-->
ಜೀವನ ಸಂಭ್ರಮ : ಸಂಚಿಕೆ - 33

ಜೀವನ ಸಂಭ್ರಮ : ಸಂಚಿಕೆ - 33

ಜೀವನ ಸಂಭ್ರಮ : ಸಂಚಿಕೆ - 33


                  ಜೀವನವು ಒಂದು ಗಣಿತ
              ----------------------------
     ಮಕ್ಕಳೇ, ಈ ಘಟನೆಯನ್ನು ಓದಿ. ಒಂದು ಊರಿನಲ್ಲಿ ಚಿಕ್ಕಣ್ಣ ಎಂಬುವವನಿದ್ದ. ಊರಿಗೆ ದೊಡ್ಡ ಶ್ರೀಮಂತ. ಊರಿನ ಸುತ್ತ ಎಲ್ಲಾ ಕಡೆ ಆತನ ಜಮೀನಿತ್ತು . ಆದರೆ ಆತ ಎಂದೂ ಒಳ್ಳೆಯ ಉಡುಪು ಧರಿಸಿದವನಲ್ಲ. ದಾರಿಯಲ್ಲಿ ನಡೆದು ಹೋಗಬೇಕಾದರೆ ದನ ಎಮ್ಮೆಯ ತೊಪ್ಪೇ ರಸ್ತೆಯಲ್ಲಿ ಬಿದ್ದಿದ್ದರೆ ಅದನ್ನು ಹೆಗಲ ಮೇಲಿನ ಟವಲಿನಲ್ಲಿ ತೆಗೆದುಕೊಂಡು ಹೋಗಿ ತನ್ನ ಜಮೀನಿನಲ್ಲಿ ಹಾಕುತ್ತಿದ್ದ. ಆತನ ಮನೆಯಲ್ಲಿ ಹುರುಳಿಕಾಳು ಸಾರು , ಮುದ್ದೆ ಬಿಟ್ಟರೆ ಬೇರೆ ಊಟವೇ ಇರಲಿಲ್ಲ. ಊರಿನಲ್ಲಿ ಜನರಿಗೆ ಹಣ ಬೇಕಾದರೆ ತಮ್ಮ ಸಾಮಾನು, ಒಡವೆ ಅಥವಾ ಜಮೀನು ಅಡವಿಟ್ಟು ಕೊಂಡು ಬಡ್ಡಿಗೆ ಹಣ ನೀಡುತ್ತಿದ್ದ. ಇದರಿಂದ ಆತನಿಗೆ ಹಣ ಜಮಾ ಆಗುತ್ತಿತ್ತು. ಹೀಗಾಗಿ ಆತ ಶ್ರೀಮಂತನಾಗಿದ್ದ. ಆತನಿಗೆ ಹಣ ಸಂಕಲನವಾಗಿತ್ತು.
       ಚಿಕ್ಕಣ್ಣನಿಗೆ ಎರಡು ಗಂಡು ಮಕ್ಕಳು ಹಾಗೂ ಒಬ್ಬಳು ಮಗಳು. ಮಗಳನ್ನು ಬೇರೆ ಊರಿನ ಶ್ರೀಮಂತನಿಗೆ ಮದುವೆ ಮಾಡಿಕೊಡಲಾಗಿತ್ತು. ಎರಡು ಗಂಡು ಮಕ್ಕಳು ಬುದ್ಧಿಯಲ್ಲಿ ಮಂಕಾಗಿದ್ದರು. ಅದರಲ್ಲಿ ಕೊನೆಯವನು ತೀರಾ ದಡ್ಡ. ಯಾರಾದರೂ ದಾರಿಯಲ್ಲಿ ಹೋದರೆ ಕಾಫಿಗೆ ಹಣ ಕೇಳುತ್ತಿದ್ದ. ಇಬ್ಬರಿಗೂ ಮದುವೆ ಮಾಡಿಕೊಡಲಾಗಿತ್ತು. ಸೊಸೆಯಂದಿರು ಬಹಳ ಬುದ್ಧಿವಂತರು. ಮೊದಲನೇ ಮಗನಿಗೆ ಒಂದು ಗಂಡು ಒಂದು ಹೆಣ್ಣು ಮಗು ಹುಟ್ಟಿತು. ಆ ಸಮಯಕ್ಕೆ ಚಿಕ್ಕಣ್ಣ ಮರಣಹೊಂದಿದ. ಕೊನೆಯ ಮಗ ಬುದ್ಧಿಹೀನನಾದರೂ ಸೊಸೆ ಬುದ್ಧಿವಂತೆ. ಸಂಸಾರವನ್ನು ಸರಿದೂಗಿಸಿಕೊಳ್ಳುತ್ತಿದ್ದಳು. ಜೊತೆಗೆ ಒಂದು ಗಂಡು ಮಗು