-->
ಮಕ್ಕಳ ತುಂಟ ಮನಸು ಸಂಚಿಕೆ - 6

ಮಕ್ಕಳ ತುಂಟ ಮನಸು ಸಂಚಿಕೆ - 6

ಮಕ್ಕಳ
ತುಂಟ ಮನಸು 
ಸಂಚಿಕೆ - 6


          ತರಕಾರಿ ಹೋಳು.... ಮಕ್ಕಳ ಗೋಳು....!!
     ಮಕ್ಕಳಿಗೆ ಕೆಲವೊಂದು ತರಕಾರಿಗಳನ್ನು ಕಂಡರೆ ಅದೇನೋ ವಿಚಿತ್ರ ಭಾವನೆ ಬರುವುದನ್ನು ಅನೇಕ ಬಾರಿ ನಾವು ನೋಡಬಹುದು. ಸಾಮಾನ್ಯವಾಗಿ ಬದನೆಕಾಯಿ, ಸೋರೆಕಾಯಿ, ಹಾಗಲಕಾಯಿ ಹೀಗೆ ಕೆಲವೊಂದು ತರಕಾರಿಗಳನ್ನು ನೋಡಿದಾಗ ಎಷ್ಟೋ ಮಕ್ಕಳು ಊಟವೇ ಬೇಡ ಎಂದು ಓಡಿ ಹೋಗುತ್ತಾರೆ. ಅಮ್ಮನಿಗಂತೂ ಮನೆಯಲ್ಲಿ ಅಡುಗೆ ಮಾಡುವುದು ಸಾಹಸದ ಕೆಲಸವೇ ಸರಿ. ತಮ್ಮ ಮಕ್ಕಳಿಗೆ ಮನೆಯಲ್ಲೂ ಊಟ ಮಾಡಿಸಿ, ಲಂಚ್ ಬಾಕ್ಸ್ ಗೂ ರುಚಿಕರವಾದ ಅಡುಗೆ ಮಾಡಿ ತುಂಬಿ ಕೊಡುವುದು ಅಮ್ಮನ ದೊಡ್ಡ ಜವಾಬ್ದಾರಿ. ಒಂದು ವೇಳೆ ಲಂಚ್ ಬಾಕ್ಸ್ ಒಳಗಡೆ ಸೋರೆಕಾಯಿ ಪಲ್ಯ ಹಾಕಿದ್ದಾರೆ ಅಂದುಕೊಳ್ಳಿ.. ಸಂಜೆ ವಾಪಸ್ ಮನೆಗೆ ಬರುವಾಗ ಲಂಚ್ ಬಾಕ್ಸ್ ಒಳಗಡೆ ಹಾಕಿದ್ದ ಪಲ್ಯ ಹಾಗೆಯೇ ಇರುತ್ತದೆ. ಮಾಡಿದ ತಪ್ಪಿಗೆ ಅಮ್ಮನೇ ಆ ಪಲ್ಯವನ್ನೆಲ್ಲಾ ತಿಂದುಬಿಡಬೇಕು. ಮಕ್ಕಳು ಲಂಚ್ ಬಾಕ್ಸ್ ಒಳಗಡೆ ಚಪಾತಿ ಜೊತೆ ಎಕ್ಸ್ಟ್ರಾ ಕೆಚಪ್ ಹಾಕಮ್ಮ ಅಂತ ಬೆಳಗ್ಗೆ ಅಮ್ಮನಿಗೆ ಆರ್ಡರ್ ಮಾಡಿ ಹೇಳುತ್ತಾರೆ...!!
       ಈಗಿನ ಮಕ್ಕಳಿಗಂತೂ ಸ್ನಾಕ್ಸ್ ಟೈಂ ಆದಾಗ ಫ್ರೆಂಚ್ ಫ್ರೈ ಬೇಕಾಗುತ್ತದೆ... ಊಟದ ಸಮಯಕ್ಕೆ ತ್ರಿಕೋನಾಕಾರದ ಸ್ಯಾಂಡ್ವಿಚ್... ಸಂಜೆ ಆದಾಗ ಮನೆ ಹತ್ತಿರದ ಬೇಕರಿಗೆ ಹೋದರೆ ಸಾಕು... ಹಾಗಂತ ಎಲ್ಲಾ ಮಕ್ಕಳ ಆಹಾರ ಕ್ರಮ ಇದೇ ರೀತಿ ಇರುವುದಿಲ್ಲ. ಮಕ್ಕಳನ್ನು ಬೆಳೆಸುವ ರೀತಿ, ಅವರ ಆಹಾರ ಕ್ರಮ, ಬೇರೆಯವರನ್ನು ನೋಡಿ ಕಲಿಯುವ ವಿಧಾನ ಇವೆಲ್ಲವೂ ಕೂಡ ಮಕ್ಕಳ ವರ್ತನೆಯನ್ನು ರೂಪಿಸುತ್ತದೆ. ತಮ್ಮ ಸ್ನೇಹಿತರ ಲಂಚ್ ಬಾಕ್ಸ್ ಒಳಗಡೆ ವಿಶೇಷವಾದ ತಿನಿಸು ಕಂಡರೆ, ಮನೆಗೆ ಹೋಗಿ ನನಗೂ ಅದೇ ತಿಂಡಿ ಬೇಕು ಎಂದು ಅಮ್ಮನನ್ನು ಪೀಡಿಸುವ ಮಕ್ಕಳು ಎಷ್ಟೋ ಜನ ಇದ್ದಾರೆ.
