
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 33
Wednesday, February 16, 2022
Edit
ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 33
ಐ ವಾಂಟ್ ಪೀಸ್.... ಪ್ಲೀಸ್.....!
-------------------------------------
ಬದುಕಿನಲ್ಲಿ ಶಾಂತಿಯನ್ನು ಅರಸುತ್ತಾ ದೇಶ ವಿದೇಶಗಳನ್ನು ಸಂಚರಿಸಿದ ವಿದೇಶಿಗನೊಬ್ಬ ಕೊನೆಗೂ ಶಾಂತಿ ಲಭಿಸದೆ ವಿಚಲಿತನಾಗಿ ರಮಣ ಮಹರ್ಷಿಗಳ ಆಶ್ರಮಕ್ಕೆ ಬರುತ್ತಾನೆ. ಅವರನ್ನು ಭೇಟಿಯಾಗಿ ಕುಶಲೋಪಚಾರದ ನಂತರ "ಐ ವಾಂಟ್ ಪೀಸ್ ಇನ್ ಲೈಫ್.... ಪ್ಲೀಸ್ (ನನಗೆ ಬದುಕಿನಲ್ಲಿ ಶಾಂತಿ ಬೇಕು)" ಎಂದನಂತೆ. ಅವನ ಮಾತು ಹಾಗೂ ತುಡಿತ ಅರಿತ ಮಹರ್ಷಿಗಳು ಸಮಚಿತ್ತ ಪ್ರಜ್ಞೆಯಲ್ಲಿ "ನಿನಗೆ ಈಗಲೇ ಬದುಕಿನಲ್ಲಿ ಶಾಂತಿ ದೊರಕುವಂತೆ ಮಾಡುತ್ತೇನೆ. ಅದಕ್ಕೆ ನೀನು ಈಗಾಗಲೇ ಹೇಳಿರುವ 'ಐ ವಾಂಟ್ ಪೀಸ್ ಇನ್ ಲೈಫ್' ನಲ್ಲಿ ಮೊದಲ ಪದ ಬಿಟ್ಟು ಉಳಿದೆರಡನ್ನು ಪುನರುಚ್ಚರಿಸು ಎಂದರು. ಆಗ ಆತ ' ಐ ' ಎಂಬುದನ್ನು ಬಿಟ್ಟು ಉಳಿದಿರುವ 'ವಾಂಟ್ ಪೀಸ್ ಇನ್ ಲೈಫ್
( ಬದುಕಿನಲ್ಲಿ ಶಾಂತಿ ಬೇಕು) ' ಎಂದ. ಈಗ ಮಹರ್ಷಿಗಳು ಉಳಿದಿರುವ ವಾಕ್ಯದಲ್ಲಿ ಮೊದಲ ಪದ ಬಿಟ್ಟು ಕೊನೆಯ ಪದವನ್ನು 3 ಬಾರಿ ಉಚ್ಚರಿಸು ಎಂದರು. ಆಗ ಆತ 'ವಾಂಟ್ ' ಪದವನ್ನು ಬಿಟ್ಟು ಉಳಿದಿರುವ "ಪೀಸ್ ಇನ್ ಲೈಫ್.. ಪೀಸ್ ಇನ್ ಲೈಫ್.. ಪೀಸ್ ಇನ್ ಲೈಫ್.." ಎಂದು 3 ಬಾರಿ ಹೇಳಿದನಂತೆ. ಆಗ ಮಹರ್ಷಿಗಳು "ನಿನಗೆ ಈಗ ಶಾಂತಿ ಸಿಕ್ಕಿದೆ. ನೀನಿನ್ನು ಹೋಗಬಹುದು " ಎಂದರಂತೆ. ಆದರೆ ಗಲಿಬಿಲಿಗೊಂಡ ವಿದೇಶಿಗ "ಎಲ್ಲಿದೆ ಶಾಂತಿ ? " ಎಂದ. ಆಗ ಮಹರ್ಷಿಗಳು "ಯಾವಾಗ ' ಐ ವಾಂಟ್ ಪೀಸ್ ' ಎಂಬಲ್ಲಿ ನಾವು ಐ (ನಾನು) ಮತ್ತು ವಾಂಟ್ (ಆಶೆ) ಎಂಬುದನ್ನು ಬಿಡುತ್ತೇವೆಯೋ ಆಗ ಪೀಸ್ ಇನ್ ಲೈಫ್ (ಬದುಕಿನಲ್ಲಿ ಶಾಂತಿ) ತನ್ನಿಂದ ತಾನಾಗಿ ಸಿಗುತ್ತದೆ " ಎಂದರಂತೆ. ವಿದೇಶಿಗನಿಗೆ ಅರ್ಥವಾಯಿತು. ಬದುಕಿನಲ್ಲಿ ಶಾಂತಿ ಪಡೆಯುವ ದಾರಿ ತಿಳಿದ.
ಹೌದಲ್ಲವೇ , ಅಬ್ಬಾ ! ಶಾಂತಿಯ ಮಂತ್ರ ಎಷ್ಟು ಸರಳವಲ್ಲವೇ ?. ನಾನು, ನನ್ನಿಂದ, ನನ್ನದು ಎಂಬುದು ಶೂನ್ಯವಾಗಿರಲಿ. ನಾನೇ ಹುಟ್ಟಿಸಿದೆ... ಸೃಷ್ಟಿಸಿದೆ... ಕಟ್ಟಿಸಿದೆ... ಮಾಡಿಸಿದೆ... ಸಾಧಿಸಿದೆ... ನಾನಿಲ್ಲದೆ ಏನೂ ನಡೆಯೊಲ್ಲ... ನನ್ನಿಂದಲೇ ಎಲ್ಲಾ..... ಎಂಬಿತ್ಯಾದಿ ಜಂಭದ ಭಾವ ಎಲ್ಲಿಯವರೆಗೆ ನಮ್ಮಿಂದ ಬಿಟ್ಟು ಹೋಗುವುದಿಲ್ಲವೋ ಅಲ್ಲಿಯವರೆಗೆ ಬದುಕಿನಲ್ಲಿ ಶಾಂತಿ ಸಿಗುವುದು ಕಷ್ಟ.
ಆಶೆಗಳಲ್ಲಿ (wants) ಮಿತಿ ಇರದಿದ್ದರೆ ಶಾಂತಿ ಲಭಿಸದು. ಬದುಕಿನಲ್ಲಿ ಆಶೆ ಬೇಕು. ಹೇಗೆಂದರೆ ಅಡಿಗೆಯಲ್ಲಿ ಉಪ್ಪಿದ್ದಂತೆ. ಅತಿಯಾಸೆ ಯಾವಾಗಲೂ ದುಃಖಕ್ಕೆ ಮೂಲ. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಗಾದೆಮಾತು ಈಗಲೂ ಪ್ರಚಲಿತವಿರುವುದು ಇದರ ಸಾರ್ವಕಾಲಿಕ ಮೌಲ್ಯವನ್ನು ತೋರಿಸುತ್ತದೆ. ಚಿನ್ನದ ಮೊಟ್ಟೆಯಿಡುವ ಬಾತುಕೋಳಿಯ ಕಥೆಯಂತೆ ಅತಿಯಾಸೆ ಪಟ್ಟರೆ ಇದ್ದದ್ದೂ ಇಲ್ಲದಾಗುವುದು. ಅದೇ ರೀತಿ ನಮ್ಮ ಮನೆ ನಿರ್ಮಾಣ, ಹಬ್ಬಗಳ ಆಚರಣೆ, ಮದುವೆ , ಪೂಜೆ , ಹುಟ್ಟುಹಬ್ಬ ಇತ್ಯಾದಿ ಅನೇಕ ಕಾರ್ಯಕ್ರಮಗಳ ಖರ್ಚಿನಲ್ಲಿ ನೆರೆಹೊರೆ ಅಥವಾ ಸಂಬಂಧಿಕರ ಜತೆ ಪ್ರತಿಷ್ಠೆ (ಸ್ಟೇಟಸ್) ಗಾಗಿ ಪ್ರತಿಯೊಂದರಲ್ಲೂ ಪೈಪೋಟಿ ಕೊಟ್ಟರೆ ಕಷ್ಟಗಳು ಕೂಡಾ ಒಂದರ ಹಿಂದೆ ಒಂದರಂತೆ ಹಿಂಬಾಲಿಸುತ್ತಾ ಬರುತ್ತದೆ. ನಾವು ಪೈಪೋಟಿ ಮಾಡುವುದಿದ್ದರೆ ಶಾಂತ ಬದುಕಿಗಾಗಿ... ಸಮಾಜ ಪೂರಕ ಹೊಸತರ ಸೃಷ್ಟಿಗಾಗಿ... ಬದಲಾವಣೆಗಾಗಿ ನಡೆಸೋಣ. ನಾವು ನೆಮ್ಮದಿಯ ಬದುಕಿಗಾಗಿ ಮಿತಿಯಲ್ಲಿ ಆಶೆಗಳನ್ನು ಇಡೋಣ. ನಾನು ಹಾಗೂ ಆಶೆ ಎಂಬೆರಡನ್ನು ಬಿಟ್ಟರೆ ಬದುಕಿನಲ್ಲಿ ಶಾಂತಿ ತನ್ನಿಂದ ತಾನೇ ನೆಲೆಸುವುದು. ಈ ನೆಮ್ಮದಿಯ ಬದುಕಿಗಾಗಿ ಬದಲಾಗೋಣ. ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ.... ಬದಲಾಗೋಣವೇ ಪ್ಲೀಸ್..! ಏನಂತೀರಿ...?
ಶಿಕ್ಷಕರು ಮತ್ತು ತರಬೇತುದಾರರು
Mob: +91 99802 23736
********************************************