-->
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 36

ಬದಲಾಗೋಣವೇ ಪ್ಲೀಸ್.....! ಸಂಚಿಕೆ - 36

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
    
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 36
   

    ಉತ್ತು ಬಿತ್ತಿದರೆ ಹೊಲವು ಹೊನ್ನಾಗುವುದು.....
  ----------------------------------------------
        ವಿಶಾಲ್ ತುಂಬಾ ಋಣಾತ್ಮಕ ಭಾವದ ಹಠಮಾರಿ ಬಾಲಕ. ವಿದ್ಯೆ ಮತ್ತು ವಿನಯ ಕಲಿಯಬೇಕಾದ ಪ್ರೌಢಾವಸ್ಥೆಯಲ್ಲಿ ಆಲಸಿಯಾಗಿ ಕಿಲಾಡಿಯಾಗಿ ತಿರುಗಾಡುತ್ತಿದ್ದನು. ಅವನನ್ನು ಸರಿದಾರಿಗೆ ತರುವ ಮನೆಯವರ ಪ್ರಯತ್ನಗಳೆಲ್ಲ ನೀರ ಮೇಲಿನ ಹೋಮದಂತೆ ನಿಷ್ಫಲವಾಗಿತ್ತು. ಹಾಗಾಗಿ ಅವನ ವಿದ್ಯಾರ್ಥಿ ಜೀವನ ಗೊತ್ತುಗುರಿಯಿಲ್ಲದ ಗಾಳಿಪಟದಂತಾಗಿತ್ತು.
        ಒಂದು ದಿನ ಊರಿನ ಹೊಲದ ಮರದಡಿ ವಿಶಾಲನು ಸೋಮಾರಿಯಾಗಿ ಕಾಲಹರಣ ಮಾಡುತ್ತಿದ್ದನು. ಅದೇ ಸಂದರ್ಭದಲ್ಲಿ ವಿಶ್ರಾಂತಿಗೆಂದು ಬಂದ ರೈತನೊಬ್ಬ ಅವನ ಜತೆ ಸಂಭಾಷಣೆಯಲ್ಲಿ ನಿರತನಾದ. ವಿಶಾಲನ ಮಾತುಕತೆಯಲ್ಲಿ ಋಣಾತ್ಮಕ ಹಠ ಹಾಗೂ ಆಲಸ್ಯ ಭಾವ ಗುರುತಿಸಿದ ರೈತನು ಅಲ್ಲೇ ಎದುರು ಕಾಣುತ್ತಿದ್ದ ಫಲವತ್ತಾದ ಹೊಲ ಹಾಗೂ ಪಾಳುಬಿದ್ದ ಹೊಲವನ್ನು ತೋರಿಸಿ "ಅಯ್ಯಾ ಬಾಲಕ, ಅಲ್ಲಿನ ಫಲವತ್ತಾದ ಹೊಲದಲ್ಲಿ ಹತ್ತಾರು ಹಕ್ಕಿಗಳು ಕಾಳು ಹೆಕ್ಕಿ ಸಂಭ್ರಮಿಸುತಿದೆ. ಚಿಟ್ಟೆಗಳು ಮನದುಂಬಿ ಹಾಡುತ್ತಿದೆ. ಹಚ್ಚ ಹಸಿರಿನ ಗಿಡದ ತುಂಬಾ ಫಸಲುಗಳು ತೊನೆದಾಡುತ್ತಿದೆ. ಇದಕ್ಕೆಲ್ಲ ಕಾರಣ ಆ ಹೊಲದ ಯಜಮಾನ ರೈತನ ಶ್ರದ್ಧೆ ಹಾಗೂ ಆಸಕ್ತಿ. ಆತ ತನ್ನ ಬರಡು ಹೊಲದಲ್ಲಿ ಹೊನ್ನು ಬೆಳೆಸುತಿದ್ದಾನೆ. ಅದಕ್ಕಾಗಿ ಕಾಲಕಾಲಕ್ಕೆ ಕಳೆಗಳನ್ನು ಕೀಳುತ್ತಾನೆ. ಉತ್ತಮ ಬೆಳೆಗಾಗಿ ಮಳೆ , ಗಾಳಿ , ಬಿಸಿಲು ಹಾಗೂ ಚಳಿಯ ಪರಿಸ್ಥಿತಿಗೆ ಹೆದರದೆ ಹಾಗೂ ವ್ಯರ್ಥವಾಗಿ ಅಪವಾದ ಹಾಕದೆ ಕಾಲದ ಪರಿಸ್ಥಿತಿಗನುಗುಣವಾಗಿ ಹೊಂದಾಣಿಕೆ ಮಾಡಿಕೊಂಡು ಶ್ರಮದಿಂದ ದುಡಿಯುತ್ತಾನೆ. ಅದ ಕಾರಣ ಹೊನ್ನಿನಂತಹ ಫಸಲು ಕೈಗೆ ಸಿಕ್ಕಿದೆ. ಹೊಲವನ್ನು ಖಾಲಿ ಬಿಡದೆ ನೆಲ ಉತ್ತಿ , ಬೆಳೆ ಬಿತ್ತಿ ಬೆಳೆದ ಕಾರಣ ಹೊಲವು ಆಕರ್ಷಣೀಯವೂ ಉಪಕಾರಿಯೂ ಆಗಿದೆ. ಆದರೆ ಅದರ ಪಕ್ಕದಲ್ಲಿರುವ ಹೊಲವು ಅದರ ಯಜಮಾನನ ನಿರ್ಲಕ್ಷ್ಯದಿಂದಾಗಿ ಪಾಳು ಬಿದ್ದಿದೆ. ನಿಷ್ಟ್ರಯೋಜಕ ಪೊದೆಗಳು , ಬಿಸಾಡುವ ಕಸಕಡ್ಡಿಗಳಿಗೆ ಆಸರೆಯಾಗುತ್ತಿದೆ , ತ್ಯಾಜ್ಯವಸ್ತುಗಳ ತಾಣವಾಗುತ್ತಿದೆ. ಅಲ್ಲಿಗೆ ಬಂದವರೆಲ್ಲ ಫಲವತ್ತಾದ ಹೊಲ ನೋಡಿ ಅಚ್ಚರಿಪಡುತ್ತಿದ್ದಾರೆ ಮತ್ತು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಪಾಳು ಹೊಲದ ಕಡೆಗೆ ಯಾರೂ ಗಮನವೇ ಕೊಡುತಿಲ್ಲ. ಅದರ ಗಬ್ಬು ವಾಸನೆ ಎಲ್ಲರನ್ನು ದೂರವಿಡುತ್ತಿದೆ. ಕಳೆಗಳಿಗೆ ಆಸರೆಯಾಗಿದ್ದ ಬರಡು ಹೊಲ ಇದ್ದು ಇಲ್ಲದಂತಾಗಿದೆ." ಎಂದನು.
        ವಿಶಾಲನು "ಇದನ್ನೆಲ್ಲ ನನಗ್ಯಾಕೆ ಹೇಳುವಿರಿ ?" ಎಂದಾಗ ವೃದ್ಧನು "ಅಯ್ಯಾ ಬಾಲಕ, ನಮ್ಮ ಬದುಕು ಎಂಬುದು ಹೊಲವಿದ್ದಂತೆ. ಅದನ್ನು ಫಲವತ್ತಾದ ಹೊಲ ಅಥವಾ ಪಾಳುಬಿದ್ದ ಹೊಲವನ್ನಾಗಿ ಮಾಡುವುದು ನಮ್ಮ ಕೈಯಲ್ಲಿದೆ. ಆಯ್ಕೆ ನಮ್ಮದು. ನನ್ನ ಪ್ರಕಾರ ನಿನ್ನ ಬದುಕು ಪಾಳು ಬಿದ್ದ ಹೊಲ. ಅದನ್ನು ಹೀಗೆ ಬಿಟ್ಟರೆ ಗಬ್ಬು ನಾತ ಉಂಟಾಗಬಹುದು. ಆದಷ್ಟೂ ಬೇಗ ನಿನ್ನ ಹೊಲವನ್ನು ಹೊನ್ನನಾಗಿಸು" ಎಂದು ಹೇಳಿ ಹೊರಟು ಹೋದನು. ಆ ಹಠಮಾರಿ ಬಾಲಕ ವಿಶಾಲನು ಈಗ ಪ್ರಶಸ್ತಿ ವಿಜೇತ ರೈತ. ಪಾಳು ಬಿದ್ದ ಬದುಕನ್ನು ಹಸಿರನ್ನಾಗಿಸಿದ ವಿಶಾಲನ ಬದುಕು ಸ್ಫೂರ್ತಿದಾಯಕ.
