-->
ಸ್ಫೂರ್ತಿಯ ಮಾತುಗಳು : ಜೆಸ್ಸಿ ಪಿ. ಪಿ.

ಸ್ಫೂರ್ತಿಯ ಮಾತುಗಳು : ಜೆಸ್ಸಿ ಪಿ. ಪಿ.            "ದ ಪ್ರೆಸೆಂಟ್" (The Present) ಎಂಬ ಒಂದು ಆ್ಯನಿಮೇಟೆಡ್ ವೀಡಿಯೋ ಇದೆ. ಕೇವಲ ನಾಲ್ಕು ನಿಮಿಷದ ಈ ಆ್ಯನಿಮೇಟೆಡ್ ಸ್ಟೋರಿ ನಿಮಗೆ ಬಹುದೊಡ್ಡ ಸಂದೇಶವನ್ನು ನೀಡುತ್ತದೆ. ಒಂದು ಕೊಠಡಿಯಲ್ಲಿ ಒಬ್ಬ ಹುಡುಗ ವೀಡಿಯೋ ಗೇಮ್ ಆಡುವುದರಲ್ಲಿ ತಲ್ಲೀನನಾಗಿರುತ್ತಾನೆ. ಹೊರಗೆ ಆಟವಾಡಲು ಹೋಗದೇ, ಕಿಟಕಿಯ ಪರದೆಗಳನ್ನು ಸರಿಸದೇ ಸಿಡುಕಿನ ಮುಖದಿಂದ ಅವನು ಆಟ ಮುಂದುವರಿಸುತ್ತಾನೆ. ಅಷ್ಟರಲ್ಲಿ ಬಾಗಿಲು ತೆರೆದು ಒಳಬಂದ ಅಮ್ಮ ಅವನಿಗೆ ಒಂದು ದೊಡ್ಡ ಬಾಕ್ಸ್ ನಲ್ಲಿ ತಂದಿರುವ ಗಿಫ್ಟನ್ನು ಕೊಡುತ್ತಾಳೆ. ಆದರೆ ಅದೇನೆಂದು ನೋಡುವ ಗೊಡವೆಗೆ ಹೋಗದೇ ಆತ ಆಟವಾಡುತ್ತಿರುತ್ತಾನೆ. ಅಮ್ಮ ಕಿಟಕಿಯ ಪರದೆಗಳನ್ನು ಸರಿಸಿದಾಗ ಆ ಬೆಳಕು ಅವನಿಗೆ ಕಿರಿಕಿರಿಯುಂಟುಮಾಡುತ್ತದೆ. ಅವನ ಈ ವರ್ತನೆಯಿಂದ ಅವನು ಯಾವತ್ತೂ ಹೊರಗೆ ಆಟವಾಡಲು ಹೋಗುವುದಿಲ್ಲ ಹಾಗೂ ವೀಡಿಯೋ ಗೇಮ್ ನಲ್ಲಿ ನಿರಂತರ ಮುಳುಗಿರುತ್ತಾನೆ ಎಂದು ವ್ಯಕ್ತವಾಗುತ್ತದೆ. ಸ್ವಲ್ಪ ಹೊತ್ತಿನ ಬಳಿಕ ಅವನು ಮೆಲ್ಲನೆ ಆ ಬಾಕ್ಸ್ ತೆರೆದು ನೋಡುತ್ತಾನೆ. ಅದರಲ್ಲಿರುವ ಮುದ್ದಾದ ನಾಯಿಮರಿಯನ್ನು ಕಂಡು ಅವನಿಗೆ ಖುಷಿಯಾಗುತ್ತದೆ. ಅದನ್ನು ಎತ್ತಿ ಮುದ್ದಿಸುವಾಗ ಅದು ಒಂದು ಕಾಲಿಲ್ಲದ ಕುಂಟ ನಾಯಿಮರಿ ಎಂದು ಅವನಿಗೆ ತಿಳಿಯುತ್ತದೆ. ಅಸಹ್ಯದಿಂದ ಅದನ್ನವನು ಕೆಳಗೆಸೆಯುತ್ತಾನೆ. ನಾಯಿಮರಿ ಹೇಗೋ ಉರುಳಾಡಿ ನೇರ ನಿಲ್ಲುತ್ತದೆ. ಇವನ ಕಾಲಬಳಿ ಬರುತ್ತದೆ. ಅವನು ಅದನ್ನು ಝಾಡಿಸಿ ಒದೆಯುತ್ತಾನೆ. ಅದು ಪುನಃ ಹೇಗೋ ಎದ್ದು ಅತ್ತಿತ್ತ ಹುಡುಕುತ್ತದೆ. ಕೆಂಪು ಬಣ್ಣದ ಒಂದು ಚೆಂಡನ್ನು ಹುಡುಕಿ ತಂದು ಅವನ ಕಾಲ ಬಳಿ ಇಡುತ್ತದೆ. ಅವನು ನಿರಾಸಕ್ತಿಯಿಂದ ಚೆಂಡನ್ನು ಕಾಲಿನಿಂದ ದೂಡುತ್ತಾನೆ. ಚೆಂಡುಹೋಗಿ ನಾಯಿಮರಿಯನ್ನು ತಂದ ರಟ್ಟಿನ ಬಾಕ್ಸಿಗೆ ಬೀಳುತ್ತದೆ. ಅದನ್ನು ತರಲು ಹೋದ ನಾಯಿ ಮರಿ ರಟ್ಟಿನ ಪೆಟ್ಟಿಗೆಯಡಿಯಲ್ಲಿ ಸಿಕ್ಕಿಕೊಳ್ಳುತ್ತದೆ. ಈ ಸಮಯವೆಲ್ಲಾ ವೀಡಿಯೋ ಗೇಮ್ ಆಡುತ್ತಿರುವ ಹುಡುಗ ಮೆಲ್ಲನೆ ನಾಯಿಮರಿ ಹೊರಗೆ ಬರುತ್ತದೆಯೇ ಎಂದು ಕುತೂಹಲದಿಂದ ನೋಡುತ್ತಾನೆ. ಕುಂಟ ನಾಯಿಮರಿ ಹೊರಗೆ ಬರಲಿಕ್ಕಿಲ್ಲ ಎಂದು ಅವನು ಭಾವಿಸಿದ್ದಿರಬಹುದು. ಆದರೆ ಸ್ವಲ್ಪಹೊತ್ತಿನ ಒದ್ದಾಟದ ಬಳಿಕ ಪೆಟ್ಟಿಗೆಯೊಳಗಿಂದ ಮರಿ ಹೊರಗೆ ಬರುತ್ತದೆ. ಪುನಃ ಆ ಚೆಂಡನ್ನು ಹುಡುಕಿ ತಂದು ಅವನ ಕಾಲ ಬಳಿ ಇಡುತ್ತದೆ. ಅಷ್ಟರಲ್ಲಿ ಆ ಹುಡುಗ ಎದ್ದುನಿಲ್ಲುತ್ತಾನೆ. ಆಗ ನಮಗೆ ವಾಸ್ತವ ತಿಳಿಯುತ್ತದೆ. ಅವನು ಹೊರಗಡೆ ಎಲ್ಲೂ ಹೋಗದೇ ವೀಡಿಯೋ ಗೇಮ್ ಆಡುತ್ತಿದ್ದುದಕ್ಕೂ ಕುಂಟ ನಾಯಿಮರಿಯನ್ನು ತಿರಸ್ಕರಿಸಿದ್ದಕ್ಕೂ ಕಾರಣ ತಿಳಿಯುತ್ತದೆ. ಆ ಹುಡುಗನಿಗೂ ಒಂದು ಕಾಲು ಸರಿಯಿರುವುದಿಲ್ಲ. ಕ್ರಚಸ್(ಊರುಗೋಲು) ಬಳಸಿ ಅವನು ನಡೆಯಬೇಕಿತ್ತು. ವೀಡಿಯೋ ಗೇಮ್ ನಿಲ್ಲಿಸಿ ಎದ್ದು ಬಾಗಿಲ ಕಡೆ ನಡೆದ ಅವನನ್ನು ನಾಯಿಮರಿ ಹಿಂಬಾಲಿಸುತ್ತದೆ. "ಅಮ್ಮಾ, ನಾನು ಹೊರಗಡೆ ಆಡಲು ಹೋಗುತ್ತಿದ್ದೇನೆ" ಎನ್ನುತ್ತಾ ಅವನು ಹೊರನಡೆದು ಚೆಂಡು ಎಸೆಯುತ್ತಾನೆ. ನಾಯಿಮರಿ ಚೆಂಡುತರಲು ಓಡುತ್ತದೆ. (ಇಲ್ಲಿಗೆ ಕಥೆ ಮುಗಿಯಿತು)
        ಈ ನಾಲ್ಕು ನಿಮಿಷದ ಕತೆ ನಮ್ಮನ್ನು ನಲುವತ್ತು ನಿಮಿಷಕ್ಕಿಂತ ಹೆಚ್ಚಿನ ಚಿಂತನೆಗೆ ಹಚ್ಚುತ್ತದೆ. ನಾವು ನಮ್ಮಲ್ಲಿರುವ ಕೊರತೆಗಳು ಹಾಗೂ ಅಸಾಮರ್ಥ್ಯದ ಕುರಿತು ಚಿಂತಿಸುತ್ತಾ ನಿರಾಶರಾಗಿ ಬಾಳಬೇಕಾಗಿಲ್ಲ. ಮನಸ್ಸೊಂದಿದ್ದರೆ ಯಾವ ಅಸಾಮರ್ಥ್ಯವೂ ಸಾಧನೆಗೆ ತೊಡಕಲ್ಲ. ಅಂದುಕೊಂಡದ್ದನ್ನು ಸಾಧಿಸಲು ಬಡತನವೋ ದೈಹಿಕ ಅಸಾಮರ್ಥ್ಯವೋ ತಡೆಯಲ್ಲ. ಯಾವ ಕಠಿಣ ಪರಿಸ್ಥಿತಿಯನ್ನೂ ಎದುರಿಸಲು ನಮ್ಮ ಮನಶ್ಶಕ್ತಿ ನಮಗೆ ನೆರವಾಗುತ್ತದೆ. ನಾವು ಸೋಲಲು ತೀರ್ಮಾನಿಸಿದರೆ ಮಾತ್ರ ನಾವು ಸೋಲುತ್ತೇವೆ. ಗೆಲ್ಲಲು ತೀರ್ಮಾನಿಸಿ ಸರಿಯಾದ ರೀತಿಯಲ್ಲಿ ಕಠಿಣ ಪರಿಶ್ರಮ ಪಡುವವರನ್ನು ಶಾಶ್ವತವಾಗಿ ಸೋಲಿಸಲು ಯಾರಿಗೂ ಸಾಧ್ಯವಿಲ್ಲ. ಒಮ್ಮೆ ಸೋತರೂ ಅವರು ಮಾನಸಿಕವಾಗಿ ಕುಗ್ಗದೇ ಮತ್ತೆ ಪ್ರಯತ್ನಪಟ್ಟು ಗೆದ್ದು ತೋರಿಸುತ್ತಾರೆ.
           ದ ಪ್ರೆಸೆಂಟ್ ಕತೆಯಲ್ಲಿನ ಅಮ್ಮನಂತಹ ಬೆಂಬಲಿಗರು (Supporters) ನಮಗೆ ಬೇಕು. ಕುಂಟ ನಾಯಿಮರಿ ಕೊಟ್ಟು ಮಗನಲ್ಲಿ ಆತ್ಮವಿಶ್ವಾಸ ತುಂಬಲು ಆ ಅಮ್ಮ ಪ್ರಯತ್ನಿಸಿ ಸಫಲರಾದರು. ಸಮಸ್ಯೆಯನ್ನು ಕಂಡುಕೊಂಡು ಅದಕ್ಕೆ ಸೂಕ್ತ ಪರಿಹಾರೋಪಾಯ ಸೂಚಿಸುವ ಇಂತಹ ಜನರು ನಮ್ಮ ಜೊತೆಗಿದ್ದರೆ ಗೆಲುವು ಮತ್ತಷ್ಟೂ ಸುಲಭ. 
       ಪ್ರೀತಿಯ ಮಕ್ಕಳೇ, ಆಲಸ್ಯ ತೊರೆದು, ಉತ್ಸಾಹದಿಂದ, ಧೈರ್ಯದಿಂದ ಪ್ರಯತ್ನಪಟ್ಟರೆ ನಿಮ್ಮನ್ನೆಂದೂ ಸೋಲು ಸೋಕುವುದಿಲ್ಲ. ನಿರಾಶೆ ಬೆನ್ನು ಹತ್ತುವುದಿಲ್ಲ. ದುಃಖ ಎದೆಗುಂದಿಸುವುದಿಲ್ಲ. ಸೋಲನ್ನೂ, ನಷ್ಟವನ್ನೂ, ಕಷ್ಟವನ್ನೂ ಆತ್ಮವಿಶ್ವಾಸವೊಂದಿದ್ದರೆ ಗೆಲ್ಲಬಹುದು. ನಿಮ್ಮ ಕೊರತೆಗಳನ್ನು ಮರೆಯಿರಿ. ಕಷ್ಟಗಳನ್ನು ಕಡೆಗಣಿಸಿ. ಪ್ರತಿ ಕ್ಷಣವೂ ಖುಷಿಯಾಗಿರಿ. ಆತ್ಮವಿಶ್ವಾಸ ಬೆಳೆಸಿಕೊಂಡು ಬದುಕನ್ನು ಸುಗಮಗೊಳಿಸಿ.
..................................................ಜೆಸ್ಸಿ ಪಿ.ವಿ
ಸಹಶಿಕ್ಷಕಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು.
ಪುತ್ತೂರು ತಾಲೂಕು. ದಕ್ಷಿಣ ಕನ್ನಡ ಜಿಲ್ಲೆ
****************************************Ads on article

Advertise in articles 1

advertising articles 2

Advertise under the article