ಅಕ್ಕನ ಪತ್ರ : ಸಂಚಿಕೆ - 21
Saturday, April 9, 2022
Edit
ಜಗಲಿಯ ಮಕ್ಕಳಿಗೆ
ಅಕ್ಕನ ಪತ್ರ - 21
ನಮಸ್ತೆ ಮಕ್ಕಳೇ........ ನಿಮ್ಮ ಪತ್ರಗಳನ್ನು ಓದುತ್ತಾ ದಿನ ದಿನವೂ ಇನ್ನಷ್ಷು ಸ್ಫೂರ್ತಿಯನ್ನು ತುಂಬಿಕೊಂಡು ಮತ್ತೆ ಹೊಸತಾಗುವ ಭಾವ..
ಓದಿನ ಭಾರವನ್ನು ಕೆಳಗಿಳಿಸಿ ಹಗುರವಾಗಿದ್ದೀರಿ ಅಲ್ವಾ......? ಉಳಿದ ದಿನಗಳಿಗಿಂತ ಓದಿನ ದಿನಗಳಲ್ಲಿ ಇನ್ನಿಲ್ಲದ ಆಲೋಚನೆಗಳು, ಕನಸುಗಳು... ಆವರಿಸಿಕೊಳ್ತವೆ....! ಅಂದುಕೊಂಡ ಒಳ್ಳೆಯ ಕೆಲಸಗಳನ್ನು ನನಸಾಗಿಸಲು ಪ್ರಾರಂಭಿಸಿರ್ಬೇಕು ಅಲ್ವಾ.....?
ನಾನು ಕರ್ತವ್ಯದ ನಿಮಿತ್ತವಾಗಿ ಒಂದು ಕಡೆಗೆ ತೆರಳಿದ್ದೆ. ಅದು ಊಟದ ಸಮಯ. ನಾಲ್ಕು ಜನ ಪ್ರಾಯದಲ್ಲಿ ಹಿರಿಯರು.... ಊಟಕ್ಕಿಂತ ಮೊದಲು ತಟ್ಟೆಯನ್ನು ತೊಳೆಯಲು ನಳ್ಳಿಯನ್ನು ತಿರುಗಿಸಿದ್ರು.. ಸ್ವಲ್ಪ ಅಲ್ಲ... ನೀರು ಬಟ್ಟಲಿಗಿಂತ ಹೊರಗೆ ಪೂರ್ತಿ ಚೆಲ್ಲಿ ಹೋಗುವಷ್ಟು! ಬಟ್ಟಲು ತೊಳೆಯುವಾಗ ಅನಾವಶ್ಯಕವಾಗಿ ನೀರು ಧಾರಾಕಾರ ಹರಿದು ಹೋಗ್ತಿತ್ತು... ಸುಮಾರು 30 ಸೆಕೆಂಡುಗಳ ಅಂತರದಲ್ಲಿ.... ಬಟ್ಟಲನ್ನು ನೀರಿಗೆ ಹಿಡಿಯುವುದು.. ಆಚೆ ಹೋಗಿ ತೊಳೆಯುವುದು.. ಆ ಸಮಯದಲ್ಲಿ ನಳ್ಳಿಯ ನೀರು ಪೋಲಾಗ್ತಿತ್ತು.. ನಾಲ್ಕು ಜನ ವಿದ್ಯಾವಂತರೂ ಮಾಡಿದ್ದಿಷ್ಟೆ.....! ಹಿಂಸೆ ಅನ್ನಿಸಿತು. ನಮ್ಮ ಶಾಲೆಯ ಮಕ್ಕಳಿಗೀಗ ಕಡಿಮೆ ನೀರು ಉಪಯೋಗಿಸುವುದು ಅಭ್ಯಾಸವಾಗಿದೆ... ಜಾಣ ಮಕ್ಕಳವರು...! ನಿಮ್ಮ ಹಾಗೆಯೇ...! ನಾಳೆಗೆ ಉಳಿಸಬೇಕಾದವರು ನಾವೇ !
