-->
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 38

ಬದಲಾಗೋಣವೇ ಪ್ಲೀಸ್.....! ಸಂಚಿಕೆ - 38

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
    
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 38

            ಬದುಕು ಸರಳವಾಗಿರಬೇಕಾದರೆ ......
         ---------------------------------------
     ಬದುಕೆಂಬುದು ಕೆಲವರಿಗೆ ತುಂಬಾ ಸರಳ. ಕೆಲವರಿಗೆ ಸಂಕೀರ್ಣ. ಕೆಲವರಿಗೆ ಗೊಂದಲ. ಯಾವಾಗಲೂ ಬದುಕಿನ ಪ್ರಶ್ನೆಗಳಿಗೆ ಉತ್ತರ ಹುಡುಕಬಾರದು. ಬದುಕು ಇರುವಂತೆ ಸ್ವೀಕರಿಸಬೇಕು. ಬದುಕಿನಲ್ಲಿ ಉದ್ಭವಿಸುವ ಪ್ರತಿಯೊಂದು ಪ್ರಶ್ನೆಗಳಿಗೆ ಉತ್ತರ ಹುಡುಕಾಡುತ್ತಾ ಹೋದರೆ ನಮ್ಮನ್ನು ನಾವು ಕಳೆದುಕೊಳ್ಳಬೇಕಾಗುತ್ತದೆ. ಏಕೆಂದರೆ ಪ್ರಶ್ನೆಗಳಿಗೆ ಅಂತ್ಯವಿಲ್ಲ. ಹುಡುಕಾಟಕ್ಕೆ ಕೊನೆಯಿಲ್ಲ. ಪ್ರಶ್ನೆಗೆ ಉತ್ತರ ಸಿಕ್ಕಿ ನಿರುಮ್ಮಳನಾಗೋ ಹೊತ್ತಿಗೆ ಮತ್ತೊಂದು ಪ್ರಶ್ನೆ ದಿಢೀರನೆ ಹೊಂಚು ಹಾಕಿ ನಮ್ಮನ್ನು ಆಕ್ರಮಿಸುತ್ತದೆ. ಆದುದರಿಂದ ಮೂಡುವ ಪ್ರತಿ ಪ್ರಶ್ನೆಗಳಿಗೆ ಉತ್ತರವಿಲ್ಲದ ಪ್ರಶ್ನೆಯಾಗಿ ನಾವಿರಬೇಕು.
        ಬದುಕೆಂಬುದು ಕೈ ಗಡಿಯಾರ (ವಾಚ್) ಇದ್ದಂತೆ. ಪ್ರತಿಯೊಬ್ಬರು ಅವರವರ ಕೈಗೆ ಹೊಂದಿಕೊಳ್ಳುವ ಗಾತ್ರದ ಕೈಗಡಿಯಾರ ಬಯಸುತ್ತಾರೆ. ಪ್ರತಿಯೊಬ್ಬರ ವಾಚ್ ಬೇರೆ ಬೇರೆ ಸಮಯ ತೋರಿಸುತ್ತದೆ. ಆದರೆ ಪ್ರತಿಯೊಬ್ಬನು ತನ್ನ ಕೈಗಡಿಯಾರ ತೋರಿಸುವ ಸಮಯ ಸರಿಯಾದದ್ದು ಎಂದು ಭಾವಿಸುತ್ತಾರೆ. ಕೆಲವೊಮ್ಮೆ ಅದು ತಪ್ಪು ಸಮಯವನ್ನು ತೋರಿಸಬಹುದು. ಹಾಗಾಗಿ ಸರಿಯಾದ ಸಮಯಕ್ಕೆ ಕೈಗಡಿಯಾರವನ್ನು ಹೊಂದಾಣಿಕೆ ಮಾಡಿ ಮುಂದುವರಿಯಬೇಕಾಗುತ್ತದೆ.
