
ಜೀವನ ಸಂಭ್ರಮ : ಸಂಚಿಕೆ - 30
Sunday, April 3, 2022
Edit
ಜೀವನ ಸಂಭ್ರಮ : ಸಂಚಿಕೆ - 30
ಸವಿ ನುಡಿ
----------------
ಮಕ್ಕಳೇ, ಇಂದು ನಾನು ಮಕ್ಕಳ ಜಗಲಿಯಲ್ಲಿ ಆನಂದ ನೀಡುವ ಒಂದು ವಿಚಾರ ಚರ್ಚಿಸಲಿದ್ದೇನೆ. ಸವಿ ಎಂದರೆ ಸಿಹಿ. ನುಡಿ ಎಂದರೆ ಮಾತು. ಮಾತು ಎರಡಕ್ಷರದ ಪದವಾದರೂ ಈ ಮಾತು ಸಂಬಂಧ ಗಟ್ಟಿ ಮಾಡುತ್ತದೆ ಇಲ್ಲವೇ ಸಂಬಂಧ ದೂರಮಾಡುತ್ತದೆ.
ನಾವೆಲ್ಲ ಜ್ಞಾನಿಗಳಾದ ವ್ಯಾಸರು ರಚಿಸಿದ ಮಹಾಭಾರತ ಓದಬೇಕು. ಮಹಾಭಾರತವು ಮಾಡಿದ ತಪ್ಪನ್ನು, ತಪ್ಪಿನಿಂದ ಆದ ಅನಾಹುತವನ್ನು ತುಂಬಾ ಚೆನ್ನಾಗಿ ವರ್ಣಿಸಿದೆ. ಕುರುಕ್ಷೇತ್ರ ಯುದ್ಧಕ್ಕೆ ಕೇವಲ ಒಂದು ಮಾತು ಕಾರಣವಾಯಿತು. ಪಾಂಡವರಿಗೂ ಕೌರವರಿಗೂ ಬೇರೆಬೇರೆ ರಾಜ್ಯಗಳಿದ್ದವು. ಇಬ್ಬರು ಅಣ್ಣ-ತಮ್ಮಂದಿರೆ. ಪಾಂಡವರು ಹಬ್ಬ ಮಾಡಿ ಕೌರವರನ್ನು ಔತಣಕ್ಕೆ ಕರೆಯುತ್ತಾರೆ. ಪಾಂಡವರ ಅರಮನೆ ತುಂಬಾ ಸೊಗಸಾಗಿ ನಿರ್ಮಾಣವಾಗಿರುತ್ತದೆ. ವರಾಂಡದಲ್ಲಿ ನೀರು ಇರುವಂತೆ ಕಾಣಿಸುತ್ತೆ ಆದರೆ ನೀರಿರುವುದಿಲ್ಲ. ಕೆಲವು ಕಡೆ ಭೂಮಿಯಂತೆ ಕಾಣಿಸುತ್ತೆ ಆದರೆ ಅದರಲ್ಲಿ ನೀರು ಇರುತ್ತದೆ. ಈ ಅರಮನೆಗೆ ಕೌರವ ರಾಜ ದುರ್ಯೋಧನ , ಸಹೋದರ ದುಶ್ಯಾಸನನೊಂದಿಗೆ ಹಬ್ಬಕ್ಕೆ ಬರುತ್ತಾನೆ. ದ್ರೌಪದಿ ಇವರು ಬರುವುದನ್ನು ಅರಮನೆಯಲ್ಲಿ ನಿಂತು ನೋಡುತ್ತಿರುತ್ತಾಳೆ. ದುರ್ಯೋಧನ ವರಾಂಡದಲ್ಲಿ ಬರುವಾಗ ನೀರಿದೆ ಎಂದು ಭಾವಿಸಿ, ಬಟ್ಟೆ ಮೇಲೆ ಸರಿಸಿ , ಕಾಲನ್ನು ಇಡುತ್ತಾನೆ. ಆಗ ದ್ರೌಪದಿ ನಕ್ಕು ಹೇಳಿದ ಒಂದು ಮಾತು "ಕುರುಡನ ಮಗ ಕುರುಡ" ಕುರುಕ್ಷೇತ್ರ ಯುದ್ಧಕ್ಕೆ ಕಾರಣವಾಯಿತು. ಏಕೆಂದರೆ ದುರ್ಯೋಧನನ ತಂದೆ ದೃತರಾಷ್ಟ್ರ ಕುರುಡ. ಕುರುಡನ ಮಗ ಕುರುಡ ಎಂದು ಹೇಳಿದ ಮಾತು ದುರ್ಯೋಧನನ ಕಿವಿಗೆ ಬಿದ್ದು ಅಂದೇ ಕುರುಕ್ಷೇತ್ರ ಯುದ್ಧಕ್ಕೆ ನಾಂದಿಯಾಯಿತು. ಯುದ್ಧದಿಂದ ಸಾವಿರಾರು ಮಂದಿ ಹೆಣ್ಣುಮಕ್ಕಳು ವಿಧವೆಯಾದರು. ಎಷ್ಟೋ ಮಕ್ಕಳು ತಂದೆ ಇಲ್ಲದೆ ಅನಾಥರಾದರು. ಇಷ್ಟಕ್ಕೆಲ್ಲ ಕಾರಣ ಒಂದು ಮಾತು.
