-->
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 32

ಬದಲಾಗೋಣವೇ ಪ್ಲೀಸ್.....! ಸಂಚಿಕೆ - 32

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
    

  ಬದಲಾಗೋಣವೇ ಪ್ಲೀಸ್.....! ಸಂಚಿಕೆ - 32
------------------------------------------------
          ಬಾಳ ನೌಕೆಯ ಪಯಣದಲ್ಲಿ ತನ್ನ ಬಂಧು - ಬಳಗ , ಸ್ನೇಹ ವಲಯಕ್ಕೆ ಇಷ್ಟವಾಗಲಿಲ್ಲ ಎಂದು ಬೇಸತ್ತು ಅದೊಂದು ದುರ್ಬಲ ಗಳಿಗೆಯಲ್ಲಿ ಐಶ್ವರ್ಯ ತನ್ನನ್ನು ತಾನು ಭಾರವೆಂದು ನಿಷ್ಟ್ರಯೋಜಕಿ ಎಂದು ಭಾವಿಸಿ ನಿರಾಶಾ ಲೋಕಕ್ಕೆ ಹೋದಳು. ಕೊನೆಗೊಂದು ಕಠಿಣ ನಿರ್ಧಾರಕ್ಕೆ ಬಂದು ಸಾಯುವ ಮುನ್ನ ಅಮ್ಮನಿಗೊಂದು ಸೀರೆಯನ್ನು ಕೊಟ್ಟು ಸಾಯಬೇಕು ಎಂದು ಭಾವಿಸಿ ಬಟ್ಟೆಯಂಗಡಿಗೆ ಹೋಗುತ್ತಾಳೆ. ಬಟ್ಟೆಯಂಗಡಿಯಲ್ಲಿ ಕೆಲಸದಾಕೆ (ಸೇಲ್ಸ್ ಗರ್ಲ್) ಬಣ್ಣ ಬಣ್ಣದ ಬಹು ವಿನ್ಯಾಸದ ಹತ್ತಾರು ಸೀರೆಗಳನ್ನು ರಾಶಿ ಹಾಕುತ್ತಾಳೆ. ಆದರೆ ಐಶ್ವರ್ಯಳಿಗೆ ಅದ್ಯಾವುದೂ ಇಷ್ಟವಾಗದೆ ಇನ್ನೊಂದು ಸೀರೆಯನ್ನು ತೋರಿಸಲು ಹೇಳುತ್ತಾಳೆ. ಅಷ್ಟು ಹೊತ್ತಿಗೆ ಅದೇ ಸೀರೆ ಕೌಂಟರ್ ಗೆ ಬಂದ ಮಹಿಳೆಯೊಬ್ಬಳು ಐಶ್ವರ್ಯ ಆಯ್ಕೆ ಮಾಡದೆ ಬಿಟ್ಟ ರಾಶಿಯಿಂದ 4 ಸೀರೆಗಳನ್ನು ಆಯ್ಕೆ ಮಾಡಿ ಖರೀದಿಸುತ್ತಾಳೆ. ಆಗ ಅಚ್ಚರಿಗೊಂಡ ಐಶ್ವರ್ಯಳು "ನನಗೆ ಇಷ್ಟವಾಗದ ಸೀರೆ ಅವಳಿಗ್ಯಾಕೆ ಇಷ್ಟವಾಯಿತು" ಎಂದು ಸೇಲ್ಸ್ ಗರ್ಲ್ ನಲ್ಲಿ ಕೇಳುತ್ತಾಳೆ. ಅದಕ್ಕೆ ಸೇಲ್ಸ್ ಗರ್ಲ್ "ನಮ್ಮ ಬಟ್ಟೆಯಂಗಡಿಗೆ ದಿನಾಲೂ ನೂರಾರು ತರಹದ ಸೀರೆಗಳು ಬರುತ್ತವೆ. ಒಬ್ಬರಿಗೆ ಇಷ್ಟವಾಗದ ಸೀರೆ ಇನ್ನೊಬ್ಬರಿಗೆ ಇಷ್ಟವಾಗುತ್ತದೆ. ಒಬ್ಬರು ನಿರಾಕರಿಸಿದ ಸೀರೆಯನ್ನು ಇನ್ನೊಬ್ಬರು ನಗುಮುಖದಿಂದ ಖರೀದಿಸುತ್ತಾರೆ. ನನ್ನ ಇಲ್ಲಿಯವರೆಗಿನ ಅನುಭವದಲ್ಲಿ ಈವರೆಗೆ ಯಾವುದೇ ಸೀರೆ ಮಾರಾಟವಾಗದೆ ಉಳಿದಿಲ್ಲ. ಪ್ರತಿಯೊಂದು ಸೀರೆಗೂ ಅದರದ್ದೇ ಆದ ಮೌಲ್ಯ ಈ ಅಂಗಡಿಯಲ್ಲಿ ಇದೆ" ಎಂದಳು. ತಕ್ಷಣವೇ ಐಶ್ವರ್ಯಳಿಗೆ ತನ್ನ ನಿರಾಶೆಯ ಕಾರ್ಮೋಡ ಸರಿದು ಬೆಳಕಿನ ಕಿರಣ ಗೋಚರಿಸಿತು. "ಈ ಲೋಕದಂಗಡಿಯಲ್ಲಿ ಕೆಲವರು ನನ್ನನ್ನು ತಿರಸ್ಕರಿಸಿದರೂ ಕೆಲವರಾದರೂ ಇಷ್ಟಪಡುವವರಿದ್ದಾರೆ. ತಾನು ನಿಷ್ಟ್ರಯೋಜಕಿಯಲ್ಲ. ನನ್ನ ಬದುಕಿಗೂ ಬೆಲೆ ಇದೆ. ಇಲ್ಲಿ ಸಲ್ಲದಿದ್ದರೂ ಸಾಧಿಸಿದರೆ ಇನ್ನೊಂದೆಡೆ ಖಂಡಿತಾ ಸಲ್ಲುವೆನು" ಎಂಬ ಧೈರ್ಯ ಚಿಗುರೊಡೆಯಿತು. ತಾನು ತಿರಸ್ಕರಿಸಿದ ಸೀರೆಗಳ ರಾಶಿಯಿಂದ 4 ಸೀರೆ ತಗೊಂಡು ಹೊಸ ಬದುಕಿನ ಹಾದಿಗೆ ಹೆಜ್ಜೆ ಹಾಕಿದಳು.
          ಐಶ್ವರ್ಯಳಂತೆ ಯಾರಿಗೂ ಬೇಡವಾದವಳು, ಕೆಲಸಕ್ಕೆ ಬಾರದವಳು... ಯಾರೂ ನನ್ನನು ಪ್ರೀತಿಸುವುದಿಲ್ಲ.... ಹಚ್ಚಿಕೊಳ್ಳುವುದಿಲ್ಲ... ನಾನು ಭಾರವಾಗಿದ್ದೇನೆ... ನಿಷ್ಟ್ರಯೋಜಕಿ... ಎಂದು ಭಾವಿಸಿ ಬದುಕನ್ನು ತೊರೆಯುವ ನಿರ್ಧಾರಕ್ಕೆ ಬರುತ್ತೇವೆ. ಆದರೆ ನಾವು ಬದುಕಿನ ಇನ್ನೊಂದು ಮಜಲನ್ನು ನೋಡಬೇಕಿದೆ. ನಾವು ನಮ್ಮ ಮನೆಗೆ ಸಮಾಜಕ್ಕೆ ಬೇಡವಾಗಿರಬಹುದು. ಆದರೆ ನಮ್ಮನ್ನು ಇಷ್ಟಪಡುವ ಇನ್ನೊಂದು ಮನೆ ಮತ್ತು ಸಮಾಜ ಇರಬಹುದು. ನಾವು ಸಲ್ಲುವ ಇನ್ನೊಂದು ಪರಿಸರ ಇದ್ದೇ ಇರುತ್ತದೆ. ಮನೆಯವರು ಕೈ ಬಿಟ್ಟರೆ ನೆರೆಕರೆ ಕೈ ಹಿಡಿಯಬಹುದು. ನೆರೆಕರೆ ಕೈ ಬಿಟ್ಟರೆ ಹೊಸ ಊರು ಕೈಹಿಡಿಯಬಹದು. ಗೆಳೆಯರು ಕೈಕೊಟ್ಟರೆ ಪುಸ್ತಕ ಕೈ ಹಿಡಿಯಬಹುದು. ವ್ಯಾಪಾರ ಕೈಕೊಟ್ಟರೆ ಕೃಷಿ ಕೈಹಿಡಿಯಬಹುದು. ಒಂದು ಸಾಧನೆಯ ಕ್ಷೇತ್ರ ಕೈಕೊಟ್ಟರೆ ಇನ್ನೊಂದು ಕ್ಷೇತ್ರ ಕೈ ಹಿಡಿಯಬಹುದು. ಆದರೆ ಆ ಹೊಸ ಕ್ಷೇತ್ರವನ್ನು ಹುಡುಕುವುದು ಹಾಗೂ ಅದರತ್ತ ಸಂಪೂರ್ಣ ಪ್ರಯತ್ನ ಹಾಕುವ ಕೆಲಸ ನಮ್ಮದಾಗಬೇಕು. ಕತ್ತಲೆ ಕೋಣೆಯೊಳಗೆ ಒಬ್ಬನೇ ಕುಳಿತು "ಅಯ್ಯೋ ಕತ್ತಲೆ... ಕತ್ತಲೆ" ಎಂದು ಧೃತಿಗೆಡುವ ಮುನ್ನ ಬೆಳಕಿನ ಹಣತೆಯನ್ನಾದರೂ ಹಚ್ಚುವ ಪ್ರಯತ್ನ ಮಾಡಬೇಕು. ಈ ಲೋಕದಲ್ಲಿ ಯಾರೂ ನಿಷ್ಟ್ರಯೋಜಕರಲ್ಲ. ಯಾರೂ ಪ್ರತಿಭಾಹೀನರಲ್ಲ. ಯಾರೂ ಝೀರೋಗಳಲ್ಲ. ಪ್ರಯತ್ನಿಸಿದರೆ ಎಲ್ಲರೂ ಹೀರೋಗಳೇ.
