-->
ಜೀವನ ಸಂಭ್ರಮ : ಸಂಚಿಕೆ - 31

ಜೀವನ ಸಂಭ್ರಮ : ಸಂಚಿಕೆ - 31

   ಜೀವನ ಸಂಭ್ರಮ : ಸಂಚಿಕೆ - 31

                           ರೇವಣ್ಣ
                      ---------------
      ಇದು ನಿಜವಾದ ಘಟನೆ , (ರೇವಣ್ಣ) ಹೆಸರನ್ನು ಬದಲಾಯಿಸಲಾಗಿದೆ. ರೇವಣ್ಣ ವಯಸ್ಸಿನಲ್ಲಿ ರಮೇಶ ನಿಗಿಂತ ಒಂದು ವರ್ಷ ಹಿರಿಯವನು. ರೇವಣ್ಣನ ತಂದೆ ಸರ್ಕಾರಿ ನೌಕರ ಆದುದರಿಂದ ನಗರದಲ್ಲಿ ವಾಸವಾಗಿದ್ದರು. ಆದರೆ ಓದಿನಲ್ಲಿ ರೇವಣ್ಣ ಹಿಂದೆ ಇದ್ದ. ರಮೇಶ ಹಳ್ಳಿಯವನು, ಆದರೆ ಓದಿನಲ್ಲಿ ಮುಂದಿದ್ದ. ರಮೇಶನ ತಂದೆ ಮತ್ತು ರೇವಣ್ಣನ ತಂದೆ ಇಬ್ಬರೂ ಗೆಳೆಯರು, ಒಂದೇ ಊರಿನವರು. ರೇವಣ್ಣ ಎಸ್.ಎಸ್.ಎಲ್.ಸಿ ಯಲ್ಲಿ ಅನುತ್ತೀರ್ಣನಾಗಿ ಮರುವರ್ಷ ಉತ್ತೀರ್ಣನಾದ. ಆಗ ರೇವಣ್ಣ ಮತ್ತು ರಮೇಶ ಒಂದೇ ತರಗತಿಯವರಾದರು. ರೇವಣ್ಣ ಪಿಯುಸಿಯಲ್ಲಿ ಕಲಾ ವಿಷಯವನ್ನು ಹಾಗೂ ರಮೇಶ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡು ಬೇರೆ ಬೇರೆ ಕಾಲೇಜು ಸೇರಿಕೊಂಡರು. ಆದರೆ ಇಬ್ಬರೂ ಒಂದೇ ಹಾಸ್ಟೆಲ್ನಲ್ಲಿ ಒಂದೇ ರೂಮ್ ನಲ್ಲಿ ಇದ್ದರು. ದ್ವಿತೀಯ ಪಿಯುಸಿಯಲ್ಲಿ ರೇವಣ್ಣ ಅನುತ್ತೀರ್ಣನಾದ. ರಮೇಶ ಉತ್ತೀರ್ಣನಾದ. ಸ್ನೇಹಿತ ರೇವಣ್ಣ ಅನುತ್ತೀರ್ಣನಾಗಿದ್ದು ಕನ್ನಡ ಮತ್ತು ಇಂಗ್ಲಿಷ್ ನಲ್ಲಿ. ರಮೇಶ ಆತನಿಗೆ ಎಲ್ಲಾ ರೀತಿ ನೆರವು ನೀಡಿ ಪಿಯುಸಿ ಉತ್ತೀರ್ಣ ನಾಗಿಸಲು ಪ್ರಯತ್ನಿಸಿದ. ರೇವಣ್ಣ ಪಿಯುಸಿ ಪಾಸಾದ ನಂತರ CPed ಗೆ ಸೇರಿದ. ಅಲ್ಲಿಯೂ ಒಳ್ಳೆಯ ಅಂಕಗಳು ದೊರಕಲಿಲ್ಲ ಹಾಗಾಗಿ ನಗರದಲ್ಲಿ ಒಂದು ಅಂಗಡಿಗೆ ಕೆಲಸಕ್ಕೆ ಸೇರಿದ. ರಮೇಶ ಬಿ,ಇಡಿ. ಎಂ,ಇಡಿ. ಪದವಿಯನ್ನೆಲ್ಲಾ ಪೂರೈಸಿದ. ರಮೇಶನ ತಂದೆ ಹಳ್ಳಿಯಲ್ಲಿದ್ದರೂ ಸ್ಥಿತಿವಂತರಾಗಿದ್ದರೂ ಮಗನ ವಿದ್ಯಾಭ್ಯಾಸಕ್ಕೆ ಸರಿಯಾಗಿ ಹಣ ನೀಡುತ್ತಿರಲಿಲ್ಲ. ಆಗ ರೇವಣ್ಣ ರಮೇಶನಿಗೆ ತನ್ನ ಕೈಲಾದ ಕಿರು ಸಹಾಯ ಮಾಡುತ್ತಿದ್ದನು. 
