-->
ಭವಿಷ್ಯದ ಚಿತ್ರಕಲಾ ಪ್ರತಿಭೆ : ಕಾರ್ತಿಕ್ ಎನ್. ಬೆಳ್ಳಾರೆ

ಭವಿಷ್ಯದ ಚಿತ್ರಕಲಾ ಪ್ರತಿಭೆ : ಕಾರ್ತಿಕ್ ಎನ್. ಬೆಳ್ಳಾರೆ

     
 ಭವಿಷ್ಯದ ಚಿತ್ರಕಲಾ ಪ್ರತಿಭೆ : ಕಾರ್ತಿಕ್ ಎನ್. ಬೆಳ್ಳಾರೆ.

                 ಸಾಧನೆಯ ಗುರಿಹೊತ್ತ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಕಠಿಣ ಪರಿಶ್ರಮ ಇದ್ದೇ ಇರುತ್ತದೆ. ಗುರುತಿಸುವಿಕೆ , ಪ್ರೋತ್ಸಾಹದ ನುಡಿಗಳಿಂದ ತನ್ನ ಆತ್ಮವಿಶ್ವಾಸವನ್ನು ಬೆಳೆಸುತ್ತಾ ವಿಶೇಷತೆಯನ್ನು ಮೆರೆಯುತ್ತಾರೆ. ಯಾವುದೇ ಪ್ರತಿಭೆಗಳು ಇರಲಿ ತನ್ನ ಇರುವಿಕೆಯನ್ನು ತೋರಿಸುತ್ತಾ ಬೆಳೆಯುವ ಅನೇಕ ವಿದ್ಯಾರ್ಥಿಗಳನ್ನು ಕಾಣುತ್ತೇವೆ. ಅಂತಹ ವಿದ್ಯಾರ್ಥಿಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಕಾರ್ತಿಕ್ ಕೂಡ ಒಬ್ಬರು. ಚಿತ್ರಕಲೆಯ ಮೂಲಕ ತನ್ನ ಪ್ರತಿಭೆಯನ್ನು ಬೆಳಗಿರುವ ಕಾರ್ತಿಕ್ ಭವಿಷ್ಯದ ಉತ್ತಮ ಕಲಾವಿದನಾಗುವತ್ತ ಹೆಜ್ಜೆಯಿಟ್ಟಿದ್ದಾರೆ.....
         ಕಾರ್ತಿಕ್ ಪ್ರಸ್ತುತ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ. ಆರ್ಥಿಕವಾಗಿ ಬಡತನದ ಕುಟುಂಬದಿಂದ ಬೆಳೆದು ಬಂದ ಕಾರ್ತಿಕ್ , ತಂದೆ ನಾರಾಯಣ ಪಾಟಾಳಿ ಮತ್ತು ತಾಯಿ ಶ್ರೀಮತಿ ಕಮಲ ಇವರ ಪುತ್ರ. ಬಾಲ್ಯದಿಂದಲೇ ವಿಶೇಷ ಆಸಕ್ತಿಯನ್ನು ಹೊಂದಿದ್ದ ಇವರ ಪ್ರತಿಭೆಯನ್ನು ಕಂಡು ತನ್ನ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ವಿಶೇಷ ಸಹಕಾರದಿಂದ ಹವ್ಯಾಸಿ ಚಿತ್ರಕಲಾ ತರಗತಿಗೆ ಸೇರಿಕೊಂಡರು.
       ಒಂದು ಕಡೆ ಮನೆಯ ಬಡತನ , ಇನ್ನೊಂದು ಕಡೆ ಚಿತ್ರಕಲೆ ಬಗ್ಗೆ ಉತ್ಕಟವಾದ ಅಭಿಮಾನ ,  ಕಾಳಜಿ ತುಂಬಿದ ವಿದ್ಯಾರ್ಥಿಯನ್ನಾಗಿ ರೂಪಿಸಲು ಸಾಧ್ಯವಾಯಿತು. ಕಲಾಸುಮ ಪದ್ಮನಾಭ ನೆಟ್ಟಾರು ಇವರ ಮಾರ್ಗದರ್ಶನದಲ್ಲಿ ಬೆಳೆದ ಕಾರ್ತಿಕ್ ಉತ್ತಮ ಚಿತ್ರ ಕಲಾವಿದನಾಗುವ ಭರವಸೆ ಮೂಡಿಸಿದ್ದಾರೆ. ಪೆನ್ಸಿಲ್ ಶೇಡಿಂಗ್ , ಗ್ಲಾಸ್ ಮಾರ್ಕಿಂಗ್ ಪೆನ್ಸಿಲ್ಸ್ , ವಾಟರ್ ಕಲರ್ , ಅಕ್ರ್ಯಾಲಿಕ್ ಕಲರ್ ಹೀಗೆ ವಿವಿಧ ಮಾಧ್ಯಮಗಳಲ್ಲಿ ಕಲಾಕೃತಿ ರಚಿಸುವ ನೈಪುಣ್ಯತೆಯನ್ನು ಗಳಿಸಿಕೊಂಡರು. 
