-->
ಜೀವನ ಸಂಭ್ರಮ : ಸಂಚಿಕೆ - 32

ಜೀವನ ಸಂಭ್ರಮ : ಸಂಚಿಕೆ - 32

  ಜೀವನ ಸಂಭ್ರಮ : ಸಂಚಿಕೆ - 32

                      ದೇಹವೇ ದೇಗುಲ
                  ---------------------
    ಮಕ್ಕಳೇ, "ದೇಹವೇ ದೇಗುಲ" ಎಂದು ಶರಣರು ಹೇಳಿದ್ದಾರೆ. ಇದನ್ನು ವೈಜ್ಞಾನಿಕವಾಗಿ ನೋಡೋಣ.... ದೇವಾಲಯ ಅಂದರೆ ದೇವಸ್ಥಾನ. ಇದನ್ನು ಇಟ್ಟಿಗೆಗಳಿಂದ ಸುಂದರವಾಗಿ ನಿರ್ಮಾಣ ಮಾಡಿರುತ್ತಾರೆ. ದೇಹವು ಜೀವಕೋಶಗಳು ಎಂಬ ಇಟ್ಟಿಗೆಯಿಂದ ಸುಂದರವಾಗಿ ಅದ್ಭುತವಾಗಿ ನಿರ್ಮಾಣವಾಗಿದೆ. ಇಟ್ಟಿಗೆ ಮತ್ತು ಜೀವಕೋಶಗಳು ಕೂಡ ಪರಮಾಣುವಿನಿಂದ ಮಾಡಲ್ಪಟ್ಟಿದೆ ಎನ್ನುವುದನ್ನು ಮರೆಯುವಂತಿಲ್ಲ. ಪರಮಾಣು ಎಂದರೆ..... ಪ್ರೋಟಾನ್, ನ್ಯೂಟ್ರಾನ್ ಮತ್ತು ಎಲೆಕ್ಟ್ರಾನ್ ಗಳಿಂದ ಮಾಡಲ್ಪಟ್ಟಿದೆ. ದೇವಸ್ಥಾನದ ಗೋಡೆ ಬಿರುಕು ಬಿಟ್ಟರೆ ಅದನ್ನು ಮಾನವರಾದ ನಾವು ಸರಿಪಡಿಸಬೇಕು. ಆದರೆ ಮಾನವನ ದೇಹದಲ್ಲಿ ಗಾಯವಾದರೆ ನಮ್ಮ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಗಾಯದ ಗುರುತು ಕಾಣದಂತೆ ಅದ್ಭುತವಾಗಿ ದುರಸ್ತಿ ಮಾಡುತ್ತದೆ. ಆದರೆ ಮಾನವ ದೇವಸ್ಥಾನಕ್ಕೆ ಮಾಡಿರುವ ದುರಸ್ತಿ ಸ್ವಲ್ಪ ದಿನದಲ್ಲಿ ಎದ್ದುಕಾಣುತ್ತದೆ. ವೈದ್ಯರ ಸಹಾಯದಿಂದ ಶಸ್ತ್ರಚಿಕಿತ್ಸೆಯ ಮೂಲಕ ದುರಸ್ತಿ ಆದರೆ ಅದು ಎದ್ದು ಕಾಣುತ್ತದೆ. ದೇವಸ್ಥಾನದ ಇಟ್ಟಿಗೆಗಳು ನಿರ್ಜೀವ ವಸ್ತು. ಮಾನವದೇಹದ ಇಟ್ಟಿಗೆಗಳಾದ ಜೀವಕೋಶಗಳು ಜೀವ ಇರುವಂತಹದ್ದು. ಅದಕ್ಕೆ ಪ್ರತಿನಿತ್ಯ ಪೋಷಕಾಂಶದಿಂದ ಕೂಡಿದ ಆಹಾರ , ಆಮ್ಲಜನಕ ನೀಡಬೇಕಾಗುತ್ತದೆ. ಆಹಾರದಲ್ಲಿ ಕಾರ್ಬೋಹೈಡ್ರೇಟ್ , ಪ್ರೋಟೀನ್ , ವಿಟಮಿನ್ , ಕೊಬ್ಬು , ನಾರು ಮತ್ತು ನೀರು ಅಗತ್ಯ. ದೇವಸ್ಥಾನ ಪ್ರತಿದಿನ ಸ್ವಚ್ಛಗೊಳಿಸುವಂತೆ ಪ್ರತಿದಿನ ನಾವು ನಮ್ಮ ದೇಹವನ್ನು ಸ್ವಚ್ಛಗೊಳಿಸಬೇಕು. ದೇವಸ್ಥಾನ ಸುಂದರವಾಗಿ ಕಾಣಲು ತಳಿರು ತೋರಣ ಹೂವಿನಿಂದ ಅಲಂಕರಿಸುವಂತೆ , ನಮ್ಮ ದೇಹವನ್ನು ಬಟ್ಟೆಗಳಿಂದ ಸುಂದರವಾಗಿ ಅಲಂಕಾರ ಮಾಡಿಕೊಳ್ಳಬೇಕು.
