-->
ಸ್ಪೂರ್ತಿಯ ಮಾತುಗಳು : ಲೇಖನ - ರಮೇಶ ಎಂ. ಬಾಯಾರು

ಸ್ಪೂರ್ತಿಯ ಮಾತುಗಳು : ಲೇಖನ - ರಮೇಶ ಎಂ. ಬಾಯಾರು

ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093                  ಪೋಲಾಗುತ್ತಿರುವ ಆಹಾರ
                 ------------------------------
      ಮುದ್ದು ಮಕ್ಕಳೇ........... ಪೋಲಾಗುತ್ತಿರುವ ಆಹಾರ  ಎಂದೊಡನೆಯೇ  ಮೊದಲಿಗೆ ನಮಗೆ ಹೊಳೆಯುವುದು ಹಂದಿ, ಇಲಿ-ಹೆಗ್ಗಣಗಳ ಬಾಯಿಗೆ ತುತ್ತಾಗಿ ಆಹಾರ ವಸ್ತುಗಳು ಹಾಳಾಗುತ್ತಿವೆಯೆಂದೇ ಅಲ್ಲವೇ? ಆಹಾರವಸ್ತುಗಳು  ಹಂದಿ, ಇಲಿ, ಹೆಗ್ಗಣಗಳ ಹೊಟ್ಟೆ ಸೇರಿದರೆ ನಿಜವಾಗಿಯೂ ಅದು ಪೋಲಲ್ಲ. ಪ್ರಾಣಿಗಳ ಹೊಟ್ಟೆ ಸೇರಿತಲ್ಲಾ ಎಂಬ ಸಂತಸ ನಮ್ಮದಾಗಲಿ. ಹಾಗಾದರೆ ಆಹಾರವು ಎಲ್ಲಿ ಪೋಲಾಗುತ್ತಿದೆ ಎಂಬ ಸಂದೇಹ ನಿಮ್ಮಲ್ಲಿ ಹುಟ್ಟದಿರದು.
         ಕೊರೋನಾ ಅವಧಿಯಲ್ಲಿ ಆಹಾರದ ಪೋಲು ಬಹಳ ಕಡಿಮೆಯಾಗಿತ್ತು. ಸರಕಾರಗಳು ಸಾರ್ವಜನಿಕರ ಆರೋಗ್ಯವನ್ನು ಹಿತದೃಷ್ಟಿಯಲ್ಲಿರಿಸಿ ಘೋಷಿಸಿದ ಬೀಗಮುದ್ರೆ ಮತ್ತು  ಸಭೆ ಸಮಾರಂಭಗಳ ಮೇಲೆ ಹೇರಿದ ಕಠಿಣ ನಿರ್ಬಂಧಗಳು ಆಹಾರದ ಪೋಲಾಗುವಿಕೆಯನ್ನು ಗಣನೀಯ ಪ್ರಮಾಣದಲ್ಲಿ ಕುಗ್ಗಿಸಿತ್ತು. ಆದರೆ ಕೊರೋನಾ ಪೂರ್ವ ಮತ್ತು ಕೊರೋನೋತ್ತರದಲ್ಲಿ ಸಭೆ ಸಮಾರಂಭಗಳಿಗೆ ನಿರ್ಬಂಧವೇ ಇರಲಿಲ್ಲವಲ್ಲ. ನಾನು ಭಾಗವಹಿಸುವ ಸಭೆ ಸಮಾರಂಭಗಳಲ್ಲಿ ಆಹಾರದ ಪೋಲಾಗುವಿಕೆಯನ್ನು ಕಂಡು ಬಹಳ ನೋವನ್ನನುಭವಿಸಿದ್ದೇನೆ, ಇಂದಿಗೂ ಆಹಾರದ ಪೋಲಾಗುವಿಕೆಗೆ ಸಂಬಂಧಿಸಿದಂತೆ ನಿರಂತರವಾಗಿ ನಾನು ಅನುಭವಿಸುತ್ತಿರುವ ನೋವುಗಳು ನನ್ನನ್ನು  ಕಾಡುತ್ತಲೇ ಇವೆ.      