ಹುಟ್ಟಿತು. ಮೊದಲನೇ ಮಗನಿಗೆ ಹಣ ಹೇಗೆ ಮಾಡಬೇಕೆಂದು ತಿಳಿಯದೆ, ಸ್ವಲ್ಪ ಜಮೀನು ಮಾರಿದ. ಇದರ ಜೊತೆಗೆ ಕುಡಿತದ ಚಟ ಬೆಳೆಯಿತು. ಹೀಗಾಗಿ ಇದ್ದ ಹಣವೆಲ್ಲ ಖರ್ಚಾಯಿತು. ಕೊನೆಗೆ ತಾಯಿ ಇದನ್ನು ನೋಡಿ ಕೊರಗಿ ಪಕ್ಕದ ಜಮೀನಿನಲ್ಲಿದ್ದ ಪಂಪ್ಸೆಟ್ ಬಾವಿಗೆ ಬಿದ್ದು ಮೃತಪಟ್ಟಳು. ಇದಾದ ಆರು ತಿಂಗಳಿಗೆ ಮಗನೂ ಕೂಡ ಅದೇ ಬಾವಿಗೆ ಕುಡಿದ ಮತ್ತಿನಲ್ಲಿ ಬಿದ್ದು ಮೃತನಾದ. ಈಗ ಮನೆಯಲ್ಲಿ ಹಣದ ಕೊರತೆ ಹಾಗೂ ಎರಡು ಜೀವದ ಕೊರತೆ ಉಂಟಾಯ್ತು. ಇದೆ ಆ ಕುಟುಂಬದ ವ್ಯವಕಲನ.
        ಇದಾದನಂತರ ಸೊಸೆಯಂದಿರು ಜಗಳ ಮಾಡಿಕೊಂಡು ಇರುವ ಮನೆ, ಆಸ್ತಿ ಎಲ್ಲವನ್ನೂ ಭಾಗ ಮಾಡಿಕೊಂಡು ಜೀವಿಸಲು ಪ್ರಾರಂಭಿಸಿದರು. ಇದು ಈ ಕುಟುಂಬದ ಭಾಗಾಕಾರ. ಸೊಸೆಯಂದಿರು ಆಳುಗಳ ಸಹಾಯದಿಂದ ವ್ಯವಸಾಯ ಮಾಡಿಕೊಂಡು ಇಂದು ಸಾಧಾರಣ ಜೀವನ ನಡೆಸುತ್ತಿದ್ದಾರೆ.
       ಚಿಕ್ಕಣ್ಣನ ತಮ್ಮ ಚಿಕ್ಕಣ್ಣ ಬದುಕಿದ್ದಾಗಲೇ ತೀರಿ ಹೋಗಿದ್ದ. ಆತನ ಮಕ್ಕಳು ಚಿಕ್ಕವರು. ಅವರಿಗೆ ಯಾವುದೇ ಆಸರೆಯನ್ನೂ ನೀಡಲಿಲ್ಲ. ಬದಲಿಗೆ ಪ್ರತ್ಯೇಕ ಮಾಡಿದ್ದ‌. ವಿಧವೆ ತಾಯಿ ಬಡತನದಿಂದ ಮಕ್ಕಳನ್ನು ಸಾಕುತ್ತಿದ್ದಳು. ಕೊನೆಯ ಮಗ ಊರಿನಲ್ಲಿ ಲಾಭ ಕಾಣದೆ ಬೆಂಗಳೂರಿನಲ್ಲಿ ಕೆಲಸ ಹುಡುಕಿಕೊಂಡು ಹೋದ. ಎರಡನೆಯ ಮಗ ಜಮೀನು ನೋಡಿಕೊಳ್ಳುತ್ತಿದ್ದ. ಮೊದಲನೆಯವನು ಮಾತ್ರ ಸ್ವಲ್ಪ ವಿದ್ಯಾವಂತ ನಾಗಿದ್ದ. ಪಂಚಾಯಿತಿ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷನಾದ. ಸಿವಿಲ್ ಕಂಟ್ರಾಕ್ಟರ್ ಆಗಿ ರಸ್ತೆ, ಚರಂಡಿ ನಿರ್ವಹಣೆ ಇದನ್ನೆಲ್ಲ ನಿರ್ವಹಿಸುತ್ತಿದ್ದ. ಬಡತನದಲ್ಲಿದ್ದ ಕುಟುಂಬ ಇಂದು ರಾಜಕೀಯಕ್ಕೆ ಬಂದು , ಕಂಟ್ರಾಕ್ಟರ್ ಆಗಿ ಕೆಲವೇ ದಿನಗಳಲ್ಲಿ ತನ್ನ ಕೈಚಳಕದಿಂದ ಹಣ ದ್ವಿಗುಣ ಮಾಡಿದ. ಇಂದು ಊರಿಗೆ ಶ್ರೀಮಂತ. ಇದರಲ್ಲಿ ಗುಣಾಕಾರ ಕಾಣಬಹುದು.