       ಬಡವರ್ಗದಲ್ಲಿ ಜನಿಸಿ ಜಗತ್ತಿಗೆ ಸಿರಿವಂತರಾದವರ ಕಥೆ ನಮ್ಮೆದುರು ಇದೆ. ಅಂಗ ಊನತೆಯಿದ್ದರೂ ಗಿನ್ನಿಸ್ ದಾಖಲೆ ದಾಖಲಿಸಿದವರು ಇದ್ದಾರೆ. ಪರೀಕ್ಷೆಯಲ್ಲಿ ಫೇಲಾದರೂ ಬದುಕಿನಲ್ಲಿ ಪವಾಡ ಮಾಡಿದವರು ಇದ್ದಾರೆ. ಸೋತು ಸುಣ್ಣವಾದರೂ ಗೆಲುವಿನ ಶಿಖರವನ್ನು ಏರಿದವರು ಇದ್ದಾರೆ. ನಮಗೆ ಅನುಪಯುಕ್ತವಾದ ಕಬ್ಬಿಣ , ಪ್ಲಾಸ್ಟಿಕ್, ಕಾಗದ... ಇತ್ಯಾದಿ ತ್ಯಾಜಗಳನ್ನೇ ಸಂಪನ್ಮೂಲವನ್ನಾಗಿ ಪರಿವರ್ತಿಸಿದ ಸಾಧಕರಿದ್ದಾರೆ. ನೀರಿಲ್ಲದ ಊರಲ್ಲಿ ನೀರು ಹರಿಸಿದ ಆಧುನಿಕ ಭಗೀರಥ ಮಹಾಲಿಂಗ ನಾಯ್ಕ್ ... ಕಿತ್ತಳೆ ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬ... ಸಾಲುಮರ ನೆಟ್ಟು ಸಾಧನೆಗೈದ ತಿಮ್ಮಕ್ಕ... ಹೀಗೆ ಸೋಲಿನ ಹಾದಿಯಿಂದ ಗೆಲುವಿನ ಪತಾಕೆ ಹಾರಿಸಿದ ನೂರಾರು ಸಾಧಕರು ನಮ್ಮ ನಿರಾಶೆಗಳಿಗೆ ಉತ್ತರವಾಗಿದ್ದಾರೆ.
        ಹಲ್ಲು ನೋವಿಗೆ ಜ್ವರದ ಕಷಾಯ ಮದ್ದಲ್ಲ. ಬಲಿಷ್ಠ ಕಟ್ಟಡದ ದುರಂತಕ್ಕೆ ದುರ್ಬಲ ಅಡಿಪಾಯ ಕಾರಣವಲ್ಲ. ಹಾಗೇ ನಮ್ಮ ದುರ್ಬಲತೆಗೆ ಇನ್ನೊಬ್ಬರು ಕಾರಣರಲ್ಲ. ಇನ್ನೊಬ್ಬರಲ್ಲಿ ಪರಿಹಾರ ಕಾಣಲು ಸಾಧ್ಯವಿಲ್ಲ. ನಮ್ಮ ದುರ್ಬಲತೆಗೆ ನಾವೇ ಕಾರಣರು ಹಾಗೂ ನಾವೇ ಉತ್ತರ. ನನ್ನ ಕಥೆ ನಾನೇ ಬರೆಯುವವರೆಗೆ ಯಾರೂ ಅದನ್ನು ಓದಲ್ಲ. ಹಾಗಾಗಿ ಸೋತರೂ ಗೆಲ್ಲುವ ಛಲವಿರಲಿ. ಸೋತು ಗೆಲುವಿನ ಹಾದಿಗೆ ತೆರಳುವ ಪಥವ ತಿಳಿಯೋಣ. ಸೋಲು ಸೋಲಲ್ಲ. ಸೋತರೂ ಮೇಲೆ ಏಳದಿರುವುದೇ ನಿಜವಾದ ಸೋಲು. ಬನ್ನಿ ಸೋಲಿನಿಂದ ಗೆಲುವ ಪಾಠವ ಕಲಿಯಲು ಮತ್ತು ಕಲಿಸಲು ಬದಲಾಗೋಣ. ಬನ್ನಿ ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ.... ಬದಲಾಗೋಣವೇ ಪ್ಲೀಸ್..! ಏನಂತೀರಿ...?
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************


Ads on article

Advertise in articles 1

advertising articles 2

Advertise under the article