
ಪ್ರಕೃತಿ, ಪ್ರಕ್ರಿಯೆ.... ಪ್ರತೀಕಾರ
Sunday, April 24, 2022
Edit
ದಿನೇಶ್ ಹೊಳ್ಳ.
ಕಲಾವಿದ , ಲೇಖಕರು , ಪರಿಸರ ಪ್ರೇಮಿ
ಮಂಗಳೂರು , ದಕ್ಷಿಣ - ಕನ್ನಡ ಜಿಲ್ಲೆ
ಶಾಪದ ಹೊರೆ ತೆರೆದಿಟ್ಟಿತು ಬಾಗಿಲು.
ಹೌದು, ಈ ಧರೆಯ ಏಕೈಕ ದೊರೆ ಎಂದು ಬೀಗುವ ಮನುಜ ಮಾಡಿರುವ ಕರ್ಮಾನುಫಲಕ್ಕೆ ಇಡೀ ಧರೆಯೇ ಮನುಜನಿಗೆ ಶಾಪ ಇಡುತ್ತಾ ತಾಪದ ಬಾಗಿಲು ತೆರೆದಿಟ್ಟಿತು. ಮಾತೆತ್ತಿದರೆ ಜಾಗತಿಕ ತಾಪಮಾನ ಎಂದು ತಪ್ಪಿಸಿಕೊಳ್ಳುವ ಮನುಜ ಸಾಮ್ರಾಜ್ಯಕ್ಕೆ ತಾಪದ ಶಾಪ ಕೊಡದೇ ಇನ್ನೇನು ಕೊಡಬೇಕು ನಮ್ಮ ಪ್ರಕೃತಿ. ಅಭಿವೃದ್ಧಿ ಎಂಬ ನೆಪದಲ್ಲಿ, ಆಧುನಿಕತೆಯ ಜಪದಲ್ಲಿ ಎಷ್ಟೊಂದು ಅಡವಿಯನ್ನು ಕತ್ತರಿಸಿ ಛಿದ್ರಗೊಳಿಸಲಾಯಿತು. ಗಣಿಗಾರಿಕೆಯ ಮೂಲಕ ಎಷ್ಟೊಂದು ಬೆಟ್ಟ ಗುಡ್ಡಗಳನ್ನು ನೆಲಸಮ ಮಾಡಲಾಯಿತು. ನೀರಾವರಿ ಎಂಬ ನೆಪದಲ್ಲಿ ಎಷ್ಟೊಂದು ನದಿಗಳಿಗೆ ಕನ್ನ ಹಾಕಲಾಯಿತು. ಕೈಗಾರಿಕೆ, ಇಂಡಸ್ಟ್ರಿ ಎಂಬ ಧನ ದಂಧೆಯಲ್ಲಿ ಎಷ್ಟೊಂದು ಸಾಗರ ಮತ್ತು ಆಗಸವನ್ನು ಮಾಲಿನ್ಯ ಮಾಡಲಾಯಿತು... ಈ ಧರೆಯ ತಂಪು ಹೊದಿಕೆಯನ್ನೆಲ್ಲಾ ಸರ್ವ ನಾಶ ಮಾಡಿ ತನ್ನ ಸ್ವಾರ್ಥ ಸಾಧನೆಗೆ ಧರೆಯ ಸರ್ವ ಕಾಯವನ್ನು ನಾಶ ಮಾಡಿದ ಮೇಲೆ ತಾಪ ಹೆಚ್ಚಾಗದೇ ಇನ್ನೇನಾಗಬೇಕಿತ್ತು......?