             ಬದುಕು ಸರಳವಾಗಿರಬೇಕಾದರೆ ಇನ್ನೊಂದು ಬದುಕಿನ ಜತೆ ಅನಾರೋಗ್ಯಕರವಾಗಿ ಸ್ಪರ್ಧಿಸುವ ಚಟ ಬಿಡಬೇಕು. ಇನ್ನೊಬ್ಬರ ಜತೆ ಸ್ಪರ್ಧೆಗೆ ನಿಂತರೆ ನಮ್ಮ ಬಾಳು ವ್ಯರ್ಥವಾಗಬಹುದು. ನಮ್ಮ ರೆಕಾರ್ಡ್ ನಾವೇ ಮುರಿಯಬೇಕು. ಅದನ್ನು ಮುರಿಯಲು ನಾವು ನಮ್ಮೊಳಗೆ ಸ್ಪರ್ಧಿಸಬೇಕು. ಆಗ ಸರಳತೆಯಿಂದ ಗೆಲ್ಲಬಹುದು.
           ಬದುಕಿನಲ್ಲಿ ಪ್ರೀತಿಯನ್ನು ಕೂಡಿಸಿದರೆ ಸಂತೋಷ ಕಟ್ಟಿಟ್ಟ ಬುತ್ತಿ. ಬದುಕಿನಲ್ಲಿ ಪ್ರೀತಿಯನ್ನು ಕಳೆದರೆ ದುಃಖ ನಿರಂತರ. ಹಾಗಾಗಿ ಪ್ರೀತಿಯನ್ನು ಕೂಡಿಸುತ್ತಾ ಸದಾ ಪ್ರೀತಿ ಭರಿತರಾಗಿ ಬದುಕೋಣ. ಸಂತೋಷದ ಬದುಕಿಗೆ ಬೇಕಾಗಿರುವುದು ಉತ್ತಮ ಆರೋಗ್ಯ ಮತ್ತು ಶಾಂತ ಮನಸ್ಸು. ಉಳಿದಂತೆ ಆಸ್ತಿ, ಸಂಪತ್ತು, ಅಧಿಕಾರ , ಹಣಗಳೆಲ್ಲ ಹೆಸರಿಗಷ್ಟೇ ಹೊರತು ಅದೇ ಅಂತಿಮವಲ್ಲ. ನಮ್ಮ ದುಃಖಕ್ಕೆ ಮುಖ್ಯ ಕಾರಣ ನಮ್ಮೊಳಗಿನ ಸಂಬಂಧಗಳ ನಡುವೆ ಮೂಡುವ ಅಪಾಯಕಾರಿ ಬಿರುಕುಗಳು. ನಮ್ಮ ಮನೆಯೊಳಗಿನ ಸದಸ್ಯರು , ನಮ್ಮ ಪರಿಸರ , ನಮ್ಮ ಕುಟುಂಬ , ಗೆಳೆಯರ ಬಳಗ , ಕೆಲಸ ಮಾಡುವ ಸ್ಥಳ, ವಿವಿಧ ಕಚೇರಿ.. ಇತ್ಯಾದಿ ಕಡೆ ಅಪನಂಬಿಕೆ ಹಾಗೂ ಸ್ವಾರ್ಥ ಮತ್ತು ಬೇರೆ ಬೇರೆ ಕಾರಣಗಳಿಂದ ಮೂಡುವ ಮನಸ್ತಾಪಗಳೇ ಮುಖ್ಯ ಕಾರಣವಾಗಿದೆ. ಹಾಗಾಗಿ ಸಂಬಂಧಗಳಲ್ಲಿ ಬಿರುಕು ಬಂದ ಕೂಡಲೇ ಕಾರಣವನ್ನು ಕೇಳಿ ತಿಳಿಯೋಣ. ಒಪ್ಪಿಗೆ ಇಲ್ಲದಿದ್ದರೆ ಚರ್ಚಿಸೋಣ. ಇಷ್ಟವಿಲ್ಲದಿದ್ದರೆ ನಯವಾಗಿ ತಿಳಿಸೋಣ. ಆದರೆ ನನ್ನದೇ ಸರಿ ಎನ್ನುವ ವಾದ ಬೇಡ ಮತ್ತು ಅಹಂಕಾರ ಬೇಡ. ಪ್ರಶ್ನಿಸುವುದು ತಪ್ಪಲ್ಲ . ಆದರೆ ಅತಿಯಾಗಿ ಪ್ರಶ್ನಿಸುವುದು ಸರಿಯಲ್ಲ. ಸಂಶಯ ತಪ್ಪಲ್ಲ ಆದರೆ ಅದರೊಳಗೊಂದು ಮಿತಿಯಿರಲಿ.
