-->
ಹಕ್ಕಿ ಕಥೆ : ಸಂಚಿಕೆ - 44

ಹಕ್ಕಿ ಕಥೆ : ಸಂಚಿಕೆ - 44

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ


                 ಹಕ್ಕಿ ಕಥೆ : ಸಂಚಿಕೆ - 44
               ---------------------------
     ಮಕ್ಕಳೇ ನಮಸ್ತೇ. ಈ ವಾರದ ಹಕ್ಕಿ ಕಥೆಗೆ ಸ್ವಾಗತ. ಒಂದು ಬಾರಿ ನನ್ನ ಪಕ್ಷಿ ವೀಕ್ಷಕ ಮಿತ್ರ ರಾಧಾಕೃಷ್ಣರಿಗೆ ಒಂದು ಕಾಲ್ ಬಂತು. ಅವರು ಪಕ್ಷಿಗಳ ಫೋಟೋ ತೆಗೆಯುತ್ತಾರೆ ಎಂದು ತಿಳಿದಿದ್ದ ಅವರ ಪರಿಚಯಸ್ಥರೊಬ್ಬರು ಅವರಿಗೆ ಕಾಲ್ ಮಾಡಿದ್ದರು. ಆತ ಒಂದು ತೆಂಗಿನ ತೋಟದ ಮಾಲೀಕ. ಅವರ ತೆಂಗಿನ ತೋಟದ ಮಧ್ಯೆ ಒಂದು ಸಣ್ಣ ಹೊಳೆ ಹರಿಯುತ್ತಿತ್ತು. ಅದರ ಎರಡೂ ಬದಿಯಲ್ಲಿದ್ದ ಮರಗಳ ತೆಂಗಿನಕಾಯಿ ಹೊಳೆಗೆ ಬಿದ್ದು ಹೋಗುತ್ತಿತ್ತು. ಅದನ್ನು ಹೆಕ್ಕುವುದು ಅವರಿಗೆ ಬಹಳ ತ್ರಾಸದ ಕೆಲಸವಾಗಿತ್ತು. ಹೊಳೆ ಬದಿಯ ತೆಂಗಿನ ಮರಗಳಲ್ಲಿ ಫಸಲು ಚೆನ್ನಾಗಿಯೇ ಬಿಡುತ್ತಿದ್ದ ಕಾರಣ ಅದನ್ನು ಉಳಿಸಿಕೊಳ್ಳಲು ಅವರೊಂದು ಉಪಾಯ ಮಾಡಿದ್ದರು. ಅವರ ತೋಟದ ಕೊನೆಯಲ್ಲಿ ತೇಲಿಬರುವ ತೆಂಗಿನಕಾಯಿಗಳನ್ನು ಹಿಡಿಯಲು ಅವರೊಂದು ಬಲೆಯನ್ನು ಕಟ್ಟಿದ್ದರು. ಅದರಲ್ಲಿ ಸಿಲುಕಿಕೊಳ್ಳುವ ತೆಂಗಿನಕಾಯಿಗಳನ್ನು ಸಂಗ್ರಹಿಸುತ್ತಿದ್ದರು. ಒಂದು ದಿನ ಹೀಗೆ ತೆಂಗಿನಕಾಯಿ ಸಂಗ್ರಹಿಸಲು ಹೋದಾಗ ಅವರು ಕಟ್ಟಿದ್ದ ಬಲೆಯಲ್ಲಿ ಗಿಡುಗದ ಗಾತ್ರದ ಹಕ್ಕಿಯೊಂದು ಸಿಲುಕಿಕೊಂಡಿರುವುದನ್ನು ಗಮನಿಸಿದ ಅವರು ಮೊಬೈಲ್ ನಲ್ಲಿ ಫೋಟೋ ತೆಗೆದು, ಅದನ್ನು ರಾಧಾಕೃಷ್ಣರಿಗೆ ಕಳುಹಿಸಿ ಕರೆಮಾಡಿದ್ದರು. ಫೊಟೋ ನೋಡಿದ ರಾದಾಕೃಷ್ಣರು ತಕ್ಷಣ ತಮ್ಮ ಕ್ಯಾಮರಾ ಹಿಡಿದುಕೊಂಡು ಅಲ್ಲಿಗೆ ಹಾಜರಾದರು. ಅದಾಗಲೇ ತೋಟದ ಮಾಲೀಕ ಹಕ್ಕಿಯನ್ನು ಬಲೆಯಿಂದ ಬಿಡಿಸಿದ್ದರು. ಹಕ್ಕಿಯ ಸುಂದರವಾದ ಚಿತ್ರವನ್ನು ತೆಗೆದು ಬಿಡುಗಡೆ ಮಾಡಿದರೂ ಅದಕ್ಕೆ ಹಾರಲು ಸಾಧ್ಯವಾಗುತ್ತಿರಲಿಲ್ಲ. ಬಲೆಯಂದ ಬಿಡಿಸಿಕೊಳ್ಳುವ ಪ್ರಯತ್ನದಲ್ಲಿ ಹಕ್ಕಿಯ ರೆಕ್ಕೆಗೆ ಬಹಳಷ್ಟು ಹಾನಿಯಾಗಿತ್ತು. ಕೊನೆಗೆ ಅದನ್ನು ಪಿಲಿಕುಳ ಪ್ರಾಣಿಸಂಗ್ರಹಾಲಯದ ತಜ್ಞ ವೈದ್ಯರ ಹತ್ತಿರ ಚಿಕಿತ್ಸೆಗೆ ಕಳುಹಿಸಲಾಯಿತು ಎಂಬುದು ಗೆಳೆಯ ನನಗೆ ಹೇಳಿದ ಕಥೆ.