ಸ್ವಾಮಿ ವಿವೇಕಾನಂದರು , ಮಹಾತ್ಮ ಗಾಂಧೀಜಿ , ಶರಣರು , ದಾಸರು, ಸೂಫಿ ಸಂತರು , ದಾರ್ಶನಿಕರು ಮುಂತಾದ ಮಹಾನ್ ವ್ಯಕ್ತಿಗಳು ಮಾತನಾಡಿದ್ದು ಇಂದು ಉಳಿದಿದೆ. ಅನುಸರಿಸಲು ಸೂಕ್ತವಾಗಿದೆ. ಏಕೆಂದರೆ ಆ ಮಾತುಗಳು ನಮ್ಮ ಸುತ್ತಮುತ್ತ ಸ್ವರ್ಗ ನಿರ್ಮಾಣ ಮಾಡುತ್ತಿದ್ದವು. ವೇದ, ಮಂತ್ರ, ಉಪನಿಷತ್, ದೋಹ , ವಚನ , ಧರ್ಮಗ್ರಂಥಗಳು ಪೂಜನೀಯ..... ಏಕೆಂದರೆ ಇವೆಲ್ಲ ಸೌಂದರ್ಯ ತುಂಬಿದ , ಮನಃಶಾಂತಿ ಮೂಡಿಸುವ ಮಾತುಗಳು. ನಮ್ಮ ಬದುಕನ್ನು ಸ್ವರ್ಗ ಮಾಡುವ ಮಾತುಗಳು. ಮನಸ್ಸಿಗೆ ಶಾಂತಿ ಸಮಾಧಾನ ನೀಡುವುದೇ ಧರ್ಮ. ಧರ್ಮದ ಉದ್ದೇಶವೇ ಶಾಂತಿ ಸಮಾಧಾನ ನೀಡುವುದು. ಹಾಗಿರುವಾಗ ಧರ್ಮದಲ್ಲಿ ಮೇಲು ಕೀಳು ಇಲ್ಲ. ಅದು ಮನುಷ್ಯನ ಶಾಂತಿ ಸಮಾಧಾನ ನೀಡುವ ಸುಂದರ ಮಾತುಗಳೇ ಧರ್ಮಗ್ರಂಥಗಳಾಗಿವೆ. ಶರಣರು ಮಾತಿಗೆ ನೀಡಿದ ಮಹತ್ವವನ್ನು ಅರಿಯಬೇಕು. "ಅಯ್ಯಾ ಎಂದರೆ ಸ್ವರ್ಗ. ಎಲವೋ ಎಂದರೆ ನರಕ". "ನುಡಿದರೆ ಮುತ್ತಿನ ಹಾರದಂತಿರಬೇಕು" ,"ಮಾತೇ ಜ್ಯೋತಿರ್ಲಿಂಗ". ಎಷ್ಟು ಅದ್ಭುತವಾಗಿ ಮಾತಿಗೆ ಮಹತ್ವ ನೀಡಿದ್ದಾರೆ.
