-->
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 42

ಬದಲಾಗೋಣವೇ ಪ್ಲೀಸ್.....! ಸಂಚಿಕೆ - 42

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
    
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 42      
         
                     ಇಂದು ನನಗೆ ಬದುಕಿನ ಅತೀ ಮುಖ್ಯವಾದ ದಿನ. ನನ್ನ ಮನದಲ್ಲಿ ತುಂಬಾ ದಿನಗಳಿಂದ ಜತೆಗಿದ್ದು ನನ್ನನ್ನು ಸದಾ ಕಾಡುತ್ತಿದ್ದ ನೆಮ್ಮದಿ ವಿನಾಶಕ ಪಾತ್ರಗಳಿಗೆ ಮಾನಸಿಕ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಒಂದಲ್ಲ ಒಂದು ಕಾರಣಗಳಿಂದ ನನ್ನನ್ನು ಕೀಳಾಂದಜಿಸುತ್ತಿದ್ದ ಕೀಳು ವ್ಯಕ್ತಿಗಳಿಗೆ, ಸದಾ ಅಯೋಗ್ಯ ಎಂದೂ ಕರೆಯುತ್ತಿದ್ದ ಅಯೋಗ್ಯರಿಗೆ, ಯಾವಾಗಲೂ ನನಗೆ ನೋವು ಕೊಟ್ಟು ವಿಕೃತ ಸಂತೋಷ ಪಡುತ್ತಿದ್ದ ವಿಕೃತರಿಗೆ , ನಿದ್ದೆಯಲ್ಲೂ ಕಾಡುತ್ತಿದ್ದ ನಿರುಪಯೋಗಿಗಳಿಗೆ , ಬಾನಗಲ ಭಯ ಮೂಡಿಸುತ್ತಿದ್ದ ಭಯೋತ್ಪಾದಕರಿಗೆ , ಸಾಧನೆಗಳಿಗೆ ಸಾಥಿಯಾಗದ ಸ್ವಾರ್ಥಿಗಳಿಗೆ.... ಹೀಗೆ ಹತ್ತು ಹಲವು ಗೋಮುಖ ವ್ಯಾಘ್ರಗಳಿಗೆ ಇವತ್ತು ಬೀಳ್ಳೊಡುಗೆ ಸಮಾರಂಭ. ದಯವಿಟ್ಟು ಇವತ್ತು ನಾನು ಏಕಾಂಗಿಯಾಗಿ ಇವರನ್ನೆಲ್ಲ ಬೀಳ್ಕೊಡುತ್ತಿದ್ದೇನೆ. ಇದೊಂದು ಏಕಾಂಗಿಯಾಗಿ ಮನದ ಕದವನ್ನು ಮುಚ್ಚಿ ಅಂತರಾತ್ಮದ ಜತೆ ಚರ್ಚಿಸಿ ನಡೆಸುವ ಕಾರ್ಯಕ್ರಮ. ಹಾಗಾಗಿ ಯಾರೂ ಕೂಡಾ ಬರಬೇಡಿ ಪ್ಲೀಸ್. ಕಾರ್ಯಕ್ರಮದ ಮೊದಲು ಮೌನ ಮಾತು. ಆಮೇಲೆ ಧ್ಯಾನ. ಅದರಿಂದಾಚೆ ಒಂದಿಷ್ಟೂ ಚರ್ಚೆ. ಕೊನೆಗೆ ಅಂತಿಮ ನಿರ್ಧಾರ. ಆಮೇಲೆ ಒಬ್ಬೊಬ್ಬರ ಬೀಳ್ಳೊಡುಗೆ. ಆಹಾ ಅದ್ಭುತ ಅನುಭವ.....!!