ನಗರಗಳ ಬೆಳವಣಿಗೆ ಹೆಚ್ಚಾಗುತ್ತಿದ್ದಂತೆಯೇ ನಿಸರ್ಗದ ಒಡಲಿಗೆ ಮಾರಣಾಂತಿಕ ಏಟು ಬೀಳುತ್ತಾ ಹೋಯಿತು. ಪ್ರಕೃತಿ ಮಾತೆಯ ವೇದನೆ, ರೋದನಕ್ಕೆ ಕಿವಿಯಾಗುವವರಿಲ್ಲದೇ ಪ್ರಕೃತಿಯ ಶಾಪಕ್ಕೆ ಒಳಗಾಗುತ್ತಾ ಪ್ರಾಕೃತಿಕ ದುರಂತಗಳ ಹೊಡೆತವನ್ನು ತಿನ್ನುತ್ತಿದ್ದರೂ ಎಚ್ಚರವಾಗದ ಮನುಷ್ಯ ಯಾವಾಗ ತನ್ನನ್ನು ತಾನು ಬದಲಾಯಿಸಿಕೊಳ್ಳುವುದು ಎಂಬ ಪ್ರಶ್ನೆ ಉತ್ತರವಿಲ್ಲದೆ ತತ್ತರವಾಗಿಯೇ ಉಳಿಯಿತು. ದಕ್ಷಿಣ ಭಾರತದ ಸಕಲ ಜೀವ ಸಂಕುಲಗಳ ಬದುಕಿನ ಚೇತನಾ ಶಕ್ತಿ ಆಗಿರುವ ಪಶ್ಚಿಮ ಘಟ್ಟದ ನದೀ ಮೂಲಗಳು ಮಾನವ ಹಸ್ತಕ್ಷೇಪ ದಿಂದ ಬಡಕಲಾಗುತ್ತಾ ಬರುತ್ತಿವೆ. ಜಲ ಪ್ರವಾಹ, ಭೂಕುಸಿತ, ಬರಗಾಲ, ಚಂಡ ಮಾರುತ ಮುಂತಾದ ನೈಸರ್ಗಿಕ ದುರಂತಗಳ ಮೂಲಕ ಪ್ರಕೃತಿ ತನ್ನ ಪ್ರತೀಕಾರವನ್ನು ತೀರಿಸುತ್ತಾ ಬರುತ್ತಿದ್ದರೂ ನಮ್ಮ ಆಡಳಿತ ವ್ಯವಸ್ಥೆ ಇದಕ್ಕೆ ಪರಿಹಾರವನ್ನೊದಗಿಸುವ ಬದಲು ನದಿಯನ್ನೇ ತಿರುಗಿಸುವುದು, ನದಿಗಳನ್ನು ಜೋಡಿಸುವುದು ಎಂಬ ಅಸಂಬದ್ಧ ಯೋಜನೆಗಳ ಮೂಲಕ ಇನ್ನಷ್ಟು ತಾಪ ಹೆಚ್ಚಾಗಲು ಅವಕಾಶಗಳನ್ನು ಮಾಡುತ್ತಾ ಇವೆ.
ಇಲ್ಲಿ ನಾವು ಪ್ರಧಾನವಾಗಿ ಯೋಚಿಸ ಬೇಕಾದದ್ದು ಇರುವ ಈಗ ಮತ್ತು ಇಲ್ಲದಿರುವ ನಾಳೆಗಳ ಬಗ್ಗೆ ಸಮಾಂತರವಾಗಿ ಚಿಂತಿಸಿ ಅದಕ್ಕೆ ಪರ್ಯಾಯ ಮಾರ್ಗವನ್ನು ಕಂಡು ಹಿಡಿಯಬೇಕಾದ ಅನಿವಾರ್ಯತೆಗಳನ್ನು. ಈ ಧರೆಯ ಫಲಾನುಭವಿಗಳು ನಾವು, ನೀವು, ಎಲ್ಲರೂ.. ಅದೇ ರೀತಿ ಈ ಧರೆಯ ನೆಮ್ಮದಿಗೆ ಸಮಸ್ಯೆ ಆದರೆ ಅದರ ಬಗ್ಗೆ ಚಿಂತಿಸಿ ಕ್ರಿಯಾಶೀಲರಾಗಬೇಕಾದದ್ದು ಕೂಡಾ ನಾವು, ನೀವು, ಎಲ್ಲರೂ... ದೋಷಾರೋಪಣೆ ಮಾಡಿ ಕಾಲಹರಣ ಮಾಡುವುದಕ್ಕಿಂತ ನಾವೇ ಕಾರ್ಯರೂಪಕ್ಕೆ ಇಳಿಯಬೇಕು. ನಮ್ಮ, ನಮ್ಮ ಮನೆಯ ಸುತ್ತ, ಶಾಲೆಗಳ ಸುತ್ತ ಒಂದಷ್ಟು ಹಸಿರು ಹೊದಿಕೆ, ಗಿಡಗಳನ್ನು ನೆಡುವುದು, ಇದ್ದ ಮರಗಳ ಯಥಾ ಸ್ಥಿತಿಯನ್ನು ಕಾಪಾಡಿಕೊಳ್ಳುವುದು, ನೀರು ನೆಲದೊಳಗೆ ಇಂಗುವಂತೆ ಒಂದಷ್ಟು ಇಂಗು ಗುಂಡಿ ನಿರ್ಮಾಣ, ಮಳೆ ಕೊಯ್ಲು, ಪ್ರಾಣಿ, ಪಕ್ಷಿಗಳಿಗೆ ನೀರು ಇಡುವ ಹಾಗೂ ಸುತ್ತ ಮುತ್ತಲಿನ ಪರಿಸರಕ್ಕೆ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಿಕೊಂಡು ಪ್ರಕೃತಿ ಮಾತೆಯ ನೆಮ್ಮದಿಯನ್ನು ಕಾಪಾಡಿಕೊಂಡು ಬರುವುದು ನಮ್ಮ, ನಿಮ್ಮೆಲ್ಲರ ನೈಜ ಕಾಳಜಿ ಆಗಬೇಕು.
