-->
ಹಕ್ಕಿ ಕಥೆ : ಸಂಚಿಕೆ - 33

ಹಕ್ಕಿ ಕಥೆ : ಸಂಚಿಕೆ - 33

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ


                       ಹಕ್ಕಿ ಕಥೆ - 33
                   --------------------
         ಮಕ್ಕಳೇ ನಮಸ್ತೇ. ಈ ವಾರದ ಹಕ್ಕಿ ಕಥಗೆ ಸ್ವಾಗತ...... ನಾನು ಮೈಸೂರಿನಲ್ಲಿ ನನ್ನ ಬಿಎಡ್ ಮತ್ತು ಎಂ.ಎಡ್ ಪದವಿ ಮಾಡುತ್ತಿದ್ದ ದಿನಗಳಲ್ಲಿ ಸಂಜೆ ಹೊತ್ತು ಯಾವಾಗಲೂ ಕಲಾಮಂದಿರ ಆವರಣದ ರಂಗಾಯಣಕ್ಕೆ ಬರುವುದು ನನ್ನ ಅಭ್ಯಾಸವಾಗಿತ್ತು. ಅಲ್ಲಿಗೆ ಬಂದು ಚಹಾ ಕುಡಿದು, ನಂತರ ನಾನಿದ್ದ ಹಾಸ್ಟೆಲ್ ಕಡೆಗೆ ಹೋಗುವುದು ನನ್ನ ರೂಢಿಯಾಗಿತ್ತು. ನನ್ನ ಕಾಲೇಜಿನಿಂದ ರಂಗಾಯಣಕ್ಕೆ ಬರುವ ದಾರಿಯಲ್ಲಿ ಕುಕ್ಕರಹಳ್ಳಿ ಎಂಬ ಹಳ್ಳಿ ಸಿಗುತ್ತಿತ್ತು. ಅಲ್ಲೊಂದು ವಿಶಾಲವಾದ ಕೆರೆ. ಆ ಕೆರೆ ಎಷ್ಟು ವಿಶಾಲವಾಗಿತ್ತೆಂದರೆ ಅದರ ಸುತ್ತಲೂ ಕಟ್ಟಿದ ಏರಿಯ ಮೇಲೆ ಕೆರೆಗೆ ಒಂದು ಸುತ್ತು ಬರಬೇಕಾದರೆ ಸುಮಾರು ನಾಲ್ಕು ಕಿಲೋಮೀಟರ್ ನಡೆಯಬೇಕಾಗಿತ್ತು. ಬೆಳಗ್ಗೆ ಮತ್ತು ಸಂಜೆ ಅಲ್ಲಿ ವಾಕಿಂಗ್ ಮತ್ತು ಜಾಗಿಂಗ್ ಮಾಡಲೆಂದೇ ನೂರಾರು ಜನ ಬರುತ್ತಿದ್ದರು.  ಆ ವಿಶಾಲವಾದ ಕುಕ್ಕರಹಳ್ಳಿಯ ಕೆರೆಯಲ್ಲಿ ಹಲವಾರು ಬಗೆಯ ಪಕ್ಷಿಗಳು ವಾಸವಾಗಿರುತ್ತಿದ್ದವು. ಕೆಲವು ಕೆರೆಯ ನಡುವೆ ಈಜುತ್ತಿದ್ದವು, ಕೆಲವು ಕೆರೆಯ ಮೇಲೆ ಹಾರುತ್ತಾ ಆಹಾರ ಹುಡುಕುತ್ತಿದ್ದವು, ಕೆಲವು ಕೆರೆಯ ಅಂಚಿನಲ್ಲಿ ನಡೆದಾಡುತ್ತಾ ತಮ್ಮ ಆಹಾರ ಪಡೆಯುತ್ತಿದ್ದವು, ಇನ್ನು ಕೆಲವು ಕೆರೆಯ ನಡುವೆ ಇದ್ದ ಮರಗಳಲ್ಲಿ ಗೂಡುಮಾಡಿಕೊಂಡು ಸಂತಾನಾಭಿವೃದ್ಧಿ ಮಾಡುತ್ತಿದ್ದವು. ಹೀಗೆ ಕೆರೆ ಎಂಬ ಸುಂದರ ಪರಿಸರ ವ್ಯವಸ್ಥೆ ನೂರಾರು ಹಕ್ಕಿಗಳಿಗೆ ಆಹಾರ ಮತ್ತು ಆಶ್ರಯ ನೀಡುತ್ತಿತ್ತು. ನನ್ನ ಕಾಲೇಜು ಜೀವನ ಮುಗಿದು ನನಗೆ ಬೇರೆ ಊರಿನಲ್ಲಿ ಕೆಲಸ ಸಿಕ್ಕಿದರೂ ಮೈಸೂರಿನ ನಂಟು ಬಿಟ್ಟಿರಲಿಲ್ಲ. ಪಕ್ಷಿವೀಕ್ಷಣೆಯ ಹವ್ಯಾಸ ಪ್ರಾರಂಭವಾದ ನಂತರ ಮೈಸೂರಿಗೆ ಹೋದಾಗಲೆಲ್ಲ ನನ್ನ ಕ್ಯಾಮರಾ ತಪ್ಪದೇ ತೆಗೆದುಕೊಂಡು ಹೋಗುತ್ತಿದ್ದೆ. ಕುಕ್ಕರಹಳ್ಳಿಯ ಕೆರೆಯ ದಂಡೆಯ ಮೇಲೆ ವಾಕಿಂಗ್ ಹೋಗಿ ಹಕ್ಕಿಗಳ ಫೋಟೋ ತೆಗೆಯಲು ಪ್ರಯತ್ನಿಸುತ್ತಿದ್ದೆ. ಹಕ್ಕಿಗಳ ಕಡೆಗೆ ಕ್ಯಾಮರಾ ಹಿಡಿದರೆ ಅವುಗಳು ದೊಡ್ಡ ಬಂದೂಕು ಹಿಡಿದಿದ್ದಾರೆ ಎಂಬಂತೆ ಹೆದರಿ ತಕ್ಷಣ ಅಲ್ಲಿಂದ ಹಾರಿ ಹೋಗುತ್ತಿದ್ದವು. ಹಕ್ಕಿಗಳ ಫೋಟೋ ತೆಗೆಯಲು ಕೆರೆಯ ಬದಿಯಲ್ಲಿ ಒಂದಷ್ಟು ಹೊತ್ತು ಅಲುಗಾಡದೇ ಕಲ್ಲಿನಂತೆ ಕುಳಿತಿರಬೇಕಾಗುತ್ತಿತ್ತು. ಹೀಗೆ ಕುಳಿತು ಕಾಯುತ್ತಿರುವಾಗ ಒಮ್ಮೆ ಈ ಹಕ್ಕಿ ನೋಡಲು ಸಿಕ್ಕಿತು.
            ಚಪ್ಪಟೆಯಾದ ಕೊಕ್ಕು, ದುಂಡಗಿನ ದೇಹ, ಕಾಲಿನಲ್ಲಿ ಜಾಲಪಾದ, ಚೂಪಾದ ತುದಿಯ ಬಾಲ ಇವುಗಳೆಲ್ಲ ಬಾತುಕೋಳಿಯ ಲಕ್ಷಣಗಳು. ಬಾತುಕೋಳಿ ಬಗ್ಗೆ ನಾವೆಲ್ಲಾ ಕೇಳಿದ್ದೇವೆ. ಬಾತುಕೋಳಿಗಳಲ್ಲಿ ನೂರಾರು ವಿಧಗಳಿವೆ. ಕೆಲವು ಬಾತುಕೋಳಿಗಳನ್ನು ಮೊಟ್ಟೆಗಾಗಿ ಸಾಕುತ್ತಾರೆ ಕೂಡ. ಬಾತುಕೋಳಿಗಳಿಗೆ ಇರುವ ಮುಖ್ಯವಾದ ಒಂದು ಸಾಮರ್ಥ್ಯ ಅವುಗಳನ್ನು ಇತರ ನೀರಿನ ಪಕ್ಷಿಗಳಿಗಿಂತ ವಿಭಿನ್ನವಾಗಿಸುತ್ತವೆ.
         ಎಲ್ಲಾ ಜಾತಿಯ ಬಾತುಕೋಳಿಗಳು ನೀರಿನಲ್ಲಿ ಈಜಬಲ್ಲವು. ನೀರಿನ ಮಧ್ಯೆ ಇರುವ ಜಲಸಸ್ಯಗಳು ಬಾತುಕೋಳಿಗಳ ಮುಖ್ಯ ಆಹಾರ. ಕೆಲವೊಮ್ಮೆ ಸಣ್ಣಪುಟ್ಟ ಮೀನುಗಳನ್ನೂ ಇವು ಹಿಡಿದು ತಿನ್ನುತ್ತವಂತೆ. ನೀರಿನಲ್ಲಿ ತೇಲಿಕೊಂಡು ಅಥವಾ ಮುಳುಗಿಕೊಂಡು ಇದ್ದರೂ ಬಾತುಕೋಳಿಯ ಗರಿಗಳು ನೀರನ್ನು ಹೀರಿಕೊಳ್ಳುವುದಿಲ್ಲ. ಹಾಗಾಗಿ ಇವುಗಳ ದೇಹ ನೀರಿನಲ್ಲಿದ್ದರೂ ಒದ್ದೆಯಾಗುವುದಿಲ್ಲ. ಇದೇ ಕಾರಣಕ್ಕೆ ಅಪಾಯ ಎದುರಾದರೆ ಅವುಗಳು ತಕ್ಷಣ ನೀರಿನಿಂದಲೇ ಹಾರಿಹೋಗಬಲ್ಲವು. ನೀರುಕಾಗೆಗಳು ಮತ್ತು ಹಾವಕ್ಕಿಗಳಿಗೆ ಈ ಸಾಮರ್ಥ್ಯ ಇಲ್ಲ. ಕೊಕ್ಕರೆಯಂತಹ ಪಕ್ಷಿಗಳು ಉದ್ದನೆಯ ಕಾಲುಗಳಿಂದ ತಮ್ಮ ದೇಹ ನೀರಿನಿಂದ ಒದ್ದೆಯಾಗುವುದನ್ನು ತಪ್ಪಿಸಿಕೊಳ್ಳುತ್ತವೆ. ಹೀಗೆ ನೀರಿನಲ್ಲಿದ್ದೂ ನೀರಿಗೆ ಅಂಟಿಕೊಳ್ಳದೆ ಇರುವ ಬಾತುಕೋಳಿಗಳ ಬದುಕು ಬಹಳ ವಿಶಿಷ್ಟವಾದದ್ದು. ಕೆಲವು ಜಾತಿಯ ಬಾತುಕೋಳಿಗಳು ಸಾವಿರಾರು ಮೈಲಿ ದೂರದಿಂದ ದಕ್ಷಿಣ ಭಾರತಕ್ಕೆ ವಲಸೆ ಬರುತ್ತವೆ. ಈ ಬಗ್ಗೆ ಪತ್ರಿಕೆಗಳಲ್ಲಿ ನೀವು ಓದಿರಬಹುದು. ಹೀಗೆ ಬಾತುಕೋಳಿಗಳ ಬದುಕು ಒಂದು ರೋಚಕ ಅಧ್ಯಯನವೇ ಸರಿ. 
             ಈ ಬಾರಿ ನಾನು ನಿಮಗೆ ಪರಿಚಯಿಸಿದ ಬಾತುಕೋಳಿಯ ಕೊಕ್ಕಿನ ತುದಿ ಹಳದಿ ಬಣ್ಣದಲ್ಲಿ ಅದ್ದಿದ ಹಾಗೆ ಕಾಣುತ್ತದೆ ಹಾಗಾಗಿ ಇದರ
ಕನ್ನಡ ಹೆಸರು: ದಾಸ ಗೋರೆ, ವರಟೆ
ಇಂಗ್ಲೀಷ್ ಹೆಸರು: Spot-billed Duck
ವೈಜ್ಞಾನಿಕ ಹೆಸರು: Anas poecilorhyncha
ಛಾಯಾಚಿತ್ರ : ಅರವಿಂದ ಕುಡ್ಲ
            ಕೆರೆ ಎಂಬ ಪರಿಸರ ವ್ಯವಸ್ಥೆ ಹಲವು ಜೀವಿಗಳಿಗೆ ಜೀವನಾಧಾರ. ಅಂತರ್ಜಲ ಹೆಚ್ಚಲೂ ಕೆರೆಗಳು ಸಹಕಾರಿ. ಸಾವಿರ ಅಡಿ ಬೋರ್ ವೆಲ್ ತೆಗೆದರೂ ನೀರು ಸಿಗುತ್ತಿಲ್ಲ ಎಂಬ ಈ ಕಾಲದಲ್ಲಿ, ಅಂತರ್ಜಲ ಹೆಚ್ಚಿಸಲು ಮತ್ತು ವಿಧ ವಿಧವಾದ ಬಾತುಕೋಳಿಗಳನ್ನು ನೋಡಲಿಕ್ಕಾದರೂ ನಾವು ನಮ್ಮ ಊರಿನ ಕೆರೆಗಳನ್ನು ಉಳಿಸಿಕೊಳ್ಳಬೇಕು. ಅಲ್ಲವೇ............?
ಮುಂದಿನ ವಾರ ಇನ್ನೊಂದು ಹಕ್ಕಿಯ ಪರಿಚಯದ ಜೊತೆ ಸಿಗೋಣ, ನಮಸ್ಕಾರ
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
+91 98448 98124
*********************************************


Ads on article

Advertise in articles 1

advertising articles 2

Advertise under the article