       ಹೌದಲ್ವ ಮಕ್ಕಳೇ... ಮಾರ್ಚ್- ಎಪ್ರಿಲ್ ತಿಂಗಳು ಎಂದರೆ ಪರೀಕ್ಷಾ ಸಮಯ. ಪರೀಕ್ಷೆ ಎಂದರೆ ಹಬ್ಬ. ನಮಗೆಲ್ಲರಿಗೂ ಯಾವುದೇ ಪರೀಕ್ಷೆಯನ್ನು ಎದುರಿಸಿ ಗೆಲ್ಲುವ ಸಾಮರ್ಥ್ಯ ಇದ್ದೇ ಇರುತ್ತದೆ. ಕೆಲವರು ಈಗಾಗಲೇ ಸದಾ ಕ್ರಿಯಾಶೀಲರಾಗಿ ತಮ್ಮ ಕಲಿಕಾ ಹೊಲವನ್ನು ಹಸಿರನ್ನಾಗಿಸಿದ್ದಾರೆ. ಕಲಿಕಾ ನ್ಯೂನತೆಗಳೆಂಬ ಕಳೆಯನ್ನು ಕಿತ್ತು ಪುನರಾವರ್ತನೆಗಳೆಂಬ ನೊಗದಿಂದ ಉಳುಮೆ ಮಾಡಿ ಮಣ್ಣನ್ನು ಹದವನ್ನಾಗಿಸಿದ್ದಾರೆ. ಆದರೆ ಕೆಲವು ಮಕ್ಕಳ ಕಲಿಕಾ ಹೊಲವು ತಮ್ಮ ಋಣಾತ್ಮಕ ಪರಿಸರದ ಪ್ರಭಾವವೋ... ಮೊಬೈಲ್ , ಮಾದಕ ವಸ್ತುಗಳ ಚಟ ಇತ್ಯಾದಿ ಅನ್ಯ ವಿಷಯಗಳ ಆಕರ್ಷಣೆಯೋ... ತನ್ನೊಳಗಿನ ಸ್ವಸಾಮರ್ಥ್ಯದ ಅರಿವಿನ ಕೊರತೆಯೋ , ಕೆಲವು ಪಾಲಕರ ಹಾಗೂ ಶಿಕ್ಷಕರ ನಕಾರಾತ್ಮಕ ಹಿಮ್ಮಾಹಿತಿ ಅಥವಾ ಇನ್ನಿತರ ಕಾರಣಗಳಿಂದಲೋ ಪಾಳು ಬಿದ್ದಿದೆ. ಆದರೆ ಕಾಲ ಮಿಂಚಿಲ್ಲ. ದಿನಗಳು ಇನ್ನೂ ಇವೆ. ಸಾಧಿಸುವ ಬದಲಾವಣೆಗೆ ಬದಲಾದರೆ ಬರಡು ಹೊಲವು ಹೊನ್ನಾಗಬಹುದು. ಮಕ್ಕಳೇ ಈ ನಿಟ್ಟಿನ ಬದಲಾವಣೆಗೆ ನಮ್ಮನ್ನು ನಾವು ತೆರೆದುಕೊಳ್ಳೋಣ. ಬದುಕೆಂಬ ಹೊಲದಲ್ಲಿ ನಕಾರಾತ್ಮಕ ಅಂಶಗಳ ಕಳೆಯನ್ನು ಕೀಳಿ ಧನಾತ್ಮಕ ಅಂಶಗಳನ್ನು ಬಿತ್ತಿ , ಬದುಕನ್ನು ಬಂಗಾರದ ಬೆಳೆಯನ್ನಾಗಿಸೋಣ. ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ.... ಬದಲಾಗೋಣವೇ ಪ್ಲೀಸ್..! ಏನಂತೀರಿ...?
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************

Ads on article

Advertise in articles 1

advertising articles 2

Advertise under the article