ಸುರಿಯುತ್ತೇವೆ ಕೋಟಿ ಹಣ
ಅಣು ಬಾಂಬಿಗೆ..,
ಉಳಿಸುತ್ತಿಲ್ಲ ನೀರನ್ನು
ದಿನಕ್ಕೊಂದು ತಂಬಿಗೆ..,
ಯುದ್ಧಅಸ್ತ್ರಕ್ಕಿಂತ ಜಲವೇ
ಬದುಕಿಗೆ ನಂಬಿಗೆ.
ಈ ಧರೆಯ ನೆಲ ಎಷ್ಟು ಆಧುನಿಕ ವ್ಯವಸ್ಥೆಗಳಿಂದ ತುಂಬಿದೆ ಎಂದು ಮುಖ್ಯವಲ್ಲ, ಈ ಧರೆಯ ನೆಲದೊಳಗೆ ಎಷ್ಟು ನೀರು ಶೇಖರಣೆ ಆಗುತ್ತಿದೆ ಎಂಬುದು ಮುಖ್ಯ. ಕಟ್ಟಡಗಳು, ರಸ್ತೆಗಳು, ಅಣೆಕಟ್ಟುಗಳು, ಮಾಲ್, ಮಹಲ್ ಗಳೇ ಆಧುನಿಕ ಬದುಕಿನ ಐಷಾರಾಮಿ ಸವಲತ್ತುಗಳು ಎಂದೇ ನಂಬಿಕೊಂಡು ಬಂದಿರುವ ಮನುಜ ತಾನು ಈ ಆಧುನಿಕ ಸಕಲ ಸುಖ ಸಂಪತ್ತು ಗಳಿಸುವ ಆಚೆ ಅಗೋಚರವಾಗಿ ತನ್ನ ಅಭದ್ರತೆಯ ಅಂತಿಮ ಗುಂಡಿ ನಿರ್ಮಾಣ ಮಾಡುತ್ತಲೇ ಬಂದದ್ದು ಎಂದು ತಿಳಿಯಲೇ ಇಲ್ಲ. ಮನೆಯೊಳಗೆ ತಾಯಿ ನೆಮ್ಮದಿ ಆಗಿ ಇದ್ದರೆ ಮಾತ್ರ ಮನೆಯವರೆಲ್ಲರೂ ಖುಷಿಯಲ್ಲಿ ಇರುವುದು. ಅದೇ ರೀತಿ ಪ್ರಕೃತಿ ತಾಯಿ ನೆಮ್ಮದಿ ಆಗಿ ಇದ್ದರೆ ಮಾತ್ರ ಮನುಕುಲ ನೆಮ್ಮದಿ ಆಗಿ ಇರಬಹುದು. ಇದನ್ನು ಅರ್ಥ ಮಾಡಿಕೊಳ್ಳಬೇಕಾದವರು ನಾವು...ನೀವು...ಎಲ್ಲರೂ.
ಕಲಾವಿದ , ಲೇಖಕರು , ಪರಿಸರ ಪ್ರೇಮಿ
ಮಂಗಳೂರು , ದಕ್ಷಿಣ - ಕನ್ನಡ ಜಿಲ್ಲೆ
*********************************************