ಅದು ರಾಷ್ಟ್ರೀಯ ಹೆದ್ದಾರಿಯ ಬದಿ... ಸಾರ್ವಜನಿಕ ಕಾರ್ಯಕ್ರಮ... ಕಾರ್ಯಕ್ರಮದಲ್ಲಿ ಆ ದಿನವಿಡೀ ಸಂಭ್ರಮವೇ... ಗಳಿಸಿಕೊಂಡದ್ದಕ್ಕಿಂತ ಹೆಚ್ಚಾಗಿ ನೆಲವೇ ಕಾಣದ್ದಷ್ಟು ತ್ಯಾಜ್ಯ ಹರಡಿ , ಊರು ಅನಾಗರಿಕತೆಯನ್ನು ಮೆರೆದಿತ್ತು! ವಿದ್ಯಾವಂತರೇ ಎಲ್ಲರೂ.....!
ನೆಲ- ಜಲ ಸಂರಕ್ಷಣೆಯ ಸಾಮಾಜಿಕ ಪ್ರಜ್ಞೆ ಜಾಗೃತವಾಗೋದ್ಯಾವಾಗ.....! ಮನಸ್ಸಿಗೆ ಬೇಜಾರಾದಾಗಲೆಲ್ಲಾ ನಿಮ್ಮಲ್ಲಿ ಹಂಚಿಕೊಳ್ಳಬೇಕು ಎಂದೆನಿಸುವುದು. ನಿಮ್ಮ ಪತ್ರ ಒಂದಷ್ಟು ಭರವಸೆ, ನೆಮ್ಮದಿಯನ್ನು ಕೊಡ್ತದೆ ಅನ್ನುವ ಕಾರಣಕ್ಕಾಗಿ..
ಕೆಲವು ದಿನಗಳು ಶಾಲೆಗೆ ಬಿಡುವು ಅಲ್ವಾ?ನಾವೇನು ಮಾಡಬಹುದು ಈ ರಜೆಯಲ್ಲಿ...?
ಅಜ್ಜಿ ಮನೆ, ಬಂಧು ಬಳಗವನ್ನೆಲ್ಲಾ ಭೇಟಿಯಾಗಿ ಬರೋಣ...! ಇದರೊಂದಿಗೆ ಹಸಿರನ್ನು ಉಣಿಸಿ ಮೈ ಮನಸ್ಸುಗಳನ್ನು ತಂಪು ಮಾಡುವ ಪರಿಸರದ ಸೇವೆಯನ್ನು ಹೇಗೆ ಮಾಡಬಹುದು..? ನಾವು ಯಾವ ರೀತಿ ತೊಡಗಿಸಿಕೊಳ್ಳಬಹುದು....? ನಮ್ಮ ನೆರೆಹೊರೆ ಯಲ್ಲಿ ಜಾಗೃತಿ ಮೂಡಿಸಲು ಹೇಗೆ ತೊಡಗಿಸಿಕೊಳ್ಳಬಹುದು...? ನಿಮ್ಮಲ್ಲಿ ಹೊಸತನದ ಆಲೋಚನೆಗಳು, ಸಾಧ್ಯವಾಗುವಂತಹ ಕಾರ್ಯಯೋಜನೆಗಳು, ನೀವು ಕೆಲಸ ಮಾಡಿದ ಪೋಟೋ ಏನಾದರೂ ಇದ್ದರೆ... ನಮ್ಮಲ್ಲಿ ಹಂಚಿಕೊಳ್ತೀರಿ ಅಲ್ವಾ?
'ಅಕ್ಕಾ' ಎಂದು ಪ್ರೀತಿಯಿಂದ ಪ್ರತ್ಯುತ್ತರ ನೀಡಿದಾಗ ಜೊತೆಗಿದ್ದೀರಿ ಅನ್ನುವ ಆಪ್ತ ಭಾವ.
ಆರೋಗ್ಯ ಜೋಪಾನ. ಇನ್ನು ನನ್ನ ನಿಮ್ಮ ಭೇಟಿ..... ಮುಂದಿನ ಪತ್ರದೊಂದಿಗೆ...... ಅಲ್ಲಿಯವರೆಗೆ ಅಕ್ಕನ ನಮನಗಳು.
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
****************************************