-->
ಪದಗಳ ಆಟ ಭಾವ ಚಿತ್ರ ಪಾತ್ರ : ಸಂಚಿಕೆ - 35

ಪದಗಳ ಆಟ ಭಾವ ಚಿತ್ರ ಪಾತ್ರ : ಸಂಚಿಕೆ - 35

ಪದಗಳ ಆಟ
ಭಾವಚಿತ್ರ
ಪಾತ್ರ
ಸಂಚಿಕೆ - 35


                      ಅ ಮರ ದ ಹಿಂದೆ ಶಿಲ್ಪಿ..
                     ಜ ಕಣ ದ ಹಿಂದೆ ಆಚಾರಿ
       ಶಾಲೆಯಿಂದ ಪ್ರವಾಸ ಹೋಗುವಾಗ ಬೇಲೂರು-ಹಳೇಬೀಡು ಪ್ರವಾಸಿ ಸ್ಥಳಗಳಿಗೆ ಆದ್ಯತೆ. ಕೈಬೀಸಿ ಕರೆವ ಕಲೆಯ ಬಲೆಯ ತಾಣವದು. ಕಂಡಷ್ಟೂ ಮುಗಿಯದ ಬೆರಗು ಅದು. ಕಲಾರಸಿಕರಿಗೆ ಅದೊಂದು ಸ್ವರ್ಗ. ನೋಡಿದಷ್ಟು ಸಲ ಅದ್ಭುತ, ಅದ್ಭುತ ಅನಿಸಿ ಶಿಲ್ಪಿಗಳ ಸೃಷ್ಟಿಕರ್ತ ಅಮರಶಿಲ್ಪಿಯೇ ಸರಿ ಎಂದು ಮೂಗಿನ ಮೇಲೆ ಬೆರಳಿಡುತ್ತಿದ್ದೆವು.
        ಆ ಅಮರಶಿಲ್ಪಿ ಭಾರತೀಯ ಶಿಲ್ಪಕಲೆಯ ದಂತಕಥೆ. ಕೈದಾಳೆ ಹಳ್ಳಿಯಲ್ಲಿ ಹುಟ್ಟಿ ಜೀವನವನ್ನೇ ಶಿಲ್ಪಕಲೆಗಾಗಿ ತ್ಯಾಗ ಮಾಡಿದವನು. ಅದು ನೃಪ ಹಯನ ಆಡಳಿತ ಅವಧಿ. ಅಮರಶಿಲ್ಪಿ ತನ್ನ ವಿವಾಹದ ತರುವಾಯ ಶಿಲ್ಪಕಲಾ ಕ್ಷೇತ್ರದಲ್ಲಿ ಸಾಧನೆಗಾಗಿ ಮನೆಬಿಟ್ಟು ಹೋದ. ದೇಶದ ಉದ್ದಗಲಕ್ಕೆ ತಿರುಗಾಡುತ್ತಾ ಅನೇಕ ದೇವಸ್ಥಾನಗಳನ್ನು ಕಟ್ಟಿದ. ಗುರಿಸಾಧನೆಯಲ್ಲಿ ಅವನಿಗಿದ್ದ ತಲ್ಲೀನತೆ ಶ್ರದ್ಧೆ ತನ್ನ ಪತ್ನಿಯನ್ನೇ ಮರೆಯುವಂತೆ ಮಾಡಿತು. ಆತನ ಮಗ ಡಂಕಣಾಚಾರ್ಯ ಕೂಡ ದೊಡ್ಡ ಶಿಲ್ಪಿ. ಅವನು ಶಿಲ್ಪಕಲೆಯಲ್ಲಿ ಖ್ಯಾತಿಯನ್ನು ಪಡೆದು ತಂದೆಯನ್ನು ಅರಸುತ್ತಾ ಹೊರಟ. ಬೇಲೂರಿನಲ್ಲಿ ತನಗೆ ಅರಿವಿಲ್ಲದೆ ತಂದೆಯ ಜೊತೆಗೆ ಶಿಲ್ಪಕಲೆಯ ಕೆಲಸ ಮಾಡುತ್ತಾ ಇದ್ದಾಗ ಆತನ ಶಿಲ್ಪದಲ್ಲಿ ಒಂದು