        ಸರಕಾರಿ ಮತ್ತು ಕೆಲವು ಖಾಸಗಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಸಿಗುತ್ತದೆ. ನಾವು ಸಣ್ಣವರಿದ್ದಾಗ ಶಾಲೆಯ ಗಂಟೆ ಬಾರಿಸಿದ ಕೂಡಲೇ ಒಗ್ಗರಣೆಯ ಪರಿಮಳಕ್ಕೆ ಹಸಿವಿನಿಂದ, ಬಟ್ಟಲು ಹಿಡಿದುಕೊಂಡು ಊಟಕ್ಕೆ ಓಡುತ್ತಿದ್ದೆವು. ಆಮೇಲೆ ಕೆಲವೊಮ್ಮೆ ಹುಣಸೆ ಮರ, ನೇರಳೆ ಮರದಡಿಗೆ ಎಲ್ಲರೂ ಒಟ್ಟಾಗಿ ಕುಳಿತುಕೊಂಡು ಊಟ ಮಾಡುತ್ತಿದ್ದೆವು. ಯಾವ ತರಕಾರಿ ಇದ್ದರೂ ಕೂಡ ತಿನ್ನುತ್ತಿದ್ದೆವು. ಅದರಲ್ಲಿದ್ದ ಮಜವೇ ಬೇರೆ ಇರುತ್ತಿತ್ತು.  
       ಒಳ್ಳೆಯ ಆಹಾರ ಕ್ರಮವನ್ನು ಪಾಲಿಸುವುದರಲ್ಲಿ ಪೋಷಕರು ಕೂಡ ವಿಫಲರಾಗುತ್ತಿದ್ದಾರೆ. ಆದಷ್ಟು ಮಕ್ಕಳಿಗೆ ಚಿಕ್ಕಂದಿನಿಂದಲೇ ಒಳ್ಳೆಯ ಆಹಾರ ಕ್ರಮವನ್ನು ಹೇಳಿಕೊಟ್ಟರೆ ಬದನೆ ಕಾಯಿಯಾದರೂ ಸರಿ, ಹಾಗಲಕಾಯಿಯಾದರೂ ಸರಿ , ಮಕ್ಕಳು ತಿನ್ನುತ್ತಾರೆ. ಆದರೆ ಕೆಲವೊಮ್ಮೆ ಪೋಷಕರೇ ಮಕ್ಕಳಿಗೆ ಆ ತರಕಾರಿ ನಂಜು, ಈ ತರಕಾರಿ ಸಪ್ಪೆ, ಮತ್ತೊಂದು ತರಕಾರಿ ಕಹಿ -ಕಹಿ ಎಂದು ಹೇಳಿದರೆ ಮಕ್ಕಳು ಹೇಗೆ ತಾನೇ ತಿನ್ನುತ್ತಾರೆ.....? ಆಹಾರದ ಬಣ್ಣ ಮತ್ತು ರುಚಿಗಿಂತ ಆಹಾರದ ಗುಣಮಟ್ಟ ಮುಖ್ಯವಾಗುತ್ತದೆ. ಆಕರ್ಷಕವಾಗಿ ಕಾಣುವ ಆಹಾರ ನಮ್ಮ ಆರೋಗ್ಯಕ್ಕೆ ಮಾರಕವಾಗಿಯೂ ಇರಬಹುದು. ಆದ್ದರಿಂದ ಮಕ್ಕಳು ಹಾಗೂ ಪೋಷಕರು ಒಳ್ಳೆಯ ಆಹಾರದ ಕಡೆ ಗಮನ ಹರಿಸಿದರೆ ಒಳ್ಳೆಯ ಆರೋಗ್ಯವೂ ನಮ್ಮದಾಗುತ್ತದೆ.
........................................... ರಮ್ಯ. ಎಮ್
ಅಂತಿಮ ಬಿ.ಎ (ಮನ:ಶಾಸ್ತ್ರ ವಿದ್ಯಾರ್ಥಿನಿ)
ಡಾ. ಪಿ. ದಯಾನಂದ ಪೈ - ಪಿ.ಸತೀಶ ಪೈ, ಸರ್ಕಾರಿ 
ಪ್ರಥಮ ದರ್ಜೆ ಕಾಲೇಜು, ರಥಬೀದಿ, 
ಮಂಗಳೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************

Ads on article

Advertise in articles 1

advertising articles 2

Advertise under the article