-->
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 40

ಬದಲಾಗೋಣವೇ ಪ್ಲೀಸ್.....! ಸಂಚಿಕೆ - 40

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
    
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 40

      

          ನೆನಪುಗಳ ಇಂಗಿಸೋಣ ಬನ್ನಿ .....
         ----------------------------------
         ಬೇಸಿಗೆಯ ರಜೆಯ ಕಾಲದಲ್ಲಿ ಎಲ್ಲರ ಬಾಯಿಯಲ್ಲಿ ಬರುವ ಮಾತು "ಅಯ್ಯೋ....ನೀರಿಲ್ಲ , ನೀರಿಲ್ಲ. ನೀರಿಗಾಗಿ ಏನ್ಮಾಡಲಿ......?" ಎಂಬುದು. ಆಗ ನೆನಪಾಗುವುದು 'ನೀರು ಇಂಗಿಸೋಣ ಬನ್ನಿ' ಕಾರ್ಯಕ್ರಮ. ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಹೋಗುತ್ತಿರುವ ನೀರನ್ನು ಬೇಸಿಗೆ ಕಾಲಕ್ಕೆ ಹೇಗೆ ಮರುಬಳಕೆ ಮಾಡುವುದು ಹಾಗೂ ಆ ಇಂಗಿಸಿದ ನೀರನ್ನು ಅಗತ್ಯ ಸಂದರ್ಭದಲ್ಲಿ ಬಳಸಿ ನೀರಿನ ಬವಣೆಯನ್ನು ಹೇಗೆ ನೀಗಿಸಬಹುದು ಎಂಬುದನ್ನು ಈ ಕಾರ್ಯಕ್ರಮದಲ್ಲಿ ಅರಿಯಬಹುದು. ಮನೆಯ ಹಂಚಿನ ಮಾಡಿನಿಂದ ಹಿಡಿದು ಕಟ್ಟಡದ ಛಾವಣಿಯಿಂದಲೂ ಬಂದ ಶುದ್ಧ ಮಳೆನೀರನ್ನು ಸುಲಭವಾಗಿ ಇಂಗಿಸಬಹುದು. ಅಲ್ಲದೆ ಅಶುದ್ಧವಾದ ಮಲೀನವಾದ ಕೆಸರುಯುಕ್ತ ನೀರನ್ನು ಕೂಡಾ ಜಲ್ಲಿ ಮರಳುಗಳ ವಿವಿಧ ಹಂತಗಳ ಸೋಸುವಿಕೆಯಿಂದ ಇಂಗಿಸುವ ಬಗ್ಗೆ ಕೂಡಾ ಈ ಕಾರ್ಯಕ್ರಮವು ತರಬೇತಿ ನೀಡುತ್ತದೆ. ಒಟ್ಟಾರೆಯಾಗಿ ನೀರಿಂಗಿಸೋಣ ಬನ್ನಿ ಎಂಬುದು ಅದ್ಭುತ ಪರಿಕಲ್ಪನೆ.
          ಈ ಪರಿಕಲ್ಪನೆಯಂತೆ 'ಸವಿ ನೆನಪು ಇಂಗಿಸೋಣ ಬನ್ನಿ' ಎಂಬ ಸಂಕಲ್ಪವನ್ನು ನಮ್ಮೊಳಗೆ ಮಾಡಬಾರದೇಕೆ......? ಎಂಬ ಪ್ರಶ್ನೆ ಮನದೊಳಗೆ ಮೂಡಿತು. ಜೀವನ ದಾರಿಯಲ್ಲಿ ಆಗಾಗ ಮೂಡಿ ಬರುವ ಸಂತಸದ ಕ್ಷಣಗಳನ್ನು ನೆಮ್ಮದಿಯ ದಿನಗಳನ್ನು ಆ ಕ್ಷಣಕ್ಕೆ ಮರೆಯದೇ ಅವನ್ನು ಮನದೊಳಗೆ ಶಾಶ್ವತವಾಗಿ ಇಂಗಿಸಿದರೆ ನೋವಿನ ಸಂದರ್ಭದಲ್ಲಿ ಕಳೆದು ಹೋದ ಸಂತಸದ ಕ್ಷಣಗಳನ್ನು ಮರು ಮೂಡಿಸಲು ಇದೇ ಹಳೆಯ ಸಿಹಿನೆನಪುಗಳನ್ನು ಮರು ಬಳಸಬಾರದೇಕೆ.....? ಎಂಬ ವಿಚಾರ ನನ್ನನ್ನು ಆಗಾಗ ಕಾಡುತಿತ್ತು. ನಮಗೆ ನೋವು ಅಥವಾ ಕಷ್ಟ ಬಂದಾಗ ನಾವೆಲ್ಲರೂ ಸುಖದ ಗಳಿಗೆಯನ್ನು ನೆನಪಿಸುತ್ತೇವೆ. ಹತಾಶೆ , ನೋವು , ನಿರ್ಲಿಪ್ತ ಭಾವಗಳು ಮೂಡಿದಾಗ "ಅಯ್ಯೋ.. ನನ್ನ ಬದುಕೇ ವ್ಯರ್ಥ. ನಲಿವು, ಸಂತಸ ತುಂಬಿದ ನೆಮ್ಮದಿಯ ಬದುಕು ಯಾವಾಗ ಬರುವುದು....?" ಎಂದು ಪ್ರಶ್ನಿಸುತ್ತಿರುತ್ತೇವೆ. ಆಗ ನೆನಪಾಗುವುದೇ ಸವಿ ನೆನಪನ್ನು ಇಂಗಿಸೋಣ ಬನ್ನಿ ಕಾರ್ಯಕ್ರಮ.