         ಚಿತ್ರಕಲಾ ಸ್ಪರ್ಧೆಯಲ್ಲಿ ಬಹುಮಾನ ಗಳಿಸುವುದು ನಿರಂತರವಾಯಿತು. ಶಿಕ್ಷಣ ಇಲಾಖೆಯಿಂದ ನಡೆಸಲಾಗುವ ಪ್ರತಿಭಾ ಕಾರಂಜಿ ಅಥವಾ ಕಲೋತ್ಸವ ಸ್ಪರ್ಧೆಯಲ್ಲಿ ನಿರಂತರವಾಗಿ ಭಾಗವಹಿಸುತ್ತಾ 
ತಾಲೂಕು , ಜಿಲ್ಲೆ ಹಾಗೂ ರಾಜ್ಯ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗಳಿಸಿರುವುದು ಇವರ ಕಲಾ ಪ್ರತಿಭೆಗೊಂದು ಸಾಕ್ಷಿಯಾಗಿದೆ. ಹತ್ತು ಹಲವಾರು ಪ್ರಶಸ್ತಿಗಳನ್ನು ಪಡೆದು ಬೀಗದೆ ನಿರಂತರವಾಗಿ ಚಿತ್ರಕಲಾಭ್ಯಾಸ ದಲ್ಲಿ ತೊಡಗಿಕೊಳ್ಳುತ್ತಾರೆ. 
           ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯವರು ಏರ್ಪಡಿಸುವ ಚಿತ್ರಕಲಾ ಲೋವರ್ ಗ್ರೇಡ್ ಮತ್ತು ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ತನ್ನ ದ್ವಿತೀಯ ಪಿಯುಸಿ ವ್ಯಾಸಂಗದ ಜೊತೆಗೆ ಕಲೆಯ ವೈವಿಧ್ಯ ಚಟುವಟಿಕೆಯಲ್ಲಿ ಭಾಗವಹಿಸಿಕೊಳ್ಳುತ್ತಾ ಸೃಜನಶೀಲ ವಿದ್ಯಾರ್ಥಿಯಾಗಿ ರೂಪುಗೊಳ್ಳುತ್ತಿದ್ದಾರೆ.
             ತನ್ನ ಬದುಕಿನ ಎಲ್ಲಾ ದಿನಗಳನ್ನು ಚಿತ್ರಕಲಾವಿದನಾಗಿ ಕಳೆಯಬೇಕೆನ್ನುವುದು ತನ್ನ ಅಂತರಾತ್ಮದ ನುಡಿ. ಚಿತ್ರಕಲಾ ಪದವಿಯನ್ನು ಗಳಿಸಿ ತನ್ನ ಬದುಕನ್ನು ಕಟ್ಟಬೇಕೆನ್ನುವುದು ಇವರ ಕನಸು. ಕಲಾವಿದರ ಸಾಲಿನಲ್ಲಿ ತನ್ನ ದಾರಿಯನ್ನು ಹುಡುಕುತ್ತಾ ಸಾಗುವ ಯೋಚನೆ ಹೊತ್ತುಕೊಂಡಿದ್ದಾರೆ. 
         ಕಲಾವಿದನಲ್ಲಿರುವ ಸೌಂದರ್ಯಪ್ರಜ್ಞೆ ಸಮಾಜವನ್ನು ಸುಂದರಗೊಳಿಸುತ್ತದೆ. ಕಾಣುವ ಪ್ರತಿಯೊಂದರಲ್ಲೂ ಕಲಾತ್ಮಕತೆಯನ್ನು ಬಯಸಿದರೆ ಎಲ್ಲವೂ ವಿಶಿಷ್ಟವಾಗುತ್ತದೆ. ಸೃಜನಶೀಲ ವ್ಯಕ್ತಿತ್ವ ಬಯಸುವ ಈ ಸಮಾಜದೊಳಗೆ ಕ್ರಿಯಾಶೀಲ ಪ್ರತಿಭೆಗಳು ಅಸಂಖ್ಯರಾಗಿ ಬೆಳೆದು ಬರಬೇಕು.... ಕಾರ್ತಿಕ್ ಈ ನಾಡಿಗೆ ಉತ್ತಮ ಕಲಾವಿದನಾಗಿ ಬೆಳಕಾಗಲಿ ಜೊತೆಗೆ ಇನ್ನೊಂದಿಷ್ಟು ವಿದ್ಯಾರ್ಥಿಗಳಿಗೆ ಪ್ರೇರಕರಾಗಲಿ.
.............................. ತಾರಾನಾಥ್ ಕೈರಂಗಳ್
ಮಕ್ಕಳ ಜಗಲಿ 
ದಕ್ಷಿಣ ಕನ್ನಡ ಜಿಲ್ಲೆ
********************************************

Ads on article

Advertise in articles 1

advertising articles 2

Advertise under the article