       ಆದರೆ ಇಷ್ಟೆಲ್ಲ ಹೇಳೀಯೂ ಹಕ್ಕಿ ಯಾವುದು ಎಂದು ಹೇಳಲೇ ಇಲ್ಲ ಅಂತಿದ್ದೀರಾ....? ಈ ಹಕ್ಕಿಯ ಹೆಸರು ಮೀನುಗುಮ್ಮ. ಮೀನು ಹಿಡಿಯುವ ಗೂಬೆಯೂ ಉಂಟೇ ಎಂದು ಆಶ್ಚರ್ಯ ಪಡುತ್ತಿದ್ದೀರಾ..... ಮೊದಲ ಬಾರಿಗೆ ಈ ಹಕ್ಕಿಯ ಪರಿಚಯ ಆದಾಗ ನನಗೂ ಹಾಗೇ ಆಗಿತ್ತು. ಸಲೀಂ ಅಲಿಯವರ THE BOOK OF INDIAN BIRDS ತೆಗೆದು ಇದರ ಜಾತಕ ಹುಡುಕಿದಾಗಲೇ ತಿಳಿದದ್ದು , ಈ ಗೂಬೆಯ ಮುಖ್ಯ ಆಹಾರವೇ ಮೀನು, ಕಪ್ಪೆ, ಏಡಿ, ಸರೀಸೃಪಗಳು ಮತ್ತು ಸಣ್ಣ ಪ್ರಾಣಿಗಳು. ಎತ್ತರದ ಮರಗಳಲ್ಲಿ ಈ ಹಕ್ಕಿಯ ವಾಸ. ಮರದ ಪೊಟರೆ ಅಥವಾ ಗುಡ್ಡದ ಇಳಿಜಾರಿನಲ್ಲಿರುವ ಬಂಡೆಗಳ ನಡುವಿನ ಸಂದಿಗಳಲ್ಲಿ ಇದು ಗೂಡು ಮಾಡುತ್ತದೆಯಂತೆ. ಇದರ ಉದ್ದವಾದ ಕಾಲುಗಳಲ್ಲಿ ಗರಿಗಳು ಕಡಿಮೆ ಇರುವುದು ಇದಕ್ಕೆ ಮೀನು ಹಿಡಿಯಲು ಅನುಕೂಲವಾಗುತ್ತವೆ. ನೀರು ಹರಿಯುವ, ದಟ್ಟವಾದ ಮರಗಳಿಂದ ಆವೃತವಾದ ಹೊಳೆ, ನದಿ ಮತ್ತು ಕೆರೆಗಳಲ್ಲಿ ರಾತ್ರಿ ಹೊತ್ತು ಆಹಾರ ಹುಡುಕುತ್ತದೆಯಂತೆ. ದೊಡ್ಡ ಹಳದಿ ಕಣ್ಣುಗಳು ಅತೀ ಕಡಿಮೆ ಬೆಳಕಿನಲ್ಲೂ ನೋಡಲು ಸಾಧ್ಯವಾಗಿಸಿದರೆ, ಅಗಲವಾದ ಡಿಷ್ ಆಕಾರದ ಮುಖ ಸೂಕ್ಷ್ಮವಾದ ಶಬ್ದವನ್ನು ಕೇಳಲು ಸಹಾಯ ಮಾಡುತ್ತವೆ. ತನ್ನ ತಲೆಯನ್ನು ಕತ್ತಿನ ಸುತ್ತಲೂ ಸುಮಾರು 270 ಡಿಗ್ರಿಗಳಷ್ಟು ತಿರುಗಿಸಲು ಸಾಧ್ಯವಾಗುವುದರಿಂದ ಕುಳಿತಲ್ಲಿಂದಲೇ ತನ್ನ ಬೇಟೆ ಇರುವ ದಿಕ್ಕನ್ನು ಸೂಕ್ಷ್ಮವಾಗಿ ಗ್ರಹಿಸಲು ಸಾಧ್ಯವಾಗುತ್ತದೆ. ದೇಹದ ಗಾತ್ರಕ್ಕೆ ಹೋಲಿಸಿದರೆ ಅಗಲವಾದ ರೆಕ್ಕೆಗಳು ಹಾರುವಾಗ ಸ್ವಲ್ಪವೂ ಶಬ್ದ ಮಾಡದೇ ಇರುವುದರಿಂದ ಇದರ ಬೇಟೆಗೆ ಇದು ಹಾರಿ ಬರುವ ಸುಳಿವೇ ಸಿಗುವುದಿಲ್ಲವಂತೆ. ಗೂಬೆಗಳಲ್ಲೇ ಈ ಹಕ್ಕಿ ಮೀನು ಹಿಡಿಯುವ ಕೌಶಲವನ್ನೂ ಹೊಂದಿರುವ ಕಾರಣ ಇದಕ್ಕೆ ಮೀನುಗುಮ್ಮ ಎಂಬ ಹೆಸರು ಬಂದಿದೆಯಂತೆ. 
ಕನ್ನಡ ಹೆಸರು: ಮೀನುಗುಮ್ಮ ಅಥವಾ ಮೀನುಗೂಬೆ
ಇಂಗ್ಲೀಷ್ ಹೆಸರು: Brown Fish-Owl
ವೈಜ್ಷಾನಿಕ ಹೆಸರು: Ketupa zeylonensis
ಮುಂದಿನವಾರ ಇನ್ನೊಂದು ಹೊಸ ಹಕ್ಕಿ ಕಥೆಯೊಂದಿಗೆ ಸಿಗೋಣ.. ಬಾಯ್..
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************

Ads on article

Advertise in articles 1

advertising articles 2

Advertise under the article