         ಬಡವರು ನಡೆಸುವ ಸಭೆ ಸಮಾರಂಭಗಳಲ್ಲಿ ಆಹಾರದ ಪೋಲಾಗುವಿಕೆ ಇದೆಯಾದರೂ ಬಹಳ ಮಿತವಾಗಿದೆಯೆಂಬ ತೃಪ್ತಿಯಿದೆ. ಆದರೆ ಮಧ್ಯಮ ವರ್ಗದಲ್ಲಿ ಅಪರಿಮಿತವಾದ ಪ್ರಮಾಣದಲ್ಲಿ ಆಹಾರದ ಪೋಲಾಗುವಿಕೆ ನಡೆಯುತ್ತಲೇ ಇದೆ ಎಂದು ದುಃಖವಾಗುತ್ತಿದೆ. ಶ್ರೀಮಂತರೆನಿಸಿದವರ ಸಭೆ ಸಮಾರಂಭಗಳಲ್ಲಿ ಆಹಾರದ ಪೋಲಾಗುವಿಕೆ  ಕುಠಾರಾಘಾತದಿಂದಾಗಬಹುದಾದ ನೋವನ್ನೂ ಮೀರಿಸುತ್ತಿದೆ ಎಂಬುದು ಅವರ್ಣನೀಯ ದುರಂತ.
        ಸಭೆ ಸಮಾರಂಭಗಳಲ್ಲಿ ತಯಾರಿಸುವ ಖಾದ್ಯಗಳು, ಭಕ್ಷ್ಯ ಭೋಜ್ಯಗಳು ಪೈಪೋಟಿಗೊಳಗಾಗುತ್ತಿವೆ. ಮನುಷ್ಯರ ಹೊಟ್ಟೆಯ ಧಾರಣಾ ಶಕ್ತಿ ಮತ್ತು ಪಚನ ಶಕ್ತಿಯನ್ನು ಮೀರಿ ಬಡಿಸುವ ಅನಿಯಮಿತವಾದ ತಿಂಡಿತಿನಿಸುಗಳು ಆಹಾರದ ಪೋಲಾಗುವಿಕೆಗೆ ಪ್ರಮುಖ ಕಾರಣ. ತಯಾರಿಸುವ ತಿಂಡಿಗಳ ಮೇಲಾಟ ಉಣ್ಣುವವನ ಅನಾರೋಗ್ಯಕ್ಕೆ ಹೇತುವಾಗುವುದರೊಂದಿಗೆ ವಿಶ್ವಕ್ಕೇ ದೊಡ್ಡ ನಷ್ಟವನ್ನುಂಟು ಮಾಡುತ್ತದೆ ಎಂಬ ಸಾಮಾನ್ಯ ಜ್ಞಾನವಿಲ್ಲದವರು ಯಾರೂ ಇಲ್ಲ. ಒಣ ಸ್ವಪ್ರತಿಷ್ಠೆಯಿಂದಾಗುವ ದುರಂತವನ್ನು ಕಂಡಾಗ ಅತ್ಯಂತ ಕಸಿವಿಸಿಯಾಗುತ್ತದೆ. ಊಟದ ನಂತರದಲ್ಲಿ ತಿಪ್ಪೆಗೆಸೆಯುವ ಎಲೆಗಳಲ್ಲಿ ಉಳಿಯುವ ಎಂಜಲು ಆಹಾರವು ಊಟ ಮಾಡಿದವರ ದ್ವಿಗುಣ ಸಂಖ್ಯೆಗೆ ಸಾಕಾಗುವಷ್ಟಿರುತ್ತದೆಯೆಂದಾದರೆ ಯಾರಿಗೆ ತಾನೇ ದುಃಖವಾಗದಿರದು?
           ಊಟದ ಸಾಲಿನಲ್ಲಿ ಕುಳಿತವರಿಗೆ ಬಡಿಸುವವರ ಅಜಾಗರೂಕತೆ, ಅಸಡ್ಡೆ ಮತ್ತು ಅನುಭವದ ಕೊರತೆಯ ಕಾರಣದಿಂದಲೂ ಎಲೆಯಲ್ಲಿ ಆಹಾರವುಳಿದು ತಿಪ್ಪೆಸೇರುತ್ತದೆ. ಕೆಲವರಿಗೆ ತಮ್ಮ ಹೊಟ್ಟೆಗೆ ಬೇಕಾದುದಕ್ಕಿಂತ ಹೆಚ್ಚು ಹಾಕಿಸುವ ಚಟವೂ ಇರುತ್ತದೆ. ತಮ್ಮ ಮಕ್ಕಳು ಹತ್ತಿರವೇ ಇದ್ದರೂ ಬಹುತೇಕ ಹೆತ್ತವರು ಅವರದೇ ಪ್ರಪಂಚದಲ್ಲಿರುತ್ತಾರೆ. ಮಕ್ಕಳ ಎಲೆಗೆ ಬಡಿಸುವಾಗ ಹೆತ್ತವರು ಆ ಬಗ್ಗೆ ಕಾಳಜಿ ಹೀನರಾಗುವುದರಿಂದಾಗಿ  ಮಕ್ಕಳ ಎಲೆಯಲ್ಲೇ ಬಹು ಭಾಗ ಆಹಾರ ಉಳಿಯುತ್ತದೆ. ಮಕ್ಕಳಿಗೆ ಬಡಿಸುವಾಗ ತಂದೆ ತಾಯಿಗಳು ಆ ಕಡೆಗೆ ಗಮನಿಸಬೇಕಲ್ಲವೇ ಎಂದು ಪ್ರಶ್ನಿಸಿದರೆ, ಅವು ಪ್ರಾಣಿಗಳಿಗೆ ಉಪಯೋಗವಾಗುವುದಿಲ್ಲವೇ ಎಂಬ ಉತ್ತರ ಹೆತ್ತವರಿಂದ ಬರುತ್ತದೆ. ತಿಪ್ಪೆಗೆ ಆಹಾರವನ್ನು ಹುಡುಕಿ ಬರುವ ನಾಯಿ, ಕಾಗೆ, ಹಂದಿ ಮುಂತಾದುವುಗಳ ಸಂಖ್ಯೆಯಾದರೂ ಎಷ್ಟು? ಪ್ರಾಣಿಗಳು ವರ್ಷ ಪೂರ್ತಿ ತಿಂದರೂ  ಮುಗಿಯದಷ್ಟು ಎಂಜಲು ಒಂದೇ ದಿನ ತಿಪ್ಪೆಯಲ್ಲಿ ಸಂಚಯವಾಗುತ್ತದೆ. ಇದು ಆಹಾರದ ಮಹಾ ಪೋಲು.