ದೋಷವನ್ನು ಪತ್ತೆ ಹಚ್ಚಿದ. ನಿರ್ದಿಷ್ಟ ಜಾಗದಲ್ಲಿ ಕಪ್ಪೆ ಇದೆ ಎಂದು ಹೇಳಿದ. ತಂದೆ ಅಮರಶಿಲ್ಪಿಗೆ ಕೋಪ ಬಂತು. ಅದು ಹೌದಾದರೆ ತನ್ನ ಬಲಗೈಯನ್ನು ಛೇದಿಸಿ ಬಿಡುತ್ತೇನೆ ಎಂದು ಶಪಥ ಮಾಡಿದ. ಡಂಕಣ ತಾನು ತೋರಿಸಿದ ಜಾಗದಲ್ಲಿ ಕೆತ್ತಿದಾಗ ಕಪ್ಪೆಯೊಂದು ಹೊರ ಹಾರಿತು. ಶಪಥದಂತೆ ಅಮರಶಿಲ್ಪಿ ತನ್ನ ಕೈಯನ್ನು ತುಂಡರಿಸಿಕೊಂಡ. ಕ್ರಮೇಣ ತಂದೆ-ಮಗ ತಮ್ಮ ಬಾಂಧವ್ಯವನ್ನು ಅರಿತುಕೊಂಡರು. ತನ್ನ ಜನ್ಮಸ್ಥಳದಲ್ಲಿ ಚೆನ್ನಕೇಶವ ದೇವಾಲಯ ಕಟ್ಟುವ ಕನಸು ಪೂರ್ತಿಯಾದ ಮೇಲೆ ಆತನಿಗೆ ಕೈ ಮರಳಿ ಬಂತು ಎಂಬ ಐತಿಹ್ಯ. ಅದರಿಂದಲೇ ಊರು ಕೈದಳವಾಯಿತು ಎನ್ನಲಾಗುತ್ತದೆ.
     ಹೊಯ್ಸಳ ಸಾಮ್ರಾಜ್ಯ ವಿಷ್ಣುವರ್ಧನನ ಕಾಲದಲ್ಲಿ ಬಲಿಷ್ಠ ಸಾಮ್ರಾಜ್ಯವಾಗಿತ್ತು. ವಿಷ್ಣುವರ್ಧನ ಕಲೆ ಮತ್ತು ಶಿಲ್ಪಕಲೆಗೆ ಬಹಳ ಪ್ರೋತ್ಸಾಹ ಕೊಡುತ್ತಿದ್ದ. ಆತನ ರಾಣಿ ಶಾಂತಲಾ ಪ್ರಸಿದ್ಧ ಭರತನಾಟ್ಯ ಪ್ರವೀಣೆ. ಶಿಲ್ಪ ಕಲೆಯ ಮೂಲಕ ನಾಟ್ಯ ಭಂಗಿಗಳು ಸ್ಥಿರವಾಗಿ ಜನಮಾನಸದಲ್ಲಿ ಉಳಿಯಬೇಕು ಎಂಬ ಮಹತ್ವಾಕಾಂಕ್ಷೆಯಿಂದ ದೇವಾಲಯಗಳನ್ನು ಕಟ್ಟಿಸಿ ಪುತ್ಥಳಿಗಳನ್ನು ನಿರ್ಮಿಸುವಂತೆ ನಿರ್ದೇಶನವಿತ್ತಳು. ಬೇಲೂರಿನ ಚೆನ್ನಕೇಶವ ದೇವಾಲಯ ಶಿಲ್ಪಿಗಳ 103 ವರ್ಷಗಳ ಪರಿಶ್ರಮದ ಫಲ. ಇಲ್ಲಿ ದ್ರಾವಿಡ ಮತ್ತು ಆರ್ಯ ಎರಡು ಶೈಲಿಗಳ ಮಿಳಿತ. ಬಸವಣ್ಣ, ಮಧ್ವಾಚಾರ್ಯ, ಆದಿ ಶಂಕರಾಚಾರ್ಯ, ರಾಮಾನುಜಾಚಾರ್ಯ, ಮುಂತಾದವರ ಧಾರ್ಮಿಕ ಸಿದ್ಧಾಂತಗಳು ಅಂದಿನ ಶಿಲ್ಪಕಲೆಗಳ ಮೇಲೆ ಗಾಢವಾದ ಪ್ರಭಾವ ಬೀರಿವೆ. ಕಲಾ ರಸಿಕತೆ ಗೌರವಗಳಿಂದಾಗಿ ಹೊಯ್ಸಳ ಸಮಾಜ ಸುಸಂಸ್ಕೃತವಾಗುತ್ತಾ ಹೋಯಿತು. ಆ ಕಾಲದಲ್ಲಿ ರಾಜಮನೆತನದ ಸ್ತ್ರೀಯರು ರಾಜ್ಯದ ಆಡಳಿತದಲ್ಲೂ ಪಾಲ್ಗೊಳ್ಳುತ್ತಿದ್ದರು. ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದ್ದು ಇದೆ. ಚೆನ್ನಕೇಶವ ದೇವಾಲಯ ಕಟ್ಟಿಸಿದ ನಂತರ ಬೇಲೂರು ರಾಜ ವರ್ಚಸ್ಸನ್ನು ಗಳಿಸಿಕೊಂಡಿತು. ಆ ದೇವಾಲಯಗಳು ಜಾತ್ಯತೀತವಾಗಿ ವಿವಿಧ ರೀತಿಯ ಕಸಬಿನ ಜನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡುತ್ತಿದ್ದವು. ನೆರೆಯ ರಾಜರ ದಾಳಿಯ ಅಪಾಯವಿದ್ದರೂ ದೇವಾಲಯಗಳ ನಿರ್ಮಾಣ ಕಾರ್ಯ ಬಿರುಸಿನಿಂದ ಅವಿರತವಾಗಿ ನಡೆಯುತ್ತಿತ್ತು. ಅಮರಶಿಲ್ಪಿ ಶೈಲಿ ಕರ್ನಾಟಕ ದ್ರಾವಿಡ ಎಂಬ ಹೆಸರಿನ ಅನನ್ಯ ಶೈಲಿಯಾಗಿ ಗುರುತಿಸಲ್ಪಟ್ಟಿತು.
      ಹೊಯ್ಸಳರ ಶಿಲ್ಪಕಲೆಯಲ್ಲಿ ಕುಶಲತೆಗೆ ಪ್ರಾಮುಖ್ಯತೆ ಹೊರತು ಗೋಪುರದ ಎತ್ತರ ಗಾತ್ರಕ್ಕೆ ಇರಲಿಲ್ಲ. ಅಲ್ಲಿ ಸದಾ ನೈಪುಣ್ಯ ಶೀಲ ಕಲೆಗೆ ಒತ್ತು. ಮೃದು ಬಳಪದ ಕಲ್ಲುಗಳನ್ನು ಉಪಯೋಗಿಸಿ ಹಿಂದೂ ಪುರಾಣ ಕಥನ ಪ್ರದಕ್ಷಿಣೆಯ ದಿಕ್ಕಿನಲ್ಲಿ ನಿರೂಪಿತವಾಗಿದೆ.
       ಶಿಲ್ಪಿಯ ಅದ್ಭುತ ಕಲಾಕೌಶಲ್ಯದ ಕುಸುರಿ ಕೆಲಸಗಳ ಶಿಲ್ಪಕಲೆಯಿಂದಾಗಿ ಬೇಲೂರು-ಹಳೇಬೀಡು ಜನಾಕರ್ಷಣೆಯ ಪ್ರವಾಸಿ ತಾಣಗಳಾಗಿ ಅಭಿವೃದ್ಧಿ ಹೊಂದಿದವು. ರಾಜರುಗಳ ಕಲಾ ಪ್ರೀತಿಯನ್ನು ಕಲಾವಿದನ ಪ್ರತಿಭೆ, ಶ್ರದ್ದೆ, ಪರಿಶ್ರಮವನ್ನು ಸಾರಿ ಹೇಳುತ್ತಾ ದೇಶದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಶತಮಾನಗಳಿಗೆ ದಾಟಿಸುತ್ತಾ ಮುಕುಟ ಪ್ರಾಯವಾಗಿ ಮೆರೆಯುತ್ತಿವೆ ಈ ದೇವಾಲಯಗಳು. ಇವುಗಳ ಕಲಾವೈಭವವನ್ನು, ಸೂಕ್ಷ್ಮ ವಿನ್ಯಾಸಗಳನ್ನು, ಮನದಣಿಯೆ ನೋಡಲು ಒಂದೆರಡು ದಿನ ಖಂಡಿತಾ ಸಾಲದು. ಅಮರ ಶಿಲ್ಪಿಯ ಶಿಲ್ಪಗಳು ಇತರ ಶಿಲ್ಪಿಗಳಿಗೆ ಮಾದರಿ ಪ್ರೇರಣೆ. ಕವಿಗಳಿಗೆ ಕಾವ್ಯ ಸೃಷ್ಟಿಗೆ ಸ್ಪೂರ್ತಿ. ನೃತ್ಯಗಾತಿಯರಿಗೆ ಮುದ್ರೆಗಳ, ಭಂಗಿಗಳ ಪ್ರತ್ಯಕ್ಷ ಅಮರ ಮಾದರಿ. ಶಿಲ್ಪಿಯ ಸಮರ್ಪಣಾ ಭಾವದ ಶಿಲ್ಪಕಲಾ ಸಂಸ್ಕಾರ ಶಿಲ್ಪಿಗಳ ಮನೆತನಗಳಿಗೇ ದಾರಿ ದೀವಿಗೆ. ಬ್ರಹ್ಮ ಜೀವಿಗಳಿಗೆ ಆಕಾರ, ರೂಪ ನೀಡಿದರೆ, ಈತ ವಿಗ್ರಹಗಳಿಗೆ, ಶಿಲ್ಪಗಳಿಗೆ , ಗುಡಿ ಗಳಿಗೆ ವಿಶಿಷ್ಟ ರೂಪ ಶೈಲಿಯನ್ನು ನೀಡಿ ಅದರ ಮೂಲಕ ಅಭಿನವ ವಿಶ್ವಕರ್ಮ ಎನಿಸಿಕೊಂಡ.
      ಹೊಯ್ಸಳ ಕಾಲದ ಅನೇಕ ದೇವಾಲಯಗಳಿಗೆ ಅವುಗಳ ಸಿದ್ದಿ ಪ್ರಸಿದ್ಧಿಗೆ ಅಮರಶಿಲ್ಪಿಯ ಕೈಚಳಕ, ಸೃಜನಶೀಲ ಕಾಣ್ಕೆಯೇ ಕಾರಣ. ಇಂತಹ ವಿಶಿಷ್ಟ ಪ್ರತಿಭೆಯ ಸ್ಮರಣಾರ್ಥ ಪ್ರತಿವರ್ಷ ದೇಶದ ಉತ್ಕೃಷ್ಟ ಶಿಲ್ಪ ಕಲಾವಿದನಿಗೆ ಅಮರಶಿಲ್ಪಿ ಪ್ರಶಸ್ತಿ ನೀಡಿ ಸರ್ಕಾರವು ಗೌರವಿಸುತ್ತಿದೆ.
 ಇಂಥವರು ನಿಮ್ಮೊಳಗಿಲ್ಲವೇ .................?
...............................................ಸುಮಾಡ್ಕರ್
ಸ್ವರೂಪ ಅಧ್ಯಯನ ಸಂಸ್ಥೆ 
ಮಂಗಳೂರು
Mob: +91 99016 38372
******************************************

Ads on article

Advertise in articles 1

advertising articles 2

Advertise under the article