-->
ಹಕ್ಕಿ ಕಥೆ : ಸಂಚಿಕೆ - 45

ಹಕ್ಕಿ ಕಥೆ : ಸಂಚಿಕೆ - 45

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ

              ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ. ಪಕ್ಷಿ ವೀಕ್ಷಣೆಯ ಹವ್ಯಾಸ ಪ್ರಾರಂಭವಾದ ನಂತರ Birds of a feather flok together ಎಂಬ ಇಂಗ್ಲೀಷ್ ಗಾದೆಯಂತೆ ನನ್ನಂತೆಯೇ ಹಲವು ಜನ ಪಕ್ಷಿಗಳ ಬಗ್ಗೆ ಆಸಕ್ತರು ಪರಿಚಯವಾದರು. ಪರಿಚಯ ಮುಂದುವರೆದು ಆತ್ಮೀಯ ಸ್ನೇಹಿತರಾದವರು ಹಲವರು. ಅಂಥವರಲ್ಲಿ ಮೈಸೂರಿನ ಗೆಳೆಯ ಡಾ.ಅಭಿಜಿತ್ ಕೂಡಾ ಒಬ್ಬರು. ವೃತ್ತಿಯಿಂದ ಹೋಮಿಯೋಪತಿ ವೈದ್ಯರಾದ ಅಭಿಜಿತ್ ಪಕ್ಷಿ ವೀಕ್ಷಣೆಯಲ್ಲೂ ಬಹಳ ಆಸಕ್ತರು. ಅಭಿಜಿತ್ ಅವರ ತಂದೆ ಸಾವಯವ ಕೃಷಿಕರು. ಮೈಸೂರಿನ ಹೊರಗೆ ಹಳ್ಳಿಯಲ್ಲಿ ಅವರ ಸುಂದರವಾದ ತೋಟ. ಪ್ರತಿದಿನ ತಮ್ಮ ತೋಟದ ಆಸುಪಾಸಿನಲ್ಲಿ ಮಾತ್ರವಲ್ಲ ತಮ್ಮ ಮನೆಯಿಂದ ಕ್ಲಿನಿಕ್ ಕಡೆಗೆ ಹೋಗುವ ದಾರಿಯಲ್ಲಿ ಹಲವಾರು ಪಕ್ಷಿಗಳನ್ನು ಗಮನಿಸಿ, ಗುರುತಿಸಿ, ದಾಖಲಿಸಿಕೊಂಡಿದ್ದರು. ಒಮ್ಮೆ ಕಾರ್ಯನಿಮಿತ್ತ ಮೈಸೂರಿಗೆ ಹೋಗುವುದಿತ್ತು ಹಾಗೆ ಅವರಿಗೂ ಕರೆ ಮಾಡಿದೆ. ಹೋ ಬಹಳ ಸಂತೋಷ ಬನ್ನಿ ನಾಳೆ ನಾನೂ ಬಿಡುವಾಗಿದ್ದೇನೆ ಇಲ್ಲೇ ಸುತ್ತಮುತ್ತ ಪಕ್ಷಿಗಳನ್ನು ನೋಡೋಣ ಎಂದು ಹೇಳಿದರು. ಅವರ ಮನೆಯ ಆಸುಪಾಸಿನಲ್ಲಿ ಹಲವಾರು ಪಕ್ಷಿಗಳನ್ನು ನೋಡಿದೆವು. ಅವುಗಳ ಸ್ವಭಾವದ ಬಗ್ಗೆ ಅವರು ಗಮನಿಸಿ ದಾಖಲಿಸಿದ ಹಲವು ವಿಚಾರಗಳನ್ನು ನನ್ನ ಜೊತೆಗೂ ಹಂಚಿಕೊಂಡರು. ಹೀಗೆ ದಿನವಿಡೀ ಪಕ್ಷಿವೀಕ್ಷಣೆ ಮಾಡಿ, ಅವರ ಮನೆಯಲ್ಲೇ ಊಟಮಾಡಿ ಸಂಜೆ ಮತ್ತೆ ಹೊರಟೆ. ಬಸ್ ನಿಲ್ದಾಣದ ವರೆಗೆ ಅವರೇ ನನ್ನನ್ನು ಬಿಡಲು ಬಂದರು. ದಾರಿಯಲ್ಲಿ ಬರುವಾಗ ಆಳವಾದ ಕಣಿವೆಯ ಹಾಗಿನ ಜಾಗ ಕಾಣಿಸಿತು. ಇದೇನಿದು ಬಯಲುನಾಡಿನಲ್ಲಿ ಇಂಥ ಕಣಿವೆ ಅಂತ ಕೇಳಿದೆ. ಇದು ನೀರಾವರಿ ಕಾಲುವೆಗಾಗಿ ತೋಡಿದ ಕಣಿವೆ ಎಂದು ಕಾರ್ ನಿಲ್ಲಿಸಿದರು. ಕಣಿವೆಯ ಆಕಡೆ ಸ್ವಲ್ಪ ಎತ್ತರವಾದ ಗುಡ್ಡ ಇತ್ತು. ಆ ಗುಡ್ಡದ ಕಡೆಗೆ ತಮ್ಮ ಬೈನಾಕುಲರ್ ನಿಂದ ನೋಡಿ ಅಲ್ಲೊಂದು ವಿಶೇಷ ಹಕ್ಕಿ ತೋರಿಸಿದರು.