ಹಾಗಾದರೆ ಮಾತು ಹೇಗಿರಬೇಕು...? ಮಾತು ಜ್ಞಾನಪೂರ್ಣ ವಾಗಿರಬೇಕು, ಭಾವಪೂರ್ಣ ವಾಗಿರಬೇಕು, ಅರ್ಥಪೂರ್ಣವಾಗಿರಬೇಕು. ಸುಂದರ ಪದಗಳಿಂದ ಕೂಡಿರಬೇಕು. ಮಾತಿನಲ್ಲಿ ಸತ್ಯವಿರಬೇಕು. ಸತ್ಯ ವಿದ್ದಾಗ ಭಾವ ತುಂಬಿರುತ್ತದೆ. ಸುಳ್ಳನ್ನು ಸುಂದರವಾಗಿ , ವೈಭವವಾಗಿ , ವರ್ಣಿಸಿ ಹೇಳಬಾರದು. ಸುಳ್ಳಿನಲ್ಲಿ ಭಾವ ಇರುವುದಿಲ್ಲ. ಹಾಗಾಗಿ ಕೇಳುವವರಿಗೆ ಅದು ಸುಳ್ಳು ಎಂದು ತಿಳಿಯುತ್ತದೆ. ಸುಳ್ಳು ಹೇಳಬಾರದೆ? ಸುಳ್ಳನ್ನು ಕೆಲವು ಸಂದರ್ಭದಲ್ಲಿ ಕನಿಷ್ಠ ಮಟ್ಟದಲ್ಲಿ ಹೇಳಬೇಕು. ಸಮಯಕ್ಕೆ ಸರಿಯಾಗಿ ಸ್ನೇಹಿತರ ಮನೆಗೆ ಹೋಗುತ್ತೇವೆ ಅನ್ನಿ ,.. ಅವರು ಅವರ ಕುಟುಂಬಕ್ಕೆ ಸಾಕಾಗುವಷ್ಟು ಆಹಾರ ತಯಾರು ಮಾಡುತ್ತಾರೆ. ಮನೆಗೆ ಹೋದಾಗ ಊಟ ಮಾಡಿ ಎನ್ನುವುದು ಸ್ವಾಭಾವಿಕ. ಕರೆದ ತಕ್ಷಣ ನೇರವಾಗಿ ಊಟಕ್ಕೆ ಕುಳಿತರೆ ಅವರ ಕುಟುಂಬದ ಅನ್ನ ನಾವು ಕಿತ್ತುಕೊಂಡಂತೆ. ಅಂತಹ ಸಂದರ್ಭದಲ್ಲಿ ಊಟ ಆಗಿದೆ ಎಂದು ಸುಳ್ಳು ಹೇಳಿದರೆ ತಪ್ಪಿಲ್ಲ. ಸುಳ್ಳು ಸಾತ್ವಿಕವಾಗಿರಬೇಕು, ಬಾಧಕವಾಗಬಾರದು. ಆದರೆ ಇಂದಿನ ದಿನಗಳಲ್ಲಿ ಟಿವಿ ಮಾಧ್ಯಮಗಳಲ್ಲಿ, ದೃಶ್ಯಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ಬರುತ್ತಿರುವುದನ್ನು ಓದಿದರೆ ಮತ್ತು ಕೇಳಿದರೆ ಅದೆಷ್ಟು ಕುರುಕ್ಷೇತ್ರ ವಾಗುತ್ತದೋ ಎನ್ನುವ ಭಯವಿದೆ. ಸತ್ಯವನ್ನು ಕಠೋರವಾದ ಶಬ್ದಗಳಿಂದ ಹೇಳಬಾರದು. ಅದು ಮೃದುವಾಗಿ , ಮಾಧುರ್ಯದಿಂದ , ಶಾಂತ ರೂಪದಲ್ಲಿ ನಯವಾಗಿ ಹೇಳಬೇಕು. ಹಾಗಾಗಿ ಸುಂದರವಲ್ಲದ, ಭಾವಪೂರ್ಣವಲ್ಲದ , ಅರ್ಥಪೂರ್ಣ ವಲ್ಲದ, ಸಂಬಂಧ ಬೆಸೆಯದ , ದ್ವೇಷ ಬಿತ್ತುವ ಮಾತುಗಳನ್ನು ಕೇಳಬಾರದು ಹಾಗೆ ಮಾತನಾಡಬಾರದು.