         ಚಿಲ್ಲರೆಯೇ ತುಂಬಿರುವ ಪರ್ಸ್ ಯಾವಾಗಲೂ ಭಾರ ಹಾಗೂ ಸದಾ ಶಬ್ದವನ್ನು ಮಾಡಿ ಕಿರಿಕಿರಿ ಉಂಟು ಮಾಡುತ್ತದೆ. ಅದೇ ರೀತಿ ಅನಗತ್ಯ ಚಿಲ್ಲರೆ ವಿಚಾರ ತುಂಬಿರುವ ಮನಸ್ಸು ಯಾವಾಗಲೂ ಭಾರ ಹಾಗೂ ನೆಮ್ಮದಿ ರಹಿತವಾಗಿರುತ್ತದೆ. ಅಂಥಹ ಮನಸ್ಸು ತಾನು ಶಾಂತವಾಗಿರದೆ ಇತರರನ್ನು ಶಾಂತವಾಗಿಡಲು ಬಿಡುವುದಿಲ್ಲ. ಸಂತೋಷಕ್ಕೆ ಯಾವುದೇ ಔಷಧಿಯಿಲ್ಲ, ಆದರೆ ಸಂತೋಷಕ್ಕಿಂತ ಮಿಗಿಲಾದ ಬೇರೆ ಔಷಧಿಯಿಲ್ಲ. ಬದುಕಿನಲ್ಲಿ ಆಗಾಗ ಸಂತೋಷವನ್ನು ಅಪ್ ಲೋಡ್ ಮಾಡಬೇಕು. ದುಃಖದ (ಫೈಲ್) ಕಡತ ಆಗಾಗ ಡಿಲಿಟ್ ಮಾಡಬೇಕು. ಬದುಕಿನ ಎಲ್ಲಾ ದಾರಿಗಳನ್ನು ಅಟ್ಲಾಸ್ ತೋರಿಸದಿದ್ದರೂ ಸಂತಸ ಭರಿತ ಮನಸ್ಸು ಮಾತ್ರ ಎಲ್ಲಾ ದಾರಿಯನ್ನು ತೋರಿಸಬಹುದು.
         ಹಂಸವೊಂದು ನೀರಿನ ಮೇಲೆ ಈಜುವಾಗ ನಮಗೆ ಆಶ್ಚರ್ಯವಾಗಬಹುದು. ಅದು ಎಷ್ಟು ಸಲೀಸಾಗಿ ಈಜುತ್ತದೆ ಎಂದು ಅನಿಸಬಹುದು. ಅದರ ಬಾಹ್ಯವಾಗಿ ಕಾಣುವ ಸುಖಕ್ಕೆ ಕಾರಣ ಏನೆಂದರೆ ನೀರಿನಡಿಯಲ್ಲಿ ನಿರಂತರವಾಗಿ ಕ್ರಿಯಾಶೀಲವಾಗಿರುವ ಅದರ ಪಾದದ ಚಲನೆ . ಅದೇ ರೀತಿ ನಿರಂತರ ಕ್ರಿಯಾಶೀಲ ಮನಸ್ಸು ಮಾತ್ರ ಸದಾ ಶಾಂತ ವ್ಯಕ್ತಿತ್ವದ ಮಂದಹಾಸವನ್ನು ತೋರಬಹುದು. ಹಾಗಾಗಿ ಬದುಕಿನಲ್ಲಿ ಸದಾ ಆಂತರಿಕವಾಗಿ ಕ್ರಿಯಾಶೀಲರಾಗೋಣ. ಸಮಸ್ಯೆಗಳು ಬಂದಾಗ ಪ್ರಾಮಾಣಿಕರಾಗೋಣ. ಸಂಪತ್ತು ಬಂದಾಗ ಸರಳವಾಗಿರೋಣ. ಅಧಿಕಾರ ಬಂದಾಗ ವಿನಯರಾಗಿರೋಣ. ಕೋಪ ಬಂದಾಗ ಮೌನಿಯಾಗಿರೋಣ. ಇದೇ ಬದುಕಿನ ನಿರ್ವಹಣೆಯ ಗುಟ್ಟು. ನಿಂತ ಜಾಗದಲ್ಲಿ ನೆಮ್ಮದಿಯ ಬದುಕು ಇಲ್ಲದಿದ್ದರೆ ನಿಂತ ಜಾಗ ಬದಲಾಯಿಸಬೇಕೇ ಹೊರತು ನೆಮ್ಮದಿಯ ಬದುಕನ್ನಲ್ಲ. ಬನ್ನಿ ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ.... ಬದಲಾಗೋಣವೇ ಪ್ಲೀಸ್..! ಏನಂತೀರಿ...?
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************

Ads on article

Advertise in articles 1

advertising articles 2

Advertise under the article