      ರಮೇಶ ವಿದ್ಯಾಭ್ಯಾಸ ಮಾಡಿ ಸರ್ಕಾರಿ ಸೇವೆಗೆ ಶಿಕ್ಷಕನಾಗಿ ಸೇರಿದ. ರಮೇಶ ಕೆಲಸಕ್ಕೆ ಸೇರಿದ ಸ್ವಲ್ಪ ದಿನದಲ್ಲಿ ರೇವಣ್ಣನಿಗೆ ವಿವಾಹವಾಯಿತು. ರೇವಣ್ಣ ತಾನೇ ಒಂದು ಸ್ವಂತ ವ್ಯಾಪಾರ ಮಾಡಲು ತೀರ್ಮಾನಿಸಿದ. ಆಗ ರೇವಣ್ಣನ ಕುಟುಂಬ ಬಾಡಿಗೆ ಮನೆಯಲ್ಲಿತ್ತು. ರೇವಣ್ಣನ ತಂದೆ ಮನೆ ನಿರ್ಮಾಣ ಮಾಡಲು ಒಂದು ನಿವೇಶನ ಖರೀದಿ ಮಾಡಿದ್ದರು. ಆಗ ರೇವಣ್ಣ ತನ್ನ ತಂದೆ ಹತ್ತಿರ ಬಂದು , "ತಾನು ಒಂದು ಸ್ವಂತ ದಿನಸಿ ಅಂಗಡಿ ತೆರೆಯವುದಾಗಿ ಅದಕ್ಕೆ ಬಂಡವಾಳ ಬೇಕಾಗಿದೆ, ಸ್ವಲ್ಪ ದಿನದ ಮಟ್ಟಿಗೆ ಖಾಲಿ ನಿವೇಶನದ ಪತ್ರ ಬೇಕು. ಅದನ್ನು ಅಡವಿಟ್ಟು ನಂತರ ಬಿಡಿಸಿ ಕೊಡುತ್ತೇನೆ." ಎಂದು ಕೇಳಿದ. ಅದಕ್ಕೆ ತಂದೆ ಒಪ್ಪಲಿಲ್ಲ. ಈ ವಿಚಾರವನ್ನು ರೇವಣ್ಣ , ರಮೇಶನ ಬಳಿ ಹೇಳಿಕೊಂಡ. ರಮೇಶ ತಾನೇ ಜಾಮೀನು ನೀಡಿ ಬ್ಯಾಂಕಿನಿಂದ ಸಾಲ ತೆಗೆದುಕೊಟ್ಟ. 
        ಅಂಗಡಿ ಪ್ರಾರಂಭವಾಗಿ ಚೆನ್ನಾಗಿ ವ್ಯಾಪಾರ ನಡೆಯುತ್ತಿತ್ತು. ಆಗ ಅದೇ ಸಮಯಕ್ಕೆ ಊರಿನ ಮತ್ತೊಬ್ಬ ಗೆಳೆಯ ಆನಂದ ಆರೋಗ್ಯ ಇಲಾಖೆಯಲ್ಲಿದ್ದು ಆತ ಅಂಗಡಿ ಸಮೀಪ ಬಾಡಿಗೆ ಮನೆಗೆ ಬಂದ. ಆನಂದ ಬಂದ ನಂತರ ಅವನ ಜೊತೆ ಗೆಳೆತನ ಮುಂದುವರಿಯಿತು. ಈತನು ರೇವಣ್ಣನಿಗೆ ಹಳೆಯ ಗೆಳೆಯನೆ. ವ್ಯಾಪಾರ ನಡೆಯುತ್ತಿರಬೇಕಾದರೆ ಅದೇ ಅಂಗಡಿಯ ಪಕ್ಕ ಮತ್ತೊಬ್ಬ ಇನ್ನೊಂದು ದಿನಸಿ ಅಂಗಡಿ ಸ್ವಂತ ಬಂಡವಾಳದಲ್ಲಿ ಪ್ರಾರಂಭಮಾಡಿದ. ಇದರಿಂದ ಅಂಗಡಿಯಲ್ಲಿ ಲಾಭಾಂಶ ಕಡಿಮೆ ಆಯಿತು. ಗಿರಾಕಿಗಳನ್ನು ಸೆಳೆಯಬೇಕೆಂದು ತೀರ್ಮಾನಿಸಿ, ಕಡಿಮೆ ಲಾಭಕ್ಕೆ ವ್ಯಾಪಾರ ಮಾಡಲು ಪ್ರಾರಂಭಿಸಿದ. ಇದನ್ನು ಅರಿತ ಪಕ್ಕದ ಅಂಗಡಿಯವನು ಸ್ವಂತ ಬಂಡವಾಳದಿಂದ ಅಂಗಡಿ ತೆರೆದಿದ್ದರೂ ಸಹ ತನ್ನ ವ್ಯಾಪಾರ ನೀತಿಯಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಲಿಲ್ಲ.
        ರೇವಣ್ಣ , ಅಂಗಡಿಗೆ ನೆರವಾಗಲಿಲ್ಲ ಎಂಬ ಮನಸ್ತಾಪ ತಂದೆಯ ಜೊತೆ ಇತ್ತು. ಇದು ಆತನ ಹೆಂಡತಿ ರತ್ನನಲ್ಲೂ ಇತ್ತು. ಹೀಗಿರಬೇಕಾದರೆ ರೇವಣ್ಣನ ತಂದೆ ಖಾಲಿ ನಿವೇಶನದಲ್ಲಿ ಮನೆ ನಿರ್ಮಿಸಲು ಪ್ರಾರಂಭಿಸಿದರು. ರೇವಣ್ಣನ ತಂದೆ ಮಗನಿಗೆ , "ನೀನು ಪ್ರತಿ ತಿಂಗಳು ರೂ 2000 ಮನೆ ನಿರ್ವಹಣೆಗೆ ನೀಡುತ್ತಿದ್ದೀಯಾ, ಈಗ ಮನೆ ನಿರ್ಮಾಣ ಮಾಡುವುದರಿಂದ ಕನಿಷ್ಠ ರೂ 3000 ನಾದರೂ ನೀಡಬೇಕು" ಎಂಬುದಾಗಿ ತಿಳಿಸಿದರು. ಇದು ರೇವಣ್ಣನಿಗೆ ಸರಿಕಾಣಲಿಲ್ಲ. ವಿಚಾರವನ್ನು ಆನಂದನ ಜೊತೆ ರೇವಣ್ಣ ದಂಪತಿಗಳು ಚರ್ಚಿಸಿದರು. ಆಗ ಆನಂದ , "ನೋಡು ರೇವಣ್ಣ, ಇಲ್ಲೇ ಒಂದು ಚಿಕ್ಕ ಮನೆ ಬಾಡಿಗೆ ಮಾಡಿಕೊಂಡು ಇರು , ಬಾಡಿಗೆ ಮನೆ ವೆಚ್ಚ ಎಲ್ಲ ಸೇರಿ 2000 ಆಗುತ್ತದೆ. ನಿನಗೆ ನಿನ್ನ ಅಂಗಡಿಗೆ ನಿನ್ನ ತಂದೆ ಯಾವ ನೆರವು ನೀಡಲಿಲ್ಲ. ಹಾಗಾಗಿ ಬೇರೆ ಮನೆ ಮಾಡು" ಎಂಬುದಾಗಿ ಸಲಹೆ ನೀಡಿದ.
         ನಂತರ ಈ ವಿಚಾರವನ್ನು ಊರಿಗೆ ಬಂದಾಗ ರಮೇಶನ ಬಳಿ ರೇವಣ್ಣ ದಂಪತಿ ಚರ್ಚಿಸಿದರು. ಆಗ ರಮೇಶ ಹೇಳಿದ , "ರೇವಣ್ಣ ರೂ 1000 ಹೆಚ್ಚಲ್ಲ, ಪರವಾಗಿಲ್ಲ ನೀಡು ಹೇಗಿದ್ದರೂ ಸ್ವಂತಕ್ಕೆ ಮನೆ ಆಗುತ್ತದೆ ನೀನು ಬೇರೆ ಮಾಡಿದರೆ ಕೇವಲ ಬಾಡಿಗೆ ಮನೆ ನಿರ್ವಹಣೆ ಅಷ್ಟೇ ಅಲ್ಲ ಬೇರೆ ಬೇರೆ ರೀತಿಯ ಖರ್ಚು, ನೆಂಟರಿಷ್ಟರು ಖರ್ಚು , ಹೀಗೆ ಅದಕ್ಕಿಂತ ಹೆಚ್ಚಾಗುತ್ತೆ. ಅದರ ಬದಲು ಒಟ್ಟಾಗಿ ಇದ್ದಂತೆಯೂ ಆಯಿತು, ತಂದೆಗೆ ಗೆರವಾದಂತೆಯೂ ಆಯ್ತು" ಎಂದು ಸಲಹೆ ನೀಡಿದ. ಆದರೆ ಇದು ರೇವಣ ದಂಪತಿಗೆ ಇಷ್ಟವಾಗಲಿಲ್ಲ. ಮನೆ ತೊರೆದು ಬೇರೆ ಮನೆ ಮಾಡಿದರು. ಇದಾದ ಬಳಿಕ ರಮೇಶ ನಿಂದ ಅಂತರ ಕಾಯ್ದುಕೊಂಡರು. ಮನಸ್ಸಿನಲ್ಲಿ ಕೆಟ್ಟದ್ದೆ ತುಂಬಿದ್ದಾಗ ನೋಡುವುದೆಲ್ಲಾ ಕೆಟ್ಟದಾಗಿ ಕಾಣುತ್ತದೆ. ಅದರಂತೆ ರಮೇಶನ ಕುಟುಂಬದಲ್ಲಿ ಬಿರುಕು ತರಲು ರೇವಣ್ಣ ಪ್ರಯತ್ನಿಸಿದ. ಇದಾದನಂತರ ರೇವಣ್ಣ ಮತ್ತು ರಮೇಶ ಅಂತರ ಕಾಯ್ದುಕೊಂಡು ತಮ್ಮ ತಮ್ಮ ಪಾಡಿಗೆ ತಾವಿದ್ದರು.
