್ತೇವೆ. ಹಾಗಾಗಿ ಮನಸ್ಸೇ ಹೃದಯವನ್ನು ಆಳಬೇಕು. ಆಗ ಮಾತ್ರ ಸಾಧನೆ ಸಾಧ್ಯ."
ಹೃದಯವನ್ನು ಸಮರ್ಥಿಸುವವರು ಈ ರೀತಿ ವಾದ ಮಂಡಿಸುತ್ತಿದ್ದರು. "ಹೃದಯದಿಂದ ಮಾತ್ರ ಎಲ್ಲರನ್ನೂ ಗೆಲ್ಲಬಹುದು. ಹೃದಯದಿಂದ ಮಾತ್ರ ಪುಸ್ತಕ ಅರ್ಥೈಸಬಹುದು. ಹಾಗೂ ಪಡೆದ ಜ್ಞಾನವನ್ನು ದಿನನಿತ್ಯ ಬಳಕೆ ಮಾಡಬಹುದು. ಮನೆಯಲ್ಲಿ ಸದಾ ಜೀವಂತಿಕೆ ನೋಡಬಹುದು. ಇರುವ ಸೌಲಭ್ಯಗಳನ್ನು ನೆಮ್ಮದಿಯಿಂದ ಅನುಭವಿಸಬಹುದು. ಮನಸ್ಸಿನ ಮಾತು ಕೇಳಿದರೆ ಅಸುರರಾಗುತ್ತೇವೆ. ಹೃದಯದ ಮಾತು ಕೇಳಿದರೆ ಸುರರಾಗುತ್ತೇವೆ. ಹಾಗಾಗಿ ಹೃದಯವೇ ಮನಸ್ಸನ್ನು ಆಳಬೇಕು. ಆಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ. ಸಾಧನೆಗಿಂತ ನೆಮ್ಮದಿ ಮುಖ್ಯ".
ಚರ್ಚಾ ವಿಚಾರ ಆಲಿಸಿದ ತೀರ್ಪುಗಾರರು ತೀರ್ಪು ನೀಡಲು ಒದ್ದಾಡಿದರು. ಅಲ್ಲಿ ನೀವು ಕೂಡಾ ಒರ್ವ ತೀರ್ಪುಗಾರರಾಗಿದ್ದರೆ ಏನೆಂದು ತೀರ್ಪು ಕೊಡುತ್ತಿದ್ದೀರಿ. ನಿಮಗೂ ಗೊಂದಲ ಏರ್ಪಡುವುದು ಖಂಡಿತ. ಸಾಧನೆಯೋ... ನೆಮ್ಮದಿಯೋ.... ಎಂಬ ನಿರ್ಣಯದಲ್ಲಿ ಅರೆಗಳಿಗೆ ಚಿಂತಿತರಾಗಿ ಬಿಡುತ್ತೀರಿ.
ಆದರೆ ಅಲ್ಲಿ ನನ್ನ ಜತೆಗಿದ್ದ ಹಿರಿಯರೊಬ್ಬರು "ಮನಸ್ಸು ಎಂಬುದು ಮೊಬೈಲ್ ಇದ್ದಂತೆ. ಹೃದಯ ಎಂಬುದು ಸಿಮ್ ಇದ್ದಂತೆ. ಮೊಬೈಲ್ ಜೀವಂತವಾಗಿರಲು ಸಿಮ್ ಬೇಕು. ಸಿಮ್ ಜೀವಂತವಾಗಿರಬೇಕಾದರೆ ಮೊಬೈಲ್ ಬೇಕು. ಹಾಗಾಗಿ ಎರಡಲ್ಲೂ ಸಮನ್ವಯ ಬೇಕು. ಮನಸ್ಸಿದ್ದರೆ ಮಾರ್ಗ ಆದರೆ ಹೃದಯವಿದ್ದರೆ ಮಾತ್ರ ಆ ಮಾರ್ಗದಲ್ಲಿ ಪ್ರಯಾಣ ಸಾಧ್ಯ. ಮನಸ್ಸಿದ್ದರೆ ಮನೆ ಕಟ್ಟಬಹುದು ಆದರೆ ಹೃದಯವಿದ್ದರೆ ಮಾತ್ರ ಆ ಮನೆಯಲ್ಲಿ ಜೀವಂತವಾಗಿ ಜೀವಿಸಬಹುದು. ಇಲ್ಲದಿದ್ದರೆ ಮನೆಯೇ ಯಾಂತ್ರಿಕವಾಗಬಹುದು. ಮನಸ್ಸಿದ್ದರೆ ಮಾತ್ರ ಸಕಲ ಸೌಲಭ್ಯ ಒದಗಿಸಬಹುದು ಆದರೆ ಹೃದಯವಿದ್ದರೆ ಮಾತ್ರ ಆ ಸೌಲಭ್ಯಗಳನ್ನು ಅನುಭವಿಸಬಹುದು. ಮನಸ್ಸಿದ್ದರೆ ಮಾತ್ರ ಓದಬಹುದು ಆದರೆ ಹೃದಯವಿದ್ದರೆ ಮಾತ್ರ ಅರ್ಥೈಸಬಹುದು. ಹಾಗಾಗಿ ಮನಸ್ಸು ಮತ್ತು ಹೃದಯ ಒಂದಕ್ಕೊಂದು ಪೂರಕ ಪ್ರೇರಕ. ಅವುಗಳಲ್ಲಿ ಮೇಲು-ಕೀಳಿಲ್ಲ. ಅವೆರಡರಲ್ಲಿ ಸಮತೋಲನವಿದ್ದರೆ ಸ್ವರ್ಗ ಸುಖ. ಹಾಗಾಗಿ ಹೃದಯ ಹಾಗೂ ಮನಸ್ಸು ಒಂದನ್ನೊಂದು ಆಳದೆ ಪರಸ್ಪರ ಜತೆಯಾಗಿ ಸಾಗಬೇಕು" ಎಂದರು.
ಹೌದಲ್ಲವೇ... ನಾವು ಯಾವುದೇ ಪರಿಸ್ಥಿತಿಯಲ್ಲೂ ಕೇವಲ ಹೃದಯ ಅಥವಾ ಮನಸ್ಸಿನ ಮಾತು ಕೇಳದೆ ಅವೆರಡನ್ನು ಜತೆಗಿರಿಸಿ ನಿರ್ಧಾರ ಕೈಗೊಳ್ಳಬೇಕಾಗಿದೆ. ನಾವು ಎದುರಿಸುವ ಪರಿಸ್ಥಿತಿಗನುಗುಣವಾಗಿ ಮನಸ್ಸು ಹಾಗೂ ಹೃದಯವನ್ನು ಜತೆಯಾಗಿ ಸಾಗಿಸುವ ಪ್ರಕ್ರಿಯೆಯ ಕೌಶಲ ಕಲಿಯಬೇಕಾಗಿದೆ. ಈ ಧನಾತ್ಮಕ ಕಲಿಕೆಯ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?.
ಶಿಕ್ಷಕರು ಮತ್ತು ತರಬೇತುದಾರರು
Mob: +91 99802 23736
********************************************