         ದೇವಸ್ಥಾನದಲ್ಲಿ ಮುಖ್ಯಸ್ಥಾನ ವಿಗ್ರಹ ಸ್ಥಾಪಿಸಿದ ಗರ್ಭಗುಡಿಗೆ. ಹಾಗೆ ನಮ್ಮ ದೇಹದ ದೇಗುಲಕ್ಕೆ ಮನಸ್ಸೆಂಬುದು ದೇವರ ವಿಗ್ರಹದಂತೆ. ಪ್ರತಿದಿನ ವಿಗ್ರಹವನ್ನು ನೀರಿನಿಂದ ಶುಚಿ ಮಾಡಿ , ಹೂವು ವಸ್ತ್ರಾಭರಣಗಳಿಂದ ಅಲಂಕಾರ ಮಾಡುವಂತೆ, ನಮ್ಮ ದೇಹದ ಮನಸ್ಸನ್ನು ಸೌಂದರ್ಯದಿಂದ ಕೂಡಿದ ಧನಾತ್ಮಕ ಅಂಶದಿಂದ ಪ್ರತಿದಿನ ತುಂಬಿಸಬೇಕು. ದೇವಸ್ಥಾನಕ್ಕೆ ಬೆಲೆ ಬರುವುದು ಮೂರ್ತಿಯಿಂದ. ಹಾಗೆ ದೇಹವನ್ನು ಪೂರ್ಣವಾಗಿ ನಿಯಂತ್ರಿಸುವುದು ಮನಸ್ಸು. ಮನಸ್ಸನ್ನು ಸುಂದರವಾಗಿ ಸದಾಕಾಲ ಇಡಬೇಕಾದದ್ದು ನಮ್ಮ ಕರ್ತವ್ಯ.
       ಮನಸ್ಸನ್ನು ಸೌಂದರ್ಯ ಗೊಳಿಸುವುದು ಹೇಗೆ...? ಈಗ ಯಾವುದೇ ಜಮೀನಿನಲ್ಲಿ ಹೊಸ ಬೆಳೆ ಬೆಳೆಯಬೇಕೆಂದಾಗ ಹೊಲದಲ್ಲಿರುವ ಕಲ್ಲು ಮುಳ್ಳುಗಳನ್ನು ತೆಗೆದು ಶುಚಿಗೊಳಿಸಬೇಕು. ಹಾಗೆಯೇ ಮನಸ್ಸಿನಲ್ಲಿರುವ ಕಲ್ಲು ಮುಳ್ಳುಗಳನ್ನು ತೆಗೆಯಬೇಕು. ಮನಸ್ಸಿನಲ್ಲಿರುವ ಕಲ್ಲು ಎಂದರೆ ಅತಿಯಾಸೆ. ಮುಳ್ಳು ಗಳೆಂದರೆ ಮತ್ಸರ , ಹೊಟ್ಟೆಕಿಚ್ಚು , ಅಸೂಯೆ, ಕೋಪ. 