         ಗುಡ್ಡದ ಮಣ್ಣಿನ ಹಾಗೇ ಕಾಣುವ ಕಂದು ಬಣ್ಣ, ಇನ್ನೂ ಕಡುಕಂದು ಬಣ್ಣದ ರೆಕ್ಕೆಗಳು, ಡಿಶ್ ಆಕಾರದ ದೊಡ್ಡ ಮುಖ, ಹಳದಿ ಬಣ್ಣದ ದೊಡ್ಡ ಕಣ್ಣುಗಳು, ಅದರ ಮೇಲೆ ಎರಡು ಕೊಂಬಿನಂತಹ ರಚನೆ, ದಪ್ಪನೆಯ ಬಲಿಷ್ಟ ಕಾಲುಗಳು. ಕಾಲುವೆಗಾಗಿ ಅಗೆಯುವಾಗ ಉಂಟಾದ ವೀಕ್ಷಣಾ ಗೋಪುರದಂತಹ ಸಣ್ಣ ಜಾಗದಲ್ಲಿ ಈ ಗೂಬೆ ಕೂತಿತ್ತು. ಬರಿಗಣ್ಣಿನಿಂದ ನೋಡಿದರೆ ಗೂಬೆ ಅಲ್ಲಿದೆ ಅನ್ನುವುದನ್ನು ಪತ್ತೆ ಹಚ್ಚಲೂ ಸಾಧ್ಯವಿಲ್ಲ. ತಾನು ಕುಳಿತ ಜಾಗದ ಬಣ್ಣಕ್ಕೂ ಇದಕ್ಕೂ ಅಷ್ಟೊಂದು ತಾದಾತ್ಮ್ಯ. ನಾವು ನಿಧಾನವಾಗಿ ಇಳಿದು ನಮ್ಮ ಕ್ಯಾಮರಾದಲ್ಲಿ ಕೆಲವು ಫೋಟೋ ತೆಗೆದುಕೊಂಡೆವು. ರಾತ್ರೆಯ ಕತ್ತಲಿನ ಬೇಟೆಗಾರ, ಸೂಕ್ಷ್ಮ ಕಣ್ಣಿನ ಗೂಬೆಗೆ ನಮ್ಮ ಕ್ಯಾಮರಾಗಳು ಬಂದೂಕಿನಂತೆ ಕಂಡವೋ ಏನೋ ಗೊತ್ತಿಲ್ಲ. ಅಲ್ಲಿಂದ ಹಾರಿ ಒಂದಷ್ಟು ದೂರ ಹೋಗಿ ಕುಳಿತುಕೊಂಡಿತು. ಹಾರಿದಾಗಲೇ ತಿಳಿದದ್ದು ಅದರ ರೆಕ್ಕೆಯ ಗಾತ್ರ. ದೊಡ್ಡ ಹದ್ದಿನ ಗಾತ್ರದ ಗೂಬೆಯ ಒಂದೊಂದು ರೆಕ್ಕೆಗಳೂ ಒಂದು ಮೀಟರ್ ಉದ್ದ ಇರಬಹುದು, ಅಷ್ಟು ದೊಡ್ಡದು. ಆದರೆ ಅದು ಹಾರಿ ಹೋದಾಗ ಸಣ್ಣ ಶಬ್ದವೂ ಇಲ್ಲ ಅಷ್ಟೊಂದು ನಿಶ್ಶಬ್ದ ಹಾರಾಟ.. 
ಇಂತಹ ಅದ್ಭುತ ಗೂಬೆಯನ್ನು ತೋರಿಸಿದ ಗೆಳೆಯ ಅಭಿಜಿತರಿಗೆ ಧನ್ಯವಾದ ಹೇಳಿ ಅಲ್ಲಿಂದ ಹೊರಟೆವು. 
ಕನ್ನಡದ ಹೆಸರು: ಕೊಂಬಿನ ಗೂಬೆ
ಇಂಗ್ಲೀಷ್ ಹೆಸರು: Indian Eagle Owl
ವೈಜ್ಞಾನಿಕ ಹೆಸರು: Bubo bengalensis
ಮುಂದಿನವಾರ ಇನ್ನೊಂದು ಹೊಸ ಹಕ್ಕಿ ಕಥೆಯೊಂದಿಗೆ ಸಿಗೋಣ.. ಬಾಯ್..
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************



Ads on article

Advertise in articles 1

advertising articles 2

Advertise under the article