-->
ಹಕ್ಕಿ ಕಥೆ : ಸಂಚಿಕೆ- 38

ಹಕ್ಕಿ ಕಥೆ : ಸಂಚಿಕೆ- 38

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ


                      ಹಕ್ಕಿ ಕಥೆ - 38
                 ---------------------
      ಮಕ್ಕಳೇ ನಮಸ್ತೇ, ಈ ವಾರದ ಹಕ್ಕಿ ಹಥೆಗೆ ಸ್ವಾಗತ..... ನಮ್ಮ ಶಾಲೆಯ ಮಕ್ಕಳಿಗೆ ನನ್ನ ಪಕ್ಷಿವೀಕ್ಷಣೆಯ ಹವ್ಯಾಸ ಚೆನ್ನಾಗಿ ಗೊತ್ತು. ಹಾಗಾಗಿ ದಿನಾ ಬೆಳಗ್ಗೆ ಶಾಲೆಗೆ ಬರುವ ದಾರಿಯಲ್ಲಿ ಯಾವ ಹಕ್ಕಿಗಳನ್ನು ನೋಡಿದೆವು ಅವುಗಳು ಏನು ಮಾಡುತ್ತಿದ್ದವು ಎಂದೆಲ್ಲ ನನ್ನ ಬಳಿ ವಿವರಿಸಿ ಹೇಳುವುದು ಬಹಳ ಮಕ್ಕಳ ದೈನಂದಿನ ಕಾಯಕ. ಕೆಲವರು ಬೇಗನೆ ಶಾಲೆಗೆ ಬಂದು ಶಾಲೆಯ ಆಸುಪಾಸಿನ ಕಾಡಿನಲ್ಲಿ ಸಿಗುವ ಮರಗಳಿಂದ ಹಣ್ಣುಗಳನ್ನು ಕಿತ್ತು ತಿನ್ನುವುದು, ಶಾಲೆಯ ತೋಟದಲ್ಲಿ ತೆಂಗಿನಕಾಯಿ ಬಿದ್ದಿದೆಯಾ ಎಂದು ನೋಡಿ ಹೆಕ್ಕಿಕೊಂಡು ಬರುವುದು ಮಕ್ಕಳ ದೈನಂದಿನ ಕಾಯಕ. ಹಾಗೆ ಮಾಡುವಾಗಲೆಲ್ಲ ಸುತ್ತಮುತ್ತಲೂ ಕಾಣುವ ಹಕ್ಕಿಗಳನ್ನು ಗಮನಿಸಿ ಅವುಗಳು ಏನುಮಾಡುತ್ತಿದ್ದವು ಎಂದು ವಿವರಿಸುವುದು ಅವರ ನೆಚ್ಚಿನ ವಿಷಯ. 
           ಹೀಗೇ ಒಂದು ದಿನ ನಾನು ಶಾಲೆಗೆ ಬಂದಾಗ ಗೌತಮ್ ಓಡೋಡಿ ಬಂದ. ಸಾರ್ ನಿನ್ನೆ ನಮ್ಮ ಮನೆಯಲ್ಲಿ ಏನಾಯ್ತು ಗೊತ್ತಾ ಎಂದು ಶುರುಮಾಡಿದ. ನಿನ್ನೆ ಭಾನುವಾರ ಶಾಲೆಗೆ ರಜೆ ಇತ್ತಲ್ಲ, ನಾನು ಆಟ ಆಡ್ಲಿಕ್ಕೆ ಅಂತ ಪಕ್ಕದ ಮನೆಗೆ ಹೊರಟಿದ್ದೆ. ಆಗ ಯಾವುದೋ ಹಕ್ಕಿ ಕೂಗಿದ ಶಬ್ದ ಕೇಳಿಸಿತು. ಆ ಶಬ್ದ ಕೇಳಿದ್ದೇ ತಡ, ನಮ್ಮ ಮನೆಯ ಕೋಳಿ ತನ್ನ ಎಲ್ಲಾ ಮರಿಗಳನ್ನೂ ಕೂಗಿ ಕರೆಯಿತು. ಮರಿಗಳೆಲ್ಲ ಓಡೋಡಿ ಬಂದು ಗೂಡಿನಲ್ಲಿ ತಾಯಿ ಕೋಳಿಯ ರೆಕ್ಕೆಯ ಕೆಳಗೆ ಅವಿತುಕೊಂಡವು. ಆದರೆ ಒಂದು ಕೋಳಿ ಮರಿಮಾತ್ರ ಸ್ವಲ್ಪ ದೂರದಲ್ಲಿತ್ತು. ಆ ಮರಿ ತಾಯಿಯ ಹತ್ತಿರ ಬಂದು ಗೂಡು ಸೇರುವುದರೊಳಗೆ ಎಲ್ಲಿತ್ತೋ ಏನೋ ಒಂದು ಗಿಡುಗದ ಹಾಗೆ ಕಾಣುವ ಆದರೆ ಗಿಡುಗಕ್ಕಿಂತ ಚಿಕ್ಕ ಹಕ್ಕಿ ಹಾರಿ ಬಂದು ಆ ಕೋಳಿಮರಿಯನ್ನು ಹಿಡಿದುಕೊಂಡು ಹೋಗಿ ಸ್ವಲ್ಪ ದೂರದ ಮರದಮೇಲೆ ಕುಳಿತುಕೊಂಡಿತು. ಆ ಮರಿ ಹದ್ದಿನ ಹಿಡಿತಕ್ಕೆ ಸಿಕ್ಕಿ ಆಗಲೇ ಪ್ರಾಣ ಬಿಟ್ಟಿತ್ತು. ಹದ್ದು ಅಲ್ಲೇ ಕುಳಿತು ಕೋಳಿಮರಿಯನ್ನು ಕೊಕ್ಕಿನಿಂದ ಹರಿದು ತಿನ್ನಲು ಪ್ರಾರಂಭ ಮಾಡಿತು. ಸ್ವಲ್ಪ ಹೊತ್ತಿನಲ್ಲೇ ಕೋಳಿಮರಿಯನ್ನು ತಿಂದು ಮುಗಿಸಿ ಹದ್ದು ಹಾರಿಹೋಯಿತು.
          ಈ ಹದ್ದನ್ನು ನಮ್ಮ ತುಳು ಭಾಷೆಯಲ್ಲಿ ಪಕ್ಕಿಸಾಲೆ ಎಂದು ಕರೀತಾರೆ. ಅದು ಹೆಚ್ಚಾಗಿ ಕೋಳಿಮರಿಗಳನ್ನು ಹಿಡಿಯಲು ಬರುತ್ತದೆ. ಅದಕ್ಕೇ ನಾವು ಕೋಳಿಗಳಿಗೆ ಗೂಡು ಮಾಡಿ ಇಡುತ್ತೇವೆ ಅಥವಾ ದೊಡ್ಡದೊಂದು ಬುಟ್ಟಿ ಮುಚ್ಚಿ ಇಡುತ್ತೇವೆ. ಆಗ ಹಕ್ಕಿ ಮರಿಗಳ ಜೊತೆ ಸುರಕ್ಷಿತವಾಗಿ ಇರುತ್ತದೆ ಎಂದು ಗೌತಮ್ ನನಗೊಂದು ಕಥೆ ಹೇಳಿದ. ಅವನು ಇಷ್ಟು ಹೇಳಿದಾಗಲೂ ನನಗೆ ಹಕ್ಕಿ ಯಾವುದು ಎಂದು ಗೊತ್ತಾಗಲಿಲ್ಲ. ಗಿಡುಗನ ಹಾಗೇ ಕಾಣುವ ಸಣ್ಣ ಹಕ್ಕಿ ಎಂದು ಅವನು ಹೇಳಿದ ಆಧಾರ ಇಟ್ಟುಕೊಂಡು ಸಲೀಂ ಅಲಿ ಮತ್ತು ಇತರೆ ಪುಸ್ತಕಗಳಲ್ಲಿ ಹುಡುಕಿದೆವು. ಆಗ ಗೊತ್ತಾಯ್ತು ಅವನು ಹೇಳಿದ ಹಕ್ಕಿಯ ಹೆಸರು SHIKRA.  ಹಲ್ಲಿ, ಇಲಿ, ಅಳಿಲು, ಸಣ್ಣ ಹಕ್ಕಿಗಳನ್ನು ಹಿಡಿದು ತಿನ್ನುವ ಶಿಕ್ರ ಹಕ್ಕಿ ಮಾರ್ಚ್ ನಿಂದ ಜೂನ್ ಮಧ್ಯೆ ಮರಗಳ ಮೇಲೆ ಕಾಗೆಯಂತೆಯೇ ಕಡ್ಡಿಗಳನ್ನು ಮತ್ತು ಹುಲ್ಲುಗಳನ್ನು ಬಳಸಿ ಗೂಡು ಮಾಡುತ್ತದೆ. ಮರಿಗಳು ಇರುವ ಕಾಲದಲ್ಲಿ ಸುಲಭವಾಗಿ ಸಿಗುವ ಕೋಳಿಮರಿಗಳನ್ನು ಹಿಡಿಯಲು ಬರುತ್ತದೆಯಂತೆ. ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಮಯನ್ಮಾರ್ ಮತ್ತು ಶ್ರೀಲಂಕಾ ದೇಶಗಳಲ್ಲೆಲ್ಲ ಈ ಹಕ್ಕಿ ನೋಡಲು ಸಿಗುತ್ತದೆಯಂತೆ. ಗಂಡುಹಕ್ಕಿ ನೋಡಲು ಸ್ವಲ್ಪ ಬೂದು ಬಣ್ಣ ಇದ್ದರೆ, ಹೆಣ್ಣು ಹಕ್ಕಿ ಸ್ವಲ್ಪ ಕಂದು ಬಣ್ಣ ಇರುತ್ತದೆ. ಗಂಡು ಹೆಣ್ಣುಗಳೆರಡೂ ಮರಿಗಳನ್ನು ಸಾಕುವ ಜವಾಬ್ದಾರಿ ಸಮಾನವಾಗಿ ನಿಭಾಯಿಸುತ್ತವೆ. ಇವುಗಳ ಕೂಗು ಕಾಜಾಣ ಪಕ್ಷಿಯ ಕೂಗಿನಂತೆಯೇ ಇರುತ್ತದೆ. ಆದರೆ ಕಾಜಾಣ ಪಕ್ಷಿ ಶಿಕ್ರಾ ಅಥವಾ ಬಿಜ್ಜು ಹಕ್ಕಿಯ ಕೂಗನ್ನು ಅನುಕರಿಸಿ ತನ್ನ ಗೂಡಿಗೆ ಎದುರಾಗಬಹುದಾದ ಆಪತ್ತಿನಿಂದ ತನ್ನನ್ನು ರಕ್ಷಿಸಿಕೊಳ್ಳುತ್ತದೆ ಎಂದು ಹೇಳುತ್ತಾರೆ. ಮಾಂಸಾಹಾರಿ ಮತ್ತು ಬೇಟೆಗಾರ ಹಕ್ಕಿಗಳಲ್ಲಿ ಈ ಹಕ್ಕಿ ಸ್ವಲ್ಪ ಚಿಕ್ಕದಾದರೂ ಬೇಟೆಯಾಡುವುದರಲ್ಲಿ ಬಲು ನಿಸ್ಸೀಮ. ಬೇಟೆಯನ್ನು ಗಮನಿಸಿ, ತಕ್ಷಣ ಅದರ ಮೇಲೆ ಧೈರ್ಯವಾಗಿ ಎರಗುವ ಅದರ ಸಾಮರ್ಥ್ಯ ವಿಶಿಷ್ಟವೇ ಸರಿ.
          ಈ ಅದ್ಭುತ ಬೇಟೆಗಾರ ಶಿಕ್ರ ಅಥವಾ ಬಿಜ್ಜು ಹಕ್ಕಿ ನಿಮ್ಮ ಆಸುಪಾಸಿನಲ್ಲೂ ನೋಡಲು ಸಿಗಬಹುದು, ಗಮನಿಸ್ತೀರಲ್ಲ. 
ಕನ್ನಡ ಹೆಸರು: ಬಿಜ್ಜು 
ತುಳು ಹೆಸರು: ಪಕ್ಕಿಸಾಲೆ
ಇಂಗ್ಲೀಷ್ ಹೆಸರು: Shikra
ವೈಜ್ಞಾನಿಕ ಹೆಸರು: Accipiter badius
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************


Ads on article

Advertise in articles 1

advertising articles 2

Advertise under the article