         ಹೊಟ್ಟೆಗಿಲ್ಲದ ಬಡವರು ದೇಶದಲ್ಲಿ ತುತ್ತು ತಿನ್ನಲು ತಿಣುಕಾಡುತ್ತಿರುವಾಗ  ಆಹಾರ ಪೋಲಾಗುತ್ತಿರುವುದನ್ನು ಹೇಗೆ ತಾನೇ  ಸಹಿಸಲು ಸಾಧ್ಯ? ನಾವು ತಿನ್ನುವ ಮತ್ತು ಎಸೆಯುವ ಪ್ರತಿಯೊಂದು ಆಹಾರವಸ್ತುವಿನಲ್ಲೂ ಬಡ ರೈತನ ಅಪಾರ ಪರಿಶ್ರವಿದೆ. ತನ್ನ ಬೆವರನ್ನು ಸುರಿಸಿ ರೈತನು ಬೆಳೆಯನ್ನು ಬೆಳೆಸಿರುತ್ತಾನೆ. ವಾಣಿಜ್ಯ ಸಂಸ್ಥೆಗಳಿಂದ ಪಡೆದ ಸಾಲದ ಬಡ್ಡಿಯನ್ನೂ ಕಟ್ಟಲಾಗದ ರೈತರ ವ್ಯಥೆಯ ಕಥೆಯಿದೆ. ಪ್ರತೀ ದಿನ ದೇಶಾದ್ಯಂತ ಪೋಲಾಗುವ ಆಹಾರದ ಆರ್ಥಿಕ ವೆಚ್ಚ ಕೋಟ್ಯಂತರ ರೂಪಾಯಿಗಳಾಗುತ್ತವೆ. ಇದರಿಂದಾಗಿ ರೈತನು ಮಾತ್ರವಲ್ಲದೆ ದೇಶದ ಸಂಪತ್ತಿನ ಬಲು ದೊಡ್ಡ ಭಾಗ ವ್ಯರ್ಥವಾಗುತ್ತದೆ. ದೇಶದ ಪ್ರಗತಿಯ ಮೇಲೆ ಬಲವಾದ ಹೊಡೆತವೇ ಉಂಟಾಗುತ್ತದೆ. 
           ಆದುದರಿಂದ ಪ್ರತಿಯಬ್ಬರೂ ತಮ್ಮ ಅಗತ್ಯಕ್ಕಿಂತ ಹೆಚ್ಚು ಆಹಾರವನ್ನು ಬಡಿಸಿಕೊಳ್ಳಬಾರದು. ತಟ್ಟೆಯಲ್ಲಿ ಒಂದಿನಿತೂ ಆಹಾರವು ಉಳಿಯದಂತೆ ಅಸ್ಥೆವಹಿಸಬೇಕು. ಮನೆಯಲ್ಲಿ ತಯಾರಾದ ಆಹಾರದಲ್ಲಿ ಮಿಗತೆಯಾದರೆ ಪಕ್ಕದಲ್ಲಿರುವ ಹಸಿದ ಹೊಟ್ಟೆಗಳನ್ನು ಸೇರುವಂತೆ ಉದಾರತೆ ಮೆರೆಯಬೇಕು. ಹನಿಗೂಡಿ ಹಳ್ಳ, ತೆನೆಗೂಡಿ ಕಣಜ. ಈ ಗಾದೆ ಆಹಾರಕ್ಕೂ ಅನ್ವಯವಾಗುತ್ತದೆ. ನಮಸ್ಕಾರ
.............................ರಮೇಶ  ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
********************************************

Ads on article

Advertise in articles 1

advertising articles 2

Advertise under the article