        ಮಕ್ಕಳೇ, ಜೀವನ ಎಂದರೆ ಸಂಕಲನ, ವ್ಯವಕಲನ ,ಗುಣಾಕಾರ ಮತ್ತು ಭಾಗಕಾರವಲ್ಲ‌. ಜೀವನವೆಂದರೆ ಸುಂದರವಾಗಿ ಆನಂದದ ಜೀವನ ಸಾಗಿಸುವುದು. ಜೀವನವೆಂದರೆ ಗಳಿಕೆಯಲ್ಲ. ಗಳಿಸಿದ್ದನ್ನು ಅನುಭವಿಸುವುದು ಜೀವನ. ಜೀವನದಲ್ಲಿ ಅನುಭವಿಸುವುದೇ ಮುಖ್ಯ. ಹಾಗಾದರೆ ಉಳಿಸುವುದು ಬೇಡವೇ....? ಗಳಿಸಿದ್ದರಲ್ಲಿ ಸ್ವಲ್ಪ ಭವಿಷ್ಯಕ್ಕಾಗಿ ಉಳಿಸಿ ಚೆನ್ನಾಗಿ ಅನುಭವಿಸುವುದು ಮುಖ್ಯ. ಕೆಲವರು ದುಡಿಯುತ್ತಾರೆ ಅನುಭವಿಸುವುದಿಲ್ಲ. ಸಾಲ ಮಾಡಿ ಸುಂದರವಾದ ಮನೆಯನ್ನು ನಿರ್ಮಿಸುತ್ತಾರೆ. ಆದರೆ ಆ ಮನೆಯಲ್ಲಿ ಆನಂದವಾಗಿ ಇರೋದಿಲ್ಲ. ಕಾರಣ ಸದಾಕಾಲ ಸಾಲ ಕಾಡುತ್ತಿರುತ್ತದೆ. ಮನೆಯಲ್ಲಿ ಆನಂದವಾಗಿರುವುದು ಮುಖ್ಯವೇ ವಿನಾ ಬೇರೇನಿಲ್ಲ. ಆನಂದವಾಗಿರಲು ಯಾವ ಮನೆಯಾದರೇನು.....? ಕೆಲವರು ಗಳಿಸಿದ್ದನ್ನು ಅನುಭವಿಸದೆ ಒಡವೆಗಳನ್ನು , ವಸ್ತುಗಳನ್ನು ಖರೀದಿಸುತ್ತಾರೆ. ಒಡವೆಗಳನ್ನು ಮನೆಯಲ್ಲಿಟ್ಟು ರೋಲ್ಡ್ ಗೋಲ್ಡ್ ಆಭರಣ ಹಾಕಿಕೊಂಡು ಓಡಾಡುತ್ತಾರೆ. ಏಕೆಂದರೆ ಕಳ್ಳರ ಭಯ. ಈ ಕಳ್ಳರ ಭಯದಿಂದ ರಾತ್ರಿ ನಿದ್ರೆಯನ್ನು ಸರಿಯಾಗಿ ಮಾಡೋದಿಲ್ಲ. ಸುಂದರವಾದ ಬೆಲೆಬಾಳುವ ಮಂಚದ ಮೇಲೆ ಮಲಗಿರುತ್ತಾರೆ ಆದರೆ ನಿದ್ರೆ ಬರೋದಿಲ್ಲ. ನಾವು ಚೆನ್ನಾಗಿ ನಿದ್ರಿಸುವುದು ಮುಖ್ಯಾನೆ ವಿನಹ ವಸ್ತುಗಳಲ್ಲ. ಜೀವನ ಎಂದರೆ ವಸ್ತು ಸಂಗ್ರಹವಲ್ಲ ಅಥವಾ ಹಣ ಎಣಿಸುವುದಲ್ಲ. ಸುಂದರವಾಗಿ ಆನಂದವಾಗಿ ಮಸ್ತ್ ಬದುಕೋದು ಜೀವನ.
............................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article