ಸುಂದರ ಮಾತುಗಳಿಂದ ಆಗುವ ಅನುಕೂಲಗಳೇನು.....?
◾ ಸುಂದರವಾದ ಮಾತು ಮನೆ-ಮನವನ್ನು ಸುಂದರಗೊಳಿಸುತ್ತದೆ.
◾ಸುಂದರವಾದ ಮಾತು ಜೀವನವನ್ನು ವರ್ಣಮಯಗೊಳಿಸುತ್ತದೆ.
◾ಸುಂದರವಾದ ಮಾತು ಜೀವನವನ್ನು ಶ್ರೀಮಂತ ಗೊಳಿಸುತ್ತದೆ.
◾ಸುಂದರವಾದ ಮಾತಿನಿಂದ ಮನೆ ಆನಂದದಿಂದ ತುಂಬಿರುತ್ತದೆ.
◾ಸುಂದರವಾದ ಮಾತು ಬದುಕನ್ನು ಸ್ವರ್ಗ ಮಾಡುತ್ತದೆ.
◾ಸುಂದರವಾದ ಮಾತು ನಾವಿರುವ ಸ್ಥಳವನ್ನು ಸ್ವರ್ಗ ಮಾಡುತ್ತದೆ. ಸುಂದರವಾದ , ಭಾವಪೂರ್ಣ, ಮಾಧುರ್ಯದ ಮಾತುಗಳನ್ನು ಆಡಿದಾಗ , ಎದುರಿಗೆ ಕೇಳಿಸಿಕೊಳ್ಳುವವರಿಗೆ ಆನಂದವಾಗುತ್ತದೆ. ಆ ಆನಂದ ಆ ಸ್ಥಳವನ್ನು ಸ್ವರ್ಗ ಮಾಡುತ್ತದೆ.
◾ಸ್ವರ್ಗ ಅನ್ನುವುದು ಮುತ್ತು , ರತ್ನ , ಬಂಗಾರ , ಒಡವೆ , ಹಣ ಮತ್ತು ಆಸ್ತಿಗಳಿಂದ ಕೂಡಿರುವುದಲ್ಲ, ಅದು ಸುಂದರ ಮಾತುಗಳಿಂದ ಆಗುವಂತಹದ್ದು.
◾ನಮ್ಮಲ್ಲಿ ವಿವೇಕ ಇರಬೇಕು ಎನ್ನುತ್ತೇವೆ. ವಿವೇಕ ಎಂದರೆ ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು ಎಂದು ಪರಿಶೀಲಿಸಿ, ಒಳ್ಳೆಯದನ್ನು ಆರಿಸಿಕೊಳ್ಳುವುದೇ ವಿವೇಕ. ಹಾಗಾಗಿ ಸುಂದರ ಮಾತುಗಳನ್ನು ಆಡುವಾಗ ವಿವೇಕ ಅಗತ್ಯ.
ಹಾಗಾದರೆ ಸೌಂದರ್ಯ ಎಲ್ಲಿದೆ....? ಅದು ನಾವು ನೋಡುವ ನೋಟದಲ್ಲಿದೆ. ಮನಸ್ಸು ಮತ್ತು ಭಾವನೆಗಳು ಸಕಾರಾತ್ಮಕ ಚಿಂತನೆಗಳಿಂದ ಕೂಡಿದ್ದರೆ ಕಾಣುವುದೆಲ್ಲ ಸೌಂದರ್ಯ. ಮಕ್ಕಳೇ, ಸವಿ ಮಾತುಗಳನ್ನು ಆಡುತ್ತಾ , ಜನರ ನಡುವೆ ಸಂಬಂಧ ಬೆಸೆಯುತ್ತಾ , ಕುವೆಂಪು ಹೇಳಿದಂತೆ "ಸರ್ವ ಜನಾಂಗದ ಶಾಂತಿಯ ತೋಟ" ವಾಗಲಿ ಎಂದು ಹಾರೈಸುತ್ತೇನೆ. ಜೀವನ ಸಾಕ್ಷಾತ್ಕಾರ ಎಂದರೆ ನಗುತಾ ನಲಿಯುತ್ತಾ ಬದುಕುವುದು.
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************