      ಅಸೂಯೆ ಎಂದರೇನು?..... ಇನ್ನೊಬ್ಬರ ಸೌಂದರ್ಯ ಮತ್ತು ಪ್ರಗತಿಯನ್ನು ಸಹಿಸದಿರುವುದು ಅಸೂಯೆ. ಅತಿ ಆಸೆ , ಮತ್ಸರ , ಕೋಪ , ದುಃಖ ಇವು ಹೇಗೆ ಮನಸ್ಸುನ್ನು ಹೊಲಸು ಮಾಡುತ್ತವೆ.....? ಆಸೆ ಮಿತಿ ಇದ್ದಾಗ ವ್ಯಕ್ತಿ ಚಟುವಟಿಕೆಯಿಂದ ಇರಲು ಸಾಧ್ಯ. ಆಸೆ ಅತಿಯಾದಾಗ , ಆಸೆ ಈಡೇರದಿದ್ದರೆ ನಿರಾಸೆ ದುಃಖವಾಗುತ್ತದೆ. ಅತಿಯಾಸೆ ಈಡೇರಿಸಿಕೊಳ್ಳಲು ಮನುಷ್ಯ ಅಡ್ಡದಾರಿ ಹಿಡಿಯಬೇಕಾಗುತ್ತದೆ. ಇದು ಅನೇಕ ಅಪಾಯಗಳನ್ನು ತಂದು ಮನುಷ್ಯನನ್ನು ಅದಃಪತನಕ್ಕೆ ತಳ್ಳಿ ದುಖಿತನನ್ನಾಗಿ ಮಾಡುತ್ತದೆ. ಅತಿ ಆಸೆಯಿಂದ ಸಂಗ್ರಹಿಸಿದ ವಸ್ತುಗಳು ನಾವೆಲ್ಲ ಭಾವಿಸಿರುವಂತೆ ಆನಂದ ತರುವುದಿಲ್ಲ. ಅತಿ ಆಸೆಯಿಂದ ಸಂಗ್ರಹಿಸಿದ ಆಸ್ತಿ , ಹಣ , ಒಡವೆ, ಮತ್ತು ಸಂಪತ್ತುಗಳು ಬೇರೆ ಮನುಷ್ಯರ ಮೇಲೆ ಪ್ರೀತಿ ಉಂಟಾಗದಂತೆ ತಡೆಯುತ್ತದೆ. ಯಾರು ಮೋಸ ಮಾಡುತ್ತಾರೊ....? ಯಾರು ಕಳ್ಳತನ ಮಾಡುತ್ತಾರೊ.....? ಯಾರು ಆಸ್ತಿಗಾಗಿ ಕೊಲೆ ಮಾಡುತ್ತಾರೊ......? ಯಾರು ವಂಚನೆ ಮಾಡುತ್ತಾರೊ......? ಅನ್ನುವ ಭಾವನೆ ಜನರ ಮೇಲೆ ಅನುಮಾನ ಬರುವಂತೆ ಮಾಡುತ್ತದೆ. ಇದರಿಂದ ಆರೋಗ್ಯಕ್ಕೆ ಬೇಕಾದ ಸುಖ , ನಿದ್ರೆ ಬರುವುದಿಲ್ಲ. ಜನರ ನಡುವಳಿಕೆ, ವರ್ತನೆಗಳಲ್ಲಿ ಕೇವಲ ತಪ್ಪನ್ನೇ ಗುರುತಿಸುವಂತೆ ಮಾಡುತ್ತದೆ. ಇದರಿಂದ ಆನಂದ ಜೀವನ ಸಾಧ್ಯವಿಲ್ಲ. ಹೊಟ್ಟೆಕಿಚ್ಚು, ಮತ್ಸರದಿಂದ ಜನರೊಡನೆ ಪ್ರೀತಿಯಿಂದ ಇರಲು ಸಾಧ್ಯವಿಲ್ಲ. ಹಾಗಾಗಿ ದುರಾಸೆ, ಮತ್ಸರ, ಕೋಪ , ದುಃಖ, ನಿರಾಸೆ. ಕಠೋರತೆ , ಮತ್ತು ಅಸಹಕಾರ ಇವೆಲ್ಲ ಋಣಾತ್ಮಕ ಅಂಶಗಳು. ಇವು ಸಂತೋಷದ ಜೀವನಕ್ಕೆ ಮಾರಕ. ಈ ಮೌಲ್ಯಗಳು ಏನಾದರೂ ಮನಸ್ಸಿನಲ್ಲಿದ್ದರೆ , ಇದರ ಪರಿಣಾಮ ದೇಹದ ಮೇಲಾಗುತ್ತಿದೆ. ನಮ್ಮ ದೇಹದ ಜೀವಕೋಶಗಳು ಇತರ ಜೀವಕೋಶಗಳೊಂದಿಗೆ ಪ್ರೀತಿಯಿಂದ ಇರುವುದಿಲ್ಲ. ಅವೇ ಕ್ರಮೇಣ ವೈರಿಗಳಂತೆ ಹೊಡೆದಾಡಿ ಕೊಳ್ಳುತ್ತವೆ. ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆ ನಮ್ಮ ದೇಹದ ಜೀವಕೋಶಗಳನ್ನು ವೈರಿ ಎಂದು ಭಾವಿಸಿ ಹಾನಿಮಾಡುತ್ತದೆ. ಇದನ್ನು ಆಟೋ ಇಮ್ಯೂನ್ ಕಾಯಿಲೆ ಎನ್ನುತ್ತೇವೆ. ಈ ರೋಗಗಳಿಗೆ ಔಷಧವಿಲ್ಲ. ನರಳಿ ನರಳಿ ಸಾಯಬೇಕಾಗುತ್ತದೆ. ನಮ್ಮ ಗಳಿಕೆ , ಸಂಪತ್ತು ಆನಂದದ ಬದುಕಿಗೆ ಆಗುವಷ್ಟು ಮಾತ್ರ ಸಂಪಾದಿಸಿ, ಹೆಚ್ಚಿನದನ್ನು ಸಮಾಜದ ಇತರರ ಸುಂದರ ಬದುಕು ನಿರ್ಮಿಸಲು ಬಳಸಿದರೆ ಅದು ಹೆಚ್ಚು ಆನಂದ ನೀಡುತ್ತದೆ. ನಮ್ಮ ದೇಶದ ದೇವಸ್ಥಾನ ಮತ್ತು ಮಠಗಳಲ್ಲಿ ಶಿಕ್ಷಣ ಮತ್ತು ದಾಸೋಹ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಕಾಣುತ್ತೇವೆ. ಇಸ್ಲಾಂ ಧರ್ಮದಲ್ಲಿ , ಹಬ್ಬದ ಸಂದರ್ಭದಲ್ಲಿ , ತಮ್ಮ ಗಳಿಕೆಯ ಶೇಕಡ ಎರಡರಷ್ಟು ಹಣವನ್ನು ಬಡವರಿಗೆ ನೀಡುತ್ತಾರೆ. ಕ್ರಿಶ್ಚಿಯನ್ ಧರ್ಮದಲ್ಲಿ ಕೆಲವು ಪುರುಷರು ಮತ್ತು ಮಹಿಳೆಯರು ಸಮಾಜಸೇವೆಗಾಗಿ ಜೀವನವನ್ನ ಮುಡುಪಾಗಿಟ್ಟಿದ್ದಾರೆ. ಕಾರ್ಖಾನೆಗಳು ತಮ್ಮ ಲಾಭದಲ್ಲಿ ಇಂತಿಷ್ಟು ಹಣವನ್ನು ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ ಸಮಾಜದ ಅಭಿವೃದ್ಧಿಗೆ ಬಳಸಲಾಗುತ್ತದೆ. ಇದೆಲ್ಲ ಸುಂದರ ಬದುಕಿಗೆ ಅಗತ್ಯವಾಗಿ ಬೇಕಾದಂತಹ ವ್ಯವಸ್ಥೆಗಳು.