        ಹೌದಲ್ಲ ನಮ್ಮ ಸುಖದ ನೆಮ್ಮದಿಯ ಕ್ಷಣಗಳನ್ನು ಪ್ರೀತಿಭರಿತ ಹೊನ್ನುಡಿಯನ್ನು ಆ ಕ್ಷಣಕ್ಕೆ ಮರೆಯದೇ ಅದನ್ನು ಮನದೊಳಗೆ ಶಾಶ್ವತವಾಗಿ ಇಂಗಿಸಿದರೆ ಕಷ್ಟಕಾಲದಲ್ಲಿ ಆ ನೆನಪುಗಳ ಮರುಬಳಕೆಯ ಮೂಲಕ ನೋವಿನ ಕ್ಷಣಗಳನ್ನು ಹಾಗೂ ನೋವು ಕೊಟ್ಟವರನ್ನು ತಕ್ಷಣವೇ ಮರೆಯಬಹುದು. ಕೆಸರುಯುಕ್ತ ಅಶುದ್ಧ ನೀರನ್ನು ಜಲ್ಲಿಕಲ್ಲು ಮತ್ತು ಮರಳುಗಳ ವಿವಿಧ ಹಂತದ ಪದರಗಳು ಶುಚಿಗೊಳಿಸುವಂತೆ ಹತಾಶೆಯ ಸಂದರ್ಭದಲ್ಲಿ ಮೂಡಿ ಬರುವ 'ಬದುಕೆ ಸಾಕು' ಎಂಬ ಅಶುದ್ಧ ಭಾವನೆಗಳು ಹಾಗೂ ಋಣಾತ್ಮಕ ನಿರ್ಧಾರಗಳನ್ನು , ಪ್ರೀತಿ - ನಂಬಿಕೆ - ಮುಂದೆ ಒಳ್ಳೆಯ ಕಾಲ ಬಂದೇ ಬರುತ್ತದೆ ಎಂಬ ಧನಾತ್ಮಕ ಭಾವಗಳೆಂಬ ವಿವಿಧ ಹಂತಗಳ ಪದರಗಳಲ್ಲಿ ಸೋಸಿದಾಗ ಬದುಕಿನಲ್ಲಿ ನೆಮ್ಮದಿಯ ಶುದ್ಧ ನೀರನ್ನು ಇಂಗಿಸಬಹುದು. ಆ ನೀರನ್ನು ದುಃಖಕರ ಸಂದರ್ಭದಲ್ಲಿ ಅಗತ್ಯವಾಗಿ ಮರುಬಳಕೆ ಮಾಡಿ ದುಃಖ ಸರಿಸಿ ಸುಃಖವನ್ನು ಮೂಡಿಸಬಹುದು. ಬನ್ನಿ ಸವಿ ನೆನಪಿನ್ನು ಇಂಗಿಸುವ ಕೌಶಲ ಬೆಳೆಸೋಣ. ನಮಗಿಷ್ಟವಾದ ವ್ಯಕ್ತಿಯೋರ್ವನಿಂದ (ಗೆಳೆಯ ಯಾ ಗೆಳತಿ ಯಾ ಸಂಬಂಧಿ ಯಾ ಅಪರಿಚಿತ ಯಾ ಸಹೋದ್ಯೋಗಿ ಯಾ ಇತರರು) ನಮಗೆ ಹತಾಶಾ ಭಾವ.. ನೋವು ಉಂಟಾದಾಗ ಆತನಲ್ಲಿರುವ ಋಣಾತ್ಮಕ ಭಾವ ಮರೆತು ಆತ ಮಾಡಿದ ಧನಾತ್ಮಕ ಭಾವಗಳನ್ನು ನೆನಪಿಸಿ ಅದನ್ನು ಮರುನೆನಪಿಸಿ ದುಃಖ ಮರೆಯೋಣ. ಈ ಪ್ರಪಂಚದಲ್ಲಿ ಯಾರೂ ಪರಿಪೂರ್ಣರಲ್ಲ... ಪರಿಪೂರ್ಣರಾಗಲೂ ಸಾಧ್ಯವಿಲ್ಲ. ಆದರೆ ಪರಿಪೂರ್ಣತೆಯ ದಾರಿಯಲ್ಲಿ ದಾರಿಗನಾಗಿ ಮುನ್ನಡೆಯಬಹುದು. ವಾರ್ಷಿಕ ಪರೀಕ್ಷೆಯ ಪ್ರಶ್ನಾ ಪತ್ರಿಕೆ ತೆರೆದು ಉತ್ತರಿಸುವಾಗ ನಾವು ವರ್ಷವಿಡಿ ಓದಿ ಅರ್ಥೈಸಿದ ತರಗತಿಯ ವಿಷಯಗಳನ್ನು ಮರು ನೆನಪಿಸಿಕೊಂಡು ಯೋಚಿಸಿ ಉತ್ತರಿಸಿ ಉತ್ತೀರ್ಣರಾಗುವಂತೆ ಬದುಕಿನಲ್ಲಿ ಆಗಾಗ ಬರುವ ಅಗ್ನಿ ಪರೀಕ್ಷೆಯಲ್ಲಿಯೂ ಕೂಡಾ ನಾವು ಈ ಹಿಂದೆ ಕಲಿತ ಪಾಠಗಳ ಸಾರಾಂಶವನ್ನು ಮರುಬಳಕೆ ಮಾಡಿ ಜೀವನದ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು. ಎಲ್ಲರೂ ನೆನಪು ಇಂಗಿಸುವ ಕಾರ್ಯದಲ್ಲಿ ನಿರತರಾಗೋಣ. ಬನ್ನಿ ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ.... ಬದಲಾಗೋಣವೇ ಪ್ಲೀಸ್..! ಏನಂತೀರಿ...?
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************

Ads on article

Advertise in articles 1

advertising articles 2

Advertise under the article