            ರೇವಣ್ಣ ಪ್ರತ್ಯೇಕ ಮನೆ ಮಾಡಿದ ಮೇಲೆ ಪತ್ನಿ ಮನೆಯವರು ಬರುವುದು ಹೆಚ್ಚಾಯಿತು. ಪತ್ನಿ ತನ್ನ ತಮ್ಮನ ವಿದ್ಯಾಭ್ಯಾಸಕ್ಕೆ ನೆರವಾದಳು. ಆದರೆ ಅಂಗಡಿಯಲ್ಲಿ ಆದಾಯ ಕಡಿಮೆ , ಖರ್ಚು ಹೆಚ್ಚಾಯಿತು. ಅದೇ ಸಮಯಕ್ಕೆ ಮಾವನ ಮನೆಯವರು ಊರಿನಲ್ಲಿ ಮನೆ ನಿರ್ಮಿಸಲು ಪ್ರಾರಂಭ ಮಾಡಿದರು. ಆಗ ಪತ್ನಿ ಒತ್ತಾಯದ ಮೇರೆಗೆ ಸಾಲ ತೆಗೆದು ಸಹಾಯಮಾಡಿದ ರೇವಣ್ಣ. ದಿನೇ ದಿನೇ ಸಾಲ ಹೆಚ್ಚಾಯಿತು. ಬರುವ ಆದಾಯದಲ್ಲಿ ಬಡ್ಡಿ ಕಟ್ಟಲು ಸಾಧ್ಯವಾಗದೆ ಬೇರೆ ಬೇರೆ ಕಡೆ ಸಾಲ ಮಾಡಿದ. ಸಾಲ ತೀರಿಸಲಾಗದೆ ಒಂದು ದಿನ ಅಂಗಡಿ ಬಂದ್ ಮಾಡಿ ರಾತ್ರೋರಾತ್ರಿ ಊರು ತೊರೆದು ಬೆಂಗಳೂರು ಸೇರಿದರು. ತಂದೆ ಮನೆ ಕಟ್ಟುವಾಗ ಆಕಡೆ ದಂಪತಿಗಳು ಒಂದು ದಿನ ಹೋಗಲಿಲ್ಲ. ತಂದೆಯಿಂದಲೂ ದೂರವಾಗಿ ಕೊನೆಗೆ ಊರೂ ಬಿಡುವಂತಾಯಿತು.
         ಮಕ್ಕಳೇ ಈ ಘಟನೆಯಿಂದ ನಮ್ಮ ಜೀವನಕ್ಕೆ ದೊರೆಯುವ ಪ್ರಮುಖ ಅಂಶವೆಂದರೆ ಗೆಳೆಯರನ್ನು ಆಯ್ಕೆ ಮಾಡುವಾಗ ಎಚ್ಚರಿಕೆ ಇರಬೇಕು. ಗೆಳೆಯರು ಹೇಳಿದ್ದನ್ನು ಎಲ್ಲಾ ರೀತಿಯಿಂದಲೂ ವಿಚಾರ ಮಾಡಿ ತೀರ್ಮಾನಿಸಬೇಕು. ನಾವು ಹಿರಿಯರೊಂದಿಗೆ ಇದ್ದಾಗ ಅವರು ನಮ್ಮನ್ನು ದಾರಿ ತಪ್ಪದಂತೆ ತಡೆಯುತ್ತಾರೆ. ಸ್ವತಂತ್ರವಾಗಿ ಇರಬೇಕು ಎನ್ನುವ ದುಡಿಕಿನಲ್ಲಿ ಜೀವನವನ್ನು ಹಾಳು ಮಾಡಿಕೊಳ್ಳಬಾರದು. ಅವಿಭಕ್ತ ಕುಟುಂಬದ ಆಶಯ. ಜೀವನದಲ್ಲಿ ಯಾರನ್ನೂ ದೂಷಿಸಬಾರದು. ನಮ್ಮ ಜೀವನದಲ್ಲಿ ಅನೇಕರು ಬರುತ್ತಾರೆ. ಕೆಲವರು ನಮ್ಮನ್ನು ಬಳಸಿಕೊಳ್ಳುತ್ತಾರೆ. ಇನ್ನು ಕೆಲವರು ನಮ್ಮನ್ನು ಬೆಳೆಸುತ್ತಾರೆ. ಮತ್ತೆ ಕೆಲವರು ನಮಗೆ ಪಾಠ ಕಲಿಸುತ್ತಾರೆ. ಹಾಗಾಗಿ ವಿಚಾರಮಾಡಿ ತೀರ್ಮಾನ ತೆಗೆದುಕೊಳ್ಳಬೇಕು. ಅತಿ ಆಸೆ ಇರಬಾರದು ಆಸೆ ಮಿತಿಯಾಗಿ ಇಟ್ಟುಕೊಂಡು ಇರುವುದರಲ್ಲಿ ಸಂತೋಷದ ಜೀವನ ಮಾಡಬೇಕು
..........................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article