       ದೇವರ ವಿಗ್ರಹವನ್ನು ಹೂವು ಆಭರಣಗಳಿಂದ ಅಲಂಕರಿಸುವಂತೆ, ಪ್ರೀತಿ , ಪ್ರೇಮ , ಪರೋಪಕಾರ , ಕರುಣೆ , ಮತ್ತು ಮಮತೆ ಮುಂತಾದ ಧನಾತ್ಮಕ ಅಂಶಗಳನ್ನು ಮನಸ್ಸಿನಲ್ಲಿ ಬೆಳೆಸಿದರೆ ಜೀವನವೇ ಸುಂದರ. ದೇಹದ ರಕ್ಷಣಾ ವ್ಯವಸ್ಥೆ ಮತ್ತು ದೇಹದ ಜೀವಕೋಶಗಳು ಮಿತ್ರರಂತೆ ಇದ್ದು, ಹೊರಗಿನಿಂದ ಬರುವ ಬ್ಯಾಕ್ಟೀರಿಯಾ ,ವೈರಸ್ ಮತ್ತು ಫಂಗಸ್ ಅನ್ನು ಹೊಡೆದೋಡಿಸುತ್ತದೆ. ಇಡೀ ದೇಹವೇ ಆರೋಗ್ಯವಾಗಿರುತ್ತದೆ. ದೇವಸ್ಥಾನದಲ್ಲಿ ಮೂರ್ತಿಗೆ ಸ್ಥಾನವಿರುವಂತೆ ದೇಹದಲ್ಲಿ ಮನಸ್ಸಿಗೆ ಸ್ಥಾನವಿದ್ದು ಮನಸ್ಸು ಎಷ್ಟು ಸುಂದರವಾಗಿರುತ್ತದೊ ಅಷ್ಟು ಜೀವನ ಸುಂದರವಾಗಿರುತ್ತದೆ. ಅದಕ್ಕಾಗಿ ಸಂತೋಷ ಕೊಡುವಂತಹುದನ್ನು ಆಯ್ದು ಮನಸ್ಸಿಗೆ ಸೇರಿಸಬೇಕಾಗಿದೆ. ಅದಕ್ಕಾಗಿ ಒಳ್ಳೆಯ ಪುಸ್ತಕ ಓದುವುದು, ಒಳ್ಳೆಯ ಪ್ರವಚನ ಕೇಳುವುದು , ಒಳ್ಳೆಯ ಗುರುಗಳ ಮಾರ್ಗದರ್ಶನ ಪಡೆಯಬೇಕು. ನಮ್ಮ ಕೈಲಾದ ಸಹಾಯವನ್ನು ಸಮಾಜಕ್ಕೆ ಮಾಡುತ್ತಿರಬೇಕು. ಮಕ್ಕಳೇ, ಜೀವನವೆಂದರೆ ಹಣ ಎಣಿಸುವುದಲ್ಲ , ಗಳಿಸಿದ್ದನ್ನು ಬಳಸುವುದು ಹಾಗೂ ಅನುಭವಿಸುವುದು. ಸುಂದರವಾಗಿ ಬದುಕುವುದು. ನೋಡಿ ಮಕ್ಕಳೇ ನಮ್ಮ ಶರಣರು ಎಷ್ಟು ಚೆನ್ನಾಗಿ ದೇಹವನ್ನು ದೇಗುಲಕ್ಕೆ ಹೋಲಿಸಿದ್ದಾರೆ......
.........................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************

Ads on article

Advertise in articles 1

advertising articles 2

Advertise under the article