        ಇದು ನಾನು ಹಲವಾರು ವರುಷಗಳಿಂದ ಬೇಸಿಗೆ ರಜೆಯಲ್ಲಿ ನನಗಾಗಿ ಮುಡುಪಾಗಿಟ್ಟ ಒಂದು ದಿನ. ಇದು ಬದಲಾವಣೆಯ ದಿನ. ಏಕೆಂದರೆ ಆಯಾ ವರುಷದ ನನ್ನೆಲ್ಲಾ ನೋವಿನ ದ್ವೇಷಿಗಳನ್ನು ಬೀಳ್ಕೊಟ್ಟು ಅವರ ಜಾಗದಲ್ಲಿ ಹೊಸ ಮಿತ್ರರನ್ನು , ನವನವೀನ ಕಲ್ಪನೆಗಳನ್ನು , ಕನಸುಗಳನ್ನು ಸ್ವಾಗತಿಸಿ ಹೊಸ ಬದುಕಿಗೆ ಮುಂದಿನ ಹೆಜ್ಜೆಗಳನ್ನು ಇಡುವ ಸುದಿನ. ನನ್ನೊಳಗಿನ ನನ್ನತನವನ್ನು ಕಂಡುಕೊಳ್ಳುವ ದಿನ. ನನ್ನೊಳಗೆ ನಾನಾಗುವ ದಿನ. ನನಗಾಗಿ ನಾನು ಮೀಸಲಿಟ್ಟ ದಿನ. ಒಂಚೂರು ಬದಲಾವಣೆಯ ದಿನ .
         ಹೌದಲ್ಲವೇ...... ನನ್ನಂತೆ ನಿಮ್ಮಲ್ಲೂ ಕೆಲವರಿಗೆ ತುಂಬಾ ಅವಶ್ಯಕವಾಗಿರುವ ಸಮಾರಂಭ ಇದು. ವರ್ಷದ ಪ್ರತಿ ದಿನ, ಪ್ರತಿ ಕ್ಷಣ ಕ್ಷಣವೂ ಗುದ್ದಾಡಿ ನೋವಿನ ಮೂಟೆಯಲ್ಲಿ ನಮ್ಮನ್ನು ನಾವು ಬಂಧಿಸಲು ಕಾರಣವಾಗಿರುವ ನಮ್ಮೆಲ್ಲ ಮಾನಸಿಕ ಯಾತನೆಯ ಕಾರಣಕರ್ತರನ್ನು ಗುರುತಿಸಿ ಒಂದಲ್ಲ ಒಂದು ದಿನ ಬೀಳ್ಕೊಡುಗೆ ಕಾರ್ಯಕ್ರಮ ಮಾಡಲೇ ಬೇಕು....
ವರುಷಕ್ಕೊಂದು ದಿನವಾದರೂ ನಿಮಗಾಗಿ ಮೀಸಲಿಡಿ. ಆ ದಿನ ಬೀಳ್ಳೊಡುಗೆ ಸಮಾರಂಭವನ್ನು ಏರ್ಪಡಿಸಿ. ಆಯಾ ವರುಷದ ಹಳೆಯ ದ್ವೇಷಿಗಳನ್ನು ಹಾಗೂ ನೋವುಗಳ ಮೂಲ ಕಾರಣಕರ್ತರನ್ನು ಪಟ್ಟಿ ಮಾಡಿರಿ. ಅವರನ್ನು ಬೀಳ್ಕೊಟ್ಟು ಮರೆಯಿರಿ. ಹೊಸ 
ಗೆಳೆಯರನ್ನು , ಕನಸುಗಳನ್ನು ಸ್ವಾಗತಿಸಿ. ಬದುಕಿನಲ್ಲಿ ಸದಾ ನಿರಾಳವಾಗಿರಿ. ಕಸದ ಬುಟ್ಟಿಯಿಂದ ಕಸ ತೆಗೆದು ಬುಟ್ಟಿ ಸ್ವಚ್ಚ ಮಾಡುವಂತೆ ಮನಸನ್ನು ಸ್ವಚ್ಛಮಾಡಿ. ನಿಮ್ಮ ಬದುಕಿನ ನೆಮ್ಮದಿಗಾಗಿ ಇಂದೇ ಬೀಳ್ಕೊಡುಗೆ ದಿನ ನಿಗದಿ ಪಡಿಸಿ. ನಾಳಿದ್ದು.... ನಾಳೆಗೆ... ಇಂದು ಎನ್ನದೆ ಈ ಕ್ಷಣವೇ ಸಿದ್ಧರಾಗಿ. ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ.... ಬದಲಾಗೋಣವೇ ಪ್ಲೀಸ್..! ಏನಂತೀರಿ...?
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************




Ads on article

Advertise in articles 1

